ವಿಜಯಪುರ: ಶುಕ್ರವಾರ ಬೆಳ್ಳಂಬೆಳಗ್ಗೆ ಸಂಭವಿನೀಯ ಭಾರಿ ಅನಾಹುತವೊಂದು ತಪ್ಪಿದೆ. ವಿಜಯಪುರ ನಗರಕ್ಕೆ ಬರುತ್ತಿದ್ದ ಚಲಿಸುತ್ತಿದ್ದ ಖಾಸಗಿ ಬಸ್ ಟೈರ್ ಸ್ಫೋಟಗೊಂಡು ಬಸ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅದೃಷ್ಟವಶಾತ್ ಬಸ್ ನಲ್ಲಿದ್ದ ಪ್ರಯಾಣಿಕರೆಲ್ಲ ಅಪಾಯದಿಂದ ಪಾರಾಗಿದ್ದಾರೆ.
ಬೆಂಗಳೂರಿನಿಂದ ವಿಜಯಪುರ ನಗರಕ್ಕೆ ಬರುತ್ತಿದ್ದ ಖಾಸಗಿ ಸಾರಿಗೆ ಸಂಸ್ಥೆಯ ಬಸ್ ನಗರದ ಹೊರ ವಲಯದಲ್ಲಿರುವ ಹಿಟ್ನಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ-50 ರಲ್ಲಿ ಚಲಿಸುವಾಗ ಇದ್ದಕ್ಕಿದ್ದಂತೆ ಬಸ್ ನ ಟೈರ್ ಸ್ಫೋಟಗೊಂಡು, ಬೆಂಕಿ ಹೊತ್ತುಕೊಂಡಿದೆ. ಇದರಿಂದಾಗಿ ಕೂಡಲೇ ಚಾಲಕ್ ಬಸ್ ನಿಯಂತ್ರಣಕ್ಕೆ ತಂದುಕೊಂಡು ನಿಲ್ಲಿಸಿ, ಗಾಬರಿಯಾಗಿದ್ದ ಪ್ರಯಾಣಿಕರನ್ನು ಬಸ್ ನಿಂದ ಕೆಳಗೆ ಇಳಿಯಲು ಸೂಚಿಸಿದ್ದಾನೆ.
ಇದನ್ನೂ ಓದಿ:Aradhana; ಕಾಟೇರಾದಲ್ಲಿ ನಾನು ಸ್ಟ್ರಾಂಗ್ ಗರ್ಲ್; ಮಾಲಾಶ್ರೀ ಪುತ್ರಿಯ ಗ್ರ್ಯಾಂಡ್ ಎಂಟ್ರಿ
ನಸುಕಿನ ನಿದ್ದೆಯ ಮಂಪರಿನಲ್ಲಿದ್ದ ಪ್ರಯಾಣಿಕರು ಜೀವಭಯದಲ್ಲಿ ಹಣ, ಚಿನ್ನದಂಥ ಬೆಲೆ ಬಾಳುವ ವಸ್ತುಗಳನ್ನೆಲ್ಲ ಬಸ್ ನಲ್ಲೆ ಬಿಟ್ಟು ಕೆಳಗೆ ಇಳಿದಿದ್ದು, ಯಾರಿಗೂ ಅಪಾಯವಾಗಿಲ್ಲ.
ಪ್ರಯಾಣಿಕರು ಕೆಳಗೆ ಇಳಿದ ಕ್ಷಣ ಮಾತ್ರದಲ್ಲೇ ಬಸ್ ಸಂಪೂರ್ಣ ಸುಟ್ಟು ಕರಕಲಾಗಿದೆ. ಸುದ್ದಿ ತಿಳಿಯುತ್ತಲೇ ಸ್ಥಳಕ್ಕೆ ಧಾವಿಸಿರುವ ಅಗ್ನಿಶಾಮಕ ಸೇವೆಗಳ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸ್ಥಳಕ್ಕೆ ದೌಡಾಯಿಸಿರುವ ವಿಜಯಪುರ ಗ್ರಾಮೀಣ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.