Advertisement

ವಿಜಯ್‌ ಹಜಾರೆ: ಸೆಮಿಫೈನಲ್‌ಗೆ ಕರ್ನಾಟಕ

11:49 PM Oct 20, 2019 | Sriram |

ಬೆಂಗಳೂರು: ಕರ್ನಾಟಕ “ವಿಜಯ್‌ ಹಜಾರೆ ಏಕದಿನ ಕ್ರಿಕೆಟ್‌ ಪಂದ್ಯಾವಳಿ’ಯ ಸೆಮಿಫೈನಲ್‌ಗೆ ಲಗ್ಗೆ ಹಾಕಿದೆ. ರವಿವಾರದ ಕ್ವಾರ್ಟರ್‌ ಫೈನಲ್‌ನಲ್ಲಿ ಪಾಂಡೆ ಪಡೆ ಪುದುಚೇರಿಯನ್ನು 8 ವಿಕೆಟ್‌ಗಳಿಂದ ಸೋಲಿಸಿ ಮುನ್ನುಗ್ಗಿತು.

Advertisement

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಪುದುಚೇರಿ ತಂಡ 9 ವಿಕೆಟಿಗೆ 207 ರನ್ನುಗಳ ಸಾಮಾನ್ಯ ಮೊತ್ತ ಗಳಿಸಿದರೆ, ಕರ್ನಾಟಕ 41 ಓವರ್‌ಗಳಲ್ಲಿ ಎರಡೇ ವಿಕೆಟ್‌ ಕಳೆದುಕೊಂಡು 213 ರನ್‌ ಬಾರಿಸಿತು.

41 ರನ್ನಿಗೆ ಬಿತ್ತು 6 ವಿಕೆಟ್‌
ಪ್ರವೀಣ್‌ ದುಬೆ (44ಕ್ಕೆ 3), ವಿ. ಕೌಶಿಕ್‌ (33ಕ್ಕೆ 2) ಹಾಗೂ ಅಭಿಮನ್ಯು ಮಿಥುನ್‌ (35ಕ್ಕೆ 2) ಅವರ ಬಿಗಿ ಬೌಲಿಂಗ್‌ ದಾಳಿಗೆ ಸಿಲುಕಿದ ಪುದುಚೇರಿ ರನ್‌ ಗಳಿಸಲು ಪರದಾಡಿತು. 16ನೇ ಓವರ್‌ ವೇಳೆ 41 ರನ್ನಿಗೆ 6 ವಿಕೆಟ್‌ ಉದುರಿ ಹೋದಾಗ ಪುದುಚೇರಿ ನೂರರ ಗಡಿ ದಾಟುವುದೂ ಅನುಮಾನವಿತ್ತು. ಆದರೆ ಕೆಳ ಸರದಿಯ ಆಟಗಾರರಾದ ಸಾಗರ್‌ ತ್ರಿವೇದಿ (54), ವಿ. ಮಾರಿಮುತ್ತು (58), ಫಾಬಿದ್‌ ಅಹ್ಮದ್‌ (37) ಉತ್ತಮ ಹೋರಾಟ ಸಂಘಟಿಸಿ ಮೊತ್ತವನ್ನು ಇನ್ನೂರರಾಚೆ ವಿಸ್ತರಿಸುವಲ್ಲಿ ನೆರವಾದರು. ವನ್‌ಡೌನ್‌ನಲ್ಲಿ ಬಂದ ಕರ್ನಾಟಕದ ಮಾಜಿ ಆಟಗಾರ ಆರ್‌. ವಿನಯ್‌ ಕುಮಾರ್‌ ಗಳಿಸಿದ್ದು 2 ರನ್‌ ಮಾತ್ರ. ಬೌಲಿಂಗ್‌ನಲ್ಲೂ ಅವರ ಜಾದೂ ನಡೆಯಲಿಲ್ಲ. 7 ಓವರ್‌ಗಳಲ್ಲಿ 45 ರನ್‌ ನೀಡಿ “ವಿಕೆಟ್‌ ಲೆಸ್‌’ ಎನಿಸಿದರು. ಎರಡೂ ವಿಕೆಟ್‌ ಸಾಗರ್‌ ಉದೇಶಿ ಪಾಲಾಯಿತು.

ಕರ್ನಾಟಕ ಭರ್ಜರಿ ಆರಂಭ
ಕರ್ನಾಟಕಕ್ಕೆ ಕೆ.ಎಲ್‌. ರಾಹುಲ್‌-ದೇವದತ್‌ ಪಡಿಕ್ಕಲ್‌ ಭರ್ಜರಿ ಆರಂಭ ಒದಗಿಸಿದರು. ಮೊದಲ ವಿಕೆಟಿಗೆ 98 ರನ್‌ ಹರಿದು ಬಂತು. ದ್ವಿತೀಯ ವಿಕೆಟಿಗೆ ಜತೆಗೂಡಿದ ರಾಹುಲ್‌-ರೋಹನ್‌ ಕದಂ 88 ರನ್‌ ಪೇರಿಸಿದರು. ಮೂವರಿಂದಲೂ ಅರ್ಧ ಶತಕ ದಾಖಲಾಯಿತು.

ಶತಕದ ನಿರೀಕ್ಷೆಯಲ್ಲಿದ್ದ ರಾಹುಲ್‌ 90 ರನ್‌ ಬಾರಿಸಿ ನಿರ್ಗಮಿಸ ಬೇಕಾಯಿತು (112 ಎಸೆತ, 8 ಬೌಂಡರಿ, 1 ಸಿಕ್ಸರ್‌). ಪಡಿಕ್ಕಲ್‌ 54 ಎಸೆತಗಳಿಂದ 50 ರನ್‌ ಹೊಡೆದರು (5 ಬೌಂಡರಿ, 1 ಸಿಕ್ಸರ್‌). ರೋಹನ್‌ ಅವರ ಅಜೇಯ 50 ರನ್‌ 68 ಎಸೆತಗಳಿಂದ ಬಂತು (3 ಬೌಂಡರಿ).

Advertisement

ಸಂಕ್ಷಿಪ್ತ ಸ್ಕೋರ್‌: ಪುದುಚೇರಿ-9 ವಿಕೆಟಿಗೆ 207. ಕರ್ನಾಟಕ-41 ಓವರ್‌ಗಳಲ್ಲಿ 2 ವಿಕೆಟಿಗೆ 213.

ದಿಲ್ಲಿಯನ್ನು
ಮಣಿಸಿದ ಗುಜರಾತ್‌
ಇನ್ನೊಂದು ಕ್ವಾರ್ಟರ್‌ ಫೈನಲ್‌ನಲ್ಲಿ ಪಾರ್ಥಿವ್‌ ಪಟೇಲ್‌ ನೇತೃತ್ವದ ಗುಜರಾತ್‌ 6 ವಿಕೆಟ್‌ಗಳಿಂದ ದಿಲ್ಲಿಯನ್ನು ಮಣಿಸಿ ಸೆಮಿಫೈನಲ್‌ ಪ್ರವೇಶಿಸಿತು.

ಮೊದಲು ಬ್ಯಾಟಿಂಗ್‌ ನಡೆಸಿದ ದಿಲ್ಲಿ 49 ಓವರ್‌ಗಳಲ್ಲಿ 223ಕ್ಕೆ ಆಲೌಟ್‌ ಆಯಿತು. ಜವಾಬಿತ್ತ ಗುಜರಾತ್‌ 37.5 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಲ್ಲಿ 225 ರನ್‌ ಬಾರಿಸಿ ಜಯ ಸಾಧಿಸಿತು. ಪಾರ್ಥಿವ್‌ ಪಟೇಲ್‌ (76)-ಪ್ರಿಯಾಂಕ್‌ ಪಾಂಚಾಲ್‌ (80) ಮೊದಲ ವಿಕೆಟಿಗೆ 150 ರನ್‌ ಪೇರಿಸಿ ದಿಲ್ಲಿ ಮೇಲೆ ಸವಾರಿ ಮಾಡಿದರು.

ದಿಲ್ಲಿ ಸರದಿಯಲ್ಲಿ ನಾಯಕ ಧ್ರುವ ಶೋರಿ 91 ರನ್‌ ಬಾರಿಸಿ ಗಮನ ಸೆಳೆದರು. ಗುಜರಾತ್‌ನ ಚಿಂತನ್‌ ಗಜ ಮತ್ತು ಎನ್‌. ಅರ್ಜಾನ್‌ ತಲಾ 3 ವಿಕೆಟ್‌ ಉರುಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next