Advertisement

ಜಿಲ್ಲೆಯಲ್ಲಿ ಕಟ್ಟೆಚ್ಚರ-ಜನಜೀವನ ಸಹಜ

12:02 PM Nov 10, 2019 | Naveen |

ವಿಜಯಪುರ: ರಾಮಜನ್ಮಭೂಮಿ ಅಯೋಧ್ಯೆ ವಿವಾದದ ಕುರಿತು ಶನಿವಾರ ಸುಪ್ರೀಂ ಕೋರ್ಟ್‌ ತೀರ್ಪಿನ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಪೊಲೀಸ್‌ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

Advertisement

ಜಿಲ್ಲೆಯ ಪ್ರಮುಖ ಸ್ಥಳಗಳಲ್ಲಿ ಪೊಲೀಸ್‌ ವಾಹನ ಸಂಚಾರ ಗಸ್ತು ಹಾಕಲಾಗಿತ್ತು. ಆದರೆ ಜಿಲ್ಲೆಯಲ್ಲಿ ಮಾತ್ರ ಸುಪ್ರೀಂ ಕೋರ್ಟ್‌ ತೀರ್ಪಿನ ವಿಷಯವಾಗಿ ಯಾವುದೇ ಆತಂಕವಿಲ್ಲದೇ ಜನಜೀವನ ಸಹಜವಾಗಿತ್ತು. ಸುಪ್ರೀಂ ಕೋರ್ಟ್‌ ತೀರ್ಪನ್ನು ಮುಕ್ತವಾಗಿ ಸ್ವಾಗತಿಸಿರುವ ಹಿನ್ನೆಲೆಯಲ್ಲಿ ತೀರ್ಪಿನ ವಿಷಯವಾಗಿ ಜಿಲ್ಲೆಯಲ್ಲಿ ವಿಜಯೋತ್ಸವ ಅಥವಾ ಪ್ರತಿಭಟನೆಗಳಂಥ ಬೆಳವಣಿಗೆಗಳು ನಡೆಯದೇ ಸಂಪೂರ್ಣ ಸಹಜವಾಗಿತ್ತು.

ಸುಪ್ರೀಂ ಕೋರ್ಟ್‌ ತೀರ್ಪು ಹೊರಬಿದ್ದ ಬಳಿಕ ಪರಿಸ್ಥಿತಿ ಮೇಲೆ ತೀವ್ರ ನಿಗಾ ವಹಿಸಿದ ಪೊಲೀಸರು, ವಿಜಯಪುರ ನಗರ ಹಾಗೂ ಜಿಲ್ಲೆಯ ವಿವಿಧ ಪಟ್ಟಣ ಹಾಗೂ ಪ್ರಮುಖ ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸ್‌ ಕಾವಲು ಹಾಕಲಾಗಿತ್ತು. ಆಲ್ಲದೇ ಬಿಗಿ ಪೊಲೀಸ್‌ ಬಂದೋಬಸ್ತ್ ಜೊತೆಗೆ ಪೊಲೀಸ್‌ ವಾಹನಗಳ ಗಸ್ತು ಕೂಡ ಕಂಡು ಬಂತು. ಡಿಎಆರ್‌, ಕೆಎಸ್‌ ಆರ್‌ಪಿ, ರ್ಯಾಪಿಡ್‌ ಆ್ಯಕ್ಷನ್‌ ಫೋರ್ಸ್‌ ಸೇರಿದಂತೆ ವಿವಿಧ ಪೊಲೀಸ್‌ ಗಸ್ತು ನಡೆಸಲಾಯಿತು.

ರಾಮ ಮಂದಿರ, ಸಿದ್ದೇಶ್ವರ ದೇವಸ್ಥಾನ, ಜ್ಞಾನಯೋಗಾಶ್ರಮ, ಯಲಗೂರ ಆಂಜನೇಯ ದೇವಸ್ಥಾನ, ನರಸಿಂಹ ದೇವಸ್ಥಾನಗಳ ಪ್ರಾಂಗಣದ ಬಳಿ ಹೆಚ್ಚಿನ ಸಂಖ್ಯೆಯ ಪೊಲೀಸ್‌ ಭದ್ರತೆ ಕಲ್ಪಿಸಲಾಗಿತ್ತು. ನಗರದ ದಾತ್ರಿ ಮಸೀದಿ, ಜಾಮಾಯೀ ಮಸೀದಿ ಸೇರಿದಂತೆ ಧಾರ್ಮಿಕ ಕೇಂದ್ರಗಳ ಬಳಿ ಸೂಕ್ತ ಪೊಲೀಸ್‌ ಭದ್ರತೆ ಕಲ್ಪಿಸಲಾಗಿತ್ತು.

ವಿಜಯಪುರ ನಗರದಲ್ಲಿ ಎಂದಿನಂತೆ ವ್ಯಾಪಾರಿಗಳು ತಮ್ಮ ವಹಿವಾಟು ಆರಂಭಿಸಿದ್ದರು. ಸುಪ್ರೀಂ ಕೋರ್ಟ್‌ ತೀರ್ಪು ಹೊರ ಬಿದ್ದ ಬಳಿಕ ದೇಶದಾದ್ಯಂತ ಮುಕ್ತವಾಗಿ ಎಲ್ಲರೂ ತೀರ್ಪನ್ನು ಗೌರವಿಸುವ ಹೇಳಿಕೆಗಳು ಹೊರ ಬೀಳುತ್ತಲೇ ನಗರದಲ್ಲೂ ಪರಿಸ್ಥಿತಿ ಸಹಜ ಸ್ಥಿತಿಯಲ್ಲಿತ್ತು. ನಗರದ ಪ್ರಮುಖ ವ್ಯಾಪಾರಿ ಕೇಂದ್ರಗಳಾಗಿರುವ ಲಾಲ್‌ ಬಹಾದ್ದೂರ್‌ ಶಾಸ್ತ್ರೀ ಮಾರುಕಟ್ಟೆ, ನೆಹರು ಮಾರುಕಟ್ಟೆ, ಕಿತ್ತೂರು ಚನ್ನಮ್ಮ ಮಾರುಕಟ್ಟೆ, ಕಿರಾಣಾ ಬಜಾರಾ, ಸಿದ್ದೇಶ್ವರ ರಸ್ತೆಯ ಮಾರುಕಟ್ಟೆ ಸೇರಿದಂತೆ ಎಲ್ಲೆಡೆ ಎಂದಿನಂತೆಯೇ
ವ್ಯಾಪಾರ-ವಹಿವಾಟು ಕಂಡು ಬಂತು.

Advertisement

ತೀರ್ಪು ಪ್ರಕಟವಾದ ಬೆನ್ನಲ್ಲೇ ಜಿಲ್ಲಾಧಿಕಾರಿಗಳು ಮುಂಜಾಗೃತಾ ಕ್ರಮವಾಗಿ 144 ಕಲಂ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶಿಸಿದರು. ಮುಂಜಾಗೃತಾ ಕ್ರಮವಾಗಿ ರಾಜ್ಯ ಸರ್ಕಾರ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದ ಹಿನ್ನೆಲೆ ಜಿಲ್ಲೆಯಲ್ಲೂ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು.

ಸುಪ್ರೀಂ ಕೋರ್ಟ್‌ ಹಿನ್ನೆಲೆಯಲ್ಲಿ ನ. 9ರಂದು ಅಕ್ಕಮಹಾದೇವಿ ವಿಶ್ವವಿದ್ಯಾಲಯ ಸ್ನಾತಕ ಪದವಿ ಪರೀಕ್ಷೆಗಳನ್ನು ಮುಂದೂಡಲಾಗಿತ್ತು. ಎರಡನೇ ಶನಿವಾರ ಆಗಿದ್ದರಿಂದ ಸರ್ಕಾರಿ ಕಚೇರಿಗಳು ರಜೆ ಇದ್ದ ಕಾರಣ ಸಾರ್ವಜನಿಕರಿಗೂ ಇದರಿಂದ ಅನಗತ್ಯ ಸಮಸ್ಯೆ ಉಂಟಾಗುವ ಪರಿಸ್ಥಿತಿಯೇ ನಿರ್ಮಾಣವಾಗಲಿಲ್ಲ.

ಸುಪ್ರೀಂ ಕೋರ್ಟ್‌ ತೀರ್ಪಿನ ಹಿನ್ನೆಲೆಯಲ್ಲಿ ಸಾರಿಗೆ ಸಂಚಾರಕ್ಕೆ ಸಮಸ್ಯೆ ಅಗಬಹುದೆಂದು ಆಂದಾಜಿಸಿದ್ದರೂ ಜಿಲ್ಲೆಯಲ್ಲಿ ಸಾರಿಗೆ ಸಂಚಾರ ಎಂದಿನಂತೆ ಇತ್ತು. ನಗರದಲ್ಲಿ ನಗರ ಸಾರಿಗೆ ಹಾಗೂ ಆಟೋ ಸೇವೆ ಅಬಾಧತವಾಗಿತು.

Advertisement

Udayavani is now on Telegram. Click here to join our channel and stay updated with the latest news.

Next