Advertisement

ವಿಜೃಂಭಣೆಯ ವಿಜಯ ದಶಮಿ ಮೆರವಣಿಗೆ

02:57 PM Oct 16, 2021 | Suhan S |

ಭದ್ರಾವತಿ: ಶುಕ್ರವಾರ ನಗರಸಭೆ ವತಿಯಿಂದ ನಾಡ ಹಬ್ಬ ದಸರಾ ಪ್ರಯುಕ್ತ ಏರ್ಪಡಿಸಿದ್ದ ವಿಜಯದಶಮಿ ಮೆರವಣಿಗೆಗೆ ಶಾಸಕ ಬಿ.ಕೆ. ಸಂಗಮೇಶ್ವರ್‌ ನಾಡದೇವಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸುವ ಮೂಲಕ ಮತ್ತು ನಂದಿ ಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.

Advertisement

ನಗರದ ಗ್ರಾಮ ದೇವತೆ ಸೇರಿದಂತೆ ಮಧ್ಯಾಹ್ನ ಅಪ್ಪರ್‌ ಹುತ್ತಾದ ಬಸ್‌ ನಿಲ್ದಾಣದ ಸಮೀಪವಿರುವ ಶ್ರೀ ತಿರುಮಲ ಶ್ರೀನಿವಾಸ ದೇವರ ದೇವಾಲಯದ ಬಳಿಯಿಂದ ಮೆರವಣಿಗೆ ಆರಂಭಗೊಂಡಿತು.

ವೈವಿಧ್ಯಮಯವಾದ ಅಲಂಕೃತ ವಾಹನಗಳಲ್ಲಿ ನಗರದ ವಿವಿಧ ಬಡಾವಣೆಗಳಿಂದ ಆಗಮಿಸಿದ್ದ ವಿವಿಧ ದೇವಾನುದೇವತೆಗಳನ್ನು ಮೆರವಣಿಗೆ ಮಾಡಲಾಯಿತು. ಮೆರವಣಿಗೆಯಲ್ಲಿ ನಗರಸಭೆಯ ನಾಡದೇವಿ ಚಾಮುಂಡೇಶ್ವರಿ ಪ್ರತಿಮೆ, ನಂತರ ಕ್ಷೇತ್ರಪಾಲಕ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯದ ಭೂದೇವಿ, ಶ್ರೀದೇವಿ ಸಹಿತನಾದ ಶ್ರೀನಿವಾಸ ದೇವರ ಉತ್ಸವಮೂರ್ತಿ, ಗ್ರಾಮದೇವತೆ ಶ್ರೀ ಹಳದಮ್ಮ, ಕೆರೆಕೋಡಮ್ಮ, ಕೆಂಚಮ್ಮ, ಅಂತರಘಟ್ಟಮ್ಮ, ಕಾಳಿಕಾಂಬ, ಶ್ರೀ ರಾಮೇಶ್ವರ, ಆಂಜನೇಯ ಮಾರಿಯಮ್ಮ, ದುರ್ಗಮ್ಮ, ಶನೈಶ್ವರ, ವಿಶ್ವಸ್ವರೂಪಿಣಿ ಮಾರಿಯಮ್ಮ, ಬಸವಣ್ಣದೇವರು, ಸಂಕಲಮ್ಮ, ಸೇರಿದಂತೆ ಸುಮಾರು 40ಕ್ಕೂ ಹೆಚ್ಚು ದೇವಾಲಯದ ದೇವಾನುದೇವತೆಗಳು ಸಾಲಾಗಿ ಮೆರವಣಿಗೆಯಲ್ಲಿ ಭಾಗವಹಿಸಿದ್ದು ಕಂಡು ಬಂದಿತು.

ಸಾಂಸ್ಕೃತಿಕ ಮೇಳಗಳ ಪ್ರದರ್ಶನ: ಮೆರವಣಿಗೆಯಲ್ಲಿ ಸಾಂಸ್ಕೃತಿಕ ಮೇಳಗಳಾದ ನಾದಸ್ವರ, ಡೊಳ್ಳು ವೀರಗಾಸೆ, ಕರಡಿ ನೃತ್ಯ, ಬೆದರು ಗೊಂಬೆ, ಗೀಗಿಪದ, ಗಾರುಡಿಗ ಹಾಗು ಸ್ವತ್ಛ ಭಾರತ್‌ ಸ್ತಬ್ಧಚಿತ್ರಗಳು, ವಿವಿಧ ಶಾಲೆಗಳ ನಾಡಿನ ಸಂಸ್ಕೃತಿ ಬಿಂಬಿಸುವ ವೇಷಭೂಷಣಗಳು ಸೇರಿದಂತೆ ಹಲವಾರು ಮನರಂಜನಾ ಸಾಂಸ್ಕೃತಿಕ ಕಲಾಪ್ರಕಾರಗಳು ಭಾಗವಹಿಸಿ ಕಲಾ ಪ್ರದರ್ಶನ ಮಾಡುತ್ತಾ ಸಾಗಿದವು. ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಮುಂಭಾಗ ಸಾಗಿ ಬಂದ ಮೆರವಣಿಗೆ ಅಂಬೇಡ್ಕರ್‌ ವೃತ್ತ, ಹಾಲಪ್ಪ ವೃತ್ತ, ಮಾಧವಾಚಾರ್‌ ವೃತ್ತ, ಡಾ| ರಾಜ್‌ ಕುಮಾರ್‌ ರಸ್ತೆ, ರಂಗಪ್ಪ ವೃತ್ತ, ಕೋರ್ಟ್‌ ರಸ್ತೆ, ತಾಲೂಕು ಕಚೇರಿ ರಸ್ತೆ ಮೂಲಕ ಸಾಗಿ ಬಂದಿತು.

ಮೆರವಣಿಗೆ ಮಾರ್ಗದುದ್ದಕ್ಕೂ ರಸ್ತೆಯ ಉಭಯ ಪಾರ್ಶ್ವಗಳಲ್ಲಿ ಸಾವಿರಾರು ಜನರು ನಿಂತು ದೇವತಾ ಮೆರಣಿಗೆಯನ್ನು ವೀಕ್ಷಿಸಿ ದೇವರುಗಳಿಗೆ ನಮಸ್ಕರಿಸಿದರು. ಅಂತಿಮವಾಗಿ ಹಳೇನಗರದ ಕನಕ ಮಂಟಪ ಮೈದಾನದಕ್ಕೆ ಸಂಜೆ ಮೆರವಣಿಗೆ ಬಂದು ತಲುಪಿದ ನಂತರ ರಾಜಮರ್ಯಾದೆಯೊಂದಿಗೆ ಕಂಕಣಧಾರಿಗಳಾಗಿದ್ದ ತಹಶೀಲ್ದಾರ್‌ ಪ್ರದೀಪ್‌ ಅವರಿಗೆ ಮೈಸೂರು ಪೇಟ ತೊಡಿಸಿ, ಕುದುರೆ ಮೇಲೆ ಕೂರಿಸಿ, ಮಂಗಳವಾದ್ಯ ವಾದನದೊಂದಿಗೆ ಸಾಂಪ್ರದಾಯಿಕವಾಗಿ ಕನಕ ಮಟಪದ ಬನ್ನಿಮಟಪಕ್ಕೆ ಕರೆತರಲಾಯಿತು.

Advertisement

ಬನ್ನಿಪೂಜೆ: ಬನ್ನಮಂಟಪದಲ್ಲಿ ತಹಶೀಲ್ದಾರ್‌ ಅವರು ಕ್ಷೇತ್ರಪಾಲಕ ಶ್ರೀ ಲಕ್ಷೀ ನರಸಿಂಹಸ್ವಾಮಿ ದೇವರಿಗೆ ಪೂಜೆ ಸಲ್ಲಿಸಿದ ನಂತರ ಶ್ರೀ ಕಾಳಿಂಕಾಂಬಾ ದೇವತೆಯ ಖಡ್ಗವನ್ನು ಹಿಡಿದು ಮೈದಾನದ ಮಧ್ಯಭಾಗದಲ್ಲಿ ನಿರ್ಮಿಸಲಾಗಿದ್ದ ಬನ್ನಿಮಂಟಪಕ್ಕೆ ಆಗಮಿಸಿದರು. ಶ್ರೀಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದ ಪ್ರಧಾನ ಅರ್ಚಕ ವೇ|ಬ್ರ| ಶ್ರೀರಂಗನಾಥಶರ್ಮ ಅವರ ಪೌರೋಹಿತ್ಯದಲ್ಲಿ ಬನ್ನಿ ಪತ್ರೆಯ ಟೊಂಗೆಯನ್ನುಒಳಗೊಂಡ ಕದಳಿ ಗಿಡಕ್ಕೆ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿ, ತಹಶೀಲ್ದಾರ್‌ ರಿಂದ ಪೂಜೆ ಮಾಡಿಸಿದ ನಂತರ ಹಶೀಲ್ದಾರ್‌ ಪ್ರದೀಪ್‌ ಅವರು ಬನ್ನಿ ವೃಕ್ಷಕ್ಕೆ ಮೂರು ಪ್ರದಕ್ಷಿಣೆ ಬಂದು ನಮಸ್ಕರಿಸಿ ಖಡ್ಗದಿಂದ ಕದಳಿ ವೃಕ್ಷವನ್ನು ಕಡಿಯುತ್ತಿದ್ದಂತೆ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಜನರು ದೇವರಿಗೆ ಜಯಕಾರ ಹಾಕುತ್ತಾ, ಪರಸ್ಪರ ಬನ್ನಿ ವಿನಿಮಯ ಮಾಡಿಕೊಂಡು ನಮಸ್ಕರಿಸುತ್ತಾ ವಿಜಯದಶಮಿ ಹಬ್ಬದ ಆಚರಣೆ ಮಾಡಿದರು.

ಬಾಣ- ಬಿರುಸುಗಳ ಪಟಾಕಿ ಸಿಡಿತ ಹಾಗೂ ರಾವಣ ಸಂಹಾರ ಮುಕ್ತಾಯವಾಯಿತು. ಬನ್ನಿ ಮುಡಿದ ನಂತರ ದೇವತಾ ಮೂರ್ತಿಗಳು ಆಯಾ ಬಡಾವಣೆಗಳಿಗೆ ಉತ್ಸವದ ಮೂಲಕ ತೆರಳಿದವು. ಜನರು ದೇವರಿಗೆ ಹಣ್ಣುಕಾಯಿ,ಫಲ ಸಮರ್ಪಣೆ ಮಾಡಿ ಪೂಜೆ ಸಲ್ಲಿಸಿದರು.

ಶಾಸಕ ಬಿ.ಕೆ. ಸಂಗಮೆಶ್ವರ್‌, ತಹಶೀಲ್ದಾರ್‌ ಪ್ರದೀಪ್‌, ನಗರಸಭೆ ಆಯುಕ್ತ ಪರಮೇಶ್ವರ್‌, ಕಂದಾಯಾಧಿ ಕಾರಿ ರಾಜ್‌ಕುಮಾರ್‌, ನಗರಸಭಾ ಸದಸ್ಯರು, ಸಮಾಜ ಸೇವಕರಾದ ನರಸಿಂಹಾಚಾರ್‌, ರಮಾಕಂತ್‌ ಇತರರು ಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

More
Next