Advertisement

ಉಡುಪಿ, ಮಂಗಳೂರಿನ 10 ಕ್ಷೇತ್ರಗಳಲ್ಲಿ ಗೆಲುವು: ಡಿ.ಕೆ. ಶಿವಕುಮಾರ್‌

10:46 PM Feb 11, 2023 | Team Udayavani |

ಬೆಂಗಳೂರು: ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ 10 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, ಬಿಜೆಪಿಯ ಆಂತರಿಕ ಸಮೀಕ್ಷೆಯಲ್ಲಿ ಕರಾವಳಿಯಲ್ಲಿ ಕಾಂಗ್ರೆಸ್‌ 4 ಕ್ಷೇತ್ರಗಳಲ್ಲಿ ಗೆಲ್ಲಲಿದೆ ಎಂಬ ವರದಿ ಇದೆ ಎಂದು ಹೇಳಲಾಗುತ್ತಿದೆ. ಅದು ತಪ್ಪು, ನಮ್ಮ ವರದಿಯಲ್ಲಿ 10 ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ ಎಂದು ಬಂದಿದೆ ಎಂದು ಹೇಳಿದರು.

ಕರಾವಳಿ ಭಾಗದಲ್ಲಿ ಕಾಂಗ್ರೆಸ್‌ ತನ್ನದೇ ಆದ ಕಾರ್ಯಕ್ರಮ ರೂಪಿಸಿ ಪಕ್ಷ ಸಂಘಟನೆ ಮಾಡಲಾಗುತ್ತಿದೆ. ಈ ಭಾಗದ ಹಿಂದುಳಿದ ವರ್ಗಗಳಾದ ಮೊಗವೀರರು, ಬಂಟರು, ಬಿಲ್ಲವರು, ಕುಲಾಲ ಸಮುದಾಯಗಳಿಗೆ ಪ್ರತ್ಯೇಕ ನಿಗಮ ಮಾಡಿ, ಈ ಭಾಗಕ್ಕೆ ಪ್ರತ್ಯೇಕ ಪ್ರಣಾಳಿಕೆ ಪ್ರಕಟ ಮಾಡಿ, ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಿ ಉದ್ಯೋಗ ಸೃಷ್ಟಿಗೆ ಉತ್ತೇಜನ ನೀಡಲಾಗುವುದು ಎಂದು ತಿಳಿಸಿದರು.

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಶುಕ್ರವಾರವೇ ಪುತ್ತೂರು ಪ್ರವಾಸ ಮಾಡಬೇಕಿತ್ತು. ಆದರೆ ಅಲ್ಲಿನ ರೋಡ್‌ ಶೋ ಕಾನೂನು ಸುವ್ಯವಸ್ಥೆ ಕಾರಣದಿಂದ ರದ್ದು ಮಾಡಲಾಗಿದೆ ಎಂದು ಬಿಜೆಪಿ ಅಧ್ಯಕ್ಷರು ಟ್ವೀಟ್‌ ಮಾಡಿದ್ದಾರೆ. ರಾಜ್ಯದಲ್ಲಿ ಕೇಂದ್ರ ಗೃಹ ಸಚಿವರಿಗೆ ಕಾನೂನು ರಕ್ಷಣೆ ಇಲ್ಲ ಎಂದರೆ ಜನ ಸಾಮಾನ್ಯರ ಪರಿಸ್ಥಿತಿ ಏನಾಗಬೇಕು? ರಾಜ್ಯಕ್ಕೆ ಇದಕ್ಕಿಂತ ದೊಡ್ಡ ಅವಮಾನ ಬೇರೆ ಏನು ಬೇಕು ಎಂದು ಪ್ರಶ್ನಿಸಿದರು.

ಈ ಭಾಗದಲ್ಲಿ ಹತ್ಯೆ ನಡೆದಾಗ ಬಿಜೆಪಿ ಕಾರ್ಯಕರ್ತರು ಮಂತ್ರಿ ಹಾಗೂ ಬಿಜೆಪಿ ಅಧ್ಯಕ್ಷರ ವಿರುದ್ಧ ಹೇಗೆ ಪ್ರತಿಭಟನೆ ನಡೆಸಿದರು ಎಂದು ನಿಮಗೆ ಗೊತ್ತೇ ಇದೆ. ಹಿಂದುತ್ವದ ಹೆಸರಿನ ಹೋರಾಟದಲ್ಲಿ ಬಿಜೆಪಿ ನಾಯಕರ ಮಕ್ಕಳು ಬಲಿಯಾಗಿಲ್ಲ. ಬಡವರ ಮಕ್ಕಳನ್ನು ಬಲಿ ಪಡೆಯುತ್ತಿದ್ದಾರೆ. ಈ ಬಗ್ಗೆ ಜನರಿಗೆ ಉತ್ತರ ನೀಡುವ ಜವಾಬ್ದಾರಿಯನ್ನು ಮುಖ್ಯಮಂತ್ರಿಗಳಿಗೆ ಬಿಡುತ್ತೇನೆ ಎಂದು ತಿಳಿಸಿದರು.

Advertisement

ಗೃಹಜ್ಯೋತಿ ಹಾಗೂ ಗೃಹಲಕ್ಷ್ಮಿ ಯೋಜನೆ ಕುರಿತ ಕಾಂಗ್ರೆಸ್‌ ಗ್ಯಾರಂಟಿ ಕೋಟಿ ಕಾರ್ಡ್‌ಗಳು ಮನೆ, ಮನೆ ತಲುಪಲು ಸಜ್ಜಾಗಿವೆ. ಬೆಲೆ ಏರಿಕೆಯಿಂದ ಸಂಕಷ್ಟದಲ್ಲಿರುವ ಜನರಿಗೆ ನೆರವಾಗುವ ಉದ್ದೇಶದಿಂದ ಕಾಂಗ್ರೆಸ್‌ ಪಕ್ಷ ಎರಡು ಐತಿಹಾಸಿಕ ಗ್ಯಾರಂಟಿ ಯೋಜನೆ ಘೋಷಿಸಿದ್ದೇವೆ. ಈ ಯೋಜನೆಗಳ ಮೂಲಕ ವರ್ಷಕ್ಕೆ ಒಟ್ಟು 42 ಸಾವಿರದಂತೆ 5 ವರ್ಷಕ್ಕೆ 2 ಲಕ್ಷವನ್ನು ಜನರಿಗೆ ನೀಡಲಾಗುವುದು.
– ಡಿ.ಕೆ.ಶಿವಕುಮಾರ್‌, ಕೆಪಿಸಿಸಿ ಅಧ್ಯಕ್ಷ

ಗೆಲ್ಲುವವರಿಗೆ ಕಾಂಗ್ರೆ ಸ್‌ ಟಿಕೆಟ್‌, ಮಾಸಾಂತ್ಯ ಪಟ್ಟಿ ಪ್ರಕಟ: ಸಿದ್ದು
ವಿಜಯಪುರ: ರಾಜ್ಯ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿಗಳ ಪಟ್ಟಿಯನ್ನು ಈ ಮಾಸಾಂತ್ಯದೊಳಗೆ ಬಿಡುಗಡೆ ಮಾಡಲಾಗು ವುದು ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

ಸಿಂಧಗಿಯಲ್ಲಿ ಶನಿವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಚುನಾವಣ ಪೂರ್ವದಲ್ಲಿ ಕಾಂಗ್ರೆಸ್‌ ನಡೆಸಿರುವ ಮೂರು ಸಮೀಕ್ಷೆ ಆಧಾರದಲ್ಲಿ ಗೆಲ್ಲುವ ಶಕ್ತಿ ಇರುವವರಿಗೆ ಟಿಕೆಟ್‌ ನೀಡಲಾಗುತ್ತದೆ ಎಂದರು.

150 ಕ್ಷೇತ್ರಗಳಲ್ಲಿ ವಿಜಯ ಸಾಧಿಸುವ ಗುರಿಯೊಂದಿಗೆ ಸಾಮಾಜಿಕ ನ್ಯಾಯದಡಿ ಟಿಕೆಟ್‌ ನೀಡಲಾಗುತ್ತದೆ. ಹಳಬರ ಜತೆಯಲ್ಲಿ ಹೊಸಬರಿಗೂ ಅವಕಾಶ ಕಲ್ಪಿಸಲಾಗುತ್ತದೆ. ಅಲ್ಪಸಂಖ್ಯಾಕರಿಗೆ ಕೊಡಬೇಕು, ಹಿಂದುಳಿದವರಿಗೆ ಕೊಡಬೇಕು ಎನ್ನುವುದೇನಿಲ್ಲ. ಗೆಲ್ಲುವ ಸಾಧ್ಯತೆಯಿರುವ ಎಲ್ಲ ಸಮುದಾಯಕ್ಕೂ ಆದ್ಯತೆ ನೀಡಲಾಗುತ್ತದೆ ಎಂದರು.

ಪರಿಶಿಷ್ಟ ಜಾತಿ-ಪಂಗಡಗಳ ಸಮುದಾಯಕ್ಕೆ 51 ಕ್ಷೇತ್ರಗಳು ಮೀಸಲಿವೆ. ಅಲ್ಲಿಯೂ ಗೆಲ್ಲುವ ಸಾಮರ್ಥ್ಯ ಇರುವ ಅಭ್ಯರ್ಥಿಗಳನ್ನು ಕಣಕ್ಕಿಸಲಾಗುತ್ತದೆ. 150 ಸ್ಥಾನ ಗೆಲ್ಲುವುದು ನಮ್ಮ ಮುಂದಿರುವ ಗುರಿ ಎಂದರು.

ಟಿಕೆಟ್‌ ನೀಡಿದರೆ ಸ್ಪರ್ಧೆ: ಮುನಿಯಪ್ಪ
ದೇವನಹಳಿ: ದೇವನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಹೈಕಮಾಂಡ್‌ ಟಿಕೆಟ್‌ ನೀಡಿದಲ್ಲಿ ಸ್ಪರ್ಧಿಸುತ್ತೇನೆ ಎಂದು ಮಾಜಿ ಕೇಂದ್ರ ಸಚಿವ ಕೆ. ಎಚ್‌.ಮುನಿಯಪ್ಪ ತಿಳಿಸಿದರು.

ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೆ ತರುವುದು ಮುಖ್ಯವಾಗಿದೆ. ನನಗೆ ಪಕ್ಷ ಟಿಕೆಟ್‌ ನೀಡದಿದ್ದರೆ ಪಕ್ಷ ಸಂಘಟನೆ ಮಾಡಲು ಎಲ್ಲ ರೀತಿಯ ಸಹಕಾರ ನೀಡಲಾಗುವುದು. ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರಕಾರ ಅಭಿವೃದ್ಧಿ ಪಡಿಸುವಲ್ಲಿ ಸಂಪೂರ್ಣ ವಿಫ‌ಲವಾಗಿದೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬರುವುದು ನಿಶ್ಚಿತವಾಗಿದೆ. 2024ರ ಲೋಕಸಭಾ ಚುನಾವಣೆಯಲ್ಲಿ ಕೇಂದ್ರದಲ್ಲೂ ಕಾಂಗ್ರೆಸ್‌ ಸರಕಾರವನ್ನು ಅಧಿಕಾರಕ್ಕೆ ತರಬೇಕು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next