Advertisement
ಫಿರೋಜ್ ಷಾ ಕೋಟ್ಲಾದಲ್ಲಿ ನಡೆದ ಬುಧವಾರದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಕರ್ನಾಟಕ 8 ವಿಕೆಟಿಗೆ 348 ರನ್ ಸೂರೆಗೈದರೆ, ಬೃಹತ್ ಮೊತ್ತಕ್ಕೆ ತಕ್ಕ ಜವಾಬು ನೀಡಲು ವಿಫಲವಾದ ಹೈದರಾಬಾದ್ 42.5 ಓವರ್‌ಗಳಲ್ಲಿ 244ಕ್ಕೆ ಆಲೌಟ್ ಆಯಿತು.
ನಾಯಕ ಕರುಣ್ ನಾಯರ್ (10) ಅವರನ್ನು 29 ರನ್ ಆಗಿದ್ದಾಗ ಕಳೆದುಕೊಂಡ ಬಳಿಕ ಜತೆಗೂಡಿದ ಮಾಯಾಂಕ್ ಅಗರ್ವಾಲ್-ಸಮರ್ಥ್ ಹೈದರಾಬಾದ್ ದಾಳಿಯನ್ನು ನೀರು ಕುಡಿದಷ್ಟು ಸಲೀಸಾಗಿ ಎದುರಿಸುತ್ತ ಸಾಗಿದರು. 4ರಿಂದ 39ನೇ ಓವರ್ ತನಕ ಇವರ ಮ್ಯಾರಥಾನ್ ಜತೆಯಾಟ ಸಾಗಿತು. 2ನೇ ವಿಕೆಟಿಗೆ 242 ರನ್ ಹರಿದು ಬಂತು. ಅಗರ್ವಾಲ್ 140 ರನ್ ಬಾರಿಸಿದರೆ, ಸಮರ್ಥ್ 125 ರನ್ ಕೊಡುಗೆ ಸಲ್ಲಿಸಿದರು.
Related Articles
Advertisement
ಕರ್ನಾಟಕದ ಬ್ಯಾಟಿಂಗ್ ಸರದಿಯ ಬಹುಪಾಲನ್ನು ಅಗರ್ವಾಲ್-ಸಮರ್ಥ್ ಜೋಡಿಯೇ ಆಕ್ರಮಿಸಿಕೊಂಡಿತು. 32 ರನ್ ಅಂತರದಲ್ಲಿ ಇವರಿಬ್ಬರ ವಿಕೆಟ್ ಉರುಳಿತು. ಸಮರ್ಥ್ 3ನೇ ವಿಕೆಟ್ ರೂಪದಲ್ಲಿ ಔಟಾಗುವಾಗ ಕರ್ನಾಟಕದ ಮೊತ್ತ ಮುನ್ನೂರರ ಗಡಿ ದಾಟಿತ್ತು.
ಇವರಿಬ್ಬರನ್ನು ಹೊರತುಪಡಿಸಿದರೆ 20 ರನ್ ಮಾಡಿದ ಕೃಷ್ಣಪ್ಪ ಗೌತಮ್ ಅವರದೇ ಹೆಚ್ಚಿನ ಗಳಿಕೆ. ಪವನ್ ದೇಶಪಾಂಡೆ 19, ಶ್ರೇಯಸ್ ಗೋಪಾಲ್ 11 ರನ್ ಮಾಡಿದರು.
ಹೈದರಾಬಾದ್ ಪರ ಮೊಹಮ್ಮದ್ ಸಿರಾಜ್ 5 ವಿಕೆಟ್ ಉರುಳಿಸಿದರೂ ಇದರಿಂದ ಯಾವುದೇ ಲಾಭವಾಗಲಿಲ್ಲ. ಕರ್ನಾಟಕಕ್ಕೆ ಕಡಿವಾಣ ಹಾಕಲು 8 ಮಂದಿ ಬೌಲಿಂಗ್ ದಾಳಿಗಿಳಿದರೂ ಯಶಸ್ಸು ಸಿಗಲಿಲ್ಲ.
ಗೋಪಾಲ್‌ಗೆ 5 ವಿಕೆಟ್ಹೈದರಾಬಾದ್ ಸರದಿಯಲ್ಲಿ ನಾಯಕ ಅಂಬಾಟಿ ರಾಯುಡು (64) ಮತ್ತು ಟಿ. ರವಿತೇಜ (53) ಅರ್ಧ ಶತಕ ಬಾರಿಸಿ ಗಮನ ಸೆಳೆದರು. ಬಿ.ಪಿ. ಪ್ರದೀಪ್ 42 ರನ್ ಮಾಡಿದರು. ಈ ಮೂವರಿಂದ ತಂಡದ ಮಧ್ಯಮ ಕ್ರಮಾಂಕದಲ್ಲಿ ಸಾಮಾನ್ಯ ಮಟ್ಟದ ಹೋರಾಟವೊಂದು ಕಂಡುಬಂತು. ಆದರೆ ಶ್ರೇಯಸ್ ಗೋಪಾಲ್ ಮತ್ತು ಸ್ಟುವರ್ಟ್ ಬಿನ್ನಿ ದಾಳಿಯ ಮುಂದೆ ರಾಯುಡು ಬಳಗದ ಆಟ ಸಾಗಲಿಲ್ಲ. ಗೋಪಾಲ್ 31ಕ್ಕೆ 5, ಬಿನ್ನಿ 45ಕ್ಕೆ 3 ವಿಕೆಟ್ ಉರುಳಿಸಿದರು. ಸಂಕ್ಷಿಪ್ತ ಸ್ಕೋರ್: ಕರ್ನಾಟಕ-8 ವಿಕೆಟಿಗೆ 347 (ಅಗರ್ವಾಲ್ 140, ಸಮರ್ಥ್ 125, ಸಿರಾಜ್ 59ಕ್ಕೆ 5, ರವಿಕಿರಣ್ 61ಕ್ಕೆ 2). ಹೈದರಾಬಾದ್-42.5 ಓವರ್‌ಗಳಲ್ಲಿ 244 (ರಾಯುಡು 64, ರವಿತೇಜ 53, ಸಂದೀಪ್ 42, ಗೋಪಾಲ್ 31ಕ್ಕೆ 5, ಬಿನ್ನಿ 45ಕ್ಕೆ 3).