Advertisement

Vijayapura: ರಾಜಕಾಲುವೆಗೆ ಬಿದ್ದು 2 ವರ್ಷದ ಮಗು ಸಾವು

09:56 PM Oct 15, 2024 | Team Udayavani |

ವಿಜಯಪುರ: ಆಟವಾಡುತ್ತಿದ್ದಾಗ ಎರಡು ವರ್ಷದ ಬಾಲಕನೊಬ್ಬ ರಾಜಕಾಲುವೆಗೆ ಬಿದ್ದು ಮೃತಪಟ್ಟಿರುವ ಘಟನೆ ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ ನಂ.24ರ ಜೆಎಂ ರಸ್ತೆಯಲ್ಲಿ ಮಂಗಳವಾರ (ಅ.15) ನಡೆದಿದೆ.

Advertisement

ಮೃತನನ್ನು ಯಾಸೀನ್ ಸದ್ದಾಂ ಮುಲ್ಲಾ ಎಂದು ಗುರುತಿಸಲಾಗಿದೆ. ತೆರೆದ ಚರಂಡಿ ಅವ್ಯವಸ್ಥೆಯಿಂದಾಗಿ ಈ ದುರ್ಘಟನೆ ನಡೆದಿದೆ ಎಂದು ಪಾಲಿಕೆ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆರೋಪಿಸಿದ್ದಾರೆ. ಇದೇ ವೇಳೆ, ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ್ ಸ್ಥಳಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ, 2 ಲಕ್ಷ ರೂಪಾಯಿಗಳ ಪರಿಹಾರ ಘೋಷಿಸಿದ್ದಾರೆ.

ಬಾಲಕ ಯಾಸೀನ್ ತನ್ನ 4 ವರ್ಷದ ಅಣ್ಣನ ಜೊತೆ ಆಟವಾಡುತ್ತಿದ್ದ. ಈ ಸಮಯದಲ್ಲಿ ಆಕಸ್ಮಿಕವಾಗಿ ಚರಂಡಿ ನೀರಿಗೆ ಬಿದ್ದಿದ್ದಾನೆ. ಘಟನೆಯಿಂದ ಭಯಭೀತನಾದ ಅಣ್ಣ ಪೋಷಕರಿಗೆ ವಿಷಯ ತಿಳಿಸಿದ್ದಾನೆ. ಆಗ ಕುಟುಂಬಸ್ಥರು ಹಾಗೂ ನೆರೆ ಹೊರೆಯವರು ಸ್ಥಳಕ್ಕೆ ಧಾವಿಸಿದ್ದಾರೆ. ಆದರೆ, ಅಷ್ಟರಲ್ಲೇ ಬಾಲಕನ ಮೃತಪಟ್ಟಿದ್ದ ಎಂದು ತಿಳಿದು ಬಂದಿದೆ. ಬಾಲಕನ ಸಾವಿನಿಂದ ಆಕ್ರೋಶಗೊಂಡ ಕುಟುಂಬಸ್ಥರು, ಸಂಬಂಧಿಕರು ಈ ಅವಘಡಕ್ಕೆ ಮಹಾನಗರ ಪಾಲಿಕೆಯ ನಿರ್ಲಕ್ಷ್ಯವೇ ಕಾರಣ ಎಂದು ಕಿಡಿಕಾರಿದರು.

ಅಲ್ಲದೇ, ಕಳೆದ ಹಲವು ದಿನಗಳಿಂದ ಭಾರೀ ಮಳೆ ಹಿನ್ನೆಲೆ ಚರಂಡಿ ಮೇಲಿನ ಕಲ್ಲು ತೆಗೆಯಲಾಗಿತ್ತು. ಬಳಿಕ ಮಹಾನಗರ ಪಾಲಿಕೆಯಿಂದ ಚರಂಡಿ ದುರಸ್ತಿಪಡಿಸಿ ಮೇಲಿನ ಕಲ್ಲು ಬಂದ್ ಮಾಡಿರಲಿಲ್ಲ. ಇದರಿಂದ ಚರಂಡಿಯಲ್ಲಿ ಬಿದ್ದು ಬಾಲಕ ಸಾವನ್ಬಪ್ಪಿದೆ ಎಂದು ಸ್ಥಳೀಯರು ಅತೃಪ್ತಿ ಹೊರಹಾಕಿದರು.

Advertisement

ಮತ್ತೊಂದೆಡೆ, ಘಟನೆ ಮಾಹಿತಿ ತಿಳಿಯುತ್ತಲೇ ಸ್ಥಳಕ್ಕೆ ಜಿಲ್ಲಾಧಿಕಾರಿ ಟಿ.ಭೂಬಾಲನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೊನಾವಣೆ, ಪಾಲಿಕೆ ಆಯುಕ್ತ ವಿಜಯಕುಮಾರ್ ಮೆಕ್ಕಳಕಿ, ಉಪಮೇಯರ್ ದಿನೇಶ ಹಳ್ಳಿ ಹಾಗೂ ಮುಖಂಡರಾದ ಅಬ್ದುಲ್ ಹಮೀದ್ ಮುಶ್ರೀಫ್, ಅಬ್ದುಲ್ ರಜಾಕ್ ಹೊರ್ತಿ ಭೇಟಿ ನೀಡಿ, ಪರಿಶೀಲನೆ ನಡೆಸಿದರು.

ಅಷ್ಟೇ ಅಲ್ಲ, ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು. ಜತೆಗೆ ವೈಯುಕ್ತಿಕವಾಗಿ 2 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ವಾಗ್ದಾನ ನೀಡಿ, ಸರ್ಕಾರದಿಂದ ದೊರೆಯಬಹುದಾದ ಇನ್ನಿತರೆ ಪರಿಹಾರಗಳನ್ನು ದೊರಕಿಸಿಕೊಡಲಾಗುವುದು ಎಂದು ಭರವಸೆ ಕೊಟ್ಟರು. ಇದೇ ವೇಳೆ, ಬಾಲಕನ ಕಳೆದುಕೊಂಡ ಕುಟುಂಬಸ್ಥರು, ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿತ್ತು.

ರಾಜಕಾಲುವೆಗೆ ಬಿದ್ದು ಮಗು ಅಸುನೀಗಿರುವ ದುರ್ಘಟನೆ ದುಃಖ ತರಿಸಿದೆ. ಇಂತಹ ದುರ್ಘಟನೆ ಮರುಕಳಿಸದಂತೆ ಜಿಲ್ಲಾಡಳಿತ ಹಾಗೂ ಪಾಲಿಕೆ ಅಧಿಕಾರಿಗಳು ಎಚ್ಚರ ವಹಿಸಬೇಕು. ಯಾರು ಎಷ್ಟೇ ಪ್ರಭಾವಶಾಲಿಗಳಿದ್ದರೂ ಲೆಕ್ಕಿಸದೆ ರಾಜಕಾಲುವೆ ಒತ್ತುವರಿ ತೆರವುಗೊಳಿಸಿ, ನೀರಿನ ಸರಾಗ ಓಟಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next