Advertisement

ಸನಾತನ ಧರ್ಮದ ನೆಮ್ಮದಿ ವಿದೇಶಿ ಸಂಸ್ಕೃತಿಯಲ್ಲಿಲ್ಲ: ವಿದ್ಯಾಪ್ರಸನ್ನ  ಸ್ವಾಮೀಜಿ

11:22 AM Jun 27, 2022 | Team Udayavani |

ಮುಂಬಯಿ: ಭಾರತೀಯ ಮತ್ತು ಸನಾತನ ಧರ್ಮ ಸಂಸ್ಕೃತಿಯಲ್ಲಿ ಸಿಗುವ ನೆಮ್ಮ ವಿದೇಶಿಯ ಸಂಸ್ಕೃತಿಯಲ್ಲಿ ಸಿಗುವುದಿಲ್ಲ.  ನಮ್ಮ ಯುವಜನತೆ ಇದನ್ನು ಅರ್ಥೈಸಿ ತಾತ್ಕಾಲಿಕ ಸುಖಕ್ಕೆ ಮಾರು ಹೋಗದೆ ಶಾಶ್ವತ ಸುಖಶಾಂತಿ ಅನುಭವಿಸುವಂತಾಗಬೇಕು. ಭಾರತೀಯ ಪರಂಪರೆ ಅನುಸರಿಸಿ ಬಾಳಿದರೆ ಮಾತ್ರ ಪರಂಪರಾಗತ ಸಂಸ್ಕೃತಿಯ ಮೂಲ ನೆಮ್ಮದಿ ಸಿಗುತ್ತದೆ. ತಾತ್ಕಾಲಿಕ ನೆಮ್ಮದಿಯ ಆಕರ್ಷಣೆಗೆ ಒಳಗಾಗಿ ತಮ್ಮ ಭವಿಷ್ಯ ಹಾಳು ಮಾಡಿಕೊಳ್ಳಬಾರದು. ಪ್ರಸ್ತುತ ದಾಂಪತ್ಯ ವಿಚ್ಛೇದನೆಗಳಿಗೂ ಸಂಸ್ಕಾರದ ಕೊರತೆಯೇ ಕಾರಣ. ಸಂಸ್ಕೃತಿ ಹಾಗೂ ಧರ್ಮದ ಮೇಲಿನ ಗೌರವದ ಕೊರತೆ ದುರಂತವಾಗಿದ್ದು, ಮೂಲ ಸಂಸ್ಕೃತಿ ರೂಢಿಸಿ ಬದುಕು ಬಂಗಾರವಾಗಿಸಿ ಎಂದು ಜಗದ್ಗುರು ಶ್ರೀ ಮಧ್ವಾಚಾರ್ಯ ಮಹಾಸಂಸ್ಥಾನಮ್‌, ಶ್ರೀ ಸಂಪುಟ ನರಸಿಂಹ ಸ್ವಾಮಿ, ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ  ಮಠದ ಮಠಾಧೀಶರಾದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ತಿಳಿಸಿದರು.

Advertisement

ಮೂರು ದಿನಗಳ ಮುಂಬಯಿ ಪ್ರವಾಸದಲ್ಲಿರುವ ಶ್ರೀಪಾದರು ರವಿವಾರ ಚೆಂಬೂರು ಪಶ್ಚಿಮದ ಛೆಡ್ಡಾನಗರದ ಶ್ರೀ ಸುಬ್ರಹ್ಮಣ್ಯ ಮಠದ ಶಾಖೆಗೆ ಆಗಮಿಸಿ, ಮಠದ ನಾಗ ಸುಬ್ರಹ್ಮಣ್ಯ ದೇವರ ಸನ್ನಿಧಿ ಹಾಗೂ ಶ್ರೀ ದೇವರ ಮಂಟಪದಲ್ಲಿ ಪಟ್ಟದ ಶ್ರೀ ಸಂಪುಟ ನರಸಿಂಹ ದೇವರಿಗೆ ಪೂಜೆ ನೆರವೇರಿಸಿ ಭಕ್ತರಿಗೆ ಪ್ರಸಾದ, ಮಂತ್ರಾಕ್ಷತೆಯನ್ನಿತ್ತು ಹರಸಿದರು.

ಧರ್ಮದಿಂದ ದೂರ ಸರಿಯುವಂತದ್ದು ಮತ್ತು ಪಕ್ವತೆ ಬಂದಾಗ ಧರ್ಮದೊಂದಿಗೆ ಸಾಗುತ್ತಿರುವುದು ಕಾಣಬಹುದು. ಇಂತಹ ಪರಿವರ್ತನೆಗೆ ಮಠಾಧಿಪತಿಗಳು, ಗುರು ಹಿರಿಯರು, ಧಾರ್ಮಿಕ ಧುರೀಣರಿಗೆ ದೊಡ್ಡ ಹೊಣೆಗಾರಿಕೆಯಿದೆ. ಭಾರತೀಯ ಸಂಸ್ಕೃತಿ ಬೇಕೆಂದು ತಿಳಿಸುವ ಜವಾಬ್ದಾರಿ ಎಲ್ಲರ ಹೊಣೆಗಾರಿಕೆ. ಆ ನಿಟ್ಟಿನಲ್ಲಿ ಪ್ರಯತ್ನ ಆಗಬೇಕು ಮತ್ತು ಯುವಜನತೆ ಕೂಡಾ ಈ ಬಗ್ಗೆ ಹೆಚ್ಚಿನ ಗಮನ ಕೊಡಬೇಕಾಗಿದೆ. ಹಿರಿಯರು, ಅನುಭವಿಗಳ ಮಾತು ಕೇಳಿ, ಅನುಭವಿಗಳು ಪರಂಪರೆಯಲ್ಲಿ ಆಚರಿಸಿಕೊಂಡು ಬಂದಿರುವುದನ್ನು ರೂಢಿಸಿ ಮುಂದಿನ ಪೀಳಿಗೆಗೂ ಅದನ್ನು ಆಚರಿಸಲು ಪ್ರೇರಕರಾಗುವ ಹೊಣೆಗಾರಿಕೆಯನ್ನು ಯುವಜನತೆ ಒಪ್ಪಿ ಬಾಳಿದರೆ ಮಾತ್ರ ಅವರ ಜೀವನದಲ್ಲಿ ನಿರಂತರ ಸುಖಶಾಂತಿ, ನೆಮ್ಮದಿ ಸಿಗುತ್ತದೆ. ದುಡ್ಡಿನ ಹಿಂದೆ ಹೋದರೆ ತಾತ್ಕಾಲಿಕ ನೆಮ್ಮದಿ ಸಿಕ್ಕಿ ಕೊನೆಗಳಿಗೆಯಲ್ಲಿ ವೃದ್ಧಾಶ್ರಮ ಅಥವಾ ನೆಮ್ಮದಿಯಿಲ್ಲದ ತಾಣಗಳಲ್ಲಿ ಸೇರಬೇಕಾಗುತ್ತದೆ. ಆದ್ದರಿಂದ ಪರಕೀಯ ಸಂಸ್ಕೃತಿ ಮೋಹ ಭಾರತದ ಭವಿಷ್ಯತ್ತಿಗೂ ಒಳ್ಳೆಯದ್ದಲ್ಲ ಎಂದು ಶ್ರೀಪಾದರು ತಿಳಿಸಿದರು.

ಕೊರೊನಾ ಕಾಲದ ಅನಂತರ ಒಂದಿಷ್ಟು ಜನರಲ್ಲಿ ಜೀವನದ ಸತ್ಯಾಸತ್ಯತೆ ಅರಿವಾಗಿದೆ. ಕೊನೆ ಗಳಿಗೆಯಲ್ಲಿ ಯಾರೂ ನಮ್ಮ ಹತ್ತಿರ ಇರುವುದಿಲ್ಲ ಬದಲಾಗಿ ದೇವರು ಮಾತ್ರ ನಮ್ಮೊಂದಿಗೆ ಇರುತ್ತಾರೆ ಅನ್ನುವ ಸತ್ಯಾನುಭವ ಆಗಿದೆ.  ಬದುಕು ಇದ್ದಷ್ಟು ದಿವಸ ಜತೆಗೆ ಬಾಳಬೇಕೆಂಬ ಆಶಯ ಮೂಡಿದೆ.  ಕೊರೊನಾ ಮನುಷ್ಯರಿಗೆ ಬದಲಾವಣೆಯ ದೊಡ್ಡ ಪಾಠ ಕಲಿಸಿದೆ. ಅತ್ಯಂತ ಕ್ಲಿಷ್ಟಕರ ಜೀವನ ಹೇಗೆ ಕಳೆಯಬೇಕು ಅನ್ನುವುದನ್ನೂ ತಿಳಿಸಿದೆ. ಎಂತಹ ವ್ಯವಸ್ಥೆಗೂ ಹೊಂದಿಕೊಂಡು ಬಾಳುವ ಅನಿವಾರ್ಯ ಕೊರೊನಾದ ಸಮಯ ಬೋಧಿಸಿದೆ ಎಂದು ತಿಳಿಸಿದರು.

ವಿವಿಧ ಪೂಜಾವಿಧಿ :

Advertisement

ಕುಂಜರಾಹು ಸಂಧಿ ಪೂಜೆ, ನವಗ್ರಹ ಹೋಮ, ಮಾರ್ಕಂಡೇಯ ಹೋಮ, ಪವಮಾನ ಹೋಮ, ಮೃತ್ಯುಂಜಯ ಹೋಮ ಇತ್ಯಾದಿಗಳು ನೆರವೇರಿದವು. ಪುರೋಹಿತರಾದ ವೇ| ಮೂ| ಕೃಷ್ಣರಾಜ ತಂತ್ರಿ, ಅಶೋಕ ಭಟ್‌, ರಾಮ ಪುರೋಹಿತ, ವಾಸುದೇವ ವೈಲಾಯ, ಶ್ರೀಧರ್‌ ಭಟ್‌, ನವೀನ್‌ ಭಟ್‌, ಮಠದ ವ್ಯವಸ್ಥಾಪಕ ರವಿರಾಜ್‌ ಭಟ್‌ ಪೂಜಾವಿಧಿಗಳನ್ನು ನೆರವೇರಿಸಿದರು. ಉದ್ಯಮಿ ರಾಜೇಶ್‌ ರಾವ್‌ ವಿದ್ಯಾವಿಹಾರ್‌ ಸಹಿತ ಅಪಾರ ಸಂಖ್ಯೆಯ ಭಕ್ತರು ಪೂಜಾವಿಧಿಗಳಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು.

ಅವಿಭಜಿತ ದ.ಕ. ಜಿಲ್ಲೆಯವರು ಕ್ಲಿಷ್ಟಕರ ಸನ್ನಿವೇಶದಲ್ಲಿ ಮುಂಬಯಿಯಂತಹ ಮಹಾನಗರಕ್ಕೆ ಬಂದಿದ್ದಾರೆ. ಮುಂಬಾದೇವಿ, ಮಹಾಲಕ್ಷ್ಮೀ ಅನುಗ್ರಹದಿಂದ ಉ¤ಮ ಜೀವನ ಸಾಗಿಸಲು ಕರ್ಮಭೂಮಿ ಅವಕಾಶ ಮಾಡಿಕೊಟ್ಟಿದೆ. ಈ ಭೂಮಿ ಮೇಲೆ ಅಪಾರ ಅಭಿಮಾನ ಜತೆಗೆ ಮಾತೃಭೂಮಿ ಮೇಲೂ ಅನನ್ಯ ಅಭಿಮಾನ, ಪ್ರಾದೇಶಿಕ ಭಾಷೆಯಲ್ಲಿ  ಗೌರವ ಇಟ್ಟುಕೊಂಡು ತೌಳವ ಸಂಸ್ಕೃತಿ ರೂಢಿಸಿಕೊಂಡು ಬದುಕುತ್ತಿರುವುದು ಅಭಿನಂದನೀಯ. ಭಾವೀ ಜನಾಂಗಕ್ಕೆ ತೌಳವ ಭಾಷೆ, ಸಂಸ್ಕೃತಿ ಮೇಲೆ ಮಿಡಿತ ತಪ್ಪಿಹೋಗದಂತೆ ಬಾಳುವುದರ ಜತೆಗೆ ಭಾರತೀಯ ಸಂಸ್ಕೃತಿ, ಸನಾತನ ಧರ್ಮ ಸಂಸ್ಕೃತಿ ಎಲ್ಲವನ್ನೂ ಮೇಳೈಸಿಕೊಂಡು ಅಪ್ಪಟ ಭಾರತೀಯರಾಗಿ ಬಾಳಬೇಕು.. ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಮಠ

ಚಿತ್ರ – ವರದಿ: ರೋನ್ಸ್‌ ಬಂಟ್ವಾಳ್‌

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next