ಬೆಳಗಾವಿ: ಕಿತ್ತೂರು ಕರ್ನಾಟಕದಲ್ಲಿ ಗರಿಷ್ಠ ಸ್ಥಾನಗಳನ್ನು ಗೆಲ್ಲಲು ಪಣ ತೊಟ್ಟಿರುವ ಬಿಜೆಪಿ, ಗುರುವಾರ ಸಂಗೊಳ್ಳಿ ರಾಯಣ್ಣನ ಸಮಾಧಿ ಸ್ಥಳದಿಂದಲೇ ತನ್ನ ಎರಡನೇ ಹಂತದ ವಿಜಯ ಸಂಕಲ್ಪ ಯಾತ್ರೆಗೆ ಚಾಲನೆ ನೀಡಿತು.
ಖಾನಾಪುರ ತಾಲೂಕಿನ ನಂದಗಢ ದಲ್ಲಿ ಕೇಂದ್ರ ಸಚಿವ ರಾಜನಾಥ ಸಿಂಗ್ ಡೊಳ್ಳು ಬಾರಿಸಿ ಯಾತ್ರೆಗೆ ಚಾಲನೆ ನೀಡಿದರಲ್ಲದೆ, ರಾಯಣ್ಣ ಸಮಾಧಿ ಸ್ಥಳಕ್ಕೆ ಹೋಗಿ ಗೌರವ ಸಲ್ಲಿಸಿದರು. ಕನ್ನಡ ನಾಡಿನ ಕೆಚ್ಚೆದೆಯ ಸೇನಾನಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನೇಣುಗಂಬ ಏರಿದ ನೆಲದಲ್ಲಿ ಯಾತ್ರೆ ಆರಂಭಿಸುವ ಮೂಲಕ ಕುರುಬ ಸಮುದಾಯದ ಗಮನಸೆಳೆಯುವ ಪ್ರಯತ್ನವನ್ನು ಬಿಜೆಪಿ ಮಾಡಿದೆ.
ಚೆನ್ನಮ್ಮ, ರಾಯಣ್ಣನಿಗೆ ಮಾಲಾ ರ್ಪಣೆ ಮಾಡಿದ್ದು ನನ್ನ ಸೌಭಾಗ್ಯ. ಅವರು ಕರ್ನಾಟಕ ವೀರ ಹಾಗೂ ಶೌರ್ಯದ ಪ್ರತೀಕ. ಬೆಳಗಾವಿ ಕರ್ನಾ ಟಕದ ಶಿಖರ ಎಂದು ರಾಜನಾಥ ಸಿಂಗ್ ಹೇಳಿದರು.
ರಾಣಿ ಚೆನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣನ ಬಗ್ಗೆ ಪ್ರಸ್ತಾವಿಸಲು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಮರೆಯಲಿಲ್ಲ. ಬ್ರಿಟಿಷ್ ಸಾಮ್ರಾಜ್ಯದ ವಂಶಾವಳಿ ಇನ್ನೂ ದೇಶದಲ್ಲಿ ಉಳಿದುಕೊಂಡಿದ್ದು, ಅದನ್ನು ಬೇರು ಸಮೇತ ಕಿತ್ತು ಹಾಕಬೇಕಿದೆ ಎಂದು ಕಾಂಗ್ರೆಸನ್ನು ಟೀಕಿಸಿದ ಅವರು, ಈ ವಂಶಾವಳಿ ಯನ್ನು ಕಿತ್ತು ಹಾಕುವ ಹೋರಾಟ ಮುಂದುವರಿದಿದೆ. ಈ ಹೋರಾಟದ ಮುಂಚೂಣಿಯಲ್ಲಿ ಪ್ರಧಾನಿ ಮೋದಿ ಇದ್ದಾರೆ. ಚೆನ್ನಮ್ಮ ಹಾಗೂ ರಾಯಣ್ಣ ಹೋರಾಡುವಾಗ ಬ್ರಿಟಿಷ್ ಮುಕ್ತ ಭಾರತ ಹೇಗೆ ಇತ್ತೋ ಈಗ ಕಾಂಗ್ರೆಸ್ ಮುಕ್ತ ಭಾರತ ಆಗಬೇಕಿದೆ ಎಂದರು.
ಬಿಜೆಪಿ ರಾಜ್ಯ ಅಧ್ಯಕ್ಷ ನಳಿನ್ ಕುಮಾರ್, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಭೈರತಿ ಬಸವರಾಜ, ಸಿ.ಸಿ. ಪಾಟೀಲ, ಮುರುಗೇಶ ನಿರಾಣಿ, ಗೋವಿಂದ ಕಾರಜೋಳ ಇದ್ದರು.
ಅಮಿತ್ ಶಾ ಇಂದು ಬೀದರ್‌ಗೆ
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶುಕ್ರವಾರ ಬೀದರ್ ಮತ್ತು ಬೆಂಗಳೂರಿಗೆ ಭೇಟಿ ನೀಡಲಿದ್ದಾರೆ. ಅವರು ಶುಕ್ರವಾರ ಬಸವಕಲ್ಯಾಣದಲ್ಲಿ ಮೂರನೇ ವಿಜಯ ಸಂಕಲ್ಪ ಯಾತ್ರೆಯನ್ನು ಉದ್ಘಾಟಿಸಲಿದ್ದಾರೆ. ಬಳಿಕ ದೇವನಹಳ್ಳಿಯಲ್ಲಿಯೂ ವಿಜಯ ಸಂಕಲ್ಪ ನಾಲ್ಕನೇ ರಥಯಾತ್ರೆಗೆ ಚಾಲನೆ ನೀಡುವರು. ಅನಂತರ ಬೆಂಗಳೂರಿನ ಪುರಭವನದಲ್ಲಿ “ಬೆಂಗಳೂರು ಸೇಫ್ ಸಿಟಿ ಪ್ರಾಜೆಕ್ಟ್’ಗೆ ಚಾಲನೆ ನೀಡಿ ದಿಲ್ಲಿಗೆ ಮರಳುವರು.