Advertisement

ವಿಡಿಯೋ ಪ್ರಕರಣ: ಶೀತಲ ಸಮರಕ್ಕೆ ಕಾರಣ

10:54 PM Nov 06, 2019 | Lakshmi GovindaRaju |

ಹುಬ್ಬಳ್ಳಿ: ಅನರ್ಹ ಶಾಸಕರ ಕುರಿತಾದ ಮುಖ್ಯ ಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಹೇಳಿಕೆಯ ವಿಡಿಯೋ, ರಾಜ್ಯ ಬಿಜೆಪಿಯಲ್ಲಿ ಬಣ ರಾಜಕೀಯದ ಮೇಲಾಟಕ್ಕೆ ಕಾರಣವಾಗಿದೆ. ಈ ವಿಡಿಯೋ ಮಾಡಿಸಿದ್ದು ಯಾರು? ಇದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟವರು ಯಾರು? ಎಂಬುದೂ ಶೀತಲ ಸಮರಕ್ಕೆ ಕಾರಣವಾಗಿದೆ. ಬಿಜೆಪಿ ಪ್ರಮುಖರ ಸಭೆಗೆ ಆಹ್ವಾನಿತರಿಗಷ್ಟೇ ಅವಕಾಶವಿತ್ತು.

Advertisement

ಸ್ವತ: ಬಿಜೆಪಿ ಕಾರ್ಯಕರ್ತರೇ ಪಕ್ಷ ನೀಡಿದ ಪಟ್ಟಿಯಲ್ಲಿ ಹೆಸರಿದ್ದವರನ್ನಷ್ಟೇ ಒಳಗೆ ಬಿಟ್ಟಿದ್ದರು. ಹೀಗಿರುವಾಗ ವಿಡಿಯೋ ಮಾಡಿದ್ದಾದರೂ ಯಾರು ಎಂಬ ಬಗ್ಗೆ ತನಿಖೆ ಚುರುಕಾಗಿದೆ.”ಕೈ ಮುಗಿಯುತ್ತೇನೆ, ಈ ವಿಷಯವನ್ನು ಈ ನಾಲ್ಕು ಗೋಡೆಗಳ ಮಧ್ಯೆಯೇ ಉಳಿಸಿ ಬಿಡಿ, ಹೊರಗೆ ಹೋಗಿ ಬಹಿರಂಗಪಡಿಸಬೇಡಿ’ ಎಂದು ಸಿಎಂ ಹೇಳಿದ ನಂತರವೂ ವಿಡಿಯೋ ಬಿಡುಗಡೆ ಮಾಡಿದ್ದನ್ನು ನೋಡಿದರೆ, ಉದ್ದೇಶ ಪೂರ್ವಕವಾಗಿ ಸಿಎಂಗೆ ಮುಜುಗರ ತರುವ ಉದ್ದೇಶ ಇರಬಹುದೆಂದು ಹೇಳಲಾಗುತ್ತಿದೆ.

ಮತ್ತೂಂದು ಸುತ್ತಿನ ವಿವಾದ ಸೃಷ್ಟಿ: ಇನ್ನೊಂದೆಡೆ, ಈ ವಿಡಿಯೋ, ಬಿಜೆಪಿ ಬಣ ರಾಜಕೀಯದಲ್ಲಿ ಮತ್ತೂಂದು ಸುತ್ತಿನ ವಿವಾದ ಸೃಷ್ಟಿಸುವಂತೆ ಮಾಡಿದೆ. ಸಭೆಯ ನಿರ್ವಹಣೆ, ಸಹಾಯ ಇನ್ನಿತರ ಕಾರ್ಯಗಳಿಗಾಗಿ ಸ್ಥಳೀಯ ಬಿಜೆಪಿಯಿಂದ ಸುಮಾರು 40ಕ್ಕೂ ಹೆಚ್ಚು ಪ್ರಮುಖ ಕಾರ್ಯಕರ್ತರನ್ನು ನಿಯೋಜಿಸಲಾಗಿತ್ತು. ಇದರಲ್ಲಿ ಕೆಲವರ ಹೆಸರು ಮಾತ್ರ ಹೇಳುತ್ತಿರುವುದು ಪಕ್ಷದಲ್ಲಿನ ಶೀತಲ ಸಮರಕ್ಕೆ ಸಾಕ್ಷಿ ಎಂಬುದು ಕೆಲವರ ಅನಿಸಿಕೆ.

ಬಿಜೆಪಿ ಹೈಕಮಾಂಡ್‌ ಈ ವಿಡಿಯೋ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಅದರ ಸೂಚನೆ ಮೇರೆಗೆ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಅವರು ಈಗಾಗಲೇ ಒಟ್ಟಾರೆ ಘಟನೆ ಕುರಿತು ಪಕ್ಷದ ಆಂತರಿಕ ತನಿಖೆ ಕೈಗೊಂಡು, ಮಾಹಿತಿ ಸಂಗ್ರಹಿಸಿ, ಅದನ್ನು ಹೈಕಮಾಂಡ್‌ಗೆ ರವಾನಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಘಟನೆಗೆ ಕಾರಣರಾದವರು ಯಾರೇ ಇದ್ದರೂ ಅವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಿ, ಪಕ್ಷದಿಂದ ಹೊರ ಹಾಕಿ ಎಂಬ ಕಠಿಣ ಸಂದೇಶವನ್ನು ಹೈಕಮಾಂಡ್‌ ನೀಡಿದೆ ಎಂದು ಹೇಳಲಾಗುತ್ತಿದೆ.

ಯಡಿಯೂರಪ್ಪ ವಿರುದ್ಧ ಯಾವ ಆಡಿಯೋ ಅಥವಾ ವಿಡಿಯೋ ಬಾಂಬ್‌ ಇಲ್ಲ. ಅದೆಲ್ಲಾ ಮುಗಿದ ಅಧ್ಯಾಯ.
-ಕೆ.ಎಸ್‌.ಈಶ್ವರಪ್ಪ, ಸಚಿವ

Advertisement

ಬಿಎಸ್‌ವೈ ವಿಡಿಯೋ ಪ್ರಕರಣ ಮುಗಿದ ಅಧ್ಯಾಯ
ಬಳ್ಳಾರಿ: ಸಿಎಂ ಯಡಿಯೂರಪ್ಪ ಅವರು ಮಾತನಾಡಿದ್ದಾರೆ ಎನ್ನಲಾದ ವಿಡಿಯೋ ವಿಚಾರ ಮುಗಿದ ಅಧ್ಯಾಯ. ಆಡಿಯೋವನ್ನು ಸುಪ್ರೀಂ ಕೋರ್ಟ್‌ ಒಂದು ರೀತಿಯಲ್ಲಿ ತಿರಸ್ಕರಿ ಸಿದ್ದು, ಈ ಬಗ್ಗೆ ಪ್ರತಿಕ್ರಿಯಿಸುವಂಥದ್ದು ಏನೂ ಇಲ್ಲ ಎಂದು ಮುಜರಾಯಿ, ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿಯಲ್ಲಿ ಯಾವುದೇ ಗೊಂದಲವಿಲ್ಲ. ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಟೀಕೆ ಮಾಡುವುದು ಸಹಜ. ಅವರ ಟೀಕೆಗಳಿಗೆ ಸೂಕ್ತ ಸಮಯದಲ್ಲಿ ಉತ್ತರ ನೀಡಲಾಗುವುದು. ಕಟೀಲ್‌ ಅವರು ಪಕ್ಷದ ಕೆಲಸ ಕಾರ್ಯಗಳನ್ನು ನೋಡಿಕೊಳ್ಳುತ್ತಾರೆ.

ಸಿಎಂ ಯಡಿಯೂರಪ್ಪ ನಮ್ಮೆಲ್ಲರಿಗೂ ಮಾರ್ಗದರ್ಶನ ಮಾಡಿ ಸರ್ಕಾರದ ವ್ಯವಸ್ಥೆಗಳನ್ನು ನೋಡಿಕೊಳ್ಳುತ್ತಾರೆ. ಎಲ್ಲರೂ ಒಟ್ಟಾಗಿದ್ದು, ಯಾವುದೇ ಗೊಂದಲಗಳಿಲ್ಲ. ಜನಪರ ಕಾರ್ಯ, ಬಡವರ ಕಲ್ಯಾಣ, ರಾಜ್ಯದ ಅಭಿವೃದ್ಧಿ ಕೆಲಸಗಳ ಕಡೆ ಗಮನ ಹರಿಸಲಾಗುವುದು. ಸಣ್ಣ ಪುಟ್ಟ ಸಮಸ್ಯೆ ಎದುರಾದರೂ ಎಲ್ಲರೂ ಒಟ್ಟಾಗಿ ಸೇರಿ ಬಗೆಹರಿಸಿಕೊಳ್ಳಲಾಗುವುದು ಎಂದರು.

ರಾಷ್ಟ್ರ ಹಾಗೂ ರಾಜ್ಯದಲ್ಲಿ ಅಧಿ ಕಾರ ನಡೆಸುತ್ತಿರುವ ಪಕ್ಷ ನಮ್ಮದು. ಹೀಗಾಗಿ, ಅನೇಕರಲ್ಲಿ ಅಪೇಕ್ಷೆ, ಬೇಡಿಕೆ, ಕೋರಿಕೆಗಳು ಇರುತ್ತವೆ. ಅಲ್ಪ-ಸ್ವಲ್ಪ, ಹೆಚ್ಚು-ಕಡಿಮೆ ಆಗಿರುತ್ತವೆ. ಪಕ್ಷದ ರಾಜ್ಯಾಧ್ಯಕ್ಷರು, ಜಿಲ್ಲಾಧ್ಯಕ್ಷರು ಒಟ್ಟಾಗಿ ಕೂತು ಎಲ್ಲ ಶಾಸಕರನ್ನು ಕರೆದು ಮಾತನಾಡಿಸಿ ಸರಿಪಡಿಸುತ್ತಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವುಗಳನ್ನು ಗೌರವಿಸಬೇಕು. ಅವುಗಳ ಬಗ್ಗೆ ನಿರ್ಣಯ ಕೈಗೊಳ್ಳುತ್ತೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next