Advertisement

ರಾಜಧಾನಿಯಲ್ಲಿ ಪ್ರಭುತ್ವ ಸಾಧಿಸಲು ಕೈ-ಕಮಲ ಫೈಟ್‌

12:07 AM May 21, 2022 | Team Udayavani |

ಬೆಂಗಳೂರು : ಮುಂಬರುವ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆ ದೃಷ್ಟಿಯಿಂದ ಮಹತ್ವ ಎನಿಸಿರುವ ರಾಜಧಾನಿ ಬೆಂಗಳೂರಿನಲ್ಲಿ ಪ್ರಭುತ್ವ ಸ್ಥಾಪಿಸಲು ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಅಷ್ಟೇ ಅಲ್ಲದೆ, ಆಮ್‌ ಆದ್ಮಿ ಪಾರ್ಟಿ ಸಹಿತ ಒಂದು ಕೈ ನೋಡಲು ಅಖಾಡಕ್ಕೆ ಇಳಿದಿದೆ.

Advertisement

150 ಟಾರ್ಗೆಟ್‌ ಹೊಂದಿರುವ ಬಿಜೆಪಿ ಹಾಗೂ ಕಾಂಗ್ರೆಸ್‌ಗೂ 123 ಗುರಿಯತ್ತ ಹೊರಟಿರುವ ಜೆಡಿಎಸ್‌ಗೂ ಬೆಂಗಳೂರು, ಬೆಳಗಾವಿ, ಮಂಗಳೂರು, ಮೈಸೂರು ಸಹಜವಾಗಿ ರಾಜಕೀಯ ಪಕ್ಷಗಳಿಗೆ “ಹಾಟ್‌ ಸ್ಪಾಟ್‌’ ಆ ಪೈಕಿ ರಾಜಧಾನಿ ಬೆಂಗಳೂರು ಅಧಿಕಾರದ ಕೇಂದ್ರಬಿಂದು.

ಹೀಗಾಗಿ ಇಡೀ ರಾಜ್ಯದ ರಾಜಕೀಯ ಚಿತ್ರಣ ಒಂದು ಕಡೆಯಾದರೆ ಬೆಂಗಳೂರಿನ ರಾಜಕೀಯ ಒಂದು ಕಡೆ. ಏಕೆಂದರೆ ಇದು ಮಿನಿ ಕರ್ನಾಟಕ ಇದ್ದಂತೆ. ಹೀಗಾಗಿ ಇಲ್ಲಿ ಅಧಿಕಾರ ಹಿಡಿದರೆ ರಾಜ್ಯದ ಅಧಿಕಾರ ಹಿಡಿಯಲು ರಹದಾರಿ ಎಂಬಂತಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರಕಾರ ಕೆಡವಲು ಬಿಜೆಪಿಗೆ ಧೈರ್ಯ ಕೊಟ್ಟದ್ದೇ ಬೆಂಗಳೂರು. ಆಪರೇಷನ್‌ ಕಮಲ ಕಾರ್ಯಾಚರಣೆಯಡಿ ಕಾಂಗ್ರೆಸ್‌- ಜೆಡಿಎಸ್‌ನ ಐವರು ಮಾತೃ ಪಕ್ಷಕ್ಕೆ ಕೈ ಕೊಟ್ಟಿದ್ದರಿಂದ ರಾಜಕಾರಣದ ದಿಕ್ಕು ಬದಲಾಗುವಂತಾಯಿತು.

ಇದೀಗ ಮುಂದಿನ ವಿಧಾನಸಭೆ ಚುನಾವಣೆಗೆ ರಾಜಧಾನಿ ಸಜ್ಜಾಗುತ್ತಿದೆ. ಅದರ ನಡುವೆ ಬಿಬಿಎಂಪಿ ಚುನಾವಣೆಯ “ಗುಮ್ಮ’ ಕಾಡುತ್ತಿದೆ. ಹೀಗಾಗಿ ವಿಧಾನಸಭೆ ಚುನಾವಣೆಯತ್ತ ದೃಷ್ಟಿ ನೆಟ್ಟು ಪಕ್ಷಾಂತರದ ಆಲೋಚನೆಯಲ್ಲಿದ್ದವರಿಗೆ “ಬ್ರೇಕ್‌’ ಬಿದ್ದಂತಾಗಿದೆ.

ಬೆಂಗಳೂರು 28 ವಿಧಾನಸಭೆ ಕ್ಷೇತ್ರ ಹಾಗೂ 4 ಲೋಕಸಭೆ ಕ್ಷೇತ್ರ ಒಳಗೊಂಡ ದೊಡ್ಡ ಪ್ರದೇಶ. ಇಲ್ಲಿ ಪ್ರಭುತ್ವ ಸಾಧಿಸಲು ಆಡಳಿತಾರೂಢ ಬಿಜೆಪಿ ಹಾಗೂ ವಿಪಕ್ಷ ಕಾಂಗ್ರೆಸ್‌ ನೇರ ಹಣಾಹಣಿಯಲ್ಲಿದೆ. ಇದರ ಜತೆಗೆ ಜೆಡಿಎಸ್‌ ಉರುಳಿಸುವ ದಾಳದ ಬಗ್ಗೆ ಎರಡೂ ಪಕ್ಷಗಳಿಗೂ ಆತಂಕವಿದೆ. ಇತ್ತೀಚೆಗೆ ಆಮ್‌ ಆದ್ಮಿ ಪಾರ್ಟಿ ರಂಗಪ್ರವೇಶದಿಂದ ಬಿಜೆಪಿ ಚಿಂತೆಗೀಡಾಗಿದೆ.

Advertisement

ಪ್ರಸ್ತುತ 28 ಕ್ಷೇತ್ರಗಳ ಪೈಕಿ ಬಿಜೆಪಿ-15, ಕಾಂಗ್ರೆಸ್‌-12 ಜೆಡಿಎಸ್‌-1 ಶಾಸಕರನ್ನು ಹೊಂದಿದೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಬಲ 15, ಬಿಜೆಪಿ-11 ಹಾಗೂ ಜೆಡಿಎಸ್‌ನ ಬಲ 2 ಇತ್ತು.

ಮುಂದಿನ ಚುನಾವಣೆಯಲ್ಲಿ ಬೆಂಗಳೂರಿನಲ್ಲಿ 20 ಸ್ಥಾನ ಗೆಲ್ಲುವುದು ಬಿಜೆಪಿ ಹಾಗೂ ಕಾಂಗ್ರೆಸ್‌ನ ಗುರಿಯಾದರೆ ಕನಿಷ್ಠ 5 ಸ್ಥಾನ ಗೆಲ್ಲುವುದು ಜೆಡಿಎಸ್‌ಗೆ ಪ್ರತಿಷ್ಠೆಯಾಗಿದೆ. ಒಂದು ಕಾಲದಲ್ಲಿ ನಗರದಲ್ಲಿ ಜನತಾದಳ ಪ್ರಾಬಲ್ಯ ಸಾಧಿಸಿದ್ದು ಇದೆ. ಮರಳಿ ಹಿಡಿತ ಸಾಧಿಸಲು ಜೆಡಿಎಸ್‌ ಹರಸಾಹಸ ಮಾಡುತ್ತಿದೆ. ಅದಕ್ಕಾಗಿ ಈಗಿನಿಂದಲೇ ಕಾರ್ಯತಂತ್ರಗಳೂ ನಡೆಯುತ್ತಿವೆ.
ಚಿತ್ರಣ ಬದಲು: ಕಾಂಗ್ರೆಸ್‌ನಿಂದ ಗೆದ್ದಿದ್ದ ಎಸ್‌.ಟಿ. ಸೋಮಶೇಖರ್‌, ಬೈರತಿ ಬಸವರಾಜ್‌, ಮುನಿರತ್ನ ಹಾಗೂ ಜೆಡಿಎಸ್‌ನ ಗೋಪಾಲಯ್ಯ ಬಿಜೆಪಿಗೆ ಸೇರಿದ್ದರಿಂದ ಬಿಜೆಪಿ ಬಲ 15ಕ್ಕೆ ಏರಿಕೆಯಾಯಿತು. ಆ ಮೂಲಕ ರಾಜಧಾನಿ ಬೆಂಗಳೂರಿನಲ್ಲಿ ಬಿಜೆಪಿ ಬಲ ಹೆಚ್ಚಿಸಿದ್ದು ಪೂರ್ವಾಶ್ರಮದ ಕಾಂಗ್ರೆಸ್‌-ಜೆಡಿಎಸ್‌ನವರೇ.

ಎಸ್‌ಬಿಎಂ ಎಂದೇ ಖ್ಯಾತಿ ಹೊಂದಿದ್ದ ಕಾಂಗ್ರೆಸ್‌ನ ಮೂವರ ಜತೆ ಗೋಪಾಲಯ್ಯ ಜೆಡಿಎಸ್‌ನಿಂದ ಬಿಜೆಪಿಗೆ ಬಂದಿದ್ದರಿಂದ ರಾಜಧಾನಿಯಲ್ಲಿ ಶಕ್ತಿಶಾಲಿಯಾಗಿದೆ. ನಾಲ್ವರ ಸೇರ್ಪಡೆ ಬೆಂಗಳೂರಿನ ರಾಜಕೀಯ ಚಿತ್ರಣವನ್ನೇ ಬದಲಿಸಿದೆ. ಈ ಮೊದಲು ಜಮೀರ್‌ ಅಹ್ಮದ್‌ ಜೆಡಿಎಸ್‌ ನಲ್ಲಿದ್ದಾಗ ನಗರದಲ್ಲಿ ಮೂವರು ಶಾಸಕರು ಜೆಡಿಎಸ್‌ನಿಂದ ಗೆದ್ದಿದ್ದರು. ಕಳೆದ ಚುನಾವಣೆಗೆ ಮುನ್ನವೇ ಜಮೀರ್‌ ಅಹ್ಮದ್‌, ಅಖಂಡ ಶ್ರೀನಿವಾಸಮೂರ್ತಿ ಕಾಂಗ್ರೆಸ್‌ ಸೇರಿದರೆ, ಚುನಾವಣೆ ಅನಂತರ ಗೋಪಾಲಯ್ಯ ಬಿಜೆಪಿ ಸೇರಿದರು. ಹೀಗಾಗಿ ಜೆಡಿಎಸ್‌ ಸಂಖ್ಯಾಬಲ ಒಂದಕ್ಕೆ ಕುಸಿದಿದೆ.

ಇಷ್ಟರ ನಡುವೆಯೂ ಬಿಜೆಪಿ ರಾಜಧಾನಿಯಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಶಾಸಕರಿಗೆ ಗಾಳ ಹಾಕಿದೆ. ಆದರೆ, ಸದ್ಯಕ್ಕೆ ಆ ರೀತಿಯ ಲಕ್ಷಣ ಕಂಡು ಬರುತ್ತಿಲ್ಲವಾದರೂ ಚುನಾವಣೆ ಸಮೀಪಿಸಿದಾಗ ಯಾರ ನಿಲುವು ಏನಿರುತ್ತೋ ಎಂಬಂತಾಗಿದೆ. ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ.ಸುರೇಶ್‌, ಬೆಂಗಳೂರು ಕೇಂದ್ರ ಸಂಸದ ಪಿ.ಸಿ.ಮೋಹನ್‌ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸ ಲಿ ದ್ದಾರೆ. ರಾಜ್ಯಸಭೆ ಸದಸ್ಯರಾಗಿ ನಿವೃತ್ತಿಯಾಗಿ ಪುನರಾಯ್ಕೆ ಬಯಸಿರುವ ಕೆ.ಸಿ.ರಾಮಮೂರ್ತಿ ಅವರನ್ನು ಬೆಂಗಳೂರು ಉತ್ತರ ಲೋಕಸಭೆ ಕ್ಷೇತ್ರದಿಂದ ಕಣಕ್ಕಿಳಿಸಲಾಗುವುದು. ಸರ್ವಜ್ಞ ಕ್ಷೇತ್ರದ ಮಾಜಿ ಸಚಿವ ಕೆ.ಜೆ.ಜಾರ್ಜ್‌ ಲೋಕಸಭೆಗೆ ಸ್ಪರ್ಧಿಸಿ ಪುತ್ರ ರಾಣಾ ಜಾರ್ಜ್‌ರನ್ನು ವಿಧಾನಸಭೆ ಚುನಾವಣೆ ಕಣಕ್ಕಿಳಿಸಲಾಗುವುದು ಎಂಬೆಲ್ಲ ಮಾತುಗಳು ಕೇಳಿಬರುತ್ತಿವೆ.

ಕಾಂಗ್ರೆಸ್‌ -ಬಿಜೆಪಿಯದ್ದೇ ಸಾಮ್ರಾಜ್ಯ
ರಾಜಧಾನಿ ಬೆಂಗಳೂರಿನ ರಾಜಕಾರಣ “ಹಿಡಿತ’ ಬಿಜೆಪಿಯಲ್ಲಿ ಆರ್‌.ಅಶೋಕ್‌, ಕಾಂಗ್ರೆಸ್‌ನಲ್ಲಿ ರಾಮಲಿಂಗಾರೆಡ್ಡಿ ನಡುವೆಯೇ ಎಂಬ ಮಾತಿತ್ತು. ಆದರೆ ಇದೀಗ ರಾಜಧಾನಿಯಲ್ಲಿ ಪ್ರಭುತ್ವ ಸಾಧಿಸಲು ಬಿಜೆಪಿಯಿಂದ ಡಾ| ಸಿ.ಎನ್‌.ಅಶ್ವತ್ಥನಾರಾಯಣ, ವಿ.ಸೋಮಣ್ಣ ಅವರಿಂದಲೂ ಪ್ರಯತ್ನ ನಡೆದೇ ಇದೆ. ಕಾಂಗ್ರೆಸ್‌ನಲ್ಲಿ ಜಮೀರ್‌ ಅಹ್ಮದ್‌, ಎಂ.ಕೃಷ್ಣಪ್ಪ, ಎನ್‌.ಎ.ಹ್ಯಾರೀಸ್‌, ಕೃಷ್ಣಬೈರೇಗೌಡರು ಹಿರಿಯ ಶಾಸಕರ ಸಾಲಿಗೆ ಸೇರಿದ್ದು ಅವಕಾಶ ಸಿಕ್ಕಾಗಲೆಲ್ಲ ತಮ್ಮ ಛಾಪು ಮೂಡಿಸಲು ಯತ್ನಿಸುತ್ತಿರುತ್ತಾರೆ. ಸದ್ಯದ ಮಟ್ಟಿಗೆ ಬೆಂಗಳೂರಿನಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿಯದ್ದೇ ಸಾಮ್ರಾಜ್ಯ ಎಂಬಂತಾಗಿದೆ.

– ಎಸ್‌.ಲಕ್ಷ್ಮೀನಾರಾಯಣ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next