ನವದೆಹಲಿ: ಕಂಬಳದ ಓಟದಲ್ಲಿ ಹೊಸ ದಾಖಲೆಯನ್ನು ಬರೆದು ಮಿಂಚಿದ ಮತ್ತು ತನ್ನ ಈ ದಾಖಲೆಯ ಓಟಕ್ಕಾಗಿ ಅತ್ಲೆಟಿಕ್ಸ್ ಜಗತ್ತಿನ ವೇಗದ ಓಟದ ದೊರೆ ಉಸೇನ್ ಬೋಲ್ಟ್ ಜೊತೆ ಹೋಲಿಸಲ್ಪಡುತ್ತಿರುವ ಶ್ರೀನಿವಾಸ ಗೌಡ ಅವರ ಈ ಸಾಧನೆಗೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಟ್ವೀಟ್ ಮಾಡಿ ಶುಭ ಹಾರೈಸಿದ್ದಾರೆ. ವಿಶೇಷವೆಂದರೆ ನಾಯ್ಡು ಅವರ ಟ್ವೀಟ್ ಕನ್ನಡದಲ್ಲೇ ಇದೆ.
‘ಕಂಬಳ ಸ್ಪರ್ಧೆಯಲ್ಲಿ ವಿಶೇಷ ಸಾಧನೆ ಮಾಡಿ ಉಸೇನ್ ಬೋಲ್ಟ್ ನೊಂದಿಗೆ ಹೋಲಿಸಲ್ಪಡುತ್ತಿರುವ ಕರ್ನಾಟಕದ ಶ್ರೀನಿವಾಸ ಗೌಡ ಕೀರ್ತಿ ಪಡೆದಿದ್ದಾರೆ. ದೇಶದಲ್ಲಿ ಸಾಕಷ್ಟು ಸುಪ್ತ ಪ್ರತಿಭೆಗಳಿದ್ದು ಅವರ ಪೂರ್ಣ ಸಾಮರ್ಥ್ಯದ ಸಾಕಾರಕ್ಕಾಗಿ ಅದನ್ನು ತಿಳಿಯುವ, ಮನ್ನಣೆ ನೀಡುವ, ಗೌರವಿಸುವ ಮತ್ತು ಪೋಷಿಸುವ ಅಗತ್ಯವಿದೆ’ ಎಂದು ಉಪರಾಷ್ಟ್ರಪತಿ ಅವರು ತಮ್ಮ ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ.
ಶ್ರೀನಿವಾಸ ಗೌಡ ಅವರ ಸಾಧನೆಯನ್ನು ಅಭಿನಂದಿಸುವ ಟ್ವೀಟ್ ಅನ್ನು ಕನ್ನಡದಲ್ಲಿ ಮಾತ್ರವಲ್ಲದೇ ಇಂಗ್ಲಿಷ್ ಹಾಗೂ ತೆಲುಗು ಭಾಷೆಯಲ್ಲೂ ಸಹ ನಾಯ್ಡು ಅವರು ಬರೆದು ಪೋಸ್ಟ್ ಮಾಡಿರುವುದು ಇನ್ನೊಂದು ವಿಶೇಷ.
Related Articles
ಇದೇ ಸಂದರ್ಭದಲ್ಲಿ ಶ್ರೀನಿವಾಸ ಗೌಡ ಅವರ ಸಾಧನೆಯನ್ನು ಗುರುತಿಸಿ ಅವರಿಗೆ ಸೂಕ್ತ ತರಬೇತಿ ನೀಡಲು ವ್ಯವಸ್ಥೆ ಮಾಡಿಕೊಟ್ಟಿರುವ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಅವರಿಗೂ ಉಪರಾಷ್ಟ್ರಪತಿಗಳು ಇದೇ ಸಂದರ್ಭದಲ್ಲಿ ಇನ್ನೊಂದು ಟ್ವೀಟ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.