ಬೆಂಗಳೂರು: “ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತಹ ಕಡತಗಳನ್ನು ಇಡಲು ಪ್ರತ್ಯೇಕ ಕೊಠಡಿಯಿಲ್ಲ. ಆರೋಪಿಗಳನ್ನು ಠಾಣೆಗೆ ಕರೆತಂದರೆ ಬಂಧಿಸಿಡಲು ಸೆಲ್ ಇಲ್ಲವೇ ಇಲ್ಲ. ಠಾಣಾ ಸಿಬ್ಬಂದಿಗೆ ಸೂಕ್ತ ಕೊಠಡಿ, ಶೌಚಾಲಯ ಸೇರಿ ಮೂಲಸೌಕರ್ಯಗಳಿಲ್ಲ’ ಆದರೂ ಇದು ಪೊಲೀಸ್ ಠಾಣೆ. ರಾಜ್ಯದ ಆಡಳಿತ ಕೇಂದ್ರ ವಿಧಾನಸೌಧ, ಸರ್ಕಾರದ ಇಲಾಖೆಗಳು ಕಾರ್ಯನಿರ್ವಹಣೆ ಮಾಡುವ ಬಹುಮಹಡಿ ಕಟ್ಟಡ ವ್ಯಾಪ್ತಿಯಲ್ಲಿನ ಹೈ ಪ್ರೊಫೈಲ್ ಕೇಸ್‌ಗಳ ದಾಖಲಾಗುವಂತಹ ವಿಧಾನಸೌಧ ಪೊಲೀಸ್ ಠಾಣೆಯ ಚಿತ್ರಣವಿದು.
ಕಳೆದ 10 ವರ್ಷಗಳಿಂದ ಬಹುಮಹಡಿ ಕಟ್ಟಡಗಳ ನೆಲಮಹಡಿಯಲ್ಲಿ ಕಿಷ್ಕಿಂದೆಯಂತಹ ಜಾಗದಲ್ಲಿ ವಿಧಾನಸೌಧ ಪೊಲೀಸ್ ಠಾಣೆ ಕಾರ್ಯನಿರ್ವಹಣೆ ನಡೆಯುತ್ತಿದೆ. ಆದರೆ, ಠಾಣೆಗೆ ಬೇಕಾದ ಮೂಲಸೌಕರ್ಯಗಳಿಂದ ವಂಚಿತಗೊಂಡಿದೆ. ಪರಿಣಾಮ ಪ್ರತ್ಯೇಕ ಕೊಠಡಿಗಳಲ್ಲಿ ಇರಬೇಕಾದ ಅಪರಾಧ ಪ್ರಕರಣಗಳ ದಾಖಲೆಗಳು ಠಾಣೆಯ ಒಳಭಾಗದ ಆವರಣದಲ್ಲಿಯೇ ಇವೆ. ಪೊಲೀಸ್ ಸಿಬ್ಬಂದಿಗೂ ಪ್ರತ್ಯೇಕ ಕೊಠಡಿಗಳಿಲ್ಲ.
ಇರುವ ಕೊಠಡಿಗಳಲ್ಲಿಯೇ ದೂರುದಾರರ ಅಹವಾಲು ಕೇಳುವುದು, ಪ್ರಕರಣದ ತನಿಖೆಯ ಅಧ್ಯಯನ ಸೇರಿ ಮತ್ತಿತರ ಕಾರ್ಯಗಳನ್ನು ನಡೆಸಿಕೊಂಡು ಹೋಗುವಂತಹ ಸ್ಥಿತಿಯಿದೆ. ಅಷ್ಟೇ ಅಲ್ಲದೆ ಠಾಣಾ ವ್ಯಾಪ್ತಿಯಲ್ಲಿ ನಡೆಯುವ ಅಪರಾಧ ಕೃತ್ಯಗಳಿಗೆ ಸಂಬಂಧಿಸಿದ ಆರೋಪಿಗಳನ್ನು ಠಾಣೆಯಲ್ಲಿ ಕೂಡಿಹಾಕಲು ಪ್ರತ್ಯೇಕ ಸೆಲ್ ವ್ಯವಸ್ಥೆಯೂ ಇಲ್ಲ. ಒಂದು ಕೊಠಡಿಯಲ್ಲಿ ಒಂದು ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಯನ್ನು ಬಂಧಿಸಿಟ್ಟರೆ ಆತನನ್ನು ಕಾವಲು ಕಾವಲು ಒಬ್ಬ ಸಿಬ್ಬಂದಿ ಇರಲೇಬೇಕಾದ ಅನಿವಾರ್ಯತೆ ಇದೆ.
ಅದೇ ಸಮಯಕ್ಕೆ ಮತ್ತೊಂದು ಪ್ರಕರಣದ ಆರೋಪಿಗಳನ್ನು ಬಂಧಿಸಿ ಕರೆತಂದರೆ, ಅವರನ್ನು ಠಾಣೆಯ ಒಳ ಆವರಣದಲ್ಲಿ ಇರಿಸಬೇಕು. ಇಲ್ಲವೇ ಪೊಲೀಸ್ ಸಿಬ್ಬಂದಿಯ ಕೊಠಡಿಗಳಲ್ಲಿ ಇಟ್ಟು ಕಾಯಬೇಕಾದ ಪರಿಸ್ಥಿತಿಯಿದೆ. ಮತ್ತೊಂದೆಡೆ ಠಾಣೆಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಯ ವಾಹನ ನಿಲುಗಡೆಗೂ ಜಾಗವಿಲ್ಲ. ಬಹುಮಹಡಿ ಕಟ್ಟಡದ ನೆಲಮಹಡಿಯಲ್ಲಿ ಪಾರ್ಕಿಂಗ್ ಅನ್ನು ಸರ್ಕಾರ ಟೆಂಡರ್ ನೀಡಿದೆ. ಹೀಗಾಗಿ, ಸಾರ್ವಜನಿಕರು ಕೂಡ ಅಲ್ಲಿ ನಿಲ್ಲಿಸುತ್ತಾರೆ. ಹೀಗಾಗಿ, ಕೆಲವೊಮ್ಮೆ ಪೊಲೀಸ್ ಸಿಬ್ಬಂದಿ ವಾಹನ ನಿಲ್ಲಿಸಲು ಜಾಗ ಸಿಗುವುದಿಲ್ಲ. ಹೀಗಾಗಿ, ಬೇರೆ ಕಡೆ ನಿಲ್ಲಿಸಿ ಬರುತ್ತಾರೆ.ಅಪರಾಧ ಪ್ರಕರಣಗಳಲ್ಲಿ ಜಪ್ತಿಯಾದ ಬೈಕ್‌ಗಳನ್ನು ಠಾಣಾ ಆವರಣದ ಮೆಟ್ಟಿಲು ಕಡೆ ನಿಲ್ಲಿಸಲಾಗಿದೆ.
ಇರುವುದು ಒಂದೇ ಶೌಚಾಲಯ!: ಠಾಣೆಯ ಅಧಿಕಾರಿಗಳು, ಪುರುಷ ಸಿಬ್ಬಂದಿ, ಮಹಿಳಾ ಸಿಬ್ಬಂದಿ ಎಲ್ಲರಿಗೂ ಸೇರಿ ಇರುವುದು ಏಕೈಕ ಶೌಚಾಲಯ. ಅದೇ ಶೌಚಾಲಯವನ್ನು ಎಲ್ಲರೂ ಬಳಸಬೇಕಿದೆ. ಬಂಧಿಸಲಾಗುವ ಆರೋಪಿಗಳಿಗೂ ಅದೇ ಶೌಚಾಲಯ ಬಳಕೆಗೆ ನೀಡಬೇಕು. ಹೀಗಾಗಿ, ಕೆಲವು ಸಂಧರ್ಭಗಳಲ್ಲಿ ಮಹಿಳಾ ಸಿಬ್ಬಂದಿ ಅದೇ ಕಟ್ಟಡದಲ್ಲಿರುವ ಇತರೆ ಶೌಚಾಲಯಗಳನ್ನು ಅವಲಂಬಿಸಬೇಕಾದ ದುಃಸ್ಥಿತಿಯಿದೆ. ಅಧಿಕಾರಿಗಳದ್ದೂ ಇದೇ ಸ್ಥಿತಿಯಾಗಿದೆ.
ಸಿಬ್ಬಂದಿ ಕೊರತೆ: ಮೂಲಸೌಕರ್ಯಗಳ ಕೊರತೆ ಸಮಸ್ಯೆ ಒಂದೆಡೆಯಾದರೆ ಠಾಣೆಯಲ್ಲಿ ಸಿಬ್ಬಂದಿ ಕೊರತೆಯೂ ಇರುವು ಸಿಬ್ಬಂದಿಗೆ ಕಾರ್ಯದೊತ್ತಡದ ಭಾರ ಹಾಕುತ್ತಿದೆ. ಠಾಣೆಗೆ ಮಂಜೂರಾಗಿರುವ ಹುದ್ದೆಗಳ ಸಂಖ್ಯೆ ಠಾಣಾಧಿಕಾರಿ ಸೇರಿ 69, ಆದರೆ ಕೆಲಸ ನಿರ್ವಹಿಸುತ್ತಿರುವುದು 40 ಸಿಬ್ಬಂದಿ ಮಾತ್ರ. ತಿಂಗಳಲ್ಲಿ ಕನಿಷ್ಠ 20ದಿನ ಪ್ರತಿಭಟನೆ, ರ್ಯಾಲಿಯ ಬಿಗಿಬಂದೋಬಸ್ತ್ ಕಾರ್ಯನಿರ್ವಹಣೆ ಭಾರ ಇರಲಿದೆ. ಜತೆಗೆ, ವಿವಿಐಪಿ ಭದ್ರತೆಯ ಜವಾಬ್ದಾರಿಯೂ ನಿರ್ವಹಿಸಬೇಕು. ಇದರಿಂದಾಗಿ ಇರುವ ಸಿಬ್ಬಂದಿ ಮೇಲೆ ಅಧಿಕ ಕಾರ್ಯದ ಒತ್ತಡ ಜತೆಗೆ ಪ್ರಕರಣದ ತನಿಖೆಗಳ ಮೇಲೆಯೂ ಗಂಭೀರ ಪರಿಣಾಮ ಬೀರುತ್ತಿದೆ.
ಬಹುತೇಕ ವೈಟ್‌ಕಾಲರ್ ಕ್ರೈಂಗಳೇ ದಾಖಲಾಗುತ್ತವೆ. ಪ್ರತಿಯೊಂದು ಪ್ರಕರಣಕ್ಕೂ ಹೆಚ್ಚಿನ ಸಮಯ ನೀಡಿ ತನಿಖೆ ನಡೆಸಬೇಕಾಗುತ್ತದೆ. ಆದರೆ ಸಿಬ್ಬಂದಿ ಕೊರತೆ ಹಾಗೂ ಅಧಿಕ ಕಾರ್ಯದ ಒತ್ತಡದಿಂದ ದಾಖಲಾದ ಪ್ರಕರಣಗಳು ಕೂಡ ಮತ್ತೊಂದು ಠಾಣೆಗೆ ವರ್ಗಾವಣೆಯಾಗುತ್ತವೆ. ಹಲವು ಪ್ರಮುಖ ಪ್ರಕರಣಗಳು ಕೇಸುಗಳು ಸಿಸಿಬಿ, ಕಬ್ಬನ್ ಪಾರ್ಕ್ ಠಾಣೆಗೆ ವರ್ಗಾವಣೆಗೊಂಡಿವೆ ಎಂದು ಹೆಸರು ಹೇಳಲು ಇಚ್ಛಿಸದ ಸಿಬ್ಬಂದಿಯೊಬ್ಬರು ಬೇಸರವ್ಯಕ್ತಪಡಿಸುತ್ತಾರೆ.
ಠಾಣೆಗೆ ಬೇಕಿದೆ ಕಾಯಕಲ್ಪ!: ಸೌಕರ್ಯಗಳಿಂದ ವಂಚಿತ ಹಾಗೂ ಸಿಬ್ಬಂದಿ ಕೊರತೆಯಿಂದ ಇರುವ ವಿಧಾನಸೌಧ ಠಾಣೆಗೆ ಪ್ರತ್ಯೇಕ ಕಟ್ಟಡ, ಅಗತ್ಯ ಸಿಬ್ಬಂದಿ ಮಂಜೂರಾದರೆ ಮತ್ತಷ್ಟು ಕಾರ್ಯತತ್ಪರತೆಯಿಂದ ಕರ್ತವ್ಯ ನಿರ್ವಹಿಸಲು ಅನುಕೂಲವಾಗಲಿದೆ. ಈ ಬಗ್ಗೆ ಸರ್ಕಾರ ಗಮನಿಸಬೇಕಿದೆ.
* ಮಂಜುನಾಥ ಲಘುಮೇನಹಳ್ಳಿ