ತಿ.ನರಸೀಪುರ: ವಿದ್ಯುತ್ ಕಾಯ್ದೆ ಖಾಸಗೀಕರಣ, ಪ್ರಸಕ್ತ ಸಾಲಿನ ಕಬ್ಬಿನ ಎಫ್ಆರ್‌ಪಿ ದರ ನಿಗದಿಯಲ್ಲಿ ರೈತರಿಗೆ ಕೇಂದ್ರ ಸರ್ಕಾರ ದ್ರೋಹ ಬಗೆದಿರುವ ನೀತಿಯ ವಿರುದ್ಧ ಕಬ್ಬುಬೆಳೆಗಾರು, ರೈತರು ಹಾಗೂ ಕೃಷಿ ಪಂಪ್ ಸೆಟ್ ರೈತರಿಂದ ಸೆ.26ರಂದು ಬೆಂಗಳೂರು ವಿಧಾನಸೌಧ ಚಲೋ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದರು.
ಪಟ್ಟಣದ ಎಪಿಎಂಸಿ ಸಭಾಂಗಣದಲ್ಲಿ ನಡೆದ ರೈತರ ಸಭೆಯಲ್ಲಿ ಮಾತನಾಡಿ, ಪ್ರಸಕ್ತ ಸಾಲಿನ ಕಬ್ಬಿನ ಎಫ್ಆರ್‌ಪಿ ದರ ನಿಗದಿಯಲ್ಲಿ ರೈತರಿಗೆ ಕೇಂದ್ರ ಸರ್ಕಾರ ದ್ರೋಹ ಬಗೆದಿದೆ. ಕಬ್ಬು ದರ ಪುನರ್ ಪರಿಶೀಲನೆ ನಡೆಸಲು, 2022ರ ವಿದ್ಯುತ್ ಕಾಯ್ದೆ ಖಾಸಗೀಕರಣ ತಿದ್ದುಪಡಿ ಕೈಬಿಡಬೇಕು, ಕೃಷಿ ಪಂಪ್ ಸೆಟ್‌ಗಳಿಗೆ ಮೀಟರ್ ಅಳವಡಿಸಿ ಉಚಿತ ವಿದ್ಯುತ್ ನಿಲ್ಲಿಸುವ ಹುನ್ನಾರ ಕೈಬಿಡಬೇಕು ಎಂದು ಆಗ್ರಹಿಸಿದರು.
ಈ ಭಾಗದ ಬಣ್ಣಾರಿ ಸಕ್ಕರೆ ಕಾರ್ಖಾನೆ ಕಬ್ಬು ಸರಬರಾಜು ಮಾಡಿದ ರೈತರಿಗೆ ಕಾನೂನುಬಾಹಿರ ವಾಗಿ ಟನ್‌ಗೆ 2,500 ರೂ. ನೀಡಿ ರೈತರನ್ನು ವಂಚಿಸುತ್ತಿದ್ದಾರೆ. ಇದರ ವಿರುದ್ಧ ಸರ್ಕಾರವನ್ನು ಒತ್ತಾಯಿಸಲು ರೈತರ ವಿಧಾನಸೌಧ ಚಲೋ ನಡೆಯಲಿದ್ದು, ದೆಹಲಿಯಲ್ಲಿ ಹೋರಾಟ ನಡೆಸಿದ ಸಂಯುಕ್ತ ಕಿಸಾನ್ ಮೋರ್ಚಾ ರಾಷ್ಟ್ರೀಯ ರೈತ ಮುಖಂಡರು ಕೂಡ ಈ ರಾಲಿಯಲ್ಲಿ ಭಾಗವಹಿಸಿ ಹೋರಾಟ ಬೆಂಬಲಿಸಿದ್ದಾರೆ ಎಂದು ತಿಳಿಸಿದರು.
ರೈತರ ಸಾಲ ಮನ್ನಾ ಮಾಡಿ:ಎಲ್ಲಾ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಎಂಎಸ್‌ಪಿ ಖಾತರಿ ಕಾನೂನು ಜಾರಿಗೆ ತಂದು, ಡಾ ಸ್ವಾಮಿನಾಥನ್ ವರದಿಯಂತೆ ಬೆಂಬಲ ಬೆಲೆ ನಿಗದಿಯಾಗಬೇಕು. ಕೃಷಿ ಉತ್ಪನ್ನಗಳ ಹಾಗೂ ಉಪಕರಣಗಳ ಮೇಲಿನ ಜಿಎಸ್‌ಟಿ ರದ್ದುಪಡಿಸಬೇಕು. ದೇಶದಲ್ಲಿ ಮೂರುವರೆ ಲಕ್ಷ ರೈತರು ಕೃಷಿ ಸಂಕಷ್ಟದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಹಾಗೂ ಕೊರೊನಾ ಲಾಕ್ ಡೌನ್ ಅತಿವೃಷ್ಟಿ ಮಳೆ ಹಾನಿ ಸಂಕಷ್ಟದಿಂದ ನಲುಗಿದ್ದಾರೆ ಆದ ಕಾರಣ ದೇಶದ ಉದ್ಯಮಿಗಳ 10 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ ರೀತಿಯಲ್ಲಿ, ರೈತರ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.
ಪ
ರಿಹಾರ ನೀಡುವ ಭರವಸೆ ಈಡೇರಿಸಿ: ದೆಹಲಿ ಹೋರಾಟದಲ್ಲಿ ಮಾಡಿದ 750 ರೈತ ಕುಟುಂಬಗಳಿಗೆ ಕೇಂದ್ರ ಸರ್ಕಾರ ನವಂಬರ್ ತಿಂಗಳಲ್ಲಿ ಮೂರು ಕೃಷಿ ಕಾಯ್ದೆ ರದ್ದು ಮಾಡಿದಾಗ ನೀಡಿದ ಭರವಸೆಯಂತೆ ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ನೀಡುವ ಭರವಸೆ ಈಡೇರಿಸಬೇಕು ಎಂದು ಆಗ್ರಹಿಸಿದರು. ಅತಿವೃಷ್ಟಿ ಮಳೆ ಹಾನಿ ಬೆಳೆನಷ್ಟ ದಿಂದ ಸಂಕಷ್ಟದಲ್ಲಿರುವ ರೈತರ ಸಾಲ ವಸೂಲಾತಿ ನಿಲ್ಲಿಸಿ ಆರ್ ಬಿಐ ನಿಯಮದಂತೆ ಇರುವ ಸಾಲದ ಮೇಲೆ ಶೇ.25ರಷ್ಟು ಹೆಚ್ಚುವರಿ ಸಾಲ ನೀಡಬೇಕು. ರಾಜ್ಯದಲ್ಲಿ ಜಾರಿ ಮಾಡಿರುವ ಎಪಿಎಂಸಿ ಕಾಯ್ದೆಯನ್ನು ವಾಪಸ್ ಪಡೆಯಬೇಕು ಎಂಬ ಒತ್ತಾಯಗಳ ಬಗ್ಗೆ ರೈತರ ಬೃಹತ್ ರ್ಯಾಲಿ ವಿಧಾನಸೌಧ ಚಲೋ ನಡೆಸಲಾಗುವುದು ಎಂದರು.
ರಾಜ್ಯ ಕಬ್ಬು ಬೆಳೆಗಾರರ ಸಂಘದ ತಾಲೂಕು ಅಧ್ಯಕ್ಷ ಕುರುಬೂರು ಸಿದ್ದೇಶ್, ಜಿಲ್ಲಾ ಕಾರ್ಯ ದರ್ಶಿ ಕಿರಗಸೂರು ಶಂಕರ್, ಬರಡನಪುರ ನಾಗರಾಜ…, ಕಿರಗಸೂರುಪ್ರಸಾದ್ ನಾಯಕ್, ಅಪ್ಪಣ್ಣ, ವಾಚ್ ಕುಮಾರ್, ಲಿಂಗರಾಜು, ಹಿರಿಯೂರು ಬನವೀನ್ ಜಾಲಹಳ್ಳಿ ಗಿರೀಶ್, ಸೊಮಶೇಖರ್ ಶಂಭುಲಿಂಗಪ್ಪ, ರವೀಶ್, ರವಿ, ಸುರೇಶ್, ಕುಮಾರ್, ತರಕಾರಿ ನಿಂಗರಾಜು ಇದ್ದರು.