Advertisement

ವಿದ್ಯಾನಿಧಿಗೆ ಷರತ್ತೇ ವಿಘ್ನ; ಕೃಷಿ ಜಮೀನು ಇರುವ ರೈತರ ಮಕ್ಕಳಿಗೆ ಮಾತ್ರ ಲಭ್ಯ

01:15 AM Nov 12, 2021 | Team Udayavani |

ಉಡುಪಿ: ರೈತರ ಮಕ್ಕಳಿಗೆ ಸರಕಾರದ ವಿದ್ಯಾನಿಧಿ ವಿದ್ಯಾರ್ಥಿ ವೇತನ ಒದಗಿಸಲು ಮಾಹಿತಿ ಸಂಗ್ರಹ ಪ್ರಕ್ರಿಯೆ ಆರಂಭವಾಗಿದ್ದು, ವಿದ್ಯಾನಿಧಿ ಪಡೆಯಲು ಸರಕಾರ ವಿಧಿಸಿರುವ ಷರತ್ತು ಪೂರೈಸುವುದೇ ಕಷ್ಟಸಾಧ್ಯವಾಗಿದೆ.

Advertisement

ತಂದೆ ಅಥವಾ ತಾಯಿ ನಿರ್ದಿಷ್ಟ ಕೃಷಿ ಜಮೀನು ಹೊಂದಿದ್ದರೆ ಮಾತ್ರ ಅವರ ಮಕ್ಕಳು ವಿದ್ಯಾನಿಧಿ ಪಡೆಯಲು ಅರ್ಹರು. ವಿದ್ಯಾರ್ಥಿಯ ಅಜ್ಜ/ ಅಜ್ಜಿ/ ಮಾವ ಸಹಿತ ಇನ್ಯಾವುದೇ ಪೋಷಕರ ಹೆಸರಿನಲ್ಲಿದ್ದರೂ ವಿದ್ಯಾನಿಧಿ ಸಿಗುವುದಿಲ್ಲ ಎಂಬುದೇ ಈ ವಿದ್ಯಾರ್ಥಿವೇತನ ಪಡೆಯಲು ಅತೀ ದೊಡ್ಡ ಅಡ್ಡಿಯಾಗಿದೆ. ಕೇಂದ್ರ ಅಥವಾ ರಾಜ್ಯ ಸರಕಾರದ ಇತರ ಇಲಾಖೆಗಳಿಂದ ವಿದ್ಯಾರ್ಥಿ ವೇತನ ಪಡೆಯುವ ವಿದ್ಯಾರ್ಥಿ ಗಳಿಗೂ ವಿದ್ಯಾನಿಧಿ ಸಿಗುವುದಿಲ್ಲ. ಈ ಎರಡು ಷರತ್ತು ಗಳೇ ವಿದ್ಯಾರ್ಥಿಗಳಿಗೆ ಸಂಕಷ್ಟ ತಂದೊಡ್ಡಿದೆ.

ರೈತ ವಿದ್ಯಾನಿಧಿ ಪಡೆಯಲು ವಿದ್ಯಾರ್ಥಿಗಳಿಗೆ ಜಾತಿ ಅಥವಾ ಆದಾಯದ ಮಿತಿ ಇಲ್ಲ. ಆದರೆ ವಿದ್ಯಾರ್ಥಿಯ ತಂದೆ ಅಥವಾ ತಾಯಿಯ ಹೆಸರಿನಲ್ಲಿ ಕೃಷಿ ಭೂಮಿ ಇರಬೇಕು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಸಹಿತ ರಾಜ್ಯ ಮತ್ತು ಕೇಂದ್ರ ಸರಕಾರದ ಯಾವುದೇ ವಿದ್ಯಾರ್ಥಿ ವೇತನ, ಮೆರಿಟ್‌ ಶಿಷ್ಯವೇತನ ಪಡೆಯುವ ವಿದ್ಯಾರ್ಥಿಗಳಿಗೆ ಅನ್ವಯಿಸುವುದಿಲ್ಲ ಎಂದು ಉಡುಪಿ ಜಿಲ್ಲಾ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೆಂಪೇಗೌಡ ಮಾಹಿತಿ ನೀಡಿದ್ದಾರೆ.

ವಿದ್ಯಾರ್ಥಿ ಮಾಹಿತಿ ಸಂಗ್ರಹ
ಪ.ಪೂ. ಶಿಕ್ಷಣ ಇಲಾಖೆಯ ಸೂಚನೆಯಂತೆ ವಿದ್ಯಾರ್ಥಿಗಳ ಮಾಹಿತಿಯನ್ನು ವಿದ್ಯಾರ್ಥಿ ಸಾಧನೆ ಟ್ರ್ಯಾಕಿಂಗ್‌ ವ್ಯವಸ್ಥೆ (ಎಸ್‌ಎಟಿಎಸ್‌)ಯಲ್ಲಿ ಅಪ್‌ಡೇಟ್‌ ಮಾಡುತ್ತಿದ್ದೇವೆ. ಅಪ್‌ಡೇಟ್‌ ಮಾಹಿತಿಯನ್ನು ಕೃಷಿ ಇಲಾಖೆಯವರು ಪಡೆದು, ನೇರವಾಗಿ ವಿದ್ಯಾರ್ಥಿಗಳ ಖಾತೆಗೆ ಹಣ ಜಮಾ ಮಾಡುವುದಾಗಿ ತಿಳಿಸಿದ್ದಾರೆ. ಶಿಕ್ಷಣ ಇಲಾಖೆಯಿಂದ ಕೃಷಿಕ ಕುಟುಂಬದ ವಿದ್ಯಾರ್ಥಿಗಳ ಮಾಹಿತಿಯನ್ನು ಮಾತ್ರ ಅಪ್‌ಲೋಡ್‌ ಮಾಡುತ್ತಿಲ್ಲ. ಎಲ್ಲ ವಿದ್ಯಾರ್ಥಿಗಳ ಮಾಹಿತಿಯನ್ನು ಅಪ್‌ಲೋಡ್‌ ಮಾಡುತ್ತಿದ್ದೇವೆ. ಕೃಷಿಕ ಕುಟುಂಬದ ವಿದ್ಯಾರ್ಥಿಗಳು ಯಾರು ಎಂಬುದನ್ನು ಕೃಷಿ ಇಲಾಖೆಯಿಂದ ದೃಢೀಕರಿಸಿ ವಿದ್ಯಾನಿಧಿ ನೀಡುತ್ತಾರೆ. ಜಮೀನಿನ ಮಾಹಿತಿ ಕೃಷಿ ಇಲಾಖೆಯಲ್ಲೇ ಇರುವುದರಿಂದ ಅಲ್ಲಿಂದಲೇ ಮುಂದಿನ ಪ್ರಕ್ರಿಯೆ ನಡೆಯಲಿದೆ ಎಂದು ಉಡುಪಿ ಜಿಲ್ಲಾ ಡಿಡಿಪಿಯು ಮಾರುತಿ ವಿವರ ನೀಡಿದ್ದಾರೆ.

ಇದನ್ನೂ ಓದಿ:ಟಿ20 ವಿಶ್ವಕಪ್‌: ಪಾಕಿಸ್ಥಾನವನ್ನು ಹೊರದಬ್ಬಿದ ಆಸ್ಟ್ರೇಲಿಯ

Advertisement

ಆಧಾರ್‌ ಲಿಂಕ್‌
ರಾಜ್ಯದ ಪದವಿಪೂರ್ವ ಮಟ್ಟದ ಸುಮಾರು 3,500 ವಿದ್ಯಾರ್ಥಿಗಳ ಆಧಾರ್‌ ಸಂಖ್ಯೆಯೂ ಬ್ಯಾಂಕ್‌ ಖಾತೆಗಳಿಗೆ ಲಿಂಕ್‌ ಆಗಿಲ್ಲ. ಬ್ಯಾಂಕ್‌ ಖಾತೆಗೆಲಿಂಕ್‌ ಆಗಿರುವ ಅರ್ಹ ವಿದ್ಯಾರ್ಥಿ ಗಳಿಗೆ ಮಾತ್ರ ವಿದ್ಯಾನಿಧಿ ಸಿಗಲಿದೆ. ಉಡುಪಿ ಜಿಲ್ಲೆಯಲ್ಲಿ ಶೇ. 90ರಷ್ಟು ವಿದ್ಯಾರ್ಥಿಗಳ ಬ್ಯಾಂಕ್‌ ಖಾತೆಗೆ ಆಧಾರ್‌ ಲಿಂಕ್‌ ಮಾಡಲಾಗಿದೆ. ಉಳಿದ ಶೇ. 10ರಷ್ಟು ವಿದ್ಯಾರ್ಥಿಗಳ ಆಧಾರ್‌ ಲಿಂಕ್‌ ಕೂಡ ಶೀಘ್ರವೇ ಆಗಲಿದೆ. ಇದರ ಜತೆಗೆ ಕೃಷಿ ಇಲಾಖೆಯ ಅಧಿಕಾರಿಗಳು ಕಾಲೇಜುಗಳಿಗೆ ಭೇಟಿ ನೀಡಿ, ವಿದ್ಯಾನಿಧಿಯ ಕುರಿತು ಮಾಹಿತಿ ನೀಡುವ ಕಾರ್ಯ ಆರಂಭವಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿದ್ಯಾನಿಧಿ ವಿದ್ಯಾರ್ಥಿ ವೇತನ ಪಡೆಯಲು ವಿದ್ಯಾರ್ಥಿಗಳ ಆಧಾರ್‌ ಬ್ಯಾಂಕ್‌ ಖಾತೆಗೆ ಲಿಂಕ್‌ ಆಗಿರಬೇಕು. ಹಾಗೆಯೇ ಯಾರ ಹೆಸರಿನಲ್ಲಿ ಜಮೀನು ಇದೆಯೋ ಅವರ ಆಧಾರ್‌ ಕಡ್ಡಾಯವಾಗಿ ಬೇಕಾಗುತ್ತದೆ. ಇಲ್ಲಿ ಆದಾಯದ ಮಿತಿ ಇಲ್ಲ. ಜಮೀನು ಹೊಂದಿರುವ ಎಲ್ಲ ರೈತರ ಮಕ್ಕಳಿಗೂ ಇದರ ಸೌಲಭ್ಯ ಸಿಗಲಿದೆ.
-ಬ್ರಿಜೇಶ್‌ ಕುಮಾರ್‌, ಆಯುಕ್ತ, ಕೃಷಿ ಇಲಾಖೆ

ಕೋರ್ಸ್‌, ಸಹಾಯ ಧನದ ವಿವರ (ವಾರ್ಷಿಕ)
-ಸ್ವಂತ ಕೃಷಿ ಭೂಮಿ ಹೊಂದಿ ರುವ ರೈತರ ಮಕ್ಕಳಾಗಿರಬೇಕು.
-ಸರಕಾರ ವಿಧಿಸಿದ ನಿರ್ದಿಷ್ಟ ಷರತ್ತುಗಳನ್ನು ಪೂರೈಸಿರಬೇಕು.
-2021-22ನೇ ಸಾಲಿಗೆ ಅನ್ವಯ

-ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next