ವಿಜಯ ರಾಘವೆಂದ್ರ, ಧರ್ಮ ಕೀರ್ತಿರಾಜ್, ಸಂಚಿತಾ ಪಡುಕೋಣೆ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ “ಓ ಮನಸೇ..’ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ. ಸದ್ಯ “ಓ ಮನಸೇ..’ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ನಿರತವಾಗಿರುವ ಚಿತ್ರತಂಡ, ಕೆಲ ದಿನಗಳ ಹಿಂದಷ್ಟೇ ಸಿನಿಮಾದ ಟೀಸರ್ ಬಿಡುಗಡೆ ಮಾಡಿತ್ತು. ಸದ್ಯ “ಓ ಮನಸೇ’ ಸಿನಿಮಾದ ಟೀಸರ್‌ಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿರುವ ಖುಷಿಯಲ್ಲಿಯೇ ಚಿತ್ರತಂಡ ಸಿನಿಮಾದ ಆಡಿಯೋವನ್ನು ಬಿಡುಗಡೆ ಮಾಡಿದೆ.
“ಓ ಮನಸೇ’ ಸಿನಿಮಾದ ಹಾಡುಗಳನ್ನು ಬಿಡುಗಡೆ ಮಾಡಿದ ಚಿತ್ರತಂಡ, ಸಿನಿಮಾದ ಬಗ್ಗೆ ಸಾಕಷ್ಟು ಭರವಸೆಯ ಮಾತುಗಳನ್ನಾಡಿತು.
“ಇತ್ತೀಚೆಗೆ ಒಂದರ ಹಿಂದೊಂದು ಸಿನಿಮಾಗಳಲ್ಲಿ ಪೊಲೀಸ್ ಪಾತ್ರಗಳು ಸಿಗುತ್ತಿವೆ. “ಓ ಮನಸೇ’ ಸಿನಿಮಾದಲ್ಲೂ ನನ್ನದು ಪೊಲೀಸ್ ಅಧಿಕಾರಿಯ ಪಾತ್ರ. ಕ್ರೈಂ ಒಂದರ ತನಿಖೆಯ ಜಾಡು ಹಿಡಿದು ಹೊರಡುವ ಪೊಲೀಸ್ ಅಧಿಕಾರಿ ಆ ಪ್ರಕರಣಕ್ಕೆ ಹೇಗೆ ತಾರ್ಕಿಕ ಅಂತ್ಯ ನೀಡಲು ಏನೆಲ್ಲ ಮಾಡುತ್ತಾನೆ. ಇದರ ನಡುವೆ ತನ್ನ ಜೀವನಕ್ಕೆ ಬರುವ ಹೊಸ ವ್ಯಕ್ತಿಯೊಬ್ಬರಿಂದ ಏನೆಲ್ಲ ಬದಲಾವಣೆಗಳು ಆಗುತ್ತವೆ ಎಂಬುದು ಈ ಪಾತ್ರ’ ಎಂದು ಪಾತ್ರ ಪರಿಚಯ ಮಾಡಿಕೊಟ್ಟರು ನಟ ವಿಜಯ ರಾಘವೇಂದ್ರ.
ಇದನ್ನೂ ಓದಿ:ನೀಗಿತು ರೋಹಿತ್ ಶತಕದ ಬರ: ಕಿವೀಸ್ ವಿರುದ್ಧ ಮುಂದುವರಿಯಿತು ಗಿಲ್ ಅಬ್ಬರ
Related Articles
“ಕೋವಿಡ್ ನಂತರ ಕೆಲಸವಿಲ್ಲದೆ ಇದ್ದಾಗ ಈ ಸಿನಿಮಾ ಹುಡುಕಿಕೊಂಡು ಬಂದಿತು. ಇದರಲ್ಲಿ ನನ್ನದು ಕಾಲೇಜ್ ಹುಡುಗ ಪಾತ್ರ. ಲವ್ ಸ್ಟೋರಿ ಜೊತೆಗೆ ಕ್ರೈಂ-ಥ್ರಿಲ್ಲರ್ ಶೈಲಿಯಲ್ಲಿ ಸಿನಿಮಾದ ಕಥೆ ಹೇಳಲಾಗಿದೆ. ತುಂಬ ಅಚ್ಚುಕಟ್ಟಾಗಿ ಸಿನಿಮಾ ಬಂದಿದೆ’ ಎಂಬುದು ಧರ್ಮ ಕೀರ್ತಿರಾಜ್ ಮಾತು.
ನಾಯಕಿ ಸಂಚಿತಾ ಪಡುಕೋಣೆ ಅವರದ್ದು ಸಿನಿಮಾದಲ್ಲಿ ಕಾಲೇಜ್ ಹುಡುಗಿಯ ಪಾತ್ರವಂತೆ. “ಕೆಲವೊಂದು ಅನಿರೀಕ್ಷಿತ ಘಟನೆಗಳು ಬದುಕಿನಲ್ಲಿ ಹೇಗೆಲ್ಲ ಬದಲಾವಣೆಗೆ ಕಾರಣವಾಗುತ್ತದೆ ಎಂಬುದು ನನ್ನ ಪಾತ್ರ. ಇಡೀ ಸಿನಿಮಾದ ಚಿತ್ರೀಕರಣವನ್ನು ತುಂಬ ಖುಷಿಯಿಂದ ಮಾಡಿದ್ದೇವೆ. ಒಳ್ಳೆಯ ಕಥೆ, ಒಳ್ಳೆಯ ಹಾಡುಗಳು, ಒಳ್ಳೆಯ ಕಾಸ್ಟಿಂಗ್ ಎಲ್ಲವೂ ಸಿನಿಮಾದಲ್ಲಿದೆ’ ಎಂದರು ಸಂಚಿತಾ.
ಇನ್ನು ಜೆಸ್ಸಿಗಿಫ್ಟ್ ಸಂಗೀತ ಸಂಯೋಜನೆಯ “ಓ ಮನಸೇ’ ಸಿನಿಮಾದ ಹಾಡುಗಳಿಗೆ ಡಾ. ವಿ. ನಾಗೇಂದ್ರ ಪ್ರಸಾದ್, ಕವಿರಾಜ್ ಸಾಹಿತ್ಯವಿದೆ. ರಾಜೇಶ್ ಕೃಷ್ಣನ್, ಕಾರ್ತಿಕ್, ಅನಿರುದ್ಧ ಶಾಸ್ತ್ರೀ ಮೊದಲಾದವರು ಚಿತ್ರದ ಹಾಡುಗಳಿಗೆ ಧ್ವನಿಯಾಗಿದ್ದಾರೆ. ಡಿ. ಜಿ ಉಮೇಶ್ ಗೌಡ ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ “ಓ ಮನಸೇ’ ಚಿತ್ರಕ್ಕೆ ಎಂ.ಆರ್ ಸೀನು ಛಾಯಾಗ್ರಹಣ, ಶ್ರೀನಿವಾಸ್ ಪಿ. ಬಾಬು ಸಂಕಲನವಿದೆ.
“ಶ್ರೀ ಫ್ರೆಂಡ್ಸ್ ಮೂವೀ ಮೇಕರ್’ ಬ್ಯಾನರ್‌ನಲ್ಲಿ ಚಿತ್ರ ನಿರ್ಮಾಣವಾಗಿದೆ. ಸದ್ಯ “ಓ ಮನಸೇ’ ಸಿನಿಮಾದ ಟೀಸರ್, ಆಡಿಯೋ ಬಿಡುಗಡೆ ಮೂಲಕ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಫೆಬ್ರವರಿ ವೇಳೆಗೆ ಸಿನಿಮಾ ವನ್ನು ತೆರೆಗೆ ತರುವ ಯೋಜನೆಯಲ್ಲಿದೆ.