Advertisement

ರಾಜ್ಯ ಬಿಜೆಪಿಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ ವಿಡಿಯೋ

11:29 PM Nov 04, 2019 | Lakshmi GovindaRaju |

ಬೆಂಗಳೂರು: ಸಿಎಂ ಯಡಿಯೂರಪ್ಪ ಮಾತನಾಡಿದ್ದು ಎಂದು ಹೇಳಲಾದ ವಿಡಿಯೋ ಬಹಿರಂಗ ರಾಜ್ಯ ಬಿಜೆಪಿಯಲ್ಲಿ ಅಲ್ಲೋಲ-ಕಲ್ಲೋಲ ಸೃಷ್ಟಿಸಿದೆ. ಪಕ್ಷದ ಆಂತರಿಕ ಸಭೆಯಲ್ಲಿ ನಡೆದ ಮಾತುಕತೆಯನ್ನು ವಿಡಿಯೋ ಮಾಡಿದ್ದು ಯಾರು? ಸಭೆಯಲ್ಲಿದ್ದವರೇ ಮಾಡಿರುವುದರಿಂದ ಅವರ ಉದ್ದೇಶವಾದರೂ ಏನು? ಯಾಕಾಗಿ ಈ ರೀತಿ ಮಾಡಿದ್ದಾರೆಂಬ ಪ್ರಶ್ನೆಗಳು ಮೂಡಿವೆ.

Advertisement

ಅಂದಿನ ಸಭೆಯಲ್ಲಿದ್ದ ನಾಯಕರು ಅದರಲ್ಲೂ ಉತ್ತರ ಕರ್ನಾಟಕದ ನಾಯಕರೇ ವಿಡಿಯೋ ಮಾಡಿ ಬಹಿರಂಗಗೊಳಿಸಿರಬಹುದು ಎಂಬ ಅನುಮಾನವೂ ಇದ್ದು, ಬಿಎಸ್‌ವೈ ವಿರುದ್ಧವೇ ಪಕ್ಷದಲ್ಲೇ ಸಂಚು ರೂಪಿಸಿದ್ದಾರಾ ಎಂಬ ಮಾತುಗಳು ಕೇಳಿಬರುತ್ತಿವೆ.

ಈ ವಿಚಾರದಲ್ಲಿ ರಾಜ್ಯ ಬಿಜೆಪಿ ನಾಯಕರು ಯಡಿಯೂರಪ್ಪ ಪರ ನಿಂತಿದ್ದು ರಾಜ್ಯಾಧ್ಯಕ್ಷರು ಹಾಗೂ ಸಚಿವರು ಅವರ ಪರ ಬ್ಯಾಟಿಂಗ್‌ ನಡೆಸಿದ್ದರೆ, ಇನ್ನೂ ಕೆಲ ಪಕ್ಷದ ನಿಷ್ಠಾವಂತ ಮುಖಂಡರು ಪ್ರಕರಣದಲ್ಲಿ ತಟಸ್ಥ ನಿಲುವು ತಾಳಿದ್ದಾರೆ. ಅನರ್ಹ ಶಾಸಕರು ಪಕ್ಷಕ್ಕೆ ಬರುವುದರಿಂದ ಬಿಜೆಪಿಗೆ ನಷ್ಟವಾಗಬಹುದು ಎಂದು ಈ ರೀತಿಯ ನಿರ್ಧಾರ ತೆಗೆದುಕೊಂಡಿದ್ದಾರೆ.

ಲೆಕ್ಕಾಚಾರ: ಈ ಮಧ್ಯೆ, ಸ್ವೀಕರ್‌ ಆದೇಶ ಪ್ರಶ್ನಿಸಿ ಅನರ್ಹಗೊಂಡಿರುವ ಶಾಸಕರು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಅರ್ಜಿ ಸಂಬಂಧ ಅಂತಿಮ ಆದೇಶವು ಈ ತಿಂಗಳಲ್ಲೇ ಬರಲಿದೆ. ಅನರ್ಹ ಶಾಸಕರ ಪರ ತೀರ್ಪು ಬಂದಲ್ಲಿ ಬಿಜೆಪಿಯಿಂದ ಏನು ಮಾಡಬೇಕು ಮತ್ತು ಅನರ್ಹರಿಗೆ ವಿರುದ್ಧವಾಗಿ ತೀರ್ಪು ಬಂದರೆ ಯಾವ ರೀತಿ ಅವರಿಂದ ಅಂತರ ಕಾಯ್ದುಕೊಳ್ಳ ಬೇಕು ಎಂಬುದರ ಲೆಕ್ಕಾಚಾರಗಳು ಬಿಜೆಪಿ ವರಿಷ್ಠರ ವಲಯದಲ್ಲಿ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ.

ಈ ಪ್ರಕರಣದಲ್ಲಿ ಯಡಿಯೂರಪ್ಪ ಅವರನ್ನು ಇಕ್ಕಟ್ಟಿನಲ್ಲಿ ಸಿಲುಕಿಸಲು ಕಾಂಗ್ರೆಸ್‌ ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದೆ. ಬಿಜೆಪಿ ಪಾಳಯದಲ್ಲಿ ಇದಕ್ಕೆ ಬೇಕಾದ ಪ್ರತಿ ತಂತ್ರವನ್ನು ಹೂಡಲಾಗುತ್ತಿದೆ. ಸುಪ್ರೀಂಕೋರ್ಟ್‌ ಆದೇಶದ ನಂತರ ಬೆಳವಣಿಗೆಗಳ ಬಗ್ಗೆಯೂ ಬಿಜೆಪಿಯಲ್ಲಿಗ ಗಂಭೀರ ಚರ್ಚೆ ಆರಂಭವಾಗಿದೆ.

Advertisement

ಅನರ್ಹ ಶಾಸಕರಿಗೆ ಬಿಜೆಪಿಯಿಂದ ಟಿಕೆಟ್‌ ನೀಡುವುದು ಬಹುತೇಕ ಖಚಿತ ಎಂದು ಬಿಜೆಪಿಯ ಮೂಲಗಳೇ ಹೇಳುತ್ತಿವೆ. ಆದರೆ, ಸುಪ್ರೀಂ ತೀರ್ಪು ಅನರ್ಹ ಶಾಸಕರಿಗೆ ವಿರುದ್ಧವಾಗಿ ಬಂದು, ಚುನಾವಣೆಯಲ್ಲಿ ನಿಲ್ಲಲು ಅವಕಾಶ ನೀಡದೇ ಇದ್ದರೆ ಬಿಜೆಪಿ ತಟಸ್ಥ ನಿಲುವು ಹೊಂದುವ ಸಾಧ್ಯತೆಯೂ ಇದೆ ಎಂದು ಹೇಳಲಾಗುತ್ತಿದೆ.

ಯಡಿಯೂರಪ್ಪ ಅವರು ಅನರ್ಹ ಶಾಸಕರಿಗೆ ಬಹಿರಂಗವಾಗಿ ಯಾವುದೇ ಆಶ್ವಾಸನೆ ನೀಡದೇ ಇದ್ದರೂ, ಮಾತುಕತೆ ಸಂದರ್ಭದಲ್ಲಿ ಕೆಲವೊಂದು ಭರವಸೆ ನೀಡಿದ್ದಾರೆ ಎಂಬುದು ಬಿಜೆಪಿಯ ಹಿರಿಯ ನಾಯಕರಿಗೂ ತಿಳಿದಿದೆ. ಪಕ್ಷದ ವರಿಷ್ಠರನ್ನು ಕಡೆಗಣಿಸಿ ಅನರ್ಹ ಶಾಸಕರಿಗೆ ನೀಡಿರುವ ಭರವಸೆಯನ್ನು ಯಾವುದೇ ಕಾರಣಕ್ಕೂ ಈಡೇರಿಸಲು ಆಗದಂತೆ ಪಕ್ಷದಲ್ಲಿ ಕೆಲವರು ತಂತ್ರ ರೂಪಿಸಿದ್ದಾರೆಂದು ಹೇಳಲಾಗುತ್ತಿದೆ.

ಅನರ್ಹ ಶಾಸಕರ ಪರ ಸುಪ್ರೀಂಕೋರ್ಟ್‌ ತೀರ್ಪು ನೀಡಿದಲ್ಲಿ, ಅವರಿಗೆ ಬಿಜೆಪಿಯಿಂದಲೇ ಟಿಕೆಟ್‌ ನೀಡಬೇಕೇ ಅಥವಾ ಅನರ್ಹ ಶಾಸಕರ ನಿಲುವು ಏನು ಎಂಬುದನ್ನು ಪರಿಗಣಿಸಿ ಬಿಜೆಪಿ ವರಿಷ್ಠರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ.
-ಎನ್‌.ರವಿಕುಮಾರ್‌, ರಾಜ್ಯ ಪ್ರಧಾನ ಕಾರ್ಯದರ್ಶಿ ಬಿಜೆಪಿ

Advertisement

Udayavani is now on Telegram. Click here to join our channel and stay updated with the latest news.

Next