Advertisement
ಸಿಂದಗಿ ಕ್ಷೇತ್ರದಿಂದ ಜೆಡಿಎಸ್ ಶಾಸಕರಾಗಿ ಆಯ್ಕೆಯಾಗಿ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರದಲ್ಲಿ ಸಚಿವರಾಗಿದ್ದ ಎಂ.ಸಿ. ಮನಗೂಳಿ ಈಚೆಗೆ ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದರು. ಹೀಗಾಗಿ ಉಪ ಚುನಾವಣೆ ಎದುರಾಗುತ್ತಿರುವ ಈ ಕ್ಷೇತ್ರದಲ್ಲಿ ರಾಜಕೀಯ ಬಿರುಸು ಕಾಣಿಸಿಕೊಂಡಿದೆ. ಉಪ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವುದಿಲ್ಲ ಎಂದು ಜೆಡಿಎಸ್ ವರಿಷ್ಠರು ಹೇಳುತ್ತಲೇ ಮನಗೂಳಿಕುಟುಂಬದ ಸದಸ್ಯರು ಒಗ್ಗೂಡಿ ಚರ್ಚೆ ನಡೆಸಿದ್ದಾರೆ. ಮನಗೂಳಿ ಅವರ ನಾಲ್ವರು ಪುತ್ರರಲ್ಲಿ ಅಶೋಕ ಅವರನ್ನು ಕಣಕ್ಕಿಳಿಸಲು ನಿರ್ಧರಿಸಿದ್ದು, ಒಂದೊಮ್ಮೆ ನಾಲ್ವರಲ್ಲಿ ಯಾರಿಗೇ ಟಿಕೆಟ್ ಸಿಕ್ಕರೂ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು. ಇದಲ್ಲದೇ ಜೆಡಿಎಸ್
ವರಿಷ್ಠರನ್ನು ಭೇಟಿ ಮಾಡಿ ಪರಿಸ್ಥಿತಿ ಮನವರಿಕೆ ಮಾಡಿಕೊಡಬೇಕು ಎಂದು ನಿರ್ಧರಿಸಿದೆ. ಇದರ ಫಲವಾಗಿ ಸ್ಪರ್ಧಾಕಾಂಕ್ಷಿ ಮನಗೂಳಿ ಅವರ ಪುತ್ರ ಅಶೋಕ ಬೆಂಗಳೂರಿಗೆ ಧಾವಿಸಿ ಜೆಡಿಎಸ್ ವರಿಷ್ಠರಾದ ಎಚ್.ಡಿ. ದೇವೇಗೌಡ, ಎಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. ಸಿಂದಗಿ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ಬಲಿಷ್ಠವಾಗಿಲ್ಲ. ಎಂ.ಸಿ. ಮನಗೂಳಿ ಅವರು ಕ್ಷೇತ್ರದಲ್ಲಿ ಮಾಡಿದ ಅಭಿವೃದ್ಧಿ, ಜನರೊಂದಿಗೆ ಹೊಂದಿದ್ದ ಒಡನಾಟ, ಆಪ್ತತೆ ಅವರಿಗೆ ರಾಜಕೀಯ ಮರುಜನ್ಮ ನೀಡುವಲ್ಲಿ ಸಹಕಾರಿ ಆಗಿತ್ತು. ಆದರೆ ಬದಲಾದ ಕಾಲಘಟ್ಟದಲ್ಲಿ ಅದರಲ್ಲೂ ಉಪ ಚುನಾವಣೆಯಂಥ ಸಂದರ್ಭದಲ್ಲಿ ಬಿಜೆಪಿ ಆಡಳಿತ ಯಂತ್ರ-ಆರ್ಥಿಕ ಶಕ್ತಿ ಎದುರು ಜೆಡಿಎಸ್ ಸೆಣಸಲಾಗದು. ಈ ವಾಸ್ತದ ಅರಿವು ಪಕ್ಷದ ವರಿಷ್ಠರು ಅಶೋಕಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.
Related Articles
Advertisement
–ಜಿ.ಎಸ್. ಕಮತರ