ಮಂಗಳೂರು: ಇದೇ ಮೊದಲ ಬಾರಿಗೆ ವಿಶ್ವ ಹಿಂದೂ ಪರಿಷತ್‌ನ ಕೇಂದ್ರೀಯ ವಿಶ್ವಸ್ಥ ಮಂಡಳಿ ಮತ್ತು ಅಂತಾರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಬೈಠಕ್ ನಗರದ ಸಂಘನಿಕೇತನದಲ್ಲಿ ಡಿ.25ರಿಂದ 30ರ ವರೆಗೆ ನಡೆಯಲಿದ್ದು, ದೇಶ-ವಿದೇಶದ ಆಯ್ದ ಸುಮಾರು 400 ಮಂದಿ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ಡಿ.27ರಂದು ಬೈಠಕ್‌ನ ಅಧಿಕೃತ ಉದ್ಘಾಟನೆ ನಡೆಯಲಿದ್ದು, ಬೆಳಗ್ಗೆ 10ಕ್ಕೆ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಉದ್ಘಾಟಿಸಲಿದ್ದಾರೆ ಎಂದು ವಿಹಿಂಪ ಕರ್ನಾಟಕ ವಲಯ ಕಾರ್ಯಾಧ್ಯಕ್ಷ ಪ್ರೊ.ಎಂ.ಬಿ.ಪುರಾಣಿಕ್ ನಗರದಲ್ಲಿ ನಡೆದ ಪತ್ರಿಕಾಗೊಷ್ಠಿಯಲ್ಲಿ ಹೇಳಿದರು.
ಬೈಠಕ್‌ನಲ್ಲಿ ಗೋ ಸಂರಕ್ಷಣೆ, ಮತಾಂತರ ತಡೆ, ಸಾಮಾಜಿಕ ಸಾಮರಸ್ಯ, ಸೇವಾ ಚಟುವಟಿಕೆಗೆ ಒತ್ತು ಮತ್ತು ಅತ್ಯಂತ ಪ್ರಮುಖವಾಗಿ ರಾಮ ಜನ್ಮಭೂಮಿಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣ ಮತ್ತು ಪೌರತ್ವ ಕಾಯ್ದೆ ಬಗ್ಗೆ ಚರ್ಚೆ ನಡೆಯಲಿದೆ ಎಂದರು.
ದೇಶದ ಎಲ್ಲಾ ರಾಜ್ಯಗಳ ವಿಹಿಂಪ ಪ್ರತಿನಿಧಿಗಳು, ಅಮೆರಿಕ, ಜರ್ಮನಿ, ಆಸ್ಟ್ರೇಲಿಯಾ, ಮಲೇಷಿಯಾ, ಇಟಲಿ, ಥಾಯ್ಲೆಂಡ್, ದ.ಆಫ್ರಿಕಾ, ಬಾಂಗ್ಲಾದೇಶ, ನೇಪಾಳ ಸೇರಿ ಹಲವು ದೇಶಗಳ ಪ್ರತಿನಿಧಿಗಳು ಆಗಮಿಸಲಿದ್ದಾರೆ. ಬೈಠಕ್ ಅಂಗವಾಗಿ ಡಿ.28ರ ಸಂಜೆ 6.30ರಿಂದ ಗಣ್ಯರೊಂದಿಗೆ ಸ್ನೇಹ ಮಿಲನ ಕಾರ್ಯಕ್ರಮ ನಡೆಯಲಿದೆ. ನಿಟ್ಟೆ ಸಮೂಹ ಸಂಸ್ಥೆಗಳ ಅಧ್ಯಕ್ಷ ಎನ್. ವಿನಯ್ ಹೆಗ್ಡೆ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ವಿಹಿಂಪ ಮಂಗಳೂರು ವಿಭಾಗ ಕಾರ್ಯದರ್ಶಿ ಶರಣ್ ಪಂಪ್‌ವೆಲ್, ಕರ್ನಾಟಕ ಪ್ರಾಂತ ಸಹ ಕಾರ್ಯದರ್ಶಿ ಕೃಷ್ಣಮೂರ್ತಿ, ಅಧ್ಯಕ್ಷ ಗೋಪಾಲ್ ಕುತ್ತಾರ್, ಕಾರ್ಯ ದರ್ಶಿ ಶಿವಾನಂದ ಮೆಂಡನ್, ಭಜರಂಗದಳ ವಿಭಾಗ ಸಂಚಾಲಕ ಭುಜಂಗ ಕುಲಾಲ್ ಉಪಸ್ಥಿತರಿದ್ದರು.
ಆರ್‌ಎಸ್‌ಎಸ್‌ಪ್ರಮುಖರು ಭಾಗಿ: ಆರೆಸ್ಸೆಸ್ ಸರ ಕಾರ್ಯವಾಹ ಸುರೇಶ್ ಭಯ್ನಾಜಿ ಜೋಶಿ, ವಿಹಿಂಪ ಅಂತಾರಾಷ್ಟ್ರೀಯ ಅಧ್ಯಕ್ಷ ವಿಷ್ಣು ಸದಾಶಿವ ಕೋಕೆ, ಅಂ.ರಾ.ಕಾರ್ಯಾಧ್ಯಕ್ಷ ಅಲೋಕ್ ಕುಮಾರ್, ಪ್ರ.ಕಾರ್ಯದರ್ಶಿ ಮಿಲೀನ್ ಪಾಂಡೆ, ಉಪಾಧ್ಯಕ್ಷ ಚಂಪತ್ ರಾಯ್ ಮಾರ್ಗದರ್ಶನದಲ್ಲಿ ವಿಹಿಂಪ ಅಂತಾರಾಷ್ಟ್ರೀಯ ಸಭೆ ನಡೆಯಲಿದೆ ಎಂದು ಪ್ರೊ.ಪುರಾಣಿಕ್ ತಿಳಿಸಿದರು.