Advertisement
ಈಗಿಂದೀಗಲೇ ಚರ್ಚೆ ನಡೆಯಬೇಕು ಎಂದು ಕಾಂಗ್ರೆಸ್ ಹಠ ಹಿಡಿದರೆ, ಇದಕ್ಕೆ ಬಗ್ಗದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ರಾಜ್ಯಪಾಲರ ಭಾಷಣದ ಮೇಲೆ ಚರ್ಚೆಗೆ ಸಮಯ ಕಲ್ಪಿಸಿದರು. ಇದರಿಂದ ಅಸಮಾಧಾನಗೊಂಡ ಕಾಂಗ್ರೆಸ್ ಸದಸ್ಯರು ಕಲಾಪ ಬಹಿಷ್ಕರಿಸಿ ಹೊರ ನಡೆದ ಘಟನೆಯೂ ನಡೆಯಿತು. ಒಂದು ಹಂತದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಸಿಎಂ ಯಡಿಯೂರಪ್ಪ ನಡುವೆ ಮಾತಿನ ಚಕಮಕಿ ತಾರಕಕ್ಕೇರಿತ್ತು. ಕಡೆಗೆ ತೆರೆಮರೆಯಲ್ಲಿ ನಡೆದ ಸಂಧಾನ ಸಭೆಯ ಬಳಿಕ ನಾಳೆ ವಿಷಯದ ಬಗ್ಗೆ ಚರ್ಚೆಗೆ ಕಾಂಗ್ರೆಸ್ ಒಪ್ಪಿಕೊಂಡಿತು.
Related Articles
Advertisement
ಸಿದ್ದರಾಮಯ್ಯ ಅವರು ನಿಯಮ 60ರಡಿ ನಿಲುವಳಿ ಸೂಚನೆ ಮಂಡಿಸಿ ವಿಷಯ ಪ್ರಸ್ತಾವ ಮಾಡಿದ ಅನಂತರ ನಿಯಮ 69ರಡಿ ಪರಿವರ್ತನೆ ಮಾಡಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಬುಧವಾರ ಅಪರಾಹ್ನ 3 ಗಂಟೆಗೆ ಚರ್ಚೆಗೆ ಅವಕಾಶ ಮಾಡಿಕೊಡಲಾಗುವುದು ಎಂದು ರಾಜ್ಯ ಪಾಲರ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯ ದಡಿ ಮಾತನಾಡಲು ಅವಕಾಶ ಕೊಟ್ಟಿದ್ದರಿಂದ ಆಕ್ರೋಶಗೊಂಡ ಕಾಂಗ್ರೆಸ್ ಸದಸ್ಯರು ಕಲಾಪ ಬಹಿಷ್ಕರಿಸಿ ಹೊರ ನಡೆದರು. ಆದರೆ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ನಿಲುವಳಿ ಸೂಚನೆ ಮಂಡಿಸಲು ಅವಕಾಶ ಕೋರಿದ್ದ ಜೆಡಿಎಸ್, ಕಲಾಪ ಬಹಿಷ್ಕಾರದಲ್ಲಿ ಕಾಂಗ್ರೆಸ್ ಜತೆಗೂಡಲಿಲ್ಲ. ಅನಂತರ ಮಧ್ಯಾಹ್ನ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ, ಸಿದ್ದರಾಮಯ್ಯ ಅವರ ಕಚೇರಿಗೆ ತೆರಳಿ ಸಂಧಾನ ನಡೆಸಿ, ಸದನಕ್ಕೆ ಕರೆತಂದರು. ಬುಧವಾರ ಮಧ್ಯಾಹ್ನದ ಬದಲು ಬೆಳಗ್ಗೆಯೇ ಚರ್ಚೆಗೆ ಅವಕಾಶ ಕೊಡಲಾಗುವುದು ಎಂದು ಸ್ಪೀಕರ್ ರೂಲಿಂಗ್ ನೀಡಿದರು.
ಕಾನೂನು ಸುವ್ಯವಸ್ಥೆ ಕುಸಿದಿದೆ ಇದಕ್ಕೂ ಮುನ್ನ ಬೆಳಿಗ್ಗೆ ವಿಷಯ ಪ್ರಸ್ತಾವಿಸಿದ ಸಿದ್ದರಾಮಯ್ಯ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ. ಸಿಎಎ ವಿರೋಧಿಸಿ ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ಹಿನ್ನೆಲೆಯಲ್ಲಿ ಮೂರು ದಿನಗಳ ಕಾಲ ನಿಷೇಧಾಜ್ಞೆ ಜಾರಿಗೊಳಿಸಲಾಯಿತು. ಇದರಿಂದ ಪ್ರತಿಭಟನೆ ವಾಪಸ್ ಪಡೆದರೂ ಮಾಹಿತಿ ಕೊರತೆಯಿಂದ 150 ಜನರು ಬಂದಿದ್ದರು. ಆದರೆ ಪೊಲೀಸರು ಅವರ ಮನವೊಲಿಸಿ ವಾಪಸ್ ಕಳುಹಿಸಬಹುದಿತ್ತು, ಇಲ್ಲವೇ ಶಾಂತಿಯುತ ಪ್ರತಿಭಟನೆಗೆ ಅವಕಾಶ ಮಾಡಿಕೊಡಬಹುದಿತ್ತು. ಅದು ಬಿಟ್ಟು ಗೋಲಿಬಾರ್ ಮಾಡಿ ಎರಡು ಅಮಾಯಕ ಜೀವ ತೆಗೆದರು. ಇದಕ್ಕೆ ಪೊಲೀಸ್ ಠಾಣೆಗೆ ನುಗ್ಗಲು ಹಾಗೂ ಆರ್ಮ್ ಶಾಪ್‌ಗೆ ನುಗ್ಗಲು ಯತ್ನಿಸಿದರು ಎಂದು ಕಥೆ ಕಟ್ಟಿದರು. ಬೆಂಗಳೂರು ಸಹಿತ ರಾಜ್ಯಾದ್ಯಂತ ಲಕ್ಷಾಂತರ ಜನ ಸೇರಿ ಪ್ರತಿಭಟನೆ ಮಾಡಿದಾಗಲೂ ಯಾವುದೇ ಅಹಿತಕರ ಘಟನೆ ನಡೆಯಲಿಲ್ಲ ಆದರೆ ಮಂಗಳೂರಿನಲ್ಲಿ 150 ಜನರು ಪಾಲ್ಗೊಂಡಿದ್ದ ವೇಳೆ ಗೋಲಿಬಾರ್ ನಡೆಸಲಾಯಿತು. ಇದರಿಂದ ಇಬ್ಬರು ಜೀವ ಕಳೆದುಕೊಳ್ಳುವಂತಾಯಿತು. ಇತ್ತೀಚೆಗೆ ಹೈಕೋರ್ಟ್ ಸಹ ನಿಷೇಧಾಜ್ಞೆ ಜಾರಿಗೊಳಿಸಿದ್ದು ಸರಿಯಲ್ಲ ಎಂದು ಹೇಳಿದೆ. ಹಾಗಾದರೆ ರಾಜ್ಯ ಸರಕಾರ ಮಾಡಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿದರು. ದೇಶದ್ರೋಹ ಪ್ರಕರಣ ಸರಿಯಲ್ಲ
ಬೀದರ್‌ನ ಶಾಹೀನ್ ಶಾಲೆಯಲ್ಲಿ ಸಿಎಎ ಕುರಿತು ವಿಡಂಬನಾತ್ಮಕ ನಾಟಕ ಮಾಡಿದ 6ನೇ ತರಗತಿ ವಿದ್ಯಾರ್ಥಿನಿ, ಆಕೆಯ ತಾಯಿ, ಶಾಲೆಯ ಮುಖ್ಯ ಶಿಕ್ಷಕಿ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಲಾಯಿತು. ಮಾಸ್ಟರ್ ಹಿರಣ್ಣಯ್ಯ ಅವರ ಲಂಚಾವತಾರ ಸೇರಿ ಸಾಕಷ್ಟು ನಾಟಕಗಳಲ್ಲಿ ಆಡಳಿತ ನಡೆಸುವವರ ವಿರುದ್ಧ ವಿಡಂಬನೆ, ಟೀಕೆ ಮಾಡಲಾಗುತ್ತಿತ್ತು. ಆಗ ಯಾರಾದರೂ ದೇಶದ್ರೋಹ ಪ್ರಕರಣ ಹಾಕಿದ್ದರಾ? ಶಾಹೀನ್ ಶಾಲೆಯ ವಾರ್ಷಿಕೋತ್ಸವದಲ್ಲಿ ನಾಟಕದಲ್ಲಿ ಆ ವಿದ್ಯಾರ್ಥಿನಿ ಯಾರನ್ನೂ ಕುರಿತು ನಿರ್ದಿಷ್ಟವಾಗಿ ಹೇಳಿಲ್ಲ, ಸಹಜವಾಗಿ ನನ್ನ ತಾತ, ಮುತ್ತಾತನ ವಿವರ ಕೇಳಿದರೆ ಎಲ್ಲಿಂದ ತರಲಿ ಅವರು ಸಮಾಧಿಯಲ್ಲಿದ್ದಾರೆ, ಬೇಕೇ ಬೇಕು ಎಂದರೆ ಚಪ್ಪಲಿಯಲ್ಲಿ ಹೊಡೆಯುತ್ತೇನೆ ಎಂದು ಹೇಳಿದ್ದಾಳೆ. ಅದು ನಾಟಕದ ಡೈಲಾಗ್ ಅಷ್ಟೇ, ಇಷ್ಟಕ್ಕೆ ದೇಶದ್ರೋಹ ಪ್ರಕರಣ ದಾಖಲಿಸಿದರೆ ಹೇಗೆ? ಎಂದು ಪ್ರಶ್ನಿಸಿದರು. ಕಾಲಹರಣ ಪದ ತೆಗೆಸಲು ಆಗ್ರಹ
ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ನಿಲುವಳಿ ಸೂಚನೆಯಡಿ ಮಂಡಿಸಿದ ವಿಷಯ ಸಂಬಂಧ ನಿಯಮ 60ರ ಬದಲಾಗಿ 69ಕ್ಕೆ ಪರಿವರ್ತನೆ ಮಾಡಿ ಚರ್ಚೆಗೆ ಅವಕಾಶ ಕೊಡುವುದಾಗಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ರೂಲಿಂಗ್ ನೀಡಿ, ನಿಯಮ 60 ಹಾಗೂ 69ರಡಿ ಚರ್ಚೆ ಕಾಲಹರಣ ಆಗಬಾರದು ಎಂದು ಹೇಳಿದರು. ಇದಕ್ಕೆ ಆಕ್ಷೇಪಿಸಿದ ಸಿದ್ದರಾಮಯ್ಯ, ಹಾಗಾದರೆ ನಾವು ಇಲ್ಲಿ ಕಾಲಹರಣ ಮಾಡಲು ಬರುತ್ತೇವೆಯೇ ಎಂದು ಪ್ರಶ್ನಿಸಿದರು. ಮಧ್ಯಪ್ರವೇಶ ಮಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ, ಸ್ಪೀಕರ್ ಅವರ ಮಾತಿನ ಅರ್ಥ ಹಾಗಲ್ಲ, ಕಾಲಹರಣ ಆಗಬಾರದು ಎಂಬುದಷ್ಟೇ ಎಂದು ಸಮಜಾಯಿಷಿ ನೀಡಿದರು. ಇಷ್ಟಾದರೂ ಸಿದ್ದರಾಮಯ್ಯ ಅವರು ಆ ಪದ ಕಡತದಿಂದ ತೆಗೆದು ಹಾಕುವಂತೆ ಪಟ್ಟು ಹಿಡಿದರು. ಸ್ಪೀಕರ್ ಅವರು ನಾನು ಆ ಕುರಿತು ಪರಿಶೀಲಿಸುತ್ತೇನೆ ಎಂದು ಹೇಳಿ ಕಡತದಿಂದ ತೆಗೆದುಹಾಕಲು ಸೂಚಿಸಲಿಲ್ಲ. ಇದು ಸಿದ್ದರಾಮಯ್ಯ ಅವರ ಕೋಪ ಮತ್ತಷ್ಟು ಹೆಚ್ಚಿಸಿತು. ವಿಪಕ್ಷದವರು ಚರ್ಚೆಗೆ ಕೇಳಿದರೆ ಕಾಲಹರಣ ಎಂದು ಹೇಳುವುದು ಒಳ್ಳೆಯ ನಡವಳಿಕೆ ಅಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮೇಲ್ಮನೆಯಲ್ಲೂ ಗದ್ದಲ
ಅತ್ತ ಪರಿಷತ್‌ನಲ್ಲೂ ಸಿಎಎ ಕುರಿತಂತೆ ವಿಪಕ್ಷಗಳು ಸರಕಾರವನ್ನು ತರಾಟೆಗೆ ತೆಗೆದುಕೊಂಡವು. ಸಿಎಎ ವಿರೋಧಿಸಿ ಮಂಗಳೂರಿನಲ್ಲಿ ಪ್ರತಿಭಟನೆ ನಡೆದವೇಳೆ, ಗೋಲಿಬಾರ್‌ಗೆ ಇಬ್ಬರು ಯುವಕರು ಬಲಿಯಾಗಿರುವುದು ಪೊಲೀಸರ ಪೂರ್ವನಿಯೋಜಿತ ಕೃತ್ಯ ಎಂದು ಕಾಂಗ್ರೆಸ್ ಸದಸ್ಯರು ಆರೋಪಿಸಿದರು. ಜತೆಗೆ ಹೈಕೋರ್ಟ್ ನ್ಯಾಯಮೂರ್ತಿಗಳು ಅಥವಾ ಸದನ ಸಮಿತಿ ಮೂಲಕ ತನಿಖೆ ನಡೆಸಬೇಕು ಎಂಬುದು ಸದಸ್ಯರ ಒತ್ತಾಯ. ಈ ವೇಳೆ ಬಿಜೆಪಿ ಸದಸ್ಯ ರವಿ ಕುಮಾರ್, ಗೋಲಿಬಾರ್‌ನಲ್ಲಿ ಮಡಿದವರು “ಟೆರರಿಸ್ಟ್’ ಎಂದಾಗ ತೀವ್ರ ಗದ್ದಲ ಉಂಟಾಯಿತು. ಕಾಂಗ್ರೆಸ್-ಜೆಡಿಎಸ್ ಸದಸ್ಯರು ಈ ಪದ ಬಳಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಕಡೆಗೆ ರವಿಕುಮಾರ್ ಕ್ಷಮೆಯಾಚಿಸಿದರು.