ಬೆಂಗಳೂರು: ಸರ್ಕಾರಿ ಸ್ವಾಮ್ಯದ ವಿಜಯ ಬ್ಯಾಂಕ್‌ನ 18ನೇ ವಾರ್ಷಿಕ ಸಾಮಾನ್ಯ ಸಭೆ ಜೂ.29 ರಂದು ಕೇಂದ್ರ ಕಚೇರಿಯ ಮುಲ್ಕಿ ಸುಂದರ್‌ರಾಮ್ ಶೆಟ್ಟಿ ಸಭಾಂಗಣದಲ್ಲಿ ನಡೆಯಿತು.
ಬ್ಯಾಂಕಿನ ಅಧ್ಯಕ್ಷ ಜಿ. ನಾರಾಯಣನ್ ಅವರು ಸಭೆಯಲ್ಲಿ ಪಾಲ್ಗೊಂಡಿದ್ದ ಷೇರುದಾರರನ್ನುದ್ದೇಶಿಸಿ ಮಾತನಾಡಿದರು.
2017-18ನೇ ಸಾಲಿನ ಅವಧಿಯಲ್ಲಿ ಸವಾಲಿನ ಕಾರ್ಯಾಚರಣೆ ವಾತಾವರಣದ ಹೊರತಾಗಿಯೂ ವಿಜಯ ಬ್ಯಾಂಕು ಅತ್ಯುತ್ತಮ ಹಣಕಾಸು ಫಲಿತಾಂಶವನ್ನು ಪ್ರಕಟಿಸಿದೆ. ಬ್ಯಾಂಕು ಎಲ್ಲ ವಿಭಾಗಗಳಲ್ಲೂ ಕನಿಷ್ಠ ಜಿಎನ್‌ಪಿಎ ಯೊಂದಿಗೆ ಧನಾತ್ಮಕ ಬೆಳವಣಿಗೆ ಸಾಧಿಸಿದೆ.
ವ್ಯವಹಾರದ ಕಾರ್ಯತಂತ್ರವೂ ಸಹ ಅಪಾಯಗಳ ಮೇಲೆ ಕೇಂದ್ರೀಕರಿಸಿ ಪರಿಣಾಮಕಾರಿ ನಿಯಂತ್ರಣವನ್ನು ಸಾಧಿಸಿದೆ. ದೀರ್ಘಾವಧಿ ಬೆಳವಣಿಗೆ ಕಾಪಾಡಿಕೊಳ್ಳುವ ಮೂಲಕ ಪಾಲುದಾರರ ಹಿತಕಾಯುವುದರೊಂದಿಗೆ ಶೇ.12ರಷ್ಟು ಡಿವಿಡೆಂಡ್ ಘೋಷಿಸಿದೆ ಎಂದರು. ಕಳೆದ ಎಂಟು ದಶಕಗಳಿಂದ ದೇಶದ ಆರ್ಥಿಕಾಭಿವೃದ್ಧಿಯಲ್ಲಿ ವಿಜಯ ಬ್ಯಾಂಕ್ ಮಹತ್ವದ ಪಾತ್ರ ವಹಿಸಿದ್ದು, 2018ರ ಮಾರ್ಚ್ ಅಂತ್ಯಕ್ಕೆ 2,75,965 ಕೋಟಿ ರೂ. ವಹಿವಾಟು ನಡೆಸಿದೆ. ಇದರಲ್ಲಿ 1,57,288E ಕೋಟಿ ರೂ.ಗಳ ಠೇವಣಿ ಸಂಗ್ರಹಿಸಿ, 1,18,677 ಕೋಟಿ ರೂ. ಸಾಲದ ರೂಪದಲ್ಲಿ ನೀಡಿರುವ ಬ್ಯಾಂಕು 727.03 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಒಟ್ಟಾರೆ ಬ್ಯಾಂಕು ಶೇ.3.10ರ ಆರೋಗ್ಯಕರ ನಿಮ್ (ಎನ್‌ಐಎಂ) ಹೊಂದಿರುವುದು ತೃಪ್ತಿದಾಯಕ ಎಂದು ಅವರು ವಿವರಿಸಿದರು.
ಸಭೆಯಲ್ಲಿ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ-ಸಿಇಒ ಆರ್.ಎ. ಶಂಕರ ನಾರಾಯಣನ್, ಕಾರ್ಯನಿರ್ವಾಹಕ
ನಿರ್ದೇಶಕ ಮುರಳಿ ರಾಮಸ್ವಾಮಿ, ಮಂಡಳಿ ನಿರ್ದೇಶಕರು ಹಾಗೂ ಷೇರುದಾರರು ಭಾಗವಹಿಸಿದ್ದರು.