Advertisement

ದೇವನಗರಿಯಲ್ಲಿ ಅದ್ಧೂರಿ ಶೋಭಾಯಾತ್ರೆ

01:07 PM Oct 16, 2021 | Team Udayavani |

ದಾವಣಗೆರೆ: ನಾಡಹಬ್ಬ ದಸರಾ ಅಂಗವಾಗಿ ವಿಶ್ವ ಹಿಂದು ಪರಿಷದ್‌, ಸಾರ್ವಜನಿಕ ವಿಜಯದಶಮಿ ಮಹೋತ್ಸವ ಸಮಿತಿ ಆಶ್ರಯದಲ್ಲಿ ಶುಕ್ರವಾರ ಅದ್ಧೂರಿ, ವಿಜೃಂಭಣೆಯ ಬೃಹತ್‌ ಶೋಭಾಯಾತ್ರೆ ನಡೆಯಿತು.

Advertisement

ಬೇತೂರು ರಸ್ತೆಯ ಶ್ರೀ ವೆಂಕಟೇಶ್ವರ ವೃತ್ತದಿಂದ ಪ್ರಾರಂಭವಾದ ಶೋಭಾಯಾತ್ರೆ ಚೌಕಿಪೇಟೆ, ಹೊಂಡದ ವೃತ್ತ, ಅರುಣಾಚಿತ್ರಮಂದಿರ ವೃತ್ತದ ಮೂಲಕ ಸಾಮೂಹಿಕ ಬನ್ನಿ ಮುಡಿಯುವ, ಅಂಬುಛೇದನ ಕಾರ್ಯಕ್ರಮ ನಡೆದ ಶ್ರೀ ಬೀರಲಿಂಗೇಶ್ವರ ದೇವಸ್ಥಾನ ತಲುಪಿ ಸಂಪನ್ನಗೊಂಡಿತು.

ರಾಣೆಬೆನ್ನೂರು ತಾಲೂಕಿನ ತಪೋಕ್ಷೇತ್ರ ಪುಣ್ಯಕೋಟಿ ಮಠದ ಶ್ರೀ ಬಾಲಯೋಗಿ ಶ್ರೀ ಜಗದೀಶ್ವರ ಸ್ವಾಮೀಜಿ, ಹಿರೇಹಡಗಲಿಯ ಹಾಲಸ್ವಾಮಿಮಠದ ಶ್ರೀಅಭಿನವ ಹಾಲಸ್ವಾಮೀಜಿ, ದಾವಣಗೆರೆಯ ವಿನೋಬ ನಗರದ ಶ್ರೀ ಜಡೇಸಿದ್ದ ಶಿವಯೋಗೀಶ್ವರ ಮಠದ ಶ್ರೀ ಶಿವಾನಂದ ಸ್ವಾಮೀಜಿ, ಸಂಸದ ಡಾ| ಜಿ.ಎಂ. ಸಿದ್ದೇಶ್ವರ, ಶಾಸಕ ಎಸ್‌.ಎ. ರವೀಂದ್ರನಾಥ್‌, ಮೇಯರ್‌ ಎಸ್‌.ಟಿ. ವೀರೇಶ್‌ ಶೋಭಾಯಾತ್ರೆಗೆ ಚಾಲನೆ ನೀಡಿದರು.

ಮುಸ್ಲಿಂ ಸಮಾಜದ ಮುಖಂಡ ಜೆ. ಅಮಾನುಲ್ಲಾ ಖಾನ್‌, ಖಾದರ್‌ ಬಾಷಾ ಇತರರು ಇದ್ದರು. ಮುಸ್ಲಿಂ ಮುಖಂಡರು ನಾಡಹಬ್ಬ ದಸರಾ ಶುಭಾಶಯ ಕೋರುವ ಜೊತೆಗೆ ಸಿಹಿ ಹಂಚುವ ಮೂಲಕ ಭಾವೈಕ್ಯತೆಗೆ ಸಾಕ್ಷಿಯಾದರು. ಹಿಂದು, ಮುಸ್ಲಿಂ ಸಮಾಜದ ಮುಖಂಡರನ್ನು ಪರಸ್ಪರ ಸನ್ಮಾನಿಸಲಾಯಿತು.

ಸಮಾಳ, ನಂದಿಕೋಲು, ಡೊಳ್ಳು, ಗೊರವರ ಕುಣಿತ, ಗೊಂಬೆ ಕುಣಿತ, ಕೊಂಬು, ಕಹಳೆ, ಡೊಳ್ಳು ಇತ್ಯಾದಿ ಸಾಂಪ್ರದಾಯಿಕ ವಾದ್ಯಗಳು ಶೋಭಾಯಾತ್ರೆಗೆ ಮೆರುಗು ನೀಡಿದವು. ಕಳೆದ ವರ್ಷಗಳಲ್ಲಿ ಅತಿ ಹೆಚ್ಚು ಗಮನ ಸೆಳೆಯುತ್ತಿದ್ದಂತ ಡಿಜೆ ಸದ್ದು ಈ ವರ್ಷ ಕೇಳಿ ಬರಲಿಲ್ಲ. ಆದಾಗ್ಯೂ ಸಾಂಪ್ರದಾಯಿಕ ವಾದ್ಯಗಳಿಗೆ ತಕ್ಕನಾಗಿ ಹೆಜ್ಜೆಹಾಕಲಾಯಿತು. ಕೆಲ ವರ್ಷದ ಹಿಂದೆ ಡಿಜೆಗೆ ಅನುಮತಿ ನೀಡಿರಲಿಲ್ಲ ಎನ್ನುವ ಕಾರಣಕ್ಕೆ ಶೋಭಾಯಾತ್ರೆಯ ಪ್ರಾರಂಭಕ್ಕೆ ವಿಳಂಬ ಮಾಡಲಾಗಿತ್ತು. ಆದರೆ ಈ ಬಾರಿ ಡಿಜಇಲ್ಲದೆಯೂ ಶೋಭಾಯಾತ್ರೆ ನಡೆದಿದ್ದು ಗಮನ ಸೆಳೆಯಿತು.

Advertisement

ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಾಣದ ಹಂತದಲ್ಲಿರುವ ಶ್ರೀರಾಮ ಮಂದಿರದ ಸ್ತಬ್ಧಚಿತ್ರ ಎಲ್ಲರ ಗಮನ ಸೆಳೆಯಿತು. ಸ್ವಾತಂತ್ರÂ ಹೋರಾಟ ನಡೆಸಿದ ಕಿತ್ತೂರು ರಾಣಿ ಚೆನ್ನಮ್ಮ, ಕೆಳದಿ ಚನ್ನಮ್ಮ, ಚಿತ್ರದುರ್ಗದ ಪಾಳೇಗಾರರ ವಂಶದ ಅಗ್ರಗಣ್ಯ ರಾಜಾ ವೀರ ಮದಕರಿ ನಾಯಕ, ಆರ್‌ಎಸ್‌ಎಸ್‌ ಸಂಸ್ಥಾಪಕರಾದ ಡಾ| ಹೆಗಡೆವಾರ್‌, ಗೋಳಾವಳ್ಕರ್‌, ಮಿಸೈಲ್‌ ಜನಕ ಡಾ| ಎ.ಪಿ. ಜೆ. ಅಬ್ದುಲ್‌ ಕಲಾಂ, ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ, ಸ್ವತ್ಛಭಾರತ್‌ ಮಿಷನ್‌, ಗೋ ಸಂರಕ್ಷಣೆ, ಮುಂಬೈ ದಾಳಿಯಲ್ಲಿ ಹುತಾತ್ಮರಾದ ಹೇಮಂತ್‌ ಕರ್ಕರೆ, ಸಂದೀಪ್‌ ಉನ್ನಿಕೃಷ್ಣನ್‌, ನಾಡದೊರೆ ಕೆಂಪೇಗೌಡ, ವಿನಾಯಕ ಸಾವರ್ಕರ್‌, ದಾಸಶ್ರೇಷ್ಠ ಕನಕದಾಸರು, ದಾವಣಗೆರೆ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಸ್ಥಾನ, ಸ್ವಾಮಿ ವಿವೇಕಾನಂದ, ಒಕ್ಕಲಿಗ ಸಮುದಾಯಗುರುಗಳಾದ ಬಾಲಗಂಗಾಧರನಾಥ ಸ್ವಾಮೀಜಿ ಮುಂತಾದವರ ಸ್ತಬ್ಧಚಿತ್ರಗಳೊಂದಿಗೆ ಶೋಭಾಯಾತ್ರೆ ಸಾಗಿತು. ಶ್ರೀ ಕನ್ಯಕಾಪರಮೇಶ್ವರಿ ಉತ್ಸವ ಮೂರ್ತಿಯನ್ನು ಬೆಳ್ಳಿ ಅಲಂಕೃತ ರಥದಲ್ಲಿ ಮೆರವಣಿಗೆ ಮಾಡಿದ್ದು ವಿಶೇಷವಾಗಿತ್ತು. ಮೇಯರ್‌ ಎಸ್‌.ಟಿ. ವೀರೇಶ್‌, ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್‌, ಹಿಂದೂ ಸಮಾಜದ ಹಿರಿಯ ಮುಖಂಡ ಕೆ.ಬಿ. ಶಂಕರನಾರಾಯಣ, ಸತೀಶ್‌ ಪೂಜಾರಿ, ಡಿ. ಬಸವರಾಜ್‌ ಗುಬ್ಬಿ,ಜೊಳ್ಳಿ ಗುರು ಇತರರು ನೃತ್ಯ ಮಾಡುವಮೂಲಕ ಗಮನ ಸೆಳದರು. ಯುವಕರು,ಕಿರಿಯರು, ಹಿರಿಯರಾದಿಯಾಗಿ ಹೆಜ್ಜೆ ಹಾಕುವ ಮೂಲಕ ಸಂಭ್ರಮಿಸಿದರು. ಹಿಂದು ಧರ್ಮದ ರಕ್ಷಣೆ ಯಾರ ಹೊಣೆ…ನಮ್ಮ

ಹೊಣೆ…ನಮ್ಮ ಹೊಣೆ…, ನಾವೆಲ್ಲ ಹಿಂದು…ನಾವೆಲ್ಲ ಒಂದು…, ಜೈ ಶ್ರೀರಾಮ್‌… ಜೈ ಜೈ ಶ್ರೀರಾಮ್‌…, ಭಾರತ್‌ ಮಾತಾ ಕೀ ಜೈ… ಘೋಷಣೆಗಳು ಮುಗಿಲು ಮುಟ್ಟಿದ್ದವು.

ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಕಾರದ ಅಧ್ಯಕ್ಷ ದೇವರಮನೆ ಶಿವಕುಮಾರ್‌, ನಗರಪಾಲಿಕೆ ಸದಸ್ಯರಾದ ಕೆ. ಪ್ರಸನ್ನಕುಮಾರ್‌, ಆರ್‌.ಎಲ್‌. ಶಿವಪ್ರಕಾಶ್‌, ಸೋಗಿ ಶಾಂತಕುಮಾರ್‌, ಆರ್‌. ಶಿವಾನಂದ, ಎಸ್‌. ಮಂಜುನಾಥ್‌, ಕೆ.ಎಂ. ವೀರೇಶ್‌, ಶಿವನಗೌಡ ಪಾಟೀಲ್‌, ತರಕಾರಿ ಶಿವುಕುಮಾರ್‌, ಮಾಜಿ ಸದಸ್ಯ ಸಂಕೋಳ್‌ ಚಂದ್ರಶೇಖರ, ಪಿ.ಸಿ. ಮಹಾಬಲೇಶ್‌, ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್‌ ಹನಗವಾಡಿ, ಮಾಜಿ ಅಧ್ಯಕ್ಷ ಯಶವಂತರಾವ್‌ ಜಾಧವ್‌, ವೈ. ಮಲ್ಲೇಶ್‌, ಕೆ.ಎಂ. ಸುರೇಶ್‌ ಇತರರು ಪಾಲ್ಗೊಂಡಿದ್ದರು. ಶೋಭಾಯಾತ್ರೆವೀಕ್ಷಿಸಲು ರಸ್ತೆಯ ಇಕ್ಕೆಲಗಳಲ್ಲಿ ಸಾವಿರಾರು ಜನರು ನೆರೆದಿದ್ದರು. ಶೋಭಾಯಾತ್ರೆ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್ ಮಾಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next