ಕಾಸರಗೋಡು: ಸ್ವತ್ಛ ಭಾರತ್ ಮಿಷನ್, ರಾಜ್ಯ ಶುಚಿತ್ವ ಮಿಷನ್ ಮತ್ತು ನಗರಸಭೆ ನಿಧಿ ಬಳಸಿ ತ್ಯಾಜ್ಯ ನಿರ್ಮೂಲನೆಗಾಗಿ ಕಾಸರಗೋಡು ನಗರಸಭೆಯಲ್ಲಿ ಜಾರಿಗೊಳಿಸಿದ ಬಯೋಗ್ಯಾಸ್ ಸ್ಥಾವರ ಮತ್ತು ಕಾಂಪೋಸಿಟ್‌ಬಿನ್ ಇತ್ಯಾದಿ ಯೋಜನೆಯಲ್ಲಿ ಕೆಲವೊಂದು ಅವ್ಯವಹಾರ ನಡೆದಿರುವುದನ್ನು ಕಾಸರಗೋಡು ವಿಜಿಲೆನ್ಸ್ ಡಿವೈಎಸ್‌ಪಿ ಕೆ.ವಿ.ವೇಣುಗೋಪಾಲ್ ನೇತೃತ್ವದ ತಂಡ ನಡೆಸಿದ ತಪಾಸಣೆಯಲ್ಲಿ ಪತ್ತೆಹಚ್ಚಿದೆ.
ಈ ಬಗ್ಗೆ ದೂರು ಲಭಿಸಿದ ಹಿನ್ನೆಲೆಯಲ್ಲಿ ವಿಜಿಲೆನ್ಸ್ ತಂಡ ಕಾಸರಗೋಡು ನಗರಸಭೆಗೆ ಮಿಂಚಿನ ದಾಳಿ ನಡೆಸಿ ಸಂಬಂಧಪಟ್ಟ ಕಡತಗಳನ್ನೆಲ್ಲಾ ಪರಿಶೀಲಿಸಿದೆ. ತ್ಯಾಜ್ಯ ನಿರ್ಮೂಲನೆ ಯೋಜನೆಗಳನ್ನು ಜಾರಿಗೊಳಿಸುವ ಹೊಣೆಗಾರಿಕೆಯನ್ನು ಕಣ್ಣೂರು ಕೇಂದ್ರೀಕರಿಸಿ ಕಾರ್ಯವೆಸಗುತ್ತಿರುವ ಅಕ್ರಡಿಕ್ಟೆಡ್ ಸಂಸ್ಥೆಗೆ ವಹಿಸಿಕೊಡಲಾಗಿತ್ತು. ಆ ಸಂಸ್ಥೆಗೆ ಈ ಯೋಜನೆಯ ಶೇ.20 ರಷ್ಟು ಮೊತ್ತ ಮುಂಗಡ ರೂಪದಲ್ಲಿ ಪಾವತಿಸಲಾಗಿತ್ತು. ಈ ಯೋಜನೆಗೆ ಈ ತನಕ ಶೇ.30 ರಷ್ಟು ಮೊತ್ತವನ್ನು ಮಾತ್ರವೇ ವಿನಿಯೋಗಿಸಲಾಗಿದೆಯೆಂಬುವುದು ಪರಿಶೀಲನೆಯಲ್ಲಿ ಸ್ಪಷ್ಟಗೊಂಡಿದೆಯೆಂದು ವಿಜಿಲೆನ್ಸ್ ಅಧಿಕಾರಿಗಳು ತಿಳಿಸಿದ್ದಾರೆ.
ನಾಲ್ಕು ವರ್ಷಗಳಿಗಿರುವ ಅಡ್ವಾನ್ಸ್ ನೀಡಿದ ಹಣವನ್ನು ಹಿಂಪಡೆಯಲಾಗಲೀ ಈ ಯೋಜನೆಯನ್ನು ಪೂರ್ಣಗೊಳಿಸುವ ಕ್ರಮವಾಗಲೀ ನಗರಸಭೆಯ ಸಂಬಂಧಪಟ್ಟ ಅಧಿಕಾರಿಗಳ ವತಿಯಿಂದ ಉಂಟಾಗಿಲ್ಲ. ಇದರ ಹೊರತಾಗಿ ಕಾಂಪೋಸಿಟ್‌ಬಿನ್ ಪಡೆಯಲು ಅರ್ಹರಾದ ಫಲಾನುಭವಿಗಳಿಂದ ಫಲಾನುಭವಿ ಹಣ ರೂಪದಲ್ಲಿ ಮುಂಗಡವಾಗಿ ಪಡೆಯಲಾಗಿದ್ದರೂ ಅವರಿಗೆ ಕಾಂಪೋಸಿಟ್‌ಬಿನ್ ವಿತರಿಸಲಾಗಲೀ ಅವರಿಂದ ಪಡೆದ ಹಣವನ್ನು ಹಿಂತಿರುಗಿಸುವ ಕ್ರಮವನ್ನಾಗಲೀ ನಗರಸಭೆ ಕೈಗೊಂಡಿಲ್ಲವೆಂದೂ ವಿಜಿಲೆನ್ಸ್ ಅಧಿಕಾರಿಗಳು ತಿಳಿಸಿದ್ದಾರೆ. ಹೀಗೆ ಅದಕ್ಕಾಗಿ ಫಲಾನುಭವಿಗಳಿಂದ ಮುಂಗಡವಾಗಿ ಹಣ ಪಡೆದ ಕುರಿತಾದ ದಾಖಲುಪತ್ರಗಳು ಪ್ರಸ್ತುತ ಯೋಜನೆಯ ಕಡತದಿಂದ ನಾಪತ್ತೆಯಾಗಿದ್ದು ಇದು ಒಂದು ಗಂಭೀರ ವಿಷಯವಾಗಿದೆಯೆಂದು ವಿಜಿಲೆನ್ಸ್ ಅಧಿಕಾರಿಗಳು ಹೇಳಿದ್ದಾರೆ. ಈ ಕುರಿತಾದ ಸಮಗ್ರ ತನಿಖೆ ನಡೆಸಲಾಗುವುದು ಎಂದಿದ್ದಾರೆ.