Advertisement

ಎಲ್ಲಾ ಕಾರಾಗೃಹಗಳಿಂದಲೂ ವಿಡಿಯೋ ಕಾನ್ಫರೆನ್ಸ್‌ 

11:40 AM Jun 24, 2017 | Team Udayavani |

ಮೈಸೂರು: ಮುಂದಿನ ವರ್ಷದಲ್ಲಿ ರಾಜ್ಯದ ಎಲ್ಲಾ ಕೇಂದ್ರ ಹಾಗೂ ಜಿಲ್ಲಾ ಕಾರಾಗೃಹಗಳಲ್ಲೂ ವಿಡಿಯೋ ಕಾನ್ಫರೆನ್ಸ್‌ ನಡೆಸಲಿದ್ದು, ಇದಕ್ಕಾಗಿ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ಕಾರಾಗೃಹ ಇಲಾಖೆಯ ಮಹಾನಿರ್ದೇಶಕ ಎಚ್‌.ಎಸ್‌.ಸತ್ಯನಾರಾಯಣ ರಾವ್‌ ಹೇಳಿದರು.

Advertisement

ನಗರದ ಕೇಂದ್ರ ಕವಾಯತು ಮೈದಾನದಲ್ಲಿ ಶುಕ್ರವಾರ ನಡೆದ 44ನೇ ತಂಡದ ವೀಕ್ಷಕ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ ಕಾರ್ಯಕ್ರಮದಲ್ಲಿ ಮಾತನಾಡಿ, ಇತ್ತೀಚೆಗೆ ರಾಜ್ಯ ಸರ್ಕಾರ ಕಾರಾಗೃಹ ಇಲಾಖೆಗೆ 1811 ಹೊಸ ಹುದ್ದೆಗಳನ್ನು ಮಂಜೂರು ಮಾಡಿದ್ದು, ಆ ಮೂಲಕ 1600-1700 ನಿರ್ವಹಣಾ ಸಿಬ್ಬಂದಿಯಿದ್ದ ಸಣ್ಣ ಇಲಾಖೆಗೆ ಹೊಸದಾಗಿ ಈ ಪ್ರಮಾಣದ ಸಿಬ್ಬಂದಿಯನ್ನು  ಮಂಜೂರು ಮಾಡಿರುವುದು ನಿಜಕ್ಕೂ ಒಳ್ಳೆಯ ಬೆಳವಣಿಗೆಯಾಗಿದೆ ಎಂದರು.

ಅಲ್ಲದೆ ಇಲಾಖೆಗೆ ಅಗತ್ಯವಿರುವ ಸೌಲಭ್ಯಗಳನ್ನು ಹಂತ ಹಂತವಾಗಿ ನೀಡಲಾಗುತ್ತಿದ್ದು, ಅದರಂತೆ ವಾಹನಗಳು, ಕಂಪ್ಯೂಟರ್‌ಗಳು, ವಿಡಿಯೋ ಕಾನ್ಫರೆನ್ಸ್‌ ನಡೆಸಲು ಬೇಕಾಗುವ ಉಪಕರಣಗಳು ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಇದರೊಂದಿಗೆ ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಕಾರಾಗೃಹಗಳಲ್ಲೂ ವಿಡಿಯೋ ಕಾನ್ಫರೆನ್ಸ್‌ ನಡೆಸಲಾಗುವುದು. ಇನ್ನೂ ಈಗಾಗಲೇ ರಾಜ್ಯದ ಎಲ್ಲಾ ಕೇಂದ್ರ ಕಾರಾಗೃಹಗಳಲ್ಲಿ ಸಿಸಿ ಟಿವಿ ವ್ಯವಸ್ಥೆಯಿದ್ದು, ಮುಂದೆ ರಾಜ್ಯದ ಉಪ ಕಾರಾಗೃಹಗಳಲ್ಲೂ ಸಹ ಸಿಸಿ ಟಿವಿ ಸೌಲಭ್ಯ ನೀಡಲಾಗುವುದು ಎಂದು ತಿಳಿಸಿದರು.

ಸೇವಾ ಮನೋಭಾವವಿರಲಿ: ಪೊಲೀಸ್‌ ಇಲಾಖೆಗೆ ಸೇರುವವರು ಕೇವಲ ಸಂಬಳಕ್ಕಾಗಿ ಕೆಲಸಕ್ಕೆ ಸೇರುವ ಮನಸ್ಥಿತಿ ಮೈಗೂಡಿಸಿಕೊಳ್ಳುವುದು ಸರಿಯಲ್ಲ. ಏಕೆಂದರೆ ಕಾರಾಗೃಹಕ್ಕೆ ಸಾಕಷ್ಟು ನೊಂದವರು ಬರಲಿದ್ದು, ಈ ಹಿನ್ನೆಲೆ ಇತ್ತೀಚಿನ ದಿನಗಳಲ್ಲಿ ಕಾರಾಗೃಹಗಳು ಕೇವಲ ಶಿಕ್ಷೆ ನೀಡುವ ಕೇಂದ್ರವಾಗಿರದೆ ಕೈದಿಗಳ ಪರಿವರ್ತನೆಯ ಕೇಂದ್ರವಾಗಿಯೂ ಸಹ ಬದಲಾಗಿದೆ. ಆ ಮೂಲಕ ಕೈದಿಗಳನ್ನು ಒಳ್ಳೆಯ ನಾಗರಿಕರನ್ನಾಗಿ ಮಾಡಿ, ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸ ಮಾಡಬೇಕಾದ ಕಾರಣದಿಂದ ಕಾರಾಗೃಹಕ್ಕೆ ಹೆಚ್ಚಿನ ಜವಾಬ್ದಾರಿ ಬಂದಿದೆ. ಆದ್ದರಿಂದ ಇಲಾಖೆಯ ಕೆಲಸಕ್ಕೆ ಸೇರುವ ಸಿಬ್ಬಂದಿ ವೇತನದ ಜತೆಗೆ ಸೇವಾ ಮನೋಬಾವದೊಂದಿಗೆ ಕರ್ತವ್ಯ ನಿರ್ವಹಿಸಬೇಕಿದೆ ಎಂದು ಸಲಹೆ ನೀಡಿದರು.

61 ಪ್ರಶಿಕ್ಷಣಾರ್ಥಿಗಳು: ಕಾರಾಗೃಹದ ಕವಾಯತು ಮೈದಾನದಲ್ಲಿ ನಡೆದ 44ನೇ ತಂಡದ ವೀಕ್ಷಕ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ 61 ಪ್ರಶಿಕ್ಷಣಾರ್ಥಿಗಳು ತರಬೇತಿ ಮುಗಿಸಿ ತಮ್ಮ ಕರ್ತವ್ಯಗಳಿಗೆ ನಿಯೋಜನೆಗೊಂಡರು. ನಿರ್ಗಮಿತ ಪ್ರಶಿಕ್ಷಣಾರ್ಥಿಗಳಲ್ಲಿ ಇಬ್ಬರು ಬಿ.ಇ, 5 ಮಂದಿ ಡಿಪ್ಲೊಮಾ, 6 ಮಂದಿ ಬಿಇಡಿ, 10 ಮಂದಿ ಡಿಇಡಿ ಹಾಗೂ 30 ಮಂದಿ ಪದವಿ ವಿದ್ಯಾಹರ್ತೆ ಹೊಂದಿದ್ದಾರೆ. ಈ ಪ್ರಶಿಕ್ಷಣಾರ್ಥಿಗಳಿಗೆ ಒಂಭತ್ತು ತಿಂಗಳ ತರಬೇತಿಂ‌ುಲ್ಲಿ ಒಳಾಂಗಣ, ಹೊರಾಂಗಣ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದ ತರಬೇತಿ ನೀಡಲಾಗಿದೆ.

Advertisement

ಸಮಾರಂಭದಲ್ಲಿ ಕಾರಾಗೃಹಗಳ ಹೆಚ್ಚುವರಿ ಮಹಾನಿರೀಕ್ಷಕ ಜಿ.ವೀರಭದ್ರಸ್ವಾಮಿ, ದಕ್ಷಿಣ ವಲಯ ಐಜಿಪಿ ವಿಪುಲ್‌ ಕುಮಾರ್‌, ನಗರ ಪೊಲೀಸ್‌ ಆಯುಕ್ತ ಡಾ.ಎ.ಸುಬ್ರಹ್ಮಣ್ಯೇಶ್ವರರಾವ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ ಸೇರಿದಂತೆ ಕಾರಾಗೃಹ ಹಾಗೂ ಪೊಲೀಸ್‌ ಇಲಾಖೆಯ ಹಲವು ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಜರಿದ್ದರು.

ಬಹುಮಾನ ವಿಜೇತರು: ವಿವಿಧ ವಿಭಾಗಗಳಲ್ಲಿ ಬಹುಮಾನ ಪಡೆದ ಪ್ರಶಿಕ್ಷಣಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಒಳಾಂಗಣ ವಿಭಾಗದಲ್ಲಿ ಹನುಮಪ್ಪ ಹಳ್ಳಿ(ಪ್ರಥಮ), ಕೆ.ಸಿ.ಸುರೇಶ್‌(ದ್ವಿತೀಯ). ಹೊರಾಂಗಣ ವಿಭಾಗದಲ್ಲಿ ರಮೇಶ್‌ ಕಲ್ಲಪ್ಪ(ಪ್ರ), ವೀರೇಶ್‌ ಹಂದ್ರಾಳು(ದ್ವಿ). ಫೈರಿಂಗ್‌ ವಿಭಾಗದಲ್ಲಿ ಮಹೇಶ್‌ ಗೌಡ(ಪ್ರ), ಕೆಂಪಣ್ಣ ಕೋಳಿ(ದ್ವಿ). ಉತ್ತಮ ಪ್ರಶಿಕ್ಷಣಾರ್ಥಿ ಪ್ರಶಸ್ತಿಯನ್ನು ಎಸ್‌.ದೊರೆನಾಯ್ಕ ಪಡೆದರೆ, ಡಿಜಿಪಿ ಮತ್ತು ಐಜಿಪಿ ಪ್ರಶಸ್ತಿಯನ್ನು ಗಂಗಾರಾಜು ತಮ್ಮದಾಗಿಸಿಕೊಂಡರು. ಇನ್ನೂ ತರಬೇತಿ ಅವಧಿಯ ಉತ್ತಮ ನಡತೆ ಮತ್ತು ಸರ್ವೋತ್ತಮ ಪ್ರಶಸ್ತಿಯನ್ನು ನಾಗರಾಜಗೌಡ ಪಡಿಗೌಡ ಪಾಟೀಲ ಪಡೆಯುವ ಮೂಲಕ ಎಲ್ಲರ ಮೆಚ್ಚುಗೆ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next