Advertisement

Vijayapura; ಆನ್‍ಲೈನ್ ವಂಚಕರ ಭರ್ಜರಿ ಬೇಟೆ; 4 ತಿಂಗಳಲ್ಲಿ 12 ಪ್ರಕರಣ ಪತ್ತೆ

02:39 PM Feb 01, 2024 | keerthan |

ವಿಜಯಪುರ: ವಿಜಯಪುರ ಜಿಲ್ಲೆಯ ಸೈಬರ್, ಆರ್ಥಿಕ ಮತ್ತು ಮಾದಕ ಅಪರಾಧಗಳ ವಿಭಾಗದ ಪೊಲೀಸರು ಕಳೆದ ನಾಲ್ಕು ತಿಂಗಳಲ್ಲಿ ಜಿಲ್ಲೆಯಲ್ಲಿ ನಡೆದ ಆನ್‍ಲೈನ್ ಆರ್ಥಿಕ ವಂಚನೆಯ 12 ಪ್ರಕರಣಗಳನ್ನು ಬೇಧಿಸಿದ್ದು, ಎರಡು ಕೋಟಿ ರೂ ಹಣವನ್ನು ಫ್ರೀಜ್ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲೆಯಲ್ಲಿ ನಡೆದಿದ್ದ ಸೈಬರ್ ಕ್ರೈಂ ಪತ್ತೆ ಕುರಿತು ವಿವರ ನೀಡಿದ ಎಸ್ಪಿ ಋಷಿಕೇಶ ಸೋನಾವಣೆ, ಸೈಬರ್ ಕ್ರೈಂ ವಿಭಾಗದ ಸಿಪಿಐ ರಮೇಶ ಅವಜಿ ನೇತೃತ್ವದ ಸಿಇಎನ್ ಠಾಣೆಯ ಪೊಲೀಸ ತಂಡ ನಿರಂತರ ಪ್ರಯತ್ನದ ಫಲವಾಗಿ ಆನ್‍ಲೈನ್-ಸೈಬರ್ ಪ್ರಕರಣಗಳನ್ನು ಪತ್ತೆಹಚ್ಚಿ ಬಾಧಿತರಿಗೆ ಹಣ ಮರಳಿಸಲಾಗಿದೆ ಎಂದರು.

ಒನ್ ಕಾರ್ಡ್ ಒನ್ ನೇಷನ್: ಒನ್ ಕಾರ್ಡ್ ಒನ್ ನೇಷನ್ ಯೋಜನೆಯಲ್ಲಿ ಉದ್ಯೋಗ ಕೊಡುವುದಾಗಿ ವಂಚಿಸಿದ್ದ ಮಧುಗಿರಿ ಮೂಲದ ಸುಧೀರರೆಡ್ಡಿ ಎಂಬಾತ 6 ಸಾವಿರ ಅಭ್ಯರ್ಥಿಗಳಿಗೆ 95,75,548 ರೂ. ವಂಚನೆ ಮಾಡಿದ್ದ. ಆರೋಪಿಯನ್ನು ಪತ್ತೆ ಮಾಡಿ 70 ಲಕ್ಷ ರೂ. ಹಣವನ್ನು ಬಾಧಿತರಿಗೆ ಮರಳಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.

ಎಕ್ಸಿಸ್ ಇ-ಕ್ರಾಪ್ ಸಲೂನ್, ವೇದಿಕ್ ಹೆಲ್ತ್: ನವದೆಹಲಿ ಮೂಲದ ಎಕ್ಸಿಸ್ ಇ-ಕ್ರಾಪ್ ಸಲೂಶನ್ ಪ್ರೈ.ಲಿ. ಹಾಗೂ ವೇದಿಕ್ ಆಯುರ್ವೇದಿಕ್ ಹೆಲ್ತ್-ರಿಟೇಲ್ ಪ್ರೈ.ಲಿ. ಹೆಸರಿನ ಕಂಪನಿ ಇ-ಸ್ಟೋರ್ ವಿತರಕನಾಗಿ ಮಾಡುವುದಾಗಿ ಜಿಲ್ಲೆಯಲ್ಲಿ ವಂಚಿಸಿತ್ತು. ಆಲಮೇಲ್ ತಾಲೂಕಿನ ಮೋರಟಿ ವ್ಯಾಪಾರಿಯಿಂದ 29.40 ಲಕ್ಷ ರೂ. ರೂ. ಆನ್‍ಲೈನ್ ಮೂಲಕ ಪಡೆದು, ವಂಚಿಸಿತ್ತು. ಪ್ರಕರಣ ದಾಖಲಾಗುತ್ತಲೇ ಆರೋಪಿಗಳ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ನಿರ್ಬಂಧಿಸಿ, ಬಾಧಿತರ ಖಾತೆಗೆ ಜಮೆ ಮಾಡಿಸಲಾಗಿದೆ.

ರೈತರಿಗೆ ವಂಚನೆ: ಪಾಲಿಹೌಸ್ ನಿರ್ಮಿಸಿ ಕೊಡುವುದಾಗಿ ಮಹಾರಾಷ್ಟ್ರದ ಥಾಣೆ ಮೂಲದ ಎ.ಎಸ್.ಅಗ್ರೀ-ಅಕ್ವಾ ಎಲ್‍ಎಲ್‍ಪಿ ಕಂಪನಿ ಇಂಡಿ ಪಟ್ಟಣದ ರೈತರೊಬ್ಬರಿಗೆ ಪಾಲಿಹೌಸ್ ನಿರ್ಮಿಸಿಕೊಡುವುದಾಗಿ 2.20 ಕೋಟಿ  ರೂ. ಪಡೆದ ವಂಚನೆ ಮಾಡಿತ್ತು.

Advertisement

ಸದರಿ ಪ್ರಕರಣದಲ್ಲಿ ಕಂಪನಿ ಚೇರ್ಮನ್ ಪ್ರಶಾಂತ ಜಾಡೆ, ನಿರ್ದೇಶಕ ಸಂದೇಶ ಕಾಮಕರ, ಸಂದೀಪ ಸಮಂತ, ಜಮೀರ್ ಶೇಖ್ ಎಂಬವರನ್ನು ವಶಕ್ಕೆ ಪಡೆದು, ಅವರ ಬ್ಯಾಂಕ್ ಖಾತೆಯಲ್ಲಿದ್ದ 52 ಲಕ್ಷ ರೂ. ಹಣವನ್ನು ನಿರ್ಬಂಧಿಸಲಾಗಿದೆ.

ಒಟ್ಟು 12 ಪ್ರಕರಣಗಳಲ್ಲಿ ವಚಂನೆಯಾಗಿದ್ದ 2,07,07,041 ರೂ, ಹಣದಲ್ಲಿ 1,89,12,741 ರೂ. ಹಣವನ್ನು ಬಾಧಿತರಿಗೆ ಮರಳಿಸಲಾಗಿದೆ ಎಂದು ಎಸ್ಪಿ ಋಷಿಕೇಶ ವಿವರಿಸಿದರು.

ಇದಲ್ಲದೇ ರಾಷ್ಟ್ರೀಯ ಸೈಬರ್ ಕ್ರೈಂ ಪೋರ್ಟ್‍ಲ್ ಹೆಲ್ಪ್‍ಲೈನ್-1930 ಸಂಖ್ಯೆ ಮೂಲಕ ದೂರು ದಾಖಲಾದ ಪ್ರಕರಣದ 23 ದೂರುದಾರರು ಬಾಧಿತರು ನೀಡಿದ ದೂರು ಆಧರಿಸಿ ನಡೆಸಿದ ಪ್ರಕರಣದಲ್ಲಿ 28,81,802 ಹಣವನ್ನು ಮರಳಿಸಲಾಗಿದೆ.

1930 ಹೆಲ್ಪ್‍ಲೈನ್: ಸಾರ್ವಜನಿಕರು ಆನ್‍ಲೈನ್ ಮೂಲಕ ನಡೆಯುವ ಆರ್ಥಿಕ ಹಾಗೂ ಇತರೆ ವಂಚನೆ ಕುರಿತು ಘಟನೆ ನಡೆಯುತ್ತಲೇ 1930 ಸಂಖ್ಯೆಗೆ ಕರೆ ಮಾಡಿ ದೂರು ನೀಡಬೇಕು. ಇದರಿಂದ ಆನ್‍ಲೈನ್ ವಂಚನೆಯಾದ ಹಣವನ್ನು ಸ್ಥಗಿತಗೊಳಿಸಿ, ಪ್ರಕರಣ ಪತ್ತೆಗೆ ಸಹಕಾರಿ ಆಗಲಿದೆ ಎಂದು ಮನವಿ ಮಾಡಿದರು.

4 ಲಕ್ಷ ರೂ. ಮೌಲ್ಯ ಮೊಬೈಲ್: ಜಿಲ್ಲೆಯಲ್ಲಿ ಮೊಬೈಲ್ ಕಳ್ಳತನ ಪ್ರಕರಣದಲ್ಲಿ 4 ಲಕ್ಷ ರೂ. ಮೌಲ್ಯದ 25 ಮೊಬೈಲ್‍ಗಳನ್ನು ವಶಕ್ಕೆ ಪಡೆದು, ಬಾಧಿತರಿಗೆ ಮರಳಿಸಲಾಗಿದೆ ಎಂದು ವಿವರಿಸಿದರು.

ಜಿಲ್ಲೆಯಲ್ಲಿ ನಡೆದ ಸೈಬರ್ ಅಪರಾಧ ಪತ್ತೆ ಹಚ್ಚುವಲ್ಲಿ ರಮೇಶ ಅವಜಿ ನೇತೃತ್ವದಲ್ಲಿ ಪಿಎಸ್‍ಐ ಮಲ್ಲಿಕಾರ್ಜುನ ತಳವಾರ, ಆರೀಫ್ ಮುಶಾಪುರಿ, ಪಿ.ವೈ.ಅಂಬಿಗೇರ ಹಾಗೂ ಸಿಬ್ಬಂದಿ ದಕ್ಷತೆಯಿಂದ ಸೇವೆ ಸಲ್ಲಿಸಿದ್ದು, ಸೈಬರ್ ಅಪರಾಧ ಪತ್ತೆ ಕಾರ್ಯಾಚರಣೆಯಲ್ಲಿ ಪ್ರಶಂಸಾ ಪತ್ರ ನೀಡಿ ಗೌರವಿಸಲಾಗುತ್ತಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next