Advertisement

ಕಲಾಪ ಕಾಟಾಚಾರಕ್ಕೆ ನಡೆಯದಿರಲಿ

01:57 AM Feb 06, 2021 | Team Udayavani |

ಪೂರ್ವ ನಿಗದಿಯಂತೆ ವಿಧಾನಸಭೆಯ ಅಧಿವೇಶನ ಮುಕ್ತಾಯವಾಗಿದೆ. ಪರಿಷತ್‌ ಇನ್ನೂ ಮೂರು ದಿನಗಳ ಕಾಲ ವಿಸ್ತರಣೆಯಾಗಿದೆ. ಉಭಯ ಸದನಗಳಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯಲ್ಲಿ ಬೆರಳೆಣಿಕೆಯಷ್ಟು ಸಚಿವರು, ಶಾಸಕರು ಮಾತ್ರ ಪಾಲ್ಗೊಂಡಿದ್ದು, ಬಹುತೇಕ ಸಚಿವರು, ಶಾಸಕರು ಸದನದ ಕಲಾಪಕ್ಕೆ ಹಾಜರಾಗುವುದಕ್ಕೂ ನಿರಾಸಕ್ತಿ ತೋರಿಸಿರುವುದು ಎದ್ದು ಕಾಣುತ್ತಿತ್ತು.

Advertisement

ವರ್ಷದಲ್ಲಿ ಕನಿಷ್ಠ 60 ದಿನ ಅಧಿವೇಶನ ನಡೆಸಬೇಕು ಎಂದು ರಾಜ್ಯ ಸರಕಾರವೇ ನಿಯಮಗಳನ್ನು ಮಾಡಿಕೊಂಡಿದೆ. ಆದರೆ ನಿಯಮ ಮಾಡಿಕೊಂಡಾಗಿನಿಂದ 60 ದಿನಗಳ ಕಾಲ ಅಧಿವೇಶನ ನಡೆದ ಉದಾಹರಣೆ ಇಲ್ಲ. ಈಗ ವರ್ಷದ ಆರಂಭದ ಜಂಟಿ ಅಧಿವೇಶನ ಏಳು ದಿನ ನಡೆದಿದ್ದು, ಏಳು ದಿನದಲ್ಲಿ 14 ಮಹತ್ವದ ಮಸೂದೆಗಳು ಮಂಡನೆಯಾಗಿ ಅಂಗೀಕೃತಗೊಂಡಿವೆ. ಆದರೆ, ಈ ಮಸೂದೆಗಳ ಮೇಲೆ ಚರ್ಚೆ ಮಾಡಲೂ ಶಾಸಕರು, ಉತ್ತರಿಸಲು ಸಚಿವರು ಇರದಿದ್ದುದು ಕಂಡು ಬಂದಿತು.

ಪ್ರಮುಖವಾಗಿ ಐದು ಖಾಸಗಿ ವಿಶ್ವ ವಿದ್ಯಾನಿಲಯಗಳ ಮಸೂದೆಗಳು ಮಂಡನೆಯಾಗಿ ಅಂಗೀಕಾರಗೊಂಡಿದ್ದು, ಖಾಸಗಿ ವಿವಿಗಳ ಹಾವಳಿಯಿಂದ ಸಾರ್ವಜನಿಕ ವಿವಿಗಳ ಮೇಲೆ ಆಗುತ್ತಿರುವ ಪರಿಣಾಮ ಹಾಗೂ ಶಿಕ್ಷಣದ ಗುಣಮಟ್ಟದ ಮೇಲೆ ಆಗುತ್ತಿರುವ ಪರಿಣಾಮಗಳ ಬಗ್ಗೆ ಗಂಭೀರ ಚರ್ಚೆ ನಡೆಸುವ ಜವಾಬ್ದಾರಿಯಿಂದ ಬಹುತೇಕರು ಜಾರಿ ಕೊಂಡಂತಿದೆ. ಅಲ್ಲದೇ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಆಸ್ತಿ ತೆರಿಗೆ ಹೆಚ್ಚಳ ಮಾಡಿರುವುದು ಕೊರೊನಾ ಸಂಕಷ್ಟ ಕಾಲದಲ್ಲಿ ಸಾಮಾನ್ಯ ಜನರ ಮೇಲೆ ಹೊರೆ ಹಾಕಲು ಕಾನೂನು ರೂಪಿಸುತ್ತಿರುವುದನ್ನು ಮುಂದೂಡುವಂತೆ ಆಗ್ರಹಿಸಲೂ ಶಾಸಕರು ಸದನದಲ್ಲಿ ಇರದಿರುವುದು ಎದ್ದು ಕಾಣುತ್ತಿತ್ತು.

ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಮುಖ್ಯಮಂತ್ರಿ ಯಡಿ ಯೂರಪ್ಪ, ಆರ್‌.ವಿ.ದೇಶಪಾಂಡೆ, ಎಚ್‌.ಕೆ. ಪಾಟೀಲ್‌ರಂತ ಹಿರಿಯ ಸದಸ್ಯರು ಸದನಕ್ಕೆ ಸಕ್ರಿಯವಾಗಿ ಹಾಜರಾಗಿ ಎಲ್ಲ ಕಾರ್ಯಕಲಾಪಗಳಲ್ಲಿ ಪಾಲ್ಗೊಳ್ಳುವ ಪರಿ ಸಚಿವರಿಗೆ, ಯುವ ಶಾಸಕರಿಗೆ ಪ್ರೇರಣೆಯಾಗಬೇಕಿದೆ. ತಮ್ಮ ಪ್ರಶ್ನೆಗಳಿದ್ದಾಗ ಮಾತ್ರ ಸದನಕ್ಕೆ ಹಾಜರಾಗಿ ಮತ್ತೆ ಹೊರ ನಡೆಯುವ ಪ್ರವೃತ್ತಿ ಅಧಿವೇಶನದ ಬಗ್ಗೆ ಯುವ ಶಾಸಕರಿಗೆ ಇರುವ ಮನಃಸ್ಥಿತಿಯನ್ನು ಎತ್ತಿ ತೋರಿಸುತ್ತದೆ. ವಿಧಾನ ಮಂಡಲದ ಅಧಿವೇಶನ ಇರುವುದೇ ಶಾಸಕರು ಸಮಾಜದ ಒಳಿತಿಗಾಗಿ ಕಾನೂನುಗಳನ್ನು ರೂಪಿಸಲು ಹಾಗೂ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು. ಆದರೆ ಅಧಿವೇಶನ ಎನ್ನುವುದು ಕಾಟಾಚಾರದ ಸಭೆಯಂತಾಗುತ್ತಿರುವುದು ಶಾಸಕರಿಗೆ ಸಮಾಜದ ಮೇಲಿನ ಕಳಕಳಿ ಎಷ್ಟು ಎನ್ನುವುದನ್ನು ಪ್ರತಿಬಿಂಬಿಸುವಂತಿದೆ.

ವಿಪಕ್ಷದ ನಾಯಕ ಸಿದ್ದರಾಮಯ್ಯ ಭಾಷಣ ಮಾಡುವ ವೇಳೆ ಸಚಿವರೂ, ಅಧಿಕಾರಿಗಳೂ ಇಲ್ಲದಿರುವ ಬಗ್ಗೆಯೂ ಗಂಭೀರವಾಗಿ ಆಕ್ರೋಶ ವ್ಯಕ್ತಪಡಿಸಿದ್ದು, ಅಧಿಕಾರ ನಡೆಸುವವರಿಗೂ ಅಧಿವೇಶನ ಎನ್ನುವುದು ಶಾಸ್ತ್ರ ಮುಗಿಸಿದಂತಾಗುತ್ತಿರುವುದು ದುರದೃಷ್ಟಕರ.

Advertisement

ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಪ್ರತೀ ಅಧಿವೇಶನದಲ್ಲಿಯೂ ಒಂದು ಮಹತ್ವದ ವಿಚಾರದ ಕುರಿತು ಬೆಳಕು ಚೆಲ್ಲುವ ಪ್ರಯತ್ನ ಆರಂಭಿಸಿದ್ದು, ಇದು ಶಾಸಕರು ತಮ್ಮನ್ನು ತಾವು ತೆರೆದುಕೊಳ್ಳಲು ಹಾಗೂ ಸಕ್ರಿಯರಾಗಿ ಪಾಲ್ಗೊಳ್ಳಲು ಒಳ್ಳೆಯ ಅವಕಾಶ ನೀಡಿದಂತಾಗುತ್ತಿದೆ. ಆದರೆ, ಸಚಿವರು, ಶಾಸಕರ ನಿರಾಸಕ್ತಿ ಬೇಸರ ಮೂಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next