ಮಂಗಳೂರು: ಕಸದ ಬುಟ್ಟಿ ಸೇರುವುದು ಕಾಂಗ್ರೆಸ್ ಅಲ್ಲ, ಬಿಜೆಪಿ. ಈಗ ವಿಜಯ ಸಂಕಲ್ಪ ಯಾತ್ರೆ ಮಾಡುತ್ತಿರುವವರು ಮುಂದೆ ತೀರ್ಥ ಯಾತ್ರೆ ಕೈಗೊಳ್ಳಬೇಕಾಗುತ್ತದೆ ಎಂದು ಕಾಂಗ್ರೆಸ್ ತಿರುಗೇಟು ನೀಡಿದೆ.
ಮಂಗಳೂರಿನ ಫಲಾನುಭವಿಗಳ ಸಮಾವೇಶದಲ್ಲಿ ಸಿಎಂ ಬೊಮ್ಮಾಯಿ ಹೇಳಿಕೆಗೆ ಪ್ರತಿಕ್ರಿಯಿಸಿ, ಇನ್ನೆರಡು ತಿಂಗಳಲ್ಲಿ ಬಿಜೆಪಿಯವರು ತೀರ್ಥ ಯಾತ್ರೆ ಕೈಗೊಳ್ಳುವ ಪರಿಸ್ಥಿತಿ ಬರಲಿದೆ ಎಂದು ಮಂಗಳೂರಿನಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಹೇಳಿದರು.
ಬಡವರು ಊಟ ಮಾಡುತ್ತಿದ್ದ ಇಂದಿರಾ ಕ್ಯಾಂಟೀನ್ ಬಂದ್ ಮಾಡಿದ್ದಾರೆ, ರೇಶನ್ ಅಕ್ಕಿ ಕಡಿತಗೊಳಿಸಿದ್ದಾರೆ, ಬಿಜೆಪಿಗೆ ಬಡವರ ಬಗ್ಗೆ ಕಾಳಜಿಯಿಲ್ಲ. ನಾವು ಬಡವರ ಪರ ವಾಗಿ ಗ್ಯಾರಂಟಿ ನೀಡುತ್ತೇವೆ. ಮಾ. 20ರಂದು ಬೆಳಗಾವಿಯ ಯುವ ಸಂಗಮ ಸಮಾವೇಶದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಯುವಕರಿಗೆ ಗ್ಯಾರಂಟಿ ಯೋಜನೆ ಯೊಂದನ್ನು ಘೋಷಿಸುವ ಸಾಧ್ಯತೆ ಇದೆ. ಬಿಜೆಪಿಯವರಿಗೆ ಸೋಲಿನ ಭೀತಿ ಎದುರಾಗಿದೆ ಎಂದರು.
ಅಧಿಕಾರಕ್ಕಾಗಿ ದೇವರನ್ನು ಬೀದಿಗೆ ತರುವ ಬಿಜೆಪಿ ನಾಯಕರು ಈಗ ಅಧಿಕಾರದ ಮದದಲ್ಲಿ ಬಾಯಿಗೆ ಬಂದಂತೆ ಹೇಳಿಕೆ ನೀಡುತ್ತಾರೆ. ತುಳುನಾಡಿನ ಆರಾಧ್ಯ ದೈವ ಗುಳಿಗನ ಬಗ್ಗೆ ಗೃಹಸಚಿವ ಆರಗ ಜ್ಞಾನೇಂದ್ರ ಹೀಯಾಳಿಸಿ ಮಾತನಾಡಿದ್ದಾರೆ, ಅವರು ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.
Related Articles
ಶ್ರೀರಾಮುಲು 50 ಕೋ.ರೂ. ಅಕ್ರಮ ಆರೋಪ
ಸರಕಾರಿ ಸ್ವಾಮ್ಯದ ಬಸ್ ಮಾರ್ಗ ಗಳಲ್ಲಿ 24 ಕಿ.ಮೀ. ತನಕ ಖಾಸಗಿ ಬಸ್‌ಗಳಿಗೆ ಪರವಾನಿಗೆ ಒದಗಿಸುವ ಮಸೂದೆಯೊಂದನ್ನು ಚುನಾವಣೆ ದಿನಾಂಕ ಘೋಷಣೆಗೆ ಮುನ್ನ ತರಾತುರಿಯಲ್ಲಿ ಜಾರಿಗೊಳಿಸಲು ಸಾರಿಗೆ ಸಚಿವ ಶ್ರೀರಾಮುಲು ಮುಂದಾಗಿದ್ದು, ಇದರ ಹಿಂದೆ 50 ಕೋ.ರೂ. ಅವ್ಯವಹಾರ ಕುದುರಿದೆ ಎನ್ನುವ ಆರೋಪ ಕೇಳಿ ಬಂದಿದೆ. ಈ ತೀರ್ಮಾನ ಆಘಾತಕಾರಿ, ಇದು ಕೆಎಸ್ಸಾರ್ಟಿಸಿಯನ್ನು ಮುಚ್ಚುವ ಹುನ್ನಾರ ಎಂದರು.
ಕಾಂಗ್ರೆಸ್‌ಗೆ ಎಸ್‌ಡಿಪಿಐ ಜತೆ ಒಪ್ಪಂದ ಮಾಡಿಕೊಂಡಿಲ್ಲ. ಈ ಬಗ್ಗೆ ಎಸ್‌ಡಿಪಿಐ ಮುಖಂಡರು ಮಾಡಿರುವ ಆರೋಪಕ್ಕೆ ಮಹತ್ವ ವಿಲ್ಲ. ಎಸ್‌ಡಿಪಿಐ ಮತ್ತು ಬಿಜೆಪಿ ಸಮಾ® ಮನಸ್ಕ ಪಕ್ಷಗಳು. ಒಪ್ಪಂದ ವಿರುವುದು ಆ ಎರಡು ಪಕ್ಷಗಳ ನಡುವೆ. ಉಳ್ಳಾಲದಲ್ಲಿ ಕಳೆದ ಚುನಾವಣೆಯೊಂದರ ಸಂದರ್ಭ ಏನು ನಡೆದಿದೆ ಎಂದು ಎಲ್ಲರಿಗೂ ಗೊತ್ತು. ಎಲ್ಲ 224 ವಿಧಾನಸಭಾ ಕ್ಷೇತ್ರಗಳಲ್ಲಿ ಎಸ್‌ಡಿಪಿಐ ಸ್ಪರ್ಧಿಸಿದರೂ ನಮಗೆ ತೊಂದರೆ ಇಲ್ಲ ಎಂದರು.
ಕಾಂಗ್ರೆಸ್ ಮುಖಂಡರಾದ ಸಂತೋಷ್ ಕುಮಾರ್ ಶೆಟ್ಟಿ, ಮಹಾಬಲ ಮಾರ್ಲ, ಪ್ರಕಾಶ್ ಸಾಲ್ಯಾನ್, ಮೊಹಮ್ಮದ್ ಕುಂಜತ್ತಬೈಲು, ಉದಯ ಆಚಾರ್, ಸಲೀಂ ಅಹಮ್ಮದ್ ಉಪಸ್ಥಿತರಿದ್ದರು.