Advertisement

ವಿದ್ಯಾಪೋಷಕ್‌: 85 ಲಕ್ಷ ರೂ. ವಿದ್ಯಾರ್ಥಿ ವೇತನ ವಿತರಣೆ

01:44 AM Aug 26, 2019 | Sriram |

ಉಡುಪಿ: ಸರಕಾರ ವಿದ್ಯಾರ್ಥಿಗಳ ಶೈಕ್ಷಣಿಕ ಜವಾಬ್ದಾರಿ ವಹಿಸಿಕೊಂಡು ಉತ್ತಮ ಶಿಕ್ಷಣ ನೀಡುವಂತಾಗಬೇಕು ಎಂದು ಪರ್ಯಾಯ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ ತಿಳಿಸಿದರು.

Advertisement

ಪರ್ಯಾಯ ಪಲಿಮಾರು ಮಠ, ಶ್ರೀಕೃಷ್ಣಮಠ, ಉಡುಪಿ ವಿದ್ಯಾ ಪೋಷಕ್‌, ಯಕ್ಷಗಾನ ಕಲಾರಂಗ ವತಿಯಿಂದ ರವಿವಾರ ರಾಜಾಂಗಣದಲ್ಲಿ ಆಯೋಜಿಸಿದ್ದ 15ನೇ ವರ್ಷದ ವಿನಮ್ರ ಸಹಾಯ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ 1,150 ವಿದ್ಯಾರ್ಥಿಗಳಿಗೆ 85 ಲ.ರೂ. ಸಹಾಯಧನ ವಿತರಿಸಿ ಮಾತನಾಡಿದರು.

ಪೋಷಕರು ಸರಕಾರಿ ಕೆಲಸಕ್ಕೆ ಮಾತ್ರವಲ್ಲ ಸರಕಾರಿ ಶಾಲೆಗೆ ಕಳುಹಿಸಲು ಆಸಕ್ತಿ ವಹಿಸಬೇಕು. ಸರಕಾರ ಬಡಮಕ್ಕಳಿಗಾಗಿ ಆರಂಭಿಸಿದ ಸರಕಾರಿ ಶಾಲೆಗಳು ಬೀಗ ಹಾಕುತ್ತಿರುವುದು ದುರಂತ ಎಂದು ಬೇಸರ ವ್ಯಕ್ತಪಡಿಸಿದರು.

ಯಕ್ಷ ಕಲಾರಂಗ ಕೃಷ್ಣ ನಾಡಿನಲ್ಲಿ ಹುಟ್ಟಿ ಹೆಮ್ಮರವಾಗಿ ಬೆಳೆದು ಸಮಾಜಕ್ಕೆ ನೆರಳು ನೀಡುತ್ತಿರುವುದು ಅಭಿಮಾನದ ಸಂಗತಿ. ತಾನು ಬೆಳೆಯುವುದರ ಜತೆಗೆ ಸುತ್ತಮುತ್ತಲಿನ ಸಾವಿರಾರು ಮಂದಿಯನ್ನು ಬೆಳೆಸಿದ ಕೀರ್ತಿ ಯಕ್ಷಗಾನ ಕಲಾರಂಗಕ್ಕೆ ಸಲ್ಲುತ್ತದೆ ಎಂದರು.

ಜಾಗತಿಕ ಮಟ್ಟದಲ್ಲಿ ಆರ್ಥಿಕ ಸಂಕಷ್ಟ
ಜಾಗತಿಕ ಮಟ್ಟದಲ್ಲಿ ಆರ್ಥಿಕ ಸಂಕಷ್ಟ ಎದುರಾಗಿದೆ. ಉದ್ಯೋಗಿಗಳು ಉದ್ಯೋಗ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಪೋಷಕರು ಸಾಲ ಮಾಡಿ ಮಕ್ಕಳಿಗೆ ಶಿಕ್ಷಣ ಕೊಡುತ್ತಿದ್ದಾರೆ. ಆದರೆ ವಿದ್ಯಾರ್ಥಿಗಳಿಗೆ ಉದ್ಯೋಗ ಸಿಗದೆ ಸಾಲದ ಸುಳಿಗೆ ಸಿಲುಕಿದ್ದಾರೆ. ಉದ್ಯೋಗಕ್ಕಾಗಿ ಪರದಾಡುತ್ತಿರುವ ಯುವಕರ ಸಾಲವನ್ನು ಸರಕಾರ ಮನ್ನಾ ಮಾಡಬೇಕು ಎಂದು ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌ ತಿಳಿಸಿದರು.

Advertisement

ಜಿ. ಶಂಕರ್‌ ಫ್ಯಾಮಿಲಿ ಟ್ರಸ್ಟ್‌ ಪ್ರವರ್ತಕ ಡಾ| ಜಿ. ಶಂಕರ್‌, ಕೋಟ ಗೀತಾ ಫೌಂಡೇಶನ್‌ ಅಧ್ಯಕ್ಷ ಆನಂದ ಸಿ. ಕುಂದರ್‌, ಕರ್ಣಾಟಕ ಬ್ಯಾಂಕ್‌ ಜಿಎಂ ಮಹಾಲಿಂಗೇಶ್ವರ ಕೆ., ಇನ್ಫೋಸಿಸ್‌ ಪ್ರೇರಣಾ ಟ್ರಸ್ಟ್‌ ಸುಜಿತ್‌ ಕುಮಾರ್‌, ಲಯನ್ಸ್‌ ಗವರ್ನರ್‌ ವಿ.ಜಿ. ಶೆಟ್ಟಿ, ಗಾಂಧಿ ಆಸ್ಪತ್ರೆ ಎಂಡಿ ಡಾ| ಹರಿಶ್ಚಂದ್ರ, ಉದ್ಯಮಿಗಳಾದ ಭುವನೇಂದ್ರ ಕಿದಿಯೂರು, ಡಾ| ತಲ್ಲೂರು ಶಿವರಾಮ ಶೆಟ್ಟಿ, ಪುರುಷೋತ್ತಮ ಪಟೇಲ್‌, ಯು. ವಿಶ್ವನಾಥ ಶೆಣೈ, ಹರಿಯಪ್ಪ ಕೋಟ್ಯಾನ್‌, ಆನಂದ ಪಿ. ಸುವರ್ಣ, ಸಾಧು ಸಾಲಿಯಾನ್‌ ಉಪಸ್ಥಿತರಿದ್ದರು. ಯಕ್ಷಗಾನ ಕಲಾರಂಗದ ಅಧ್ಯಕ್ಷ ಸ್ವಾಗತಿಸಿ, ಕಾರ್ಯದರ್ಶಿ ಮುರಳಿ ಕಡೆಕಾರ್‌ ಕಾರ್ಯಕ್ರಮ ನಿರ್ವಹಿಸಿದರು.

ಶೈಕ್ಷಣಿಕ ಸಾಲ ಮನ್ನಾ ಮಾಡಿ
ದೇಶಕ್ಕೆ ರೈತರು ಹಾಗೂ ಸೈನಿಕರು ಬಹಳ ಮುಖ್ಯ. ಅವರಿಂದಾಗಿ ಊಟ ಹಾಗೂ ರಕ್ಷಣೆ ಸಿಗುತ್ತದೆ; ವಿದ್ಯಾರ್ಥಿಗಳು ಅವರಿಗಿಂತ ಕಡಿಮೆಯಲ್ಲ. ವಿದ್ಯಾರ್ಥಿಗಳು ಬೆಳೆದರೆ ಉನ್ನತ ಸ್ಥಾನ ಅಲಂಕರಿಸುತ್ತಾರೆ. ಹೀಗಾಗಿ ಸರಕಾರ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಸಾಲ ಮನ್ನಾ ಮಾಡಬೇಕು ಎಂದು ಶ್ರೀಗಳು ಸರಕಾರಕ್ಕೆ ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next