Advertisement

ಹುಯಿಲೆಬ್ಬಿಸಿದ್ರು ನಡೆಯಲಿಲ್ಲ: ಶಹಾಪುರ

02:41 PM Mar 28, 2022 | Team Udayavani |

ಬಾಗಲಕೋಟೆ: ಮುಂಬರುವ ವಾಯವ್ಯ ಶಿಕ್ಷಕರ ಮತಕ್ಷೇತ್ರದಿಂದ ವಿಧಾನ ಪರಿಷತ್‌ಗೆ ನಡೆಯುವ ಚುನಾವಣೆಗೆ ಪಕ್ಷ ನನ್ನನ್ನು ಮತ್ತೂಮ್ಮೆ ಅಭ್ಯರ್ಥಿ ಎಂದು ಘೋಷಿಸಿದೆ. ಟಿಕೆಟ್‌ ಬೇಡಿಕೆ ಇಟ್ಟವರು ಕೆಲವೊಂದು ಹುಯಿಲೆಬ್ಬಿಸುವ ಪ್ರಯತ್ನ ಮಾಡಿದರು. ಅದು ನಡೆಯಲಿಲ್ಲ. ಅವರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆ ಎದುರಿಸುವೆ ಎಂದು ವಿಧಾನಪರಿಷತ್‌ ಸದಸ್ಯ ಅರುಣ ಶಹಾಪುರ ಹೇಳಿದರು.

Advertisement

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಕಳೆದ ಎರಡು ಅವಧಿಗೆ ಒಟ್ಟು 12 ವರ್ಷ, ವಾಯವ್ಯ ಶಿಕ್ಷಕರ ಮತಕ್ಷೇತ್ರದಿಂದ ಗೆದ್ದು ಶಿಕ್ಷಕರ ಪರವಾಗಿ ಕೆಲಸ ಮಾಡಿದ್ದೇನೆ. ಶಿಕ್ಷಣ ಕ್ಷೇತ್ರದಲ್ಲಿ ಹಲವು ಬದಲಾವಣೆ ತರಲು ಮುಂಚೂಣಿಯಲ್ಲಿದ್ದು ಕೆಲಸ ಮಾಡಿದ್ದೇನೆ. ನಮ್ಮವರೇ ಕೆಲವರು ಟಿಕೆಟ್‌ಗಾಗಿ ಬೇಡಿಕೆ ಇಟ್ಟಿದ್ದರು. ಆಗ ಸ್ವಾಭಾವಿಕವಾಗಿ ಕೆಲವು ಹುಯಿಲೆಬ್ಬಿಸುವ ಪ್ರಯತ್ನ ನಡೆಯುತ್ತವೆ. ಎರಡೂ ಅವಧಿಗೆ ವಿಜಯಪುರದ ವ್ಯಕ್ತಿಗೆ ಅವಕಾಶ ದೊರೆತಿದೆ ಎಂಬ ಹುಯಿಲೆಬ್ಬಿಸುವ ಪ್ರಯತ್ನ ನಡೆಯಲಿಲ್ಲ. ಪಕ್ಷ ನನ್ನ ಕ್ರಿಯಾಶೀಲತೆ, ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ತರಲು ನಡೆಸಿದ ಪ್ರಯತ್ನ ಗುರುತಿಸಿ ಮತ್ತೆ ಟಿಕೆಟ್‌ ಘೋಷಿಸಿದೆ ಎಂದರು.

ಒಂದೇ ಜಿಲ್ಲೆಗೆ ಸಿಮೀತವಾಗಿಲ್ಲ: ನಾನು ಕೇವಲ ವಿಜಯಪುರ ಜಿಲ್ಲೆಗೆ ಸಿಮೀತವಾಗಿಲ್ಲ. ವಿಜಯಪುರ, ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಯಲ್ಲೂ ಸಾಕಷ್ಟು ಪ್ರವಾಸ ಮಾಡಿ, ಶಿಕ್ಷಕರು, ಉಪನ್ಯಾಸಕರ ಪರವಾಗಿ ಹಲವು ಕೆಲಸ ಮಾಡಿದ್ದೇನೆ. ನಾನಂದುಕೊಂಡಂತೆ ಕೆಲವು ಕೆಲಸ ಮಾಡಲಾಗದಿದ್ದರೂ ಶಿಕ್ಷಕರು, ಶಿಕ್ಷಣ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆಗೆ ಸರ್ಕಾರ ಹೊರ ತಂದ ರಾಷ್ಟ್ರೀಯ ಶಿಕ್ಷಣ ನೀತಿ ರಚಿಸುವ ಪ್ರಕ್ರಿಯೆಯಲ್ಲಿ ಮುಂಚೂಣಿಯಲ್ಲಿದ್ದು ಕೆಲಸ ಮಾಡಿದ್ದೇನೆ. ಇದರಿಂದ ಸಾಕಷ್ಟು ಅನುಭವ ಕೂಡ ಪಡೆದಿದ್ದೇನೆ. ಒಂದೇ ಜಿಲ್ಲೆಗೆ ಸೀಮಿತಗೊಂಡಿದ್ದೇನೆ ಎಂಬುದು ಅಪ್ಪಟ ಸುಳ್ಳು. ಬಾಗಲಕೋಟೆ ಜಿಲ್ಲೆಗೆ ನಾನು ಎಷ್ಟು ಬಾರಿ ಬಂದಿದ್ದೇನೆ ಎಂಬುದನ್ನು ಇಲ್ಲಿಯ ಶಿಕ್ಷಕರು, ಸಂಘಟನೆಗಳು ಹಾಗೂ ಮಾಧ್ಯಮದವರು ಕಣ್ಣಾರೆ ಕಂಡಿದ್ದಾರೆ ಎಂದು ತಿಳಿಸಿದರು.

ರಾಜ್ಯಾದ್ಯಂತ ಮಾ. 28ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯಲಿದ್ದು, 15,387 ಶಾಲೆಗಳ, 8.73 ಲಕ್ಷ ವಿದ್ಯಾರ್ಥಿಗಳು, 3444 ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲಿದ್ದಾರೆ. ಪ್ರತಿಯೊಬ್ಬ ಮಕ್ಕಳೂ ಯಶಸ್ವಿಯಾಗಲೆಂದು ಹಾರೈಸುವೆ. ಪರೀಕ್ಷೆ ಹೀಗೆಯೇ ನಡೆಸಬೇಕೆಂದು ಸರ್ಕಾರ, ಎಸ್‌ಓಪಿ ನೀಡಿದೆ. ಅದೇ ಪ್ರಕಾರ ಪರೀಕ್ಷೆ ನಡೆಸಲು ಎಲ್ಲ ಸಿದ್ಧತೆ ಮಾಡಲಾಗಿದೆ. ಪರೀಕ್ಷೆ ಕೇಂದ್ರಗಳನ್ನು ಸಾನಿಟೈಜೇಶನ್‌ ಮಾಡಲಾಗಿದೆ ಎಂದರು.

ಮಕ್ಕಳಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಎಂಬುದು ಮುಖ್ಯ ಘಟ್ಟ. ಪಾಲಕರಿಗೂ ಈ ಕುರಿತು ವಿಶೇಷ ಕುತೂಹಲ ಇರುತ್ತದೆ. ಹೀಗಾಗಿ ಹಿಜಾಬ್‌ ವಿಷಯದಲ್ಲಿ ಯಾವುದೇ ಪ್ರತಿಷ್ಠೆ ಮಾಡಿಕೊಳ್ಳದೇ ಹೈಕೋರ್ಟ್‌ ನಿರ್ದೇಶನ ಮತ್ತು ಸರ್ಕಾರದ ನಿಯಮಗಳ ಪ್ರಕಾರವೇ ಎಲ್ಲರೂ ಪರೀಕ್ಷೆಗೆ ಹಾಜರಾಗಬೇಕು ಎಂದು ಹೇಳಿದರು.

Advertisement

 

ವಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು ಎಂಬಂತೆ ಕೆಲವರು ಆರೋಪ ಮಾಡುತ್ತಾರೆ. ವಾಯವ್ಯ ಶಿಕ್ಷಕರ ಮತಕ್ಷೇತ್ರದಿಂದ ವಿಧಾನಪರಿಷತ್‌ಗೆ ನಡೆಯುವ ಚುನಾವಣೆಗೆ ಬಿಜೆಪಿಯಿಂದ ನನ್ನನ್ನು ಮತ್ತೂಮ್ಮೆ ಅಭ್ಯರ್ಥಿ ಎಂದು ಘೋಷಿಸಲಾಗಿದೆ. ನಾನು 12 ವರ್ಷ ಈ ಕ್ಷೇತ್ರ ಪ್ರತಿನಿಧಿಸಿ, ಅತ್ಯುತ್ತಮ ಅನುಭವ ಪಡೆದಿದ್ದು, ಕ್ರಿಯಾಶೀಲವಾಗಿ ಕೆಲಸ ಮಾಡಿದ ತೃಪ್ತಿ ಇದೆ. ಮುಂಬರುವ ಚುನಾವಣೆಯಲ್ಲಿ ಸಂಘಟನಾತ್ಮಕವಾಗಿ ನಾಲ್ಕು ಜಿಲ್ಲೆ, 33 ವಿಧಾನಸಭೆ ಮತಕ್ಷೇತ್ರ ವ್ಯಾಪ್ತಿಯ ಪ್ರತಿಯೊಬ್ಬರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆ ಎದುರಿಸುವೆ. ಮತ್ತೆ ಗೆಲ್ಲುವ ಸಂಪೂರ್ಣ ವಿಶ್ವಾಸವಿದೆ.

-ಅರುಣ ಶಹಾಪುರ, ವಿಧಾನ ಪರಿಷತ್‌ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next