ವಿಜಯಪುರ : ಜಿಲ್ಲೆಯ ಬಬಲೇಶ್ವರ ತಾಲೂಕಿನ ಕಾಖಂಡಕಿ ಗ್ರಾಮದಲ್ಲಿ ಶನಿವಾರ ನಡೆದ ಕಾರಹುಣ್ಣಿಮೆಯೆ ಕರಿ ಹಬ್ಬದಲ್ಲಿ ಕರಿ ಹರಿಯಲು ಓಡಿಸಿದ್ದ ಹೋರಿ ಇರಿತಕ್ಕೆ 8 ಜನರು ಗಾಯಗೊಂಡಿರುವ ಘಟನೆ ವರದಿಯಗಿದೆ.
ಕಾಖಂಡಕಿ ಗ್ರಾಮದಲ್ಲಿ ಕರಿ ಹರಿಯುವ ಹಬ್ಬ ಭಾರಿ ಖ್ಯಾತಿ ಪಡೆದಿರುವ ಕಾರಣ ರಾಜ್ಯದ ಮೂಲೆ ಮೂಲೆಗಳಿಂದ ಹತ್ತಾರು ಸಾವಿರ ಜನರು ಕರಿ ಹರಿಯುವ ಹಬ್ಬ ವೀಕ್ಷಣೆಗೆ ಬಂದಿದ್ದರು. ಶನಿವಾರ ಸಂಜೆ ಪ್ರತಿ ವರ್ಷದಂತೆ ಕರಿ ಹರಿಯಲು ಓಡಿಸುವ ಹೋರಿ-ಎತ್ತುಗಳು ಮಾರ್ಗದ ಇಕ್ಕೆಲಗಳಲ್ಲಿ ನಿಂತಿದ್ದ ಪ್ರೇಕ್ಷಕರ ಮೇಲೆ ದಾಳಿ ನಡೆಸಿವೆ.
ಘಟನೆಯಲ್ಲಿ ಸುಮಾರು 8 ಜನರು ಗಾಯಗೊಂಡಿದ್ದು, ಒಂದಿಬ್ಬರಿಗೆ ಗಂಭೀರ ಇರಿತವಾಗಿವೆ ಎಂಬ ಮಾಹಿತಿ ಇದೆ. ಗಾಯಾಳುಗಳನ್ನು ಕೂಡಲೇ ಅಂಬ್ಯುಲೆನ್ಸ್ ಮೂಲಕ ಬಬಲೇಶ್ವರ ಹಾಗೂ ವಿಜಯಪುರ ಜಿಲ್ಲಾ ಕೇಂದ್ರದ ವಿವಿಧ ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಮಧ್ಯಾಹ್ನ 3 ಗಂಟೆಯಿಂದಲೇ ಗ್ರಾಮ ಕರಿ ಹರಿಯುವ ಓಣಿಗಳ ರಸ್ತೆಗಳಲ್ಲಿ, ಮನೆಗಳು, ವಿದ್ಯುತ್ ಕಂಬ, ಗಿಡ-ಮರಗಳನ್ನು ಏರಿ ಹತ್ತಾರು ಸಾವಿರಾರು ಸಂಖ್ಯೆಯ ಪ್ರೇಕ್ಷಕರು ನೆರೆದಿದ್ದರು. ಈ ಹಂತದಲ್ಲಿ ಕೆಲಕಾಲ ಜೋರಾದ ಮಳೆ ಸುರಿದರೂ ನೆರೆದ ಜನರು ಮಳೆ ಹನಿಗೆ ಹಿಂಜರಿಯದೇ ಕಾಖಂಡಕಿ ಕರಿ ಹರಿಯುವ ಹಬ್ಬವನ್ನು ಕಣ್ತುಂಬಿಕೊಂಡರು.
ಈ ಬಾರಿ ಸುಮಾರು 40ಕ್ಕೂ ಹೆಚ್ಚು ಹೋರಿ-ಎತ್ತುಗಳನ್ನು ಕರಿ ಹರಿಯುವ ಹಬ್ಬದಲ್ಲಿ ಓಡಿಸಲಾಗಿದೆ. ಕಾಖಂಡಕಿ ಗ್ರಾಮದ ರಾಮನಗೌಡ ಪಾಟೀಲ ಅವರ ಕೆಂಪು ಮತ್ತು ಬಿಳಿ ಎತ್ತುಗಳನ್ನು ವಾದ್ಯ ಮೇಳದೊಂದಿಗೆ ಹಿಮ್ಮುಖವಾಗಿ ಅಗಡಿ ಬಾಗಿಲಿಗೆ ಕರೆತಂದು ಓಡಿಸಲಾಗಿತ್ತು.
ಈ ಬಾರಿ ಬಿಳಿಯ ಎತ್ತು ಮುಂದೆ ಓಡಿವೆ. ಕಾರಣ ಗ್ರಾಮೀಣ ಜನರ ಪಾರಂಪರಿಕ-ಜಾನಪದ ನಂಬಿಕೆಯಂತೆ ಕೃಷಿ ಉತ್ಪನ್ನ, ಬೆಳೆ-ಇಳುವರಿಯಲ್ಲಿ ಬಿಳಿ ಪದಾರ್ಥಗಳು ಹೆಚ್ಚು ಇಳುವರಿ ನೀಡಲಿವೆ ಎಂದು ಅಚಿದಾಜಿಸಲಾಗಿದೆ.
ಮುನ್ನೆಚ್ಚರಿಕಾ ಕ್ರಮವಾಗಿ ಬಬಲೇಶ್ವರ ಪೊಲೀಸ್ ಠಾಣೆ ಎಸೈ ನೇತೃತ್ವದಲ್ಲಿ ಅಗತ್ಯ ಪೊಲೀಸ್ ಭದ್ರತೆ ಕಲ್ಪಿಸಲಾಗಿತ್ತು.