ಶ್ರೀನಗರ: ಚಾಲಕನಿಲ್ಲದೆ ರೈಲೊಂದು 84 ಕಿ.ಮೀ ದೂರ ಕ್ರಮಿಸಿರುವ ಘಟನೆ ಭಾನುವಾರ (ಫೆ.25 ರಂದು) ನಡೆದಿದೆ.
ಜಮ್ಮು ಮತ್ತು ಕಾಶ್ಮೀರದ ಕಥುವಾ ನಿಲ್ದಾಣದಲ್ಲಿ ನಿಂತಿದ್ದ ಸರಕು ಸಾಗಣೆ ರೈಲನ್ನು ಸಿಬ್ಬಂದಿ ಬದಲಾವಣೆಗಾಗಿ ಚಾಲಕ ಮತ್ತು ಸಹ ಚಾಲಕರು ನಿಲ್ಲಿಸಿದ್ದಾರೆ. ಈ ವೇಳೆ ರೈಲಿನ ಇಂಜಿನ್ ಆನ್ ಆಗಿದ್ದ ಕಾರಣ ಹಾಗೂ ಇಳಿಜಾರಿನ ಮಾರ್ಗವಿದ್ದ ಪರಿಣಾಮ ರೈಲು ಚಲಿಸಿದೆ. ಚಾಲಕ ಕೆಳಗಿಳಿಯುವ ಮೊದಲು ಹ್ಯಾಂಡ್‌ಬ್ರೇಕ್ ನ್ನು ಎಳೆಯಲು ಮರೆತಿದ್ದಾನೆ ಈ ಕಾರಣದಿಂದ ರೈಲು ಮುಂದಕ್ಕೆ ಸಾಗಿದೆ.
ಚಾಲಕನಿಲ್ಲದೆ ರೈಲು 84 ಕಿ.ಮೀ ದೂರ ಕ್ರಮಿಸಿದೆ. ಹೀಗೆ ಸಾಗಿದ ರೈಲನ್ನು ಪಂಜಾಬ್‌ನ ಮುಕೇರಿಯನ್ ಜಿಲ್ಲೆಯಲ್ಲಿ ನಿಲ್ಲಿಸಲಾಗಿದೆ. ಗೂಡ್ಸ್ ರೈಲು ರೈಲ್ವೇ ನಿರ್ಮಾಣಕ್ಕೆ ಸರಕುಗಳನ್ನು ಸಾಗಿಸುತ್ತಿತ್ತು ಎಂದು ರೈಲ್ವೇ ಮೂಲಗಳು ತಿಳಿಸಿವೆ.
ರೈಲನ್ನು ನಿಲ್ಲಿಸಲು ಅಧಿಕಾರಿಗಳು ನಡೆಸಿದ ಬಹು ಪ್ರಯತ್ನಗಳು ವಿಫಲವಾದವು, ಅಂತಿಮವಾಗಿ ಪ್ರಯಾಣಿಕರ ರೈಲುಗಳ ಚಾಲಕರು ಮತ್ತು ಸಿಬ್ಬಂದಿಗಳ ಸಹಾಯದಿಂದ ದಸುಹಾ ಬಳಿಯ ಉಂಚಿ ಬಸ್ಸಿ ಪ್ರದೇಶದಲ್ಲಿ ನಿಲ್ಲಿಸಲು ಸಾಧ್ಯವಾಯಿತು ಎಂದು ಮೂಲಗಳು ಹೇಳಿರುವುದಾಗಿ ವರದಿ ತಿಳಿಸಿದೆ.
ಅದೃಷ್ಟವಶಾತ್ ಯಾವುದೇ ಇತರ ರೈಲು ವಿರುದ್ಧ ದಿಕ್ಕಿನಿಂದ ಅದರ ಹಳಿಯಲ್ಲಿ ಇರಲಿಲ್ಲ, ಇದರಿಂದಾಗಿ ದೊಡ್ಡ ಅಪಘಾತ ತಪ್ಪಿದಂತಾಯಿತು.
ಸದ್ಯ ಘಟನೆಯಲ್ಲಿ ಯಾವುದೇ ಹಾನಿ ಅಥವಾ ಗಾಯಗಳ ಬಗ್ಗೆ ವರದಿಯಾಗಿಲ್ಲ. ಘಟನೆ ಕುರಿತು ರೈಲ್ವೇ ಇಲಾಖೆ ತನಿಖೆಗೆ ಆದೇಶಿಸಿದೆ.