Advertisement

ಹೈಕಕ್ಕಿರುವ ಹಿಂದುಳಿದ ಹಣೆಪಟ್ಟಿ ತೊಡೆದು ಹಾಕಲು ವೈಜನಾಥ ಪಾಟೀಲ ಕರೆ

04:46 PM May 08, 2017 | Team Udayavani |

ಕ‌ಲಬುರಗಿ: ಹೈದ್ರಾಬಾದ ಕರ್ನಾಟಕ ಹಿಂದುಳಿದ ಪ್ರದೇಶ ಎನ್ನುವ ಹಣೆಪಟ್ಟಿ ಹೊಂದಿದ್ದು, ಈ ಹಣೆಪಟ್ಟಿ ಹೋಗಲಾಡಿಸಲು ಯುವ ಜನತೆ ಯತ್ನಿಸಬೇಕೆಂದು ಮಾಜಿ ಸಚಿವ ವೈಜನಾಥ ಪಾಟೀಲ ಕರೆ ನೀಡಿದರು. 

Advertisement

ನಗರದ ಎಕೆಆರ್‌ ದೇವಿ ಪಿಯು ಕಾಲೇಜಿನ ಸಭಾಂಗಣದಲ್ಲಿ ವಿಶ್ವಜ್ಯೋತಿ ಪ್ರತಿಷ್ಠಾನ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಕರ್ನಾಟಕ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸರ್ಕಾರದ ಪ್ರಮುಖ ಹುದ್ದೆಗಳಿಗೆ ಆಯ್ಕೆಯಾದ ಜಿಲ್ಲೆಯ ಸಾಧಕರನ್ನು ಸನ್ಮಾನಿಸಿ ಅವರು ಮಾತನಾಡಿದರು. 

ಮಹಾರಾಷ್ಟ್ರ, ಆಂಧ್ರಪ್ರದೇಶ ರಾಜ್ಯದಲ್ಲಿ ಜಾರಿಯಲ್ಲಿದ್ದ 371(ಜೆ)ನೇ ಕಲಂನ್ನು ಕೂಲಂಕುಷವಾಗಿ ಪರಿಶೀಲಿಸಿದ ನಂತರ ಕರ್ನಾಟಕದ ಹೈ.ಕ.ಭಾಗದಲ್ಲಿ ಇದನ್ನು ಜಾರಿ ಮಾಡಲು ಯಾವುದೇ ಸಂವಿಧಾನಾತ್ಮಕ ತೊಂದರೆಯಿಲ್ಲ ಎಂಬುವುದನ್ನು ಮನಗಂಡು ಹೋರಾಟ ಆರಂಭಿಸಲಾಯಿತು. ಸರ್ಕಾರ ಮತ್ತು ಜನತೆಗೆ ಈ ಬಗ್ಗೆ ಮನವರಿಕೆ ಮಾಡುವ ಜವಾಬ್ದಾರಿಯಿತ್ತು. 

ಅದನ್ನು ಯಶಸ್ವಿಯಾಗಿ ನೆರವೇರಿಸಿದ ಸಂತೋಷ ತಮಗಿದೆ . ಈ ಹೋರಾಟದ ಧ್ಯೇಯ ಅರಿತ ಹಿಂದಿನ ಕೇಂದ್ರ ಮಂತ್ರಿಗಳಾಗಿದ್ದ ಮಲ್ಲಿಕಾರ್ಜುನ ಖರ್ಗೆ, ಸಂಸದರಾಗಿದ್ದ, ಮಾಜಿ ಮುಖ್ಯಮಂತ್ರಿ ಎನ್‌.ಧರ್ಮಸಿಂಗ್‌ ಅವರು ಆಡಳಿತಾತ್ಮಕವಾಗಿ ಬೆಂಬಲಿಸಿದರು. ಪಕ್ಷಾತೀತ ಹೋರಾಟದ ಫಲವಾಗಿ ಈ ಭಾಗಕ್ಕೆ 371(ಜೆ)ನೇ ಕಲಂ ಸೌಲಭ್ಯ ಸಿಗುವಂತಾಗಿದೆ ಎಂದರು. 

371(ಜೆ)ನೇ ಕಲಂನ ಸೌಲಭ್ಯ ಪಡೆದ ಸಂತೋಷದಲ್ಲಿ ನಾವು ಮೈಮರೆಯುವಂತಿಲ್ಲ. ಈ ಭಾಗದ ಅಭಿವೃದ್ಧಿ ಕಡೆಗಣಿಸಿದಾಗ ಹೋರಾಟದ ಹೆಜ್ಜೆಯಿಡಲು ಹಿಂಜರಿಯಬೇಕಿಲ್ಲ. ಶಿಕ್ಷಣ ಹಾಗೂ ಉದ್ಯೋಗದಲ್ಲಿ ದೊರೆಯುವ ಸೌಲಭ್ಯ ಪಡೆದು ಹಿಂದುಳಿದ ಪ್ರದೇಶ ಎಂಬ ಹಣೆಪಟ್ಟಿ ಅಳಿಸುವ ಜವಾಬ್ದಾರಿ ಈ ಭಾಗದ ಯುವಕರದ್ದಾಗಿದೆ ಎಂದರು. 

Advertisement

ಪ್ರತಿಷ್ಠಾನದ ಸಂಸ್ಥಾಪಕ ವಿಜಯಕುಮಾರ ತೇಗಲತಿಪ್ಪಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಾಯಕ ಆಯುಕ್ತರಾಗಿ ಆಯ್ಕೆಯಾದ ಅಫಜಲಪುರದ ರಾಮಚಂದ್ರ ಗಡದೆ, ತಹಶೀಲ್ದಾರರಾಗಿ ಆಯ್ಕೆಯಾದ ಕಲಬುರಗಿಯ ಸಾವಿತ್ರಿ ಶರಣು ಸಲಗರ, ನಾಗಮ್ಮ ಕಟ್ಟಿಮನಿ, ಸುರೇಶ ವರ್ಮಾ, ಅಂಜುಮ್‌ ತಬಸ್ಸುಮ್‌ ಲಷ್ಕರಿ, ಡಿವೈಎಸ್ಪಿಯಾಗಿ ಆಯ್ಕೆಯಾದ ಜೇವರ್ಗಿಯ ಮಲ್ಲಿಕಾರ್ಜುನ ಸಾಲಿ,

ತಹಸಿಲ್ದಾರರಾಗಿ ಆಯ್ಕೆಯಾದ ಜೇವರ್ಗಿಯ ನಾಗಯ್ಯ ಹಿರೇಮಠ, ನಿಂಗಣ್ಣಗೌಡ ಬಿರಾದಾರ ಕುಕನೂರ, ವಾಣಿಜ್ಯ ತೆರಿಗೆ ಅಧಿಕಾರಿಯಾಗಿ ಆಯ್ಕೆಯಾದ ಕಲಬುರಗಿಯ ಮಲ್ಲಿಕಾರ್ಜುನ ಕಟ್ಟಿಮನಿ ಅವರನ್ನು ಸನ್ಮಾನಿಸಲಾಯಿತು. ಎಕೆಆರ್‌ ದೇವಿ ಕಾಲೇಜಿನ ಆಡಳಿತಾಧಿಧಿಕಾರಿ ವಿದ್ಯಾಸಾಗರ ದೇಶಮುಖ ಅಧ್ಯಕ್ಷತೆ ವಹಿಸಿದ್ದರು.

ಗಣೇಶ ಗ್ರೂಪ್‌ ಅಧ್ಯಕ್ಷ ಗುಂಡಪ್ಪ ಬೋಧನಕರ್‌, ಜನಪರ ಹೋರಾಟಗಾರ ದೇವೇಂದ್ರ ದೇಸಾಯಿ ಕಲ್ಲೂರ, ಪರಮೇಶ್ವರ ಶಟಕಾರ, ಪ್ರತಿಷ್ಠಾನದ ಅಧ್ಯಕ್ಷ ಶ್ರೀಕಾಂತ ಪಾಟೀಲ ತಿಳಗೂಳ, ಬಿ.ಎಂ.ಪಾಟೀಲ ಕಲ್ಲೂರ, ಆರತಿ ವೈಜನಾಥ ಪಾಟೀಲ, ಉಪನ್ಯಾಸಕ ಕೆ.ಗಿರಿಮಲ್ಲ , ಶಂಕರ ಬಿರಾದಾರ, ಹಾಸ್ಯ ಕಲಾವಿದ ಗುಂಡಣ್ಣ ಡಿಗ್ಗಿ, 

ಸುಭಾಷ ಚಕ್ರವರ್ತಿ, ರವಿ ಹರಗಿ, ಪ್ರಸನ್ನ ವಾಂಜರಖೇಡೆ, ಶಿವಾನಂದ ಮಠಪತಿ, ನೀಲಾಂಬಿಕಾ ಚೌಕಿಮಠ, ಸೋಮು ಕುಂಬಾರ, ಕಿರಣಕುಮಾರ ಗೋಡಬಾಲೆ, ಶ್ರೀಶೈಲ ಮದಾನಿ, ಸತೀಶ ಸಣ್ಮನಿ, ಶಿವಕುಮಾರ ಸಿ.ಎಚ್‌. ಹಾಗೂ ಉಪನ್ಯಾಸಕರು, ವಿದ್ಯಾರ್ಥಿಗಳು, ಬೇರೆ ಬೇರೆ ಊರಿನಿಂದ ಆಗಮಿಸಿದ ಆಸಕ್ತರು ಭಾಗವಹಿಸಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next