Advertisement

ವಿಧಾನ ಕದನ: ಕೋಟೆನಾಡಿನ ಅಧಿಪತ್ಯಕ್ಕೆ ಪೈಪೋಟಿ

10:48 PM Jan 26, 2023 | Team Udayavani |

ರಾಷ್ಟ್ರ ಹಾಗೂ ರಾಜ್ಯ ರಾಜಕೀಯಕ್ಕೆ ಗಣನೀಯ ಕೊಡುಗೆ ನೀಡಿರುವ ಕೋಟೆನಾಡು ಚಿತ್ರದುರ್ಗದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ನೇರ ಹಣಾಹಣಿಯಿದೆ. ಇಲ್ಲಿರುವ ಆರು ವಿಧಾನಸಭಾ ಕ್ಷೇತ್ರಗಳ ಮತದಾರರು ಬಾರಿ ಯಾರ ಕಡೆಗೆ ಒಲವು ತೋರಿ, ಯಾರ ಗೆಲುವಿಗೆ ಕಾರಣರಾಗಲಿದ್ದಾರೆ ಹಾಗೂ ಕೋಟೆ ಯಾರ ವಶಕ್ಕೆ ಬರಲಿದೆ ಎಂಬ ಕುತೂಹಲ ಮನೆಮಾಡಿದೆ.

Advertisement

ಚಿತ್ರದುರ್ಗ: ರಾಜ್ಯ ಹಾಗೂ ರಾಷ್ಟ್ರ ರಾಜಕಾರಣಕ್ಕೆ ಕೋಟೆನಾಡು ಚಿತ್ರದುರ್ಗ ಜಿಲ್ಲೆ ಮಹತ್ವದ ಕೊಡುಗೆ ನೀಡಿದೆ. ಕರ್ನಾಟಕ ಏಕೀಕರಣ ಚಳವಳಿಯ ರೂವಾರಿ, ರಾಜ್ಯದ ಮೊದಲ ಮುಖ್ಯ ಮಂತ್ರಿ ಎಸ್‌.ನಿಜಲಿಂಗಪ್ಪ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ್ದು ಇದೇ ಜಿಲ್ಲೆಯ ಮೂಲಕ. ಸದ್ಯ ಆರು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಈ ಜಿಲ್ಲೆಯಲ್ಲಿ ಹಿಂದೆ ಕಾಂಗ್ರೆಸ್‌ ಅಧಿಪತ್ಯ ಸ್ಥಾಪಿಸಿತ್ತು. ಕಳೆದ ಚುನಾವಣೆಯ ಅನಂತರ ಬಿಜೆಪಿಯ ಭದ್ರಕೋಟೆಯಾಗಿದೆ. ಆರು ಕ್ಷೇತ್ರಗಳ ಪೈಕಿ ಎರಡು ಕ್ಷೇತ್ರ ಪರಿಶಿಷ್ಟ ಪಂಗಡ, ಒಂದು ಪರಿಶಿಷ್ಟ ಜಾತಿ, ಉಳಿದ ಮೂರು ಸಾಮಾನ್ಯ ವರ್ಗಕ್ಕೆ ಮೀಸಲಾಗಿವೆ. ಐದು ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ ಒಂದು ಕ್ಷೇತ್ರದಲ್ಲಿ ಕಾಂಗ್ರೆಸ್‌ ಶಾಸಕರಿದ್ದಾರೆ.
ಹೋ.ಚಿ.ಬೋರಯ್ಯ, ಬಿ.ಎಲ್‌.ಗೌಡ, ವಿ.ಮಸಿಯಪ್ಪ, ಮುಲ್ಕಾ ಗೋವಿಂದ ರೆಡ್ಡಿ, ಕೆ.ಎಚ್‌.ರಂಗನಾಥ್‌, ಡಿ. ಮಂಜು ನಾಥ್‌, ತಿಪ್ಪೇಸ್ವಾಮಿ ಅವರಂತಹ ಘಟಾನುಘಟಿ ನಾಯಕರ ಕೊಡುಗೆ ಈ ಜಿಲ್ಲೆಗಿದೆ.

ಭರಮಸಾಗರ
1967ರಿಂದ 2004ರ ವರೆಗೆ ಅಸ್ತಿತ್ವದಲ್ಲಿದ್ದ ಭರಮಸಾಗರ ಕ್ಷೇತ್ರ ಪುನರ್‌ ವಿಂಗಡಣೆ ಬಳಿಕ ಹೊಳಲ್ಕೆರೆ ಕ್ಷೇತ್ರದಲ್ಲಿ ವಿಲೀನವಾಯಿತು. ಪಕ್ಷೇತರರಾಗಿ ಸ್ಪರ್ಧಿಸಿದ್ದ ಜಿ. ದುಗ್ಗಪ್ಪ ಅವರಿಂದಲೇ ಇಲ್ಲಿನ ಚುನಾವಣೆ ಪ್ರಾರಂಭವಾಗಿದೆ. 1967 ರಿಂದ 2004ರ ವರೆಗೆ ನಡೆದ ಒಟ್ಟು 9 ಚುನಾವಣೆಗಳಲ್ಲಿ ಕಾಂಗ್ರೆಸ್‌ ಎರಡು ಬಾರಿ ಮಾತ್ರ ಆಯ್ಕೆ ಯಾಗಿದೆ. ಜನತಾದಳ, ಜೆಡಿಯು, ಸಂಯುಕ್ತ ಜನತಾದಳ ತಲಾ ಒಂದೊಂದು ಸಲ ಗೆದ್ದಿವೆ. ಜೆಎನ್‌ಪಿ ಎರಡು ಬಾರಿ, ಪಕ್ಷೇತರರು ಎರಡು ಸಲ ಗೆದ್ದಿದ್ದಾರೆ. ಮಾಜಿ ಸಚಿವರಾದ ಎಚ್‌. ಆಂಜನೇಯ, ಶಿವಮೂರ್ತಿ ನಾಯ್ಕ, ಹೊಳಲ್ಕೆರೆ ಹಾಲಿ ಶಾಸಕ ಎಂ.ಚಂದ್ರಪ್ಪ ಇಲ್ಲಿ ಸ್ಪರ್ಧಿಸಿ ಗೆದ್ದಿದ್ದಾರೆ.

ಹೊಳಲ್ಕೆರೆ
“ಅರೆ ಮಲೆನಾಡು’ ಖ್ಯಾತಿಯ ಹೊಳಲ್ಕೆರೆ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರ. 1952ರಲ್ಲಿ ದ್ವಿಸದಸ್ಯ ಕ್ಷೇತ್ರವಾಗಿದ್ದ ಹೊಳಲ್ಕೆರೆಯಿಂದ ಜಿ. ದುಗ್ಗಪ್ಪ, ಜಿ. ಶಿವಪ್ಪ ಕಾಂಗ್ರೆಸ್ಸಿನಿಂದ ಆಯ್ಕೆಯಾಗಿದ್ದರು. 1957ರ ಚುನಾವಣೆಯಲ್ಲಿ ಚಿತ್ರದುರ್ಗದೊಂದಿಗೆ ಸೇರಿಕೊಂಡಿತ್ತು. ಕ್ಷೇತ್ರ ಮರುವಿಂಗ‌ಡಣೆ ಅನಂತರ 1962ರಿಂದ ಈವರೆಗೆ ನಡೆದ 14 ಚುನಾವಣೆಗಳಲ್ಲಿ ಕಾಂಗ್ರೆಸ್‌ 8 ಬಾರಿ, ಬಿಜೆಪಿ 3 ಬಾರಿ, ಜೆಎನ್‌ಪಿ ಎರಡು ಬಾರಿ, ಎಸ್‌ಡಬ್ಲ್ಯುಎ ಹಾಗೂ ಜನತಾದಳ ತಲಾ ಒಂದು ಅವಧಿಗೆ ಆಯ್ಕೆಯಾಗಿವೆ. ಪಕ್ಷೇತರರು ಒಮ್ಮೆಯೂ ಆಯ್ಕೆಯಾಗದಿರುವುದು ಈ ಕ್ಷೇತ್ರದ ವಿಶೇಷತೆ. ಜಿ. ದುಗ್ಗಪ್ಪ, ಬಿ. ಪರಮೇಶ್ವರಪ್ಪ, ಎ.ವಿ. ಉಮಾ ಪತಿ, ಎಂ. ಚಂದ್ರಪ್ಪ ತಲಾ ಎರಡು ಬಾರಿ ಆಯ್ಕೆಯಾಗಿದ್ದಾರೆ. 2013ರಲ್ಲಿ ಹೊಳಲ್ಕೆರೆಯಿಂದ ಆಯ್ಕೆಯಾದ ಎಚ್‌. ಆಂಜನೇಯ ಸಚಿವರಾಗಿದ್ದರು. ಸದ್ಯ ಬಿಜೆಪಿಯ ಎಂ. ಚಂದ್ರಪ್ಪ ಶಾಸಕರು.

ಚಿತ್ರದುರ್ಗ
1952ರಿಂದ 2018ರ ವರೆಗೆ ಒಟ್ಟು 15 ಚುನಾವಣೆಗಳನ್ನು ಕಂಡಿರುವ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಏಳು ಬಾರಿ, ಬಿಜೆಪಿ ಎರಡು ಬಾರಿ, ಜೆಡಿಎಸ್‌ ಒಂದು ಬಾರಿ, ಪಕ್ಷೇತರರು ಎರಡು ಬಾರಿ ಆಯ್ಕೆಯಾಗಿದ್ದಾರೆ. ಮೊದಲ ಚುನಾವಣೆಯಲ್ಲೇ ಮುಲ್ಕಾ ಗೋವಿಂದ ರೆಡ್ಡಿ ಎಸ್‌ಒಪಿಯಿಂದ ಆಯ್ಕೆಯಾಗಿದ್ದಾರೆ. ಬಿ.ಎಲ್‌.ಗೌಡ, ಎಚ್‌. ಏಕಾಂತಯ್ಯ ತಲಾ ಒಂದು ಸಲ ಜೆಎನ್‌ಪಿ ಪಕ್ಷದಿಂದ ಗೆದ್ದಿದ್ದಾರೆ. ವಿ. ಮಸಿಯಪ್ಪ ಕಾಂಗ್ರೆಸ್‌(ಐ)ನಿಂದ ಆಯ್ಕೆಯಾದ ದಾಖಲೆಯಿದೆ. 1957ರಲ್ಲಿ ಹೊಳಲ್ಕೆರೆ, ಭರಮಸಾಗರ ಸಹಿತ ಚಿತ್ರದುರ್ಗ ದ್ವಿಸದಸ್ಯ ಕ್ಷೇತ್ರವಾಗಿತ್ತು. ಈ ಅವಧಿಯಲ್ಲಿ ಕಾಂಗ್ರೆಸ್‌ನಿಂದ ಜಿ. ಶಿವಪ್ಪ ಹಾಗೂ ಜಿ.ದುಗ್ಗಪ್ಪ ಆಯ್ಕೆಯಾಗಿದ್ದರು. ಈ ಕ್ಷೇತ್ರದಲ್ಲಿ ಹೋ.ಚಿ. ಬೋರಯ್ಯ, ಎಚ್‌. ಏಕಾಂತಯ್ಯ ತಲಾ ಎರಡು ಅವಧಿಗೆ ಆಯ್ಕೆಯಾದರೆ, ಹಾಲಿ ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿ ಸತತ ಐದು ಅವಧಿಗೆ ಶಾಸಕರಾಗಿದ್ದಾರೆ. 1994ರಿಂದ 2004ರ ವರೆಗೆ ಹ್ಯಾಟ್ರಿಕ್‌ ಗೆಲುವು ಸಾಧಿಸಿದ್ದ ತಿಪ್ಪಾರೆಡ್ಡಿ ಗೆಲುವಿನ ಓಟಕ್ಕೆ ಜೆಡಿಎಸ್‌ನ ಎಸ್‌.ಕೆ.ಬಸವರಾಜನ್‌ ಬ್ರೇಕ್‌ ಹಾಕಿದ್ದರು. ಅನಂತರ 2013 ಮತ್ತು 2018ರಲ್ಲಿ ತಿಪ್ಪಾರೆಡ್ಡಿ ಬಿಜೆಪಿಯಿಂದ ಶಾಸಕರಾಗಿದ್ದಾರೆ. ಈಗ ಎಸ್‌.ಕೆ. ಬಸವರಾಜನ್‌ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದರೆ, ಹಾಲಿ ಶಾಸಕ ತಿಪ್ಪಾರೆಡ್ಡಿ ಬಿಜೆಪಿ ಪಾಳೆಯದಲ್ಲಿದ್ದಾರೆ.

Advertisement

ಹೊಸದುರ್ಗ
ಕಲ್ಪತರು ನಾಡು, ಸಿರಿಧಾನ್ಯಗಳ ಬೀಡಾಗಿರುವ ಹೊಸದುರ್ಗ ವಿಧಾನಸಭಾ ಕ್ಷೇತ್ರ ಪಕ್ಷೇತರರಿಗೆ ಹೆಚ್ಚು ಒಲಿದಿದೆ. 1952 ರಿಂದ ಈವರೆಗೆ ನಡೆದಿರುವ ಚುನಾವಣೆಗಳಲ್ಲಿ ಕಾಂಗ್ರೆಸ್‌ 7 ಬಾರಿ, ಪಕ್ಷೇತರರು 5 ಬಾರಿ, ಪಿಎಸ್‌ಪಿ, ಜೆಎನ್‌ಪಿ, ಬಿಜೆಪಿ ತಲಾ ಒಂದು ಅವಧಿಗೆ ಆರಿಸಿ ಬಂದಿವೆ. 1962ರಲ್ಲಿ ಕಾಂಗ್ರೆಸ್ಸಿನಿಂದ ಸ್ಪರ್ಧಿಸಿದ್ದ ಮಾಜಿ ಮುಖ್ಯ ಮಂತ್ರಿ ಎಸ್‌. ನಿಜಲಿಂಗಪ್ಪ ಅವರು ಪಿಎಸ್‌ಪಿ ಪಕ್ಷದ ಜಿ.ಟಿ. ರಂಗಪ್ಪ ಎದುರು ಪರಾಭವಗೊಂಡಿದ್ದರು. ನಿಜಲಿಂಗಪ್ಪ ಅವರನ್ನು ಸೋಲಿಸಿದ ವಿಷಾದ ಇಲ್ಲಿ ಮನೆ ಮಾಡಿದೆ. ಪಕ್ಷೇತರರಾಗಿ ಮೊದಲ ಬಾರಿಗೆ ಗೆದ್ದ ಗೂಳಿಹಟ್ಟಿ ಶೇಖರ್‌ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದ ಮೊದಲ ಸರಕಾರದಲ್ಲಿ ಸಚಿವರಾಗಿದ್ದು ವಿಶೇಷ. ಬಿ.ಜಿ. ಗೋವಿಂದಪ್ಪ ಇಲ್ಲಿ ಹ್ಯಾಟ್ರಿಕ್‌ ಸಾಧನೆ ಮಾಡಿದ ಮೊದಲಿಗರು. ಜಿ. ಬಸಪ್ಪ ಹಾಗೂ ಗೂಳಿಹಟ್ಟಿ ಶೇಖರ್‌ ತಲಾ ಎರಡು ಬಾರಿ ಆಯ್ಕೆಯಾಗಿದ್ದಾರೆ. ಸದ್ಯ ಗೂಳಿಹಟ್ಟಿ ಶೇಖರ್‌ ಬಿಜೆಪಿ ಶಾಸಕ.

ಮೊಳಕಾಲ್ಮೂರು
ಬಳ್ಳಾರಿ ಹಾಗೂ ಆಂಧ್ರಪ್ರದೇಶದ ಗಡಿಗೆ ಹೊಂದಿಕೊಂಡಿರುವ ಕ್ಷೇತ್ರ. ಸದ್ಯ ಪರಿಶಿಷ್ಟ ಪಂಗಡಕ್ಕೆ ಮೀಸಲು. 1957ರಲ್ಲಿ ನಡೆದ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಎಸ್‌. ನಿಜಲಿಂಗಪ್ಪ ಸ್ಪರ್ಧಿಸಿ ಆಯ್ಕೆಯಾಗಿದ್ದು ಈ ಕ್ಷೇತ್ರದ ಹೆಗ್ಗಳಿಕೆ. 1952ರಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಸ್ವಾತಂತ್ರÂ ಹೋರಾಟಗಾರರಾಗಿದ್ದ ಎ. ಭೀಮಪ್ಪ ನಾಯಕರು ಸ್ಪರ್ಧಿಸಿ ಗೆದ್ದಿದ್ದರು. ಈವರೆಗೆ ನಡೆದಿರುವ ಒಟ್ಟು 15 ಚುನಾವಣೆಗಳಲ್ಲಿ ಕಾಂಗ್ರೆಸ್‌ ಸತತ 11 ಬಾರಿ ಗೆದ್ದಿದೆ. ತಲಾ ಒಂದು ಬಾರಿ ಜೆಎನ್‌ಪಿ, ಜನತಾದಳ, ಬಿಎಸ್‌ಆರ್‌ ಕಾಂಗ್ರೆಸ್‌ ಹಾಗೂ ಬಿಜೆಪಿ ಗೆದ್ದಿವೆ. ಎಸ್‌.ಎಚ್‌. ಬಸಣ್ಣ, ಪಟೇಲ್‌ ಪಾಪನಾಯಕ, ಎನ್‌.ಜಿ. ನಾಯಕ, ಪೂರ್ಣ ಮುತ್ತಪ್ಪ ತಲಾ ಎರಡು ಅವಧಿಗಳಿಗೆ ಶಾಸಕರಾದರೆ, ಎನ್‌.ವೈ. ಗೋಪಾಲಕೃಷ್ಣ ಮೂರು ಬಾರಿ ಆಯ್ಕೆಯಾಗಿದ್ದಾರೆ. ಬಿಜೆಪಿ ನಾಯಕ, ಹಾಲಿ ಶಾಸಕ ಬಿ.ಶ್ರೀರಾಮುಲು ಕಳೆದ ಬಾರಿ ಸ್ಪರ್ಧಿಸಿದಾಗ ಈ ಕ್ಷೇತ್ರ ಭಾರೀ ಸದ್ದು ಮಾಡಿತ್ತು. ಶ್ರೀರಾಮುಲು ಅವರಿಗೆ ಬಿಎಸ್‌ಆರ್‌ ಕಾಂಗ್ರೆಸ್‌ನಿಂದ ಶಾಸಕರಾಗಿದ್ದ ಎಸ್‌. ತಿಪ್ಪೇಸ್ವಾಮಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ತೊಡೆ ತಟ್ಟಿದ್ದರು.

ಚಳ್ಳಕೆರೆ
ಆಂಧ್ರಪ್ರದೇಶ ಗಡಿಗೆ ಹೊಂದಿಕೊಂಡಿದ್ದು ಒಂದು ಕಾಲಕ್ಕೆ ಆಯಿಲ್‌ ಸಿಟಿ, ಎರಡನೇ ಬಾಂಬೆ ಎಂದೇ ಹೆಸರಾಗಿತ್ತು. ಸಾಕಷ್ಟು ಎಣ್ಣೆ ಮಿಲ್‌ಗ‌ಳಿದ್ದವು. ಸಾವಿರಾರು ಜನರಿಗೆ ಉದ್ಯೋಗವೂ ಸಿಗುತ್ತಿತ್ತು. 1957ರಲ್ಲಿ ದ್ವಿಸದಸ್ಯ ಕ್ಷೇತ್ರವಾಗಿ ಚುನಾವಣೆಗೆ ತೆರೆದುಕೊಂಡ ಚಳ್ಳಕೆರೆ ಕ್ಷೇತ್ರದಲ್ಲಿ ಎ. ಭೀಮಪ್ಪ ನಾಯಕ ಹಾಗೂ ಟಿ. ಹನುಮಂತಯ್ಯ ಮೊದಲ ಶಾಸಕರಾಗಿದ್ದರು. ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿರುವ ಈ ಕ್ಷೇತ್ರದಲ್ಲಿ ಈವರೆಗೆ ನಡೆದ ಒಟ್ಟು 14 ಚುನಾವಣೆಗಳಲ್ಲಿ ಕಾಂಗ್ರೆಸ್‌ 9 ಬಾರಿ ಗೆದ್ದಿದೆ. ಬಿಜೆಪಿ ಹಾಗೂ ಜೆಡಿಎಸ್‌ ತಲಾ ಎರಡು ಬಾರಿ, ಪ್ರಜಾ ಸೋಶಿಯಲಿಸ್ಟ್‌ ಪಕ್ಷ ಹಾಗೂ ಜೆಎನ್‌ಪಿ ತಲಾ ಒಂದು ಬಾರಿ ಜಯಗಳಿಸಿವೆ. ಬಿ.ಎಲ್‌. ಗೌಡ, ಎನ್‌. ಜಯಣ್ಣ, ತಲಾ ಎರಡು ಬಾರಿ ಆಯ್ಕೆಯಾಗಿದ್ದಾರೆ. ಮಾಜಿ ಸಚಿವ ತಿಪ್ಪೇಸ್ವಾಮಿ ಮೂರು ಬಾರಿ ಆಯ್ಕೆಯಾಗಿ ಹ್ಯಾಟ್ರಿಕ್‌ ದಾಖಲೆ ಮಾಡಿದ್ದಾರೆ. ಹಾಲಿ ಶಾಸಕ ಟಿ. ರಘುಮೂರ್ತಿ ಕಾಂಗ್ರೆಸ್‌ನಿಂದ ಸತತ ಎರಡು ಅವಧಿಗೆ ಆಯ್ಕೆಯಾಗಿದ್ದು, ಹ್ಯಾಟ್ರಿಕ್‌ ನಿರೀಕ್ಷೆಯಲ್ಲಿದ್ದಾರೆ. ಇಲ್ಲಿ ಬಸವರಾಜ ಮಂಡಿಮs… ಬಿಜೆಪಿ ಖಾತೆ ತೆರೆದರೆ ಅನಂತರ ತಿಪ್ಪೇಸ್ವಾಮಿ ಜೆಡಿಎಸ್‌ ತೊರೆದು ಬಿಜೆಪಿ ಸೇರ್ಪಡೆಯಾಗಿ ಮತ್ತೂಮ್ಮೆ ಆಯ್ಕೆಯಾಗಿದ್ದರು.

ಹಿರಿಯೂರು
ವಾಣಿವಿಲಾಸ ಜಲಾಶಯದ ನೆರಳಿನಲ್ಲಿರುವ ಹಿರಿಯೂರು ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾದವರು ಸಚಿವರಾಗುತ್ತಾರೆ ಎನ್ನುವ ನಂಬಿಕೆ ಜಿಲ್ಲೆಯಲ್ಲಿದೆ. ಕೆ.ಎಚ್‌. ರಂಗನಾಥ್‌, ಡಿ. ಮಂಜುನಾಥ್‌, ಡಿ.ಸುಧಾಕರ್‌ ಇಲ್ಲಿಂದ ಆಯ್ಕೆಯಾಗಿ ಸತತವಾಗಿ ಸಚಿವರಾಗಿದ್ದರು. 1952ರಲ್ಲಿ ದ್ವಿಸದಸ್ಯ ಕ್ಷೇತ್ರವಾಗಿದ್ದ ಹಿರಿಯೂರಿನಿಂದ ವಿ. ಮಸಿಯಪ್ಪ ಹಾಗೂ ಟಿ. ಹನುಮಯ್ಯ ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದರು. ಅನಂತರ ಪಿಸಿಪಿಯಿಂದ ಕೆ. ಕೆಂಚಪ್ಪ ಆಯ್ಕೆಯಾಗಿದ್ದಾರೆ. ಸಾಮಾನ್ಯ ಕ್ಷೇತ್ರವಾಗಿರುವ ಇಲ್ಲಿ ಒಟ್ಟು 15 ಚುನಾವಣೆಗಳಲ್ಲಿ ಕಾಂಗ್ರೆಸ್‌ 11 ಬಾರಿ, ಜನತಾದಳ 2 ಬಾರಿ, ಬಿಜೆಪಿ ಹಾಗೂ ಪಿಸಿಪಿ ತಲಾ ಒಂದು ಸಲ ಗೆದ್ದಿವೆ. ಈ ಕ್ಷೇತ್ರದಲ್ಲಿ ಕೆ.ಎಚ್‌. ರಂಗನಾಥ್‌ ಹಾಗೂ ಡಿ. ಮಂಜುನಾಥ್‌ ಪಾರಮ್ಯ ಮೆರೆದಿದ್ದಾರೆ. ರಂಗನಾಥ್‌ ಅವರು ಐದು ಅವಧಿಗೆ ಶಾಸಕರಾಗಿದ್ದರೆ, ಡಿ. ಮಂಜುನಾಥ್‌ ಮೂರು ಅವಧಿಗೆ ಆಯ್ಕೆಯಾಗಿದ್ದರು. ಹಿರಿಯರಾದ ವಿ. ಮಸಿಯಪ್ಪ ಹಾಗೂ ಡಿ. ಸುಧಾಕರ್‌ ತಲಾ ಎರಡು ಸಲ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. ಹಿರಿಯ ಮುಖಂಡರಾದ ಎ. ಕೃಷ್ಣಪ್ಪ ಜೆಡಿಎಸ್‌ನಿಂದ ಇಲ್ಲಿ ಸ್ಪರ್ಧಿಸಿ ಅಲ್ಪ ಮತಗಳ ಅಂತರದಿಂದ ಪರಾಭವಗೊಂಡಿದ್ದರು. ಅನಂತರದ ಚುನಾವಣೆಯಲ್ಲಿ ಅವರ ಪುತ್ರಿ ಪೂರ್ಣಿಮಾ ಬಿಜೆಪಿಯಿಂದ ಕಣಕ್ಕಿಳಿದು ಗೆಲುವು ದಾಖಲಿಸಿದ್ದಾರೆ.

ತಿಪ್ಪೇಸ್ವಾಮಿ ನಾಕೀಕೆರೆ

Advertisement

Udayavani is now on Telegram. Click here to join our channel and stay updated with the latest news.

Next