Advertisement

ಮುಗಿದ ಮತಯುದ್ಧ ; ಫಲಿತಾಂಶದತ್ತ ಎಲ್ಲರ ಚಿತ್ತ

10:55 AM Jun 14, 2022 | Team Udayavani |

ಹುಬ್ಬಳ್ಳಿ: ಪಶ್ಚಿಮ ಶಿಕ್ಷಕರ ಕ್ಷೇತ್ರದ ಚುನಾವಣೆಯ ಮತಯುದ್ಧ ಮುಗಿದಿದೆ. ಇನ್ನೇನಿದ್ದರೂ ವಿಜಯ ಸಾಧಿಸಿದವರು ಯಾರು ಎಂಬ ಫಲಿತಾಂಶವಷ್ಟೇ ಬಾಕಿ ಇದೆ. ಪ್ರಮುಖ ಮೂರು ಪಕ್ಷಗಳು, ಪಕ್ಷೇತರರು ಸೇರಿದಂತೆ ಏಳು ಅಭ್ಯರ್ಥಿಗಳು ಕಣದಲ್ಲಿದ್ದರೂ ಬಿಜೆಪಿ-ಕಾಂಗ್ರೆಸ್‌ ನಡುವಿನ ಸಮರ ಪ್ರಮುಖವಾಗಿದ್ದು, ಇದರಲ್ಲಿ ಗೆಲುವು ಯಾರದು ಎಂಬ ನಿರೀಕ್ಷೆ ಹೆಚ್ಚಿದೆ.

Advertisement

ಪಶ್ಚಿಮ ಶಿಕ್ಷಕರ ಕ್ಷೇತ್ರದ ಈ ಬಾರಿಯ ಚುನಾವಣೆ ಕೆಲವೊಂದು ವಿಶೇಷಗಳಿಗೆ ವೇದಿಕೆಯಾಗಲಿದ್ದು, ದಾಖಲೆ ಬರೆಯುವ ಚುನಾವಣೆಯಾಗಿದೆ. ಇಡೀ ಚುನಾವಣೆ ಪ್ರಕ್ರಿಯೆಯ ವಿದ್ಯಮಾನ ಗಮನಿಸಿದರೆ ಪಕ್ಷಗಳ ಕುರಿತ ಟೀಕೆಗಳಿಗಿಂತ ವ್ಯಕ್ತಿ ಕೇಂದ್ರಿಕೃತವಾಗಿ ಟೀಕೆ-ಆರೋಪಗಳು ಕೇಳಿ ಬಂದವು. ಕಾಂಗ್ರೆಸ್‌, ಜೆಡಿಎಸ್‌ ಹಾಗೂ ಪಕ್ಷೇತರ ಅಭ್ಯರ್ಥಿಗಳು, ಪಕ್ಷಗಳ ನಾಯಕರು ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ ಅವರನ್ನೇ ಕೇಂದ್ರವಾಗಿಸಿಕೊಂಡು ಆರೋಪಗಳ ಸುರಿಮಳೆಗೆ, ಇದಕ್ಕೆ ಪ್ರತಿಯಾಗಿ ಹೊರಟ್ಟಿ ಹಾಗೂ ಬಿಜೆಪಿ ನಾಯಕರು ಉತ್ತರ ನೀಡಿಕೆಗೆ ಚುನಾವಣೆ ವೇದಿಕೆಯಾಗಿತ್ತು.

ಯಾರಿಗೆ ವಿಜಯಮಾಲೆ: 1980ರಿಂದ 2022ರವರೆಗೆ ಅಂದರೆ ಸುಮಾರು 42 ವರ್ಷಗಳ ಕಾಲ ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಬಸವರಾಜ ಹೊರಟ್ಟಿ ಅವರು ಅಧಿಪತ್ಯ ಸಾಧಿಸಿದ್ದಾರೆ. ಮುಂದೆಯೂ ಅವರ ಅಧಿಪತ್ಯ ಮುಂದುವರಿಯುವುದೇ ಎಂಬ ಕುತೂಹಲ, ನಿರೀಕ್ಷೆ ಅನೇಕರದ್ದಾಗಿದೆ. ಮತ್ತೂಂದು ಕಡೆ ಕ್ಷೇತ್ರದಲ್ಲಿ ಹೊರಟ್ಟಿ ಅವರ ಅಧಿಪತ್ಯ ಕೊನೆಗಾಣಿಸಬೇಕೆಂಬ ನಿಟ್ಟಿನಲ್ಲಿ ಕಾಂಗ್ರೆಸ್‌ ತನ್ನದೇ ಯತ್ನದಲ್ಲಿ ತೊಡಗಿದ್ದು, ಜೆಡಿಎಸ್‌ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಲಿಕ್ಕಿಲ್ಲ ಎಂಬ ಕೆಲ ಅಭಿಪ್ರಾಯಗಳನ್ನು ಹುಸಿಯಾಗಿಸಿ ಜೆಡಿಎಸ್‌ ಹೊರಟ್ಟಿ ಅವರೊಂದಿಗೆ ಹಲವಾರು ವರ್ಷಗಳ ಒಡನಾಟ ಹೊಂದಿದ ವ್ಯಕ್ತಿಯನ್ನೇ ಅಭ್ಯರ್ಥಿಯನ್ನಾಗಿಸಿತು. ಪಕ್ಷೇತರ ಅಭ್ಯರ್ಥಿಯೊಬ್ಬರಿಗೆ ಆಮ್‌ಆದ್ಮಿ ಪಕ್ಷ ಬೆಂಬಲ ಸೂಚಿಸಿತ್ತು.

ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಗೆಲುವು ಸಾಧಿಸಲೇಬೇಕೆಂಬ ಉದ್ದೇಶದೊಂದಿಗೆ ಏಳು ಬಾರಿ ಸತತ ಗೆಲುವು ಕಂಡ ಬಸವರಾಜ ಹೊರಟ್ಟಿ ಅವರನ್ನು ಜೆಡಿಎಸ್‌ನಿಂದ ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿರುವ ಬಿಜೆಪಿ, ಕ್ಷೇತ್ರದಲ್ಲಿ ಮೊದಲ ಗೆಲುವಿನ ನಗೆ ಬೀರುವ ಕಾತುರದಲ್ಲಿದೆ. 1980ರಲ್ಲಿ ಪಕ್ಷೇತರ ಸದಸ್ಯರಾಗಿ ಪರಿಷತ್ತು ಪ್ರವೇಶಿಸಿದರೂ 1986ರಿಂದ 2016ರವರೆಗೆ ಜನತಾ ಪರಿವಾರದಿಂದ ಅದರಲ್ಲೂ ಸತತ ಮೂರು ಬಾರಿ ಜೆಡಿಎಸ್‌ನಿಂದ ವಿಧಾನ ಪರಿಷತ್ತು ಪ್ರವೇಶಿಸಿದ್ದ ಬಸವರಾಜ ಹೊರಟ್ಟಿಯವರು, ರಾಜಕೀಯ ಜೀವನದಲ್ಲೇ ಮೊದಲ ಬಾರಿಗೆ ಜನತಾ ಪರಿವಾರದ ನಂಟು ಕಳಚಿಕೊಂಡು ಬಿಜೆಪಿ ಸೇರಿದ್ದು, ಪಕ್ಷ ಬದಲಿಸಿದರೂ ಗೆಲುವು ಸಾಧ್ಯ ಎಂಬುದನ್ನು ಸಾಬೀತುಪಡಿಸುವ ಅನಿವಾರ್ಯತೆಯಲ್ಲಿದ್ದಾರೆ.

ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಗೆಲುವು ಸಾಧಿಸುವ ಉದ್ದೇಶದೊಂದಿಗೆ ಸಾಕಷ್ಟು ಮೊದಲೇ ತನ್ನ ಅಭ್ಯರ್ಥಿಯನ್ನು ಘೋಷಣೆ ಮಾಡಿದ್ದ ಕಾಂಗ್ರೆಸ್‌, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಾಜಿ ರಾಜ್ಯಾಧ್ಯಕ್ಷ ಬಸವರಾಜ ಗುರಿಕಾರ ಅವರ ಬಗ್ಗೆ ಸಾಕಷ್ಟು ಪ್ರಚಾರ, ಶಿಕ್ಷಕರನ್ನು ಸೆಳೆಯಲು ತನ್ನದೇ ಕಸರತ್ತು ಮಾಡಿದೆ. ಶಿಕ್ಷಕರು ಎಷ್ಟರ ಮಟ್ಟಿಗೆ ಸ್ಪಂದಿಸುತ್ತಾರೆ ಎಂಬುದು ಕಾದು ನೋಡಬೇಕಾಗಿದೆ. ಬಸವರಾಜ ಹೊರಟ್ಟಿ ಅವರ ಆಪ್ತ ಸಹಾಯಕರಾಗಿ, ಶಿಕ್ಷಕರಾಗಿ ಹೊರಟ್ಟಿಯವರ ಒಡನಾಡಿಗಳಲ್ಲಿ ಒಬ್ಬರಾಗಿದ್ದ ಶ್ರೀಶೈಲ ಗಡದಿನ್ನಿ ಅವರನ್ನು ಜೆಡಿಎಸ್‌ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದ್ದು, ಶಿಕ್ಷಕರು ಬದಲಾವಣೆ ಬಯಸಿದ್ದಾರೆ ಎಂಬುದು ಜೆಡಿಎಸ್‌ ಅಭ್ಯರ್ಥಿ ಪ್ರಚಾರದ ಪ್ರಮುಖ ವಿಷಯವಾಗಿಸಿಕೊಂಡು ಯತ್ನಿಸಿದ್ದು, ಅದೃಷ್ಟ ಏನಾಗಲಿದೆ ಎಂಬುದನ್ನು ಈಗಾಗಲೇ ಶಿಕ್ಷಕರು ನಿರ್ಧರಿಸಿಯಾಗಿದೆ. ಉಳಿದ ಪಕ್ಷೇತರರಲ್ಲಿ ಆಮ್‌ಆದ್ಮಿ ಪಕ್ಷ ಬೆಂಬಲಿತ ವೆಂಕನಗೌಡ ಅವರು ಒಂದಿಷ್ಟು ಪ್ರಚಾರ ನಡೆಸಿದ್ದು ಬಿಟ್ಟರೆ ಬೇರೆ ಯಾವ ಪಕ್ಷೇತರ ಅಭ್ಯರ್ಥಿಗಳು ಅಷ್ಟೊಂದು ಕಾಣಿಸಿಕೊಳ್ಳಲಿಲ್ಲ.

Advertisement

ಅತ್ಯುತ್ತಮ ಮತದಾನ: ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಈ ಬಾರಿ ಅತ್ಯುತ್ತಮ ಮತದಾನ ಪ್ರಮಾಣ ದಾಖಲಾಗಿದೆ. ಬೆಳಗ್ಗೆಯಿಂದಲೇ ಮತಕೇಂದ್ರಗಳಲ್ಲಿ ಶಿಕ್ಷಕರು ಅತ್ಯುತ್ಸಾಹದಿಂದಲೇ ಮತದಾನದಲ್ಲಿ ಪಾಲ್ಗೊಂಡಿದ್ದರು. ಧಾರವಾಡ ಜಿಲ್ಲೆಯಲ್ಲಿ ಸುಮಾರು ಶೇ.85.69 ಮತದಾನವಾಗಿದ್ದು, ಶಿಕ್ಷಕರ ಉತ್ಸಾಹದ ಪ್ರತೀಕವಾಗಿದೆ. 2016ರಲ್ಲಿ ನಡೆದ ಚುನಾವಣೆಯಲ್ಲಿ ಶೇ.66.72 ಮತದಾನವಾಗಿತ್ತು. ಹಿಂದಿನ ಚುನಾವಣೆಗೆ ಹೋಲಿಸಿದರೆ ಈ ಬಾರಿ ಶೇ.18.97ರಿಂದ ಶೇ.20 ಹೆಚ್ಚಿನ ಮತದಾನ ಆಗಿರುವುದು ಒಳ್ಳೆಯ ಬೆಳವಣಿಗೆ ಎನ್ನಬಹುದಾಗಿದೆ.

ಮತದಾನ ಸಂದರ್ಭದಲ್ಲಿ ಆಯಾ ಅಭ್ಯರ್ಥಿಗಳು ಮತ ಚೀಟಿಗಳನ್ನು ನೀಡಲು ಮತಕೇಂದ್ರಗಳ ಬಳಿ ಟೆಂಟ್‌ ಗಳನ್ನು ಹಾಕಿಕೊಂಡಿದ್ದರು. ಕೆಲವೊಂದು ಟೆಂಟ್‌ಗಳಲ್ಲಿ ಆಯಾ ಪಕ್ಷಗಳ ಕಾರ್ಯಕರ್ತರ ಸಂಖ್ಯೆಯೇ ಅಧಿಕವಾಗಿ ಕಂಡು, ಶಿಕ್ಷಕರ ಸಂಖ್ಯೆ ಕಡಿಮೆ ಇದ್ದದ್ದು ಕಂಡು ಬಂದಿತು. ಇನ್ನು ಕೆಲ ಟೆಂಟ್‌ಗಳಲ್ಲಿ ಶಿಕ್ಷಕರ ಸಂಖ್ಯೆ ಹೆಚ್ಚಳ ಜತೆಗೆ, ಪಕ್ಷದ ಕಾರ್ಯಕರ್ತರ ಪಡೆಯೂ ಹೆಚ್ಚಿನ ರೀತಿಯಲ್ಲಿತ್ತು. ಮತ್ತಷ್ಟು ಟೆಂಟ್‌ಗಳಲ್ಲಿ ಶಿಕ್ಷಕರ- ಕಾರ್ಯಕರ್ತರ ಸಂಖ್ಯೆಯ ಕೊರತೆ ಎದ್ದು ಕಾಣುತ್ತಿತ್ತು. ಹಲವು ಪಕ್ಷೇತರರ ಟೆಂಟ್‌ ಗಳೇ ಅನೇಕ ಕಡೆ ಕಾಣಿಸಲಿಲ್ಲ.

ಒಟ್ಟಿನಲ್ಲಿ ಪಶ್ಚಿಮ ಶಿಕ್ಷಕರ ಕ್ಷೇತ್ರದ ಚುನಾವಣಾ ಸಮರ-ಮತಯುದ್ಧ ಮುಗಿದಿದೆ. ಅಭ್ಯರ್ಥಿಗಳ ರಾಜಕೀಯ ಭವಿಷ್ಯಕ್ಕೆ ಶಿಕ್ಷಕ ಮತದಾರರು ಮುದ್ರೆಯೊತ್ತಿಯಾಗಿದೆ. ವಿಜಯದ ಮಾಲೆ ಯಾರ ಕೊರಳಿಗೆ ಎಂಬ ಪ್ರಶ್ನೆಗೆ ಬುಧವಾರ ಉತ್ತರ ದೊರೆಯಲಿದೆ. ಗಿನ್ನಿಸ್‌ ದಾಖಲೆಯೋ, ದಾಖಲೆಯನ್ನು ಮುರಿಯುವ ದಾಖಲೆಯೋ ಎಂಬ ಕುತೂಹಲ ಇದ್ದೇ ಇದೆ.

„ಅಮರೇಗೌಡ ಗೋನವಾರ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next