Advertisement

ವಿಲನ್‌ ಎನಿಸಿದ್ದ ವಿಜಯ್‌ಗೆ ಇಂದು ಹೀರೋ ಸ್ಥಾನ

12:30 AM Mar 07, 2019 | Team Udayavani |

ನಾಗ್ಪುರ: ತಮಿಳುನಾಡು ಆಲ್‌ರೌಂಡರ್‌ ವಿಜಯ್‌ ಶಂಕರ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾಪರ್ಣೆ ಮಾಡಿ ಒಂದು ವರ್ಷ ಕಳೆದಿದೆ. ಈ ಒಂದು ವರ್ಷದ ಅವಧಿಯಲ್ಲಿ ಜೀವನದ ಎರಡು ವಿರುದ್ಧ ಮುಖಗಳನ್ನು ನೋಡಿದ್ದಾರೆ. 2018ರ ಮಾರ್ಚ್‌ಗೆ ವಿಲನ್‌ ಆಗಿದ್ದ ಅವರು, 2019ರ ಮಾರ್ಚ್‌ನಲ್ಲಿ ಹೀರೋ ಆಗಿ ಬದಲಾಗಿದ್ದಾರೆ!

Advertisement

2018 ಮಾ.6ರಂದು ಟಿ20 ಕ್ರಿಕೆಟಿಗೆ ಕಾಲಿಟ್ಟ ವಿಜಯ್‌ ಶ್ರೀಲಂಕಾದಲ್ಲಿ ನಡೆದ “ನಿಧಹಾಸ್‌ ಟಿ20 ಕೂಟ’ ದ ಆರಂಭದಲ್ಲಿ ಮಿಂಚಿದ್ದೇನೋ ಹೌದು, ಆದರೆ, ಫೈನಲ್‌ನಲ್ಲಿ ಅವರು ಸಂಪೂರ್ಣವಾಗಿ ಎಡವಿದರು. ಇದರಿಂದಾಗಿ “ದಿ ವಿಲನ್‌’ ಎಂದು ಕರೆಸಿಕೊಂಡಿದ್ದರು. ಈ ವರ್ಷ ಮಾ.5 ರಂದು ನಾಗ್ಪುರದಲ್ಲಿ ಆಸ್ಟ್ರೇಲಿಯ ವಿರುದ್ಧ  2ನೇ ಏಕದಿನ ಪಂದ್ಯದಲ್ಲಿ ಆಲ್‌ರೌಂಡ್‌ ಪ್ರದರ್ಶನ ನೀಡಿ, ತಮ್ಮ ಮೇಲಿನ ಕಳಂಕ ಕಳೆದುಕೊಂಡಿದ್ದಾರೆ.

ಆಸ್ಟ್ರೇಲಿಯ ವಿರುದ್ಧ 2ನೇ ಏಕದಿನ ಪಂದ್ಯದಲ್ಲಿ ಮೊದಲ ಬ್ಯಾಟಿಂಗ್‌ ಮಾಡಿದ ಭಾರತ 250 ರನ್‌ ಗಳಿಸಿತು. ಈ ಹಂತದಲ್ಲಿ ಕ್ರೀಸ್‌ನಲ್ಲಿದ್ದ ವಿಜಯ್‌ 41 ಎಸೆತದಲ್ಲಿ 46 ರನ್‌ ಗಳಿಸಿದರು. ಎದುರಾಳಿಗೆ ಕಡಿಮೆ ಗುರಿ ನೀಡಿದ್ದೇವೆಂಬ ಆತಂಕದಲ್ಲೇ ಭಾರತ ಬೌಲಿಂಗ್‌ ಆರಂಭಿಸಿತು. ವಿಜಯ್‌ ಶಂಕರ್‌ಗೆ ಕೊಹ್ಲಿ ಇನಿಂಗ್ಸ್‌ನ 10ನೇ ಓವರ್‌ ನೀಡಿದ್ದರು. 

ಆಸೀಸ್‌ ಆರಂಭಿಕರಾದ ಉಸ್ಮಾನ್‌ ಖವಾಜ, ಏರಾನ್‌ ಫಿಂಚ್‌ 3 ಬೌಂಡರಿ ಬಾರಿಸಿ ಸ್ವಾಗತ ನೀಡಿದರು. ಇದರಿಂದ ಗೊಂದಲಗೊಂಡ ಕೊಹ್ಲಿ ಮುಂದೆ ವಿಜಯ್‌ಗೆ ಬೌಲಿಂಗ್‌ ನೀಡಲೇ ಇಲ್ಲ!.  ಆಸ್ಟ್ರೇಲಿಯಕ್ಕೆ 50ನೇ ಓವರ್‌ನಲ್ಲಿ ಗೆಲ್ಲಲು 11 ರನ್‌ ಬೇಕಿತ್ತು, 2 ವಿಕೆಟ್‌ ಕೈಲಿತ್ತು. ಈ ವೇಳೆ ಕೊಹ್ಲಿ ಮುಂದೆ ಇದ್ದಿದ್ದು ಎರಡೇ ಆಯ್ಕೆ, ಒಂದು ಕೇದಾರ್‌ ಜಾಧವ್‌, ಇನ್ನೊಂದು ವಿಜಯ್‌ ಶಂಕರ್‌. ದೀರ್ಘ‌ ಚರ್ಚೆ ನಡೆದು, ವಿಜಯ್‌ ಕೈಗೆ ಕೊಹ್ಲಿ ಚೆಂಡಿತ್ತರು. ಅವರು ಮಾಡಿದ್ದು ಮೂರೇ ಎಸೆತ ಅದರಲ್ಲಿ 2 ವಿಕೆಟ್‌ ಉರುಳಿಸಿದರು. ನೀಡಿದ್ದು 2 ರನ್‌ ಮಾತ್ರ.

ಶ್ರೀಲಂಕಾ ವಿರುದ್ಧ ಪಂದ್ಯದಲ್ಲಿ ವೈಫ‌ಲ್ಯ, ಟೀಕೆಗಳಿಂದ ಅವರು ಮಾನಸಿಕವಾಗಿ ಕುಸಿದು ಹೋಗಿದ್ದರು. ಅದಾದ ನಂತರ ಸಿಕ್ಕ ಅವಕಾಶಗಳಲ್ಲಿ ಬ್ಯಾಟ್ಸ್‌ಮನ್‌ ಆಗಿ ಮಿಂಚಿದರೂ, ಆಲ್‌ರೌಂಡರ್‌ ಆಗಿರುವ ಅವರು ಬೌಲರ್‌ ಆಗಿ ವಿಫ‌ಲಗೊಂಡಿದ್ದರು. ಮಂಗಳವಾರ ಎರಡೂ ಪಾತ್ರಗಳಲ್ಲಿ ಮಿಂಚುವ ಮೂಲಕ ಕಡೆಗೂ ಶಾಪಮುಕ್ತಿಗೊಂಡ ಸಂತೋಷಪಟ್ಟರು.

Advertisement

ಕಳೆದ ವರ್ಷ ನಡೆದಿದ್ದೇನು?
2018ರ ನಿಧಹಾಸ್‌ ಕೂಟದ ಟಿ20 ಫೈನಲ್‌ ಪಂದ್ಯದಲ್ಲಿ ಬಾಂಗ್ಲಾ, ಭಾರತಕ್ಕೆ 167 ರನ್‌ ಗುರಿ ನೀಡಿತ್ತು. ಭಾರತ 98 ರನ್‌ಗೆ 4 ವಿಕೆಟ್‌ ಕಳೆದುಕೊಂಡಿದ್ದಾಗ ವಿಜಯ್‌ ಶಂಕರ್‌ ಕ್ರೀಸ್‌ಗೆ ಬಂದರು. ಅಂತಿಮ 3 ಓವರ್‌ನಲ್ಲಿ ಭಾರತಕ್ಕೆ 35 ರನ್‌ ಬೇಕಿತ್ತು. 18ನೇ ಓವರ್‌ ಪೂರ್ತಿ ವಿಜಯ್‌ ವಿಫ‌ಲರಾದರು. ಅದು ಭಾರತದ ಗೆಲುವಿನ ಸಾಧ್ಯತೆಯನ್ನೇ ನಾಶ ಮಾಡುವ ಸಾಧ್ಯತೆಯಿತ್ತು. ಆದರೆ ಮತ್ತೂಂದು ತುದಿಯಲ್ಲಿ ದಿನೇಶ್‌ ಕಾರ್ತಿಕ್‌ ಮಿಂಚಿ ತಂಡವನ್ನು ಗೆಲ್ಲಿಸಿದರು. ಅಷ್ಟು ಮಾತ್ರವಲ್ಲ ವಿಜಯ್‌ ಶಂಕರ್‌ರನ್ನು ಸಂಪೂರ್ಣ ಬಚಾವ್‌ ಮಾಡಿದ್ದರು. ಆದರೂ ಅವರನ್ನು ಇಡೀ ದೇಶದಲ್ಲಿ ಹಿಗ್ಗಾಮುಗ್ಗಾ ಟೀಕಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next