ಬೆಂಗಳೂರು: ಭಾರತವು 1971ರಲ್ಲಿ ಪಾಕಿಸ್ತಾನ ವಿರುದ್ಧ ಯುದ್ದದಲ್ಲಿ ಗೆಲುವು ಸಾಧಿಸಿದ ಸ್ಮರಣಾರ್ಥ ನಡೆಯುವ ವಿಜಯ ದಿವಸ್ ಆಚರಣೆಯನ್ನು ನಗರದ ಮೇಖ್ರೀ ವೃತ್ತದ ಬಳಿಯ ಭಾರತೀಯ ವಾಯುಪಡೆಯ ಮುಖ್ಯ ತರಬೇತಿ ಕಚೇರಿಯಲ್ಲಿ ಭಾನುವಾರ ನಡೆಸಲಾಯಿತು.
ಇದೇ ಸಂದರ್ಭದಲ್ಲಿ ಯುದ್ಧದಲ್ಲಿ ಮಡಿದ ಸಶಸ್ತ್ರ ಪಡೆಯ ಯೋಧರಿಗೆ ನಮನ ಸಲ್ಲಿಸಲಾಯಿತು. ತರಬೇತಿ ವಸತಿ ಸಂಕೀರ್ಣದ ಮುಖ್ಯಸ್ಥ ಏರ್ ಮಾರ್ಷಲ್ ರಾಕೇಶ್ ಕುಮಾರ್ ಸಿಂಗ್ ಯುದ್ಧ ಸ್ಮಾರಕಕ್ಕೆ ಮಾಲೆ ಅರ್ಪಿಸಿ ನಮನ ಸಲ್ಲಿಸಿದರು. ಅವರೊಂದಿಗೆ ಹಿರಿಯ ಅಧಿಕಾರಿಗಳು, ನಿವೃತ್ತ ಅಧಿಕಾರಿಗಳು ಭಾಗವಹಿಸಿದ್ದರು.
ಹುತಾತ್ಮರಿಗೆ ಗೌರವ ವಂದನೆ: ವಿಜಯ ದಿವಸ್ ಅಂಗವಾಗಿ ನಗರದ ರಾಷ್ಟ್ರೀಯ ಸೈನಿಕ ಸ್ಮಾರಕಕ್ಕೆ ರಾಜ್ಯ ಸರ್ಕಾರದ ಪರವಾಗಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ್ ಅವರು ಪುಷ್ಪನಮನ ಹಾಗೂ ಹುತಾತ್ಮ ಯೋಧರಿಗೆ ಗೌರವವಂದನೆ ಸಲ್ಲಿಸಿದರು.
ವಿವಿಧ ಭಾಗಗಳಿಂದ ಆಗಮಿಸಿದ್ದ ಹುತಾತ್ಮ ಯೋಧರ ಕುಟುಂಬಸ್ಥರು ಸೈನಿಕ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿದರು. ಈ ವೇಳೆ ವಿಜಯ ಭಾಸ್ಕರ್ ಅವರು ಹುತಾತ್ಮ ಯೋಧರ ಕುಟುಂಬದ ಸದಸ್ಯರ ಯೋಗಕ್ಷೇಮ ವಿಚಾರಿಸಿ ಧೈರ್ಯ ತುಂಬಿದರು.
ಕರ್ನಾಟಕ ಮತ್ತು ಕೇರಳ ಸಬ್ ಏರಿಯಾದ ಮೇಜರ್ ಜನರಲ್ ಕೆ.ಜೆ.ಬಾಬು, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ನಿವೃತ್ತ ಏರ್ ಕಮೋಡರ್ ಎಂ.ಕೆ.ಚಂದ್ರಶೇಖರ್,
ಸೈನಿಕ ಕಲ್ಯಾಣ ಮತ್ತು ಪುನರ್ ವಸತಿ ಇಲಾಖೆಯ ನಿರ್ದೇಶಕ ಎಸ್.ಬಿ.ಸಜ್ಜನ್, ರಕ್ಷಣಾ ಪಡೆಗಳ ವಿವಿಧ ವಿಭಾಗದ ಅಧಿಕಾರಿಗಳು, ಎನ್‌ಸಿಸಿ, ಸ್ಕೌಟ್ ಆಂಡ್ ಗೈಡ್ಸ್ ಹಾಗೂ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿ ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.