ಕನ್ನಡದಲ್ಲಿ ಈಗ ಒಂದಷ್ಟು ಹೊಸ ಪ್ರಯೋಗಗಳ ಸಿನಿಮಾಗಳು ಬರುತ್ತಿವೆ. ಅದರಲ್ಲೂ ಚಿತ್ರರಂಗಕ್ಕೆ ಹೊಸದಾಗಿ ಬರುವ ನಿರ್ದೇಶಕರು ಆ ತರಹದ ಒಂದು ಪ್ರಯತ್ನ ಮಾಡುತ್ತಿದ್ದಾರೆ. ಇಂತಹ ಪ್ರಯತ್ನಗಳಿಗೆ ಕನ್ನಡದ ಮುಂಚೂಣಿ ನಟರು ಕೂಡಾ ಸಾಥ್ ನೀಡುತ್ತಿದ್ದಾರೆ. ಇದೇ ರೀತಿ ಈ ವಾರ ಹೊಸ ಪ್ರಯೋಗದ, ಕಂಟೆಂಟ್ ನಂಬಿಕೊಂಡಿರುವ ಚಿತ್ರವೊಂದು ತೆರೆಕಾಣುತ್ತಿದೆ. ಅದು “ಕದ್ದ ಚಿತ್ರ’. ಹೀಗೊಂದು ವಿಭಿನ್ನ ಟೈಟಲ್ ಮೂಲಕ ಆರಂಭದಿಂದಲೇ ಕುತೂಹಲ ಕೆರಳಿಸಿದ್ದ ಈ ಸಿನಿಮಾ ಇಂದು ತೆರೆಗೆ ಬರುತ್ತಿದೆ.
ವಿಜಯ ರಾಘವೇಂದ್ರ ನಾಯಕರಾಗಿ ನಟಿಸಿರುವ ಈ ಸಿನಿಮಾವನ್ನು ಸುಹಾಸ್ ನಿರ್ದೇಶಿಸಿದ್ದಾರೆ. ಇದೊಂದು ಕೃತಿಚೌರ್ಯದ ಕಥಾಹಂದರ ಹೊಂದಿರುವ ಸಿನಿಮಾ. ಬರಹಗಾರನೊಬ್ಬನ ಬದುಕಿನ ಕೇಸ್ ಸ್ಟಡಿ ಈ ಸಿನಿಮಾದಲ್ಲಿದೆ. ಜೊತೆಗೆ ಒಂದು ಕ್ರೈಂ ಎಳೆಯನ್ನು ಇಟ್ಟುಕೊಂಡು ಸಿನಿಮಾವನ್ನು ಮಾಡಲಾಗಿದೆ. ಈಗಾಗಲೇ ಬಿಡುಗಡೆಯಾಗಿರುವ ಸಿನಿಮಾದ ಹಾಡು, ಟ್ರೇಲರ್ ಹಿಟ್ ಆಗುವ ಮೂಲಕ ಚಿತ್ರತಂಡ ಖುಷಿಯಾಗಿದೆ. ಜೊತೆಗೆ ಸಿನಿಮಾದ ಪ್ರೀಮಿಯರ್ ಶೋ ನೋಡಿದವರಿಂದಲೂ ಮೆಚ್ಚುಗೆ ವ್ಯಕ್ತವಾಗುವ ಮೂಲಕ ಚಿತ್ರತಂಡ ಖುಷಿಯಾಗಿದೆ.
ಇನ್ನು, ಚಿತ್ರದ ಬಗ್ಗೆ ಮಾತನಾಡುವ ನಾಯಕ ನಟ ವಿಜಯ ರಾಘವೇಂದ್ರ, “ಆರಂಭದಲ್ಲಿ ಈ ಥರದ ಪಾತ್ರ ಮಾಡಲು ಹಿಂದೇಟು ಹಾಕಿದ್ದೆ. ಆದರೆ ನಿರ್ದೇಶನ ಸುಹಾಸ್ ಕೃಷ್ಣ ಮತ್ತು ಚಿತ್ರತಂಡದ ಮೇಲಿನ ಭರವಸೆ ಇಟ್ಟುಕೊಂಡು ಈ ಪಾತ್ರ ಒಪ್ಪಿಕೊಂಡೆ. ನಿರ್ದೇಶಕರು ನನ್ನೊಂದಿಗೆ ಮಾತನಾಡುವಾಗ ಅವರಲ್ಲಿರುವ ಹಸಿವು, ಆತುರ ಕಾಣಿಸಿತು. ಪಾತ್ರಕ್ಕೆ ತಕ್ಕಂತೆ ಮೊದಲ ಬಾರಿ ಸಿಗರೇಟ್ ಸೇದಿದ್ದೇನೆ. ಒಮ್ಮೆ ಶಾಂತ ಸ್ವಭಾವ, ಮತ್ತೂಮ್ಮೆ ಕೋಪದಿಂದ ಒಮ್ಮೆಲೇ ಪ್ರೇರಿತನಾಗುವಂಥ ಪಾತ್ರ ನಿರ್ವಹಿಸಿದ್ದೇನೆ. ಅದೆಲ್ಲದಕ್ಕೂ ಬಲವಾದ ಕಾರ ವಿರುತ್ತದೆ. ಅದೇನು ಅನ್ನೋದನ್ನ ಸಿನಿಮಾದಲ್ಲೇ ನೋಡಬೇಕು. ಪತ್ನಿ ಸ್ಪಂದನಾಗೂ ಈ ಸಿನಿಮಾದ ಕಥೆ, ಪಾತ್ರ ಮತ್ತು ತಂಡದ ಮೇಲೆ ಸಾಕಷ್ಟು ಕಾನ್ಫಿಡೆನ್ಸ್ ಇತ್ತು. ಸಿನಿಮಾದ ಕಥೆ ಮತ್ತು ಪಾತ್ರ ಆಡಿಯನ್ಸ್‌ಗೆ ಇಷ್ಟವಾಗಲಿದೆ’ ಎಂಬ ವಿಶ್ವಾಸ ವ್ಯಕ್ತಪಡಿಸುತ್ತಾರೆ.
“ಶಾನ್ವಿ ಟಾಕೀಸ್’ ಮತ್ತು “ದ್ವಾರಕ ಪೊ›ಡಕ್ಷನ್ಸ್’ ಬ್ಯಾನರಿನಲ್ಲಿ ಸಂದೀಪ್ ಹೆಚ್. ಕೆ ನಿರ್ಮಿಸಿರುವ “ಕದ್ದ ಚಿತ್ರ’ ಸಿನಿಮಾಕ್ಕೆ ಸುಹಾಸ್ ಕೃಷ್ಣ ನಿರ್ದೇಶನವಿದೆ. “ಕದ್ದ ಚಿತ್ರ’ ಸಿನಿಮಾದಲ್ಲಿ ನಟ ವಿಜಯ ರಾಘವೇಂದ್ರ, ನಮ್ರತಾ ಸುರೇಂದ್ರನಾಥ್ ಅವರೊಂದಿಗೆ ಬೇಬಿ ಆರಾಧ್ಯ, ರಾಘು ಶಿವಮೊಗ್ಗ, ಬಾಲಾಜಿ ಮನೋಹರ್, ಸುಜಿತ್ ಸುಪ್ರಭ, ಸ್ಟೀಫನ್, ವಿನಯ್ ರೆಡ್ಡಿ ಮೊದಲಾದವರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
“ಕದ್ದ ಚಿತ್ರ’ ಸಿನಿಮಾದ ಹಾಡುಗಳಿಗೆ ಕೃಷ್ಣರಾಜ್ ಸಂಗೀತ ಸಂಯೋಜಿಸಿದ್ದಾರೆ. ಚಿತ್ರಕ್ಕೆ ಗೌತಮ್ ಮನು ಛಾಯಾಗ್ರಹಣ, ಶ್ರೀ ಕ್ರೇಜಿಮೈಂಡ್ಸ್ ಸಂಕಲನವಿದೆ.