ವಿಜಯಪುರ: ಕೋವಿಡ್-19 ಸೋಂಕು ಜಾಗೃತಿ ಮೂಡಿಸಲು ತೆರಳಿದ್ದ ಆಶಾ ಕಾರ್ಯಕರ್ತೆ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಹಚ್ಯಾಳ ಗ್ರಾಮದಲ್ಲಿ ಜರುಗಿದೆ.
ಸಾವಿತ್ರಿ ಬಡಿಗೇರ ಎಂಬ ಆಶಾ ಕಾರ್ಯಕರ್ತೆ ಸಿಂದಗಿ ತಾಲೂಕಿನ ಹಚ್ಯಾಳ ಗ್ರಾಮದಲ್ಲಿ ಕೋವಿಡ್-19 ಸೋಂಕು ಜಾಗೃತಿ ಹಾಗೂ ಸಮೀಕ್ಷೆಗಾಗಿ ಮನೆ ಮನೆಗೆ ತೆರಳಿದ್ದರು.
ಈ ಹಂತದಲ್ಲಿ ಕೆಲ ಮಹಿಳೆಯರು ಪದೇ ಪದ ತಮ್ಮ ಓಣಿಗೆ ಹಾಗೂ ನಿರ್ದಿಷ್ಟವಾಗಿ ಕೆಲವೇ ಮನೆಗೆ ಭೇಟಿ ನೀಡುತ್ತಿದ್ದಾರೆ ಎಂದು ಆಕ್ಷೇಪಿಸಿದ್ದಾರೆ.
ಈ ಹಂತದಲ್ಲಿ ಮಹಿಳೆಯರು ಸಾವಿತ್ರಿ ಬಡಿಗೇರ ಅವರಲ್ಲಿದ್ದ ಸಮೀಕ್ಷಾ ದಾಖಲೆಯನ್ನು ಕಿತ್ತುಕೊಂಡು ಹರಿಹಾಯ್ದಿದ್ದಾರೆ. ಪರಸ್ಪರ ವಾಗ್ವಾದ ನಡೆದು ಕಾರ್ಯಕರ್ತೆ ಕೈ ಹಿಡಿದು ಎಳೆದಾಡಿದ್ದಾರೆ. ಅಲ್ಲದೇ ತಮ್ಮ ಓಣಿಗೆ ಸಮೀಕ್ಷೆ ನೆಪದಲ್ಲಿ ಪದೇ ಪದೆ ಬರದಂತೆ ಹಲ್ಲೆಗೆ ಯತ್ನಿಸಿ, ತಾಕೀತು ಮಾಡಿದ್ದಾರೆ.
ಈ ಘಟನೆಯನ್ನು ಸ್ಥಳೀಯ ಕೆಲ ಯುವಕರು ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.