ಹೊಸಪೇಟೆ: ವಿಜಯನಗರ ಸಾಮ್ರಾಜ್ಯ ಸ್ಥಾಪಿಸಿದ ಹಕ್ಕ-ಬುಕ್ಕರು ಬೇಡ ಜನಾಂಗಕ್ಕೆ ಸೇರಿದವರು ಎಂಬುದನ್ನು ಯಾರು ಮರೆಯುವಂತಿಲ್ಲ ಎಂದು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಸ್ವಾಮೀಜಿ ಹೇಳಿದರು.
ನಗರದ ವಾಲ್ಮೀಕಿ ಕಲ್ಯಾಣಮಂಟಪದಲ್ಲಿ ಭಾನುವಾರ ನಡೆದ ಮಹರ್ಷಿ ವಾಲ್ಮೀಕಿ ಜಾತ್ರೆ-3 ಅಭಿನಂದನಾ ಸಮಾರಂಭ ಮತ್ತು ಹಕ್ಕಬುಕ್ಕರ ಸವಿನೆನಪಿಗಾಗಿ 685ನೇ ವಿಜಯನಗರ ಸಾಮ್ರಾಜ್ಯ ಸ್ಥಾಪನಾ ದಿನಾಚರಣೆ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು. ಐತಿಹಾಸಿಕ ಹಾಗೂ ಸಾಂಸ್ಕೃತಿಕ ನಾಯಕರನ್ನು ಹೈಜಾಕ್ ಅಂದರೆ ಅಪಹರಣ ಮಾಡಲಾಗುತ್ತಿದೆ. ಖ್ಯಾತ ಸಂಶೋಧಕ ಎಂ.ಎಂ. ಕಲಬುರ್ಗಿ ಅವರು ದಾಸಶ್ರೇಷ್ಠ ಕನಕದಾಸರು ಬೇಡರು ಎಂದು ಸಂಶೋಧಿ ಸಿದ್ದಾರೆ. ಆದರೆ ಹಾಲುಮತ ಸಮಾಜ ಕನಕದಾಸರನ್ನು ಹೈಜಾಕ್ ಮಾಡಿದೆ. ಈಗ ಹಕ್ಕಬುಕ್ಕರನ್ನು ಹೈಜಾಕ್ ಮಾಡಲಾಗುತ್ತಿದೆ.
ಬೇಡರ ವೀರ ಗಂಡುಗಲಿ ಕುಮಾರರಾಮನ ಅಕ್ಕನ ಮಕ್ಕಳಾದ ಹಕ್ಕಬುಕ್ಕರು ಕ್ರಿಶ 1336ರ ಏಪ್ರಿಲ್ 18ರಂದು ವಿಜಯನಗರ ಸಾಮ್ರಾಜ್ಯ ಸ್ಥಾಪಿಸಿದ ಸಾಮ್ರಾಟರು. ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ ನಟಿಸಿರುವ ಗಂಡುಗಲಿ ಕುಮಾರರಾಮ ಚಿತ್ರವನ್ನು ಎಲ್ಲರೂ ನೋಡಿ ತಿಳಿದುಕೊಳ್ಳಬೇಕು. ವಾಲ್ಮೀಕಿ ನಾಯಕ ಸಮಾಜದ ಇತಿಹಾಸವನ್ನು ಅರಿತುಕೊಂಡು ಮುನ್ನಡೆಯಬೇಕು ಎಂದರು.
ವಾಲ್ಮೀಕಿ ಸಮಾಜಕ್ಕೆ ಶೇ.7.5ರಷ್ಟು ಎಸ್ಟಿ ಮೀಸಲಾತಿ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಹೇಳಿದ್ದರು. ನ್ಯಾ. ನಾಗಮೋಹನ ದಾಸ ವರದಿ ಜಾರಿಗೆ ಸಂಪುಟದ ಉಪ ಸಮಿತಿ ನೇಮಿಸಲಾಗಿತ್ತು. ಈಗ ಉನ್ನತ ಸಮಿತಿಗೆ ವರದಿ ವರ್ಗಾಯಿಸಲಾಗಿದೆ.
ಎಸ್ಟಿ ಮೀಸಲು ಹೆಚ್ಚಳಕ್ಕಾಗಿ ಮತ್ತೆ ಹೋರಾಟಕ್ಕೆ ಅಣಿಯಾಗಬೇಕು ಎಂದರು. ವಾಲ್ಮೀಕಿ ಜಾತ್ರೆಗೆ ರಥ ನಿರ್ಮಿಸಲು ಸಚಿವ ಆನಂದ್ ಸಿಂಗ್ ಅವರು 1 ಕೋಟಿ 40 ಲಕ್ಷ ರು. ದೇಣಿಗೆ ನೀಡಿದ್ದಾರೆ. ಸಂಸದ ವೈ. ದೇವೆಂದ್ರಪ್ಪ 10 ಲಕ್ಷ ರು. ಮತ್ತು ನೆಲಮಂಗಲದ ಗ್ರಾÂನೈಟ್ ಉದ್ಯಮಿ ಗೋವಿಂದರಾಜ್ 5 ಲಕ್ಷ ರು. ದೇಣಿಗೆ ನೀಡಿದ್ದಾರೆ. ಯಲ್ಲಾಪುರದಲ್ಲಿ ರಥ ನಿರ್ಮಾಣವಾಗುತ್ತಿದೆ ಎಂದರು. ವಾಲ್ಮೀಕಿ ಜಾತ್ರೆಗೆ ದಾನ ನೀಡಿದ ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯ ದಾನಿಗಳನ್ನು ದಂಪತಿ ಸಮೇತ ಶ್ರೀಗಳು ಸನ್ಮಾನಿಸಿದರು.
ಹಕ್ಕಬುಕ್ಕ ಸಾಂಸ್ಕೃತಿಕ ಸೇನೆಯ ರಾಜ್ಯಾಧ್ಯಕ್ಷ ಹರ್ತಿಕೋಟೆ ವೀರೆಂದ್ರ ಸಿಂಹ ವಿಶೇಷ ಉಪನ್ಯಾಸ ನೀಡಿದರು. ವಾಲ್ಮೀಕಿ ಗುರುಪೀಠದ ಧರ್ಮದರ್ಶಿ ಬಿ.ಎಸ್. ಜಂಬಯ್ಯ ನಾಯಕ, ಮುಖಂಡರಾದ ನಾಣಿಕೇರಿ ಕನಕಪ್ಪ, ಬಂಡೆ ರಂಗಪ್ಪ, ಬಾಣದ ಹನುಮಂತಪ್ಪ, ಬಡಿಗಿ ಹುಲುಗಪ್ಪ, ಕಟಿಗಿ ರಾಮಕೃಷ್ಣ, ಗುಡಗಂಟಿ ಮಲ್ಲಿಕಾರ್ಜುನ, ಪ್ರಕಾಶ, ಕಟಿಗಿ ವಿಜಯಕುಮಾರ, ಕಿಚಿಡಿ ಸುನೀಲ, ಜೆ.ಡಿ. ಮಂಜುನಾಥ, ಗುಜ್ಜಲ ಗಂಗಾಧರ, ಕಿಚಿಡಿ ಮಂಜುನಾಥ, ಮರಡಿ ಹನುಮಂತ, ಗೋಸಲ ಬಸವರಾಜ, ತಾರಿಹಳ್ಳಿ ಪ್ರಕಾಶ, ಹೊಸಕೆರೆ ವೆಂಕಟೇಶ, ಗುಜ್ಜಲ ರಾಜು, ಸಿರುಗುಪ್ಪದ ಸಿದ್ದಪ್ಪ, ಸಂಡೂರಿನ ಕೃಷ್ಣ, ಕಂಪ್ಲಿಯ ನಾರಾಯಣಪ್ಪ ಮತ್ತಿತರರಿದ್ದರು.