Advertisement

Vidhan Sabha ಚುನಾವಣೆಯ ಟ್ಯಾಕ್ಸಿ ಚಾಲಕರ ಬಾಡಿಗೆಯೇ ಇನ್ನೂ ಪಾವತಿಯಾಗಿಲ್ಲ !

09:49 AM Mar 20, 2024 | Team Udayavani |

ಮಂಗಳೂರು: ವಿಧಾನಸಭಾ ಚುನಾವಣೆ ಮುಗಿದು 10 ತಿಂಗಳು ಕಳೆದರೂ ಅಂದು ಚುನಾವಣಾಧಿಕಾರಿಗಳು ಓಡಾಟಕ್ಕೆ ಬಳಸಿದ ಟ್ಯಾಕ್ಸಿಗಳಿಗೆ ಇನ್ನೂ ಬಾಡಿಗೆಯನ್ನು ಚುನಾವಣಾ ಆಯೋಗವಾಗಲೀ, ಜಿಲ್ಲಾಡಳಿತ ವಾಗಲೀ, ಸಂಬಂಧಿತ ಸರಕಾರಿ ಇಲಾಖೆಯಾಗಲೀ ಪಾವತಿಸಿಲ್ಲ. ಆದರೆ ಮತ್ತೂಂದು ಚುನಾವಣೆ ಬಂದಿದೆ !

Advertisement

ಚುನಾವಣೆ ಕಾರ್ಯಕ್ಕೆ ಆಯೋಗ, ಜಿಲ್ಲಾಡಳಿತವು ಸ್ಥಳೀಯ ಖಾಸಗಿ ಟ್ಯಾಕ್ಸಿಗಳನ್ನು ಪ್ರತಿ ವರ್ಷವೂ ಬಳಸಿಕೊಳ್ಳುತ್ತದೆ. ಆದರೆ ಸಕಾಲದಲ್ಲಿ ಬಾಡಿಗೆ ಪಾವತಿಸುವುದೇ ಇಲ್ಲ. ಗ್ರಾಮೀಣ ಭಾಗಕ್ಕೆ ಬಳಕೆಯಾಗಿರುವ ವಾಹನಗಳ ಮಾಲಿಕರಿಗೆ ಈ ಸಮಸ್ಯೆ ಇನ್ನೂ ಅಧಿಕ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ವಿಧಾನಸಭಾ ಚುನಾವಣೆ ಸಂದರ್ಭ ಬಳಸಲಾದ ಟ್ಯಾಕ್ಸಿಗಳ ಪೈಕಿ ಶೇ. 40 ರಷ್ಟು ವಾಹನಗಳ ಮಾಲಕರಿಗೆ ಇನ್ನೂ ಬಾಡಿಗೆ ಪಾವತಿಯಾಗಿಲ್ಲ.

ಚುನಾವಣೆ ಮುಗಿದು 10 ತಿಂಗಳಾದರೂ ಹಣಕ್ಕಾಗಿ ಚಾಲಕರು ಆರ್‌ಟಿಒ, ಜಿಲ್ಲಾಧಿಕಾರಿ, ಪೊಲೀಸ್‌ ಆಯುಕ್ತರ ಕಚೇರಿ ಎಂದೆಲ್ಲ ಅಲೆದಾಡಬೇಕು ಎಂಬುದು ಚಾಲಕರ ದೂರು.

ಬಲವಂತವಾಗಿ ಬಳಕೆ

ಚುನಾವಣೆ ಘೋಷಣೆಯಾದ ಬಳಿಕ ವಿವಿಧ ಭಾಗದಿಂದ ಅಧಿಕಾರಿಗಳು ಆಗಮಿಸುತ್ತಾರೆ. ಜಿಲ್ಲಾಡಳಿತ ಟ್ಯಾಕ್ಸಿಗಳನ್ನು ಬಲವಂತವಾಗಿ ಪಡೆಯುತ್ತಾರೆ.ವಾಹನದಲ್ಲಿ ಪ್ರಯಾಣಿಕರಿದ್ದಲ್ಲಿ ಅರ್ಧದಲ್ಲೇ ಇಳಿಸಬೇಕಾದ ಅನಿವಾರ್ಯವೂ ಇದೆ. ಕರ್ತವ್ಯದ ನೆಪದಲ್ಲಿ ನಮ್ಮ ವಾಹನಗಳನ್ನು ದುರ್ಬಳಕೆ ಮಾಡಿಕೊಂಡು ಪ್ರವಾಸಕ್ಕೆ ತೆರಳುವ ಅಧಿಕಾರಿಗಳೂ ಇದ್ದಾರೆ. ಇಂತಹ ಸಂದರ್ಭದಲ್ಲಿ ಏನು ಮಾಡಬೇಕೆಂದು ಅರ್ಥವಾಗುತ್ತಿಲ್ಲ ಎನ್ನುತ್ತಾರೆ ಅಸಹಾಯಕ ಚಾಲಕರು.

Advertisement

ಕೂಡಲೇ ಪಾವತಿಸಿ

ಹಾಗಾಗಿ ಮೊದಲೇ ಲಿಖೀತವಾಗಿ ವ್ಯವಹಾರ ನಡೆಸಿ ಚುನಾವಣೆಯ ಬಳಿಕ 24 ಗಂಟೆಯೊಳಗೆ ಹಣ ಪಾವತಿಸಿದಲ್ಲಿ ಪ್ರಯೋಜನವಾಗಲಿದೆ. ಇದರೊಂದಿಗೆ ಬಾಕಿ ಮೊತ್ತವನ್ನು ಕೂಡಲೇ ಪಾವತಿಸಬೇಕು ಎಂದು ಆಗ್ರಹಿಸಿದ್ದಾರೆ ಟ್ಯಾಕ್ಸಿ ಚಾಲಕರು.

12 ಗಂಟೆ ದುಡಿದರೂ ಅರ್ಧ ದಿನ !

ಚುನಾವಣೆ ಕರ್ತವ್ಯಕ್ಕೆ ಅಧಿಕಾರಿಗಳನ್ನು ಕರೆದೊಯ್ಯುವ ಟ್ಯಾಕ್ಸಿ ಚಾಲಕರಿಗೆ ಯಾವುದೇ ವ್ಯವಸ್ಥೆ ಇರುವುದಿಲ್ಲ. ರಸ್ತೆ ಬದಿ ವಾಹನ ನಿಲ್ಲಿಸಿ ಅಲ್ಲೇ ವಿಶ್ರಾಂತಿ ಪಡೆಯಬೇಕು. ಯಾವುದೇ ಆಹಾರ ಪೂರೈಕೆಯೂ ಇರದು. 12 ಗಂಟೆ ದುಡಿದರೆ ಅರ್ಧ ದಿನವೆಂದು ಪರಿಗಣಿಸುತ್ತಾರೆ. 24 ಗಂಟೆ ದುಡಿದರೆ ಮಾತ್ರವೇ ಪೂರ್ತಿ ದಿನವೆಂದು ಪರಿಗಣಿಸುತ್ತಾರೆ. ಇದು ಯಾವ ನ್ಯಾಯ? ಎಂಬುದು ಚಾಲಕರ ಪ್ರಶ್ನೆ

ಚುನಾವಣೆ ಸಂದರ್ಭ ನಾವು ಸಂಪೂರ್ಣ ಸಹಕಾರ ನೀಡುತ್ತೇವೆ. ಇಲಾಖೆ ತಿಳಿಸಿದಲ್ಲಿಗೆ ತೆರಳುತ್ತೇವೆ. ಆದರೆ ನಮಗೆ ಪಾರದರ್ಶಕವಾದ ವ್ಯವಸ್ಥೆಯಾಗಬೇಕು. ಆಯಾ ಜಿಲ್ಲಾಧಿಕಾರಿಗಳು ಇದರ ಮುತುವರ್ಜಿ ವಹಿಸಿ ಸೂಕ್ತ ಬಾಡಿಗೆ ಹಣ ಪಾವತಿಸಬೇಕು. -ರಾಧಾಕೃಷ್ಣ ಹೊಳ್ಳ, ರಾಜ್ಯಾಧ್ಯಕ್ಷರು, ಕರ್ನಾಟಕ ರಾಜ್ಯ ಟ್ರಾವೆಲ್ಸ್‌ ಮಾಲಕರ ಸಂಘ

ಕಳೆದ ಚುನಾವಣೆಯದ್ದೇ ಟ್ಯಾಕ್ಸಿ ಬಿಲ್‌ ಬಾಕಿ

ಉಡುಪಿ: ಜಿಲ್ಲೆಯಲ್ಲೂ ಈ ವ್ಯವಸ್ಥೆ ಬದಲಿಲ್ಲ. ಕಳೆದ ವಿಧಾನಸಭಾ ಚುನಾವಣೆ ವೇಳೆ ಚುನಾವಣಾ ಆಯೋಗವು ಸಾಕಷ್ಟು ಸಂಖ್ಯೆಯಲ್ಲಿ ವಾಹನಗಳನ್ನು ಪಡೆದಿತ್ತು. ಈ ಪೈಕಿ ಕೆಲವರಿಗೆ ಅರ್ಧ ಬಿಲ್‌ ಪಾವತಿಯಾಗಿದ್ದರೆ, ಉಳಿದವರಿಗೆ ಚಿಕ್ಕಾಸೂ ಪಾವತಿಯಾಗಿಲ್ಲ. ಮೊದಲ ಹಂತದಲ್ಲಿ ವಿವಿಧ ಇಲಾಖೆಗಳಿಂದ 180 ಸರಕಾರಿ ವಾಹನಗಳನ್ನು ಪಡೆದು ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡ ಅಧಿಕಾರಿ, ಸಿಬಂದಿಗೆ ನೀಡಲಾಗುತ್ತಿದೆ. ಬಳಿಕ ಸರಕಾರಿ ಇಲಾಖೆಯಲ್ಲಿರುವ ಹೊರ ಗುತ್ತಿಗೆ ವಾಹನಗಳು ಮತ್ತು ಖಾಸಗಿ ಟ್ಯಾಕ್ಸಿ ಮಾಲಕರಿಂದ ವಾಹನಗಳನ್ನು ಪಡೆಯಲಾಗುತ್ತದೆ ಎನ್ನುತ್ತವೆ ಮೂಲಗಳು. ಚುನಾವಣೆ ಕರ್ತವ್ಯ ಮಾಡುವುದು ನಮಗೆ ಹೆಮ್ಮೆಯ ವಿಷಯ. ಆದರೆ ನಮ್ಮ ಬೇಡಿಕೆಗಳಿಗೆ ಆಯೋಗ ಮತ್ತು ಜಿಲ್ಲಾಡಳಿತ ಸ್ಪಂದಿಸಬೇಕು. ಜಿಲ್ಲಾ ಚುನಾವಣಾಧಿ ಕಾರಿಯೂ ಆಗಿರುವ ಡಿಸಿ ಅವರಿಗೆ ತಮ್ಮ ಬೇಡಿಕೆ ಈಡೇರಿಸುವಂತೆ ಕೋರುತ್ತೇವೆ. ಟ್ಯಾಕ್ಸಿಗೆ ನ್ಯಾಯಯುತ ದರ ರೂಪಿಸಿ ಬಿಲ್‌ ಪಾವತಿಸಬೇಕು. ಚಾಲಕರನ್ನು 24 ಗಂಟೆ ದುಡಿಸಿಕೊಳ್ಳುವುದನ್ನು 12 ಗಂಟೆಗೆ ಇಳಿಸಬೇಕು. ವಾರ ಮತ್ತು 15 ದಿನಕ್ಕೆ ಬಿಲ್‌ಪಾವತಿ ಮಾಡಬೇಕು, ಚುನಾವಣೆ ಕರ್ತವ್ಯದ ಎಲ್ಲ ಬಿಲ್‌ ಮೊತ್ತ ಜಿಲ್ಲಾಧಿಕಾರಿ ಕಚೇರಿಯಿಂದಲೇ ಆಗಬೇಕು ಎಂದು ಮನವಿ ಸಲ್ಲಿಸುವುದಾಗಿ ಉಡುಪಿ ಜಿಲ್ಲಾ ಟ್ಯಾಕ್ಸಿಮೆನ್‌ ಅಸೋಸಿಯೇಶನ್‌ ಪ್ರ. ಕಾರ್ಯದರ್ಶಿ ರಮೇಶ್‌ ಕೋಟ್ಯಾನ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next