Advertisement

ಫ‌ಲಿಸಲಿಲ್ಲ ಹಾರೈಕೆ ಮರಳಲಿಲ್ಲ ಸಿದ್ಧಾರ್ಥ

02:20 AM Aug 01, 2019 | sudhir |

ಚಿಕ್ಕಮಗಳೂರು: ನಿಗೂಢವಾಗಿ ಕಾಣೆಯಾಗಿ ಇಹಲೋಕ ತ್ಯಜಿಸಿದ ಕಾಫಿ ಡೇ ಮಾಲೀಕ, ಎಸ್‌.ಎಂ.ಕೃಷ್ಣ ಅವರ ಅಳಿಯ ಸಿದ್ದಾರ್ಥ ಹೆಗ್ಡೆ ಬುಧವಾರ ಪಂಚಭೂತಗಳಲ್ಲಿ ಲೀನರಾದರು.

Advertisement

ಮೂಡಿಗೆರೆ ತಾಲೂಕಿನ ಚಟ್ಟನಹಳ್ಳಿಯ ಚೇತನಹಳ್ಳಿ ಎಸ್ಟೇಟ್‌ನ ಅವರ ಸ್ವಗೃಹ ಮುಂಭಾಗದ ಉದ್ಯಾನದಲ್ಲಿ ಸಿದ್ಧಾರ್ಥ ಹೆಗ್ಡೆ ಅವರ ಪಾರ್ಥಿವ ಶರೀರಕ್ಕೆ ಪುತ್ರರಾದ ಅಮರ್ಥ್ಯ ಹೆಗ್ಡೆ, ಈಶಾನ್‌ ಹೆಗ್ಡೆ ಅಗ್ನಿಸ್ಪರ್ಷ ಮಾಡುವ ಮೂಲಕ ಅಂತಿಮ ಸಂಸ್ಕಾರ ನೆರವೇರಿಸಿದರು.

ಮಂಗಳೂರಿನಲ್ಲಿ ಬುಧವಾರ ಬೆಳಗ್ಗೆ ಸಿದ್ಧಾರ್ಥ ಹೆಗ್ಡೆ ಅವರ ಮೃತದೇಹ ದೊರೆತ ನಂತರ ಮರಣೋತ್ತರ ಪರೀಕ್ಷೆ ನಡೆಸಿ ಪಾರ್ಥಿವ ಶರೀರವನ್ನು ನಗರದ ಎಬಿಸಿ ಕಾಫಿ ಕ್ಯೂರಿಂಗ್‌ ಆವರಣಕ್ಕೆ ಮಧ್ಯಾಹ್ನ 2.30ರ ವೇಳೆಗೆ ತರಲಾಯಿತು. ಪಾರ್ಥಿವ ಶರೀರವನ್ನು ನಗರಕ್ಕೆ ತರುತ್ತಿರುವ ಸುದ್ದಿ ತಿಳಿದು ಜನತೆ ಬೆಳಗ್ಗೆ 9 ಗಂಟೆಯಿಂದಲೇ ಎಬಿಸಿ ಕಾಫಿ ಕ್ಯೂರಿಂಗ್‌ ಆವರಣಕ್ಕೆ ಬರಲಾರಂಭಿಸಿದ್ದರು. ಮಧ್ಯಾಹ್ನದ ವೇಳೆಗೆ ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದ ಜನ ಅಂತಿಮ ದರ್ಶನ ಪಡೆದು, ಕಂಬನಿ ಮಿಡಿದರು.

ನೂಕು ನುಗ್ಗಲು: ಅಂತಿಮ ದರ್ಶನ ಪಡೆಯಲು ಭಾರೀ ಜನ ಸೇರಿದ್ದರಿಂದ ನೂಕು ನುಗ್ಗಲು ಉಂಟಾಯಿತು. ಸಿದ್ಧಾರ್ಥ ಹೆಗ್ಡೆ ಅವರ ಮಾವ, ಮಾಜಿ ಸಿಎಂ ಎಸ್‌.ಎಂ.ಕೃಷ್ಣ, ಸಿದ್ಧಾರ್ಥ ಹೆಗ್ಡೆ ಅವರ ಪತ್ನಿ ಮಾಳವಿಕಾ, ಮಕ್ಕಳು, ಅತ್ತೆ ಪ್ರೇಮಕೃಷ್ಣ ಸಹ ಕಷ್ಟಪಟ್ಟು ಅಂತಿಮ ದರ್ಶನ ಪಡೆದರು. ಸಂಜೆ ಸುಮಾರು 4.30ರ ವೇಳೆಗೆ ಪಾರ್ಥಿವ ಶರೀರವನ್ನು ಸ್ವಗ್ರಾಮ ಚೇತನಹಳ್ಳಿ ಎಸ್ಟೇಟ್‌ಗೆ ತರಲಾಯಿತು. ಮನೆಯ ಮುಂಭಾಗದಲ್ಲಿಯೇ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.

ಅಲ್ಲಿ ಸುಮಾರು 1 ಗಂಟೆಗಳ ಕಾಲ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಿಕೊಡಲಾಯಿತು. ಮೂಡಿಗೆರೆ, ಬೇಲೂರು, ಸಕಲೇಶಪುರ ತಾಲೂಕುಗಳಿಂದ ಕಾರ್ಮಿ ಕರು, ಸಂಬಂಧಿಕರು ಆಗಮಿಸಿ ಅಂತಿಮ ನಮನ ಸಲ್ಲಿಸಿದರು. ಮನೆಯ ಮುಂಭಾಗದಲ್ಲಿದ್ದ ಉದ್ಯಾನವನದಲ್ಲಿ ಅಂತಿಮ ಸಂಸ್ಕಾರಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಒಕ್ಕಲಿಗ ಸಮಾಜದ ಪದ್ಧತಿಯಂತೆ ಸಂಜೆ 6.40ರ ಸುಮಾರಿಗೆ ಸಿದ್ಧಾರ್ಥ ಹೆಗ್ಡೆ ಅವರ ಪುತ್ರರಾದ ಅಮರ್ಥ್ಯ ಹೆಗ್ಡೆ, ಈಶಾನ್‌ ಹೆಗ್ಡೆ ಅಗ್ನಿಸ್ಪರ್ಷ ಮಾಡುವ ಮೂಲಕ ಅಂತಿಮ ಸಂಸ್ಕಾರ ನೆರವೇರಿಸಿದರು.

Advertisement

ಗಣ್ಯರಿಂದ ಅಂತಿಮ ದರ್ಶನ: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಪರಿಷತ್‌ ಉಪಸಭಾಪತಿ ಎಸ್‌.ಎಲ್.ಧರ್ಮೇಗೌಡ, ಮಾಜಿ ಸಚಿವರಾದ ಡಿ.ಕೆ.ಶಿವಕುಮಾರ್‌, ಎಂ.ಬಿ.ಪಾಟೀಲ್, ಯು.ಟಿ.ಖಾದರ್‌, ಆರ್‌.ಅಶೋಕ್‌, ಕಿಮ್ಮನೆ ರತ್ನಾಕರ್‌, ಡಿ.ಎನ್‌.ಜೀವರಾಜ್‌, ಕೆ.ಜೆ.ಜಾರ್ಜ್‌, ಶಾಸಕರಾದ ಸಿ.ಟಿ.ರವಿ, ಟಿ.ಡಿ. ರಾಜೇಗೌಡ, ಅರಗ ಜ್ಞಾನೇಂದ್ರ ಸೇರಿದಂತೆ ನಾನಾ ಗಣ್ಯರು ಅಂತಿಮ ನಮನ ಸಲ್ಲಿಸಿದರು.

ಸ್ವಯಂಪ್ರೇರಿತ ಬಂದ್‌: ಪಾರ್ಥಿವ ಶರೀರ ಬರುವ ಮಾರ್ಗದಲ್ಲಿ ಕೊಟ್ಟಿಗೆಹಾರ, ಬಣಕಲ್ ಸೇರಿದಂತೆ ಮೂಡಿಗೆರೆ ಪಟ್ಟಣದಲ್ಲಿ ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಅಂಗಡಿ ಮುಂಗಟ್ಟು ಬಂದ್‌ ಮಾಡಿ ಸಿದ್ಧಾರ್ಥ ಹೆಗ್ಡೆ ಅವರಿಗೆ ನಮನ ಸಲ್ಲಿಸಿದರು. ಕರ್ನಾಟಕ ಬೆಳೆಗಾರರ ಒಕ್ಕೂಟವು ಕಾಫಿ ಬೆಳೆಯುವ ಪ್ರದೇಶಗಳಾದ ಚಿಕ್ಕಮಗಳೂರು, ಹಾಸನ ಮತ್ತು ಮಡಿಕೇರಿ ಜಿಲ್ಲೆಗಳಲ್ಲಿ ಕಾಫಿ ಉದ್ಯಮದ ಬಂದ್‌ಗೆ ಕರೆ ಕೊಟ್ಟಿತ್ತು. ಹೆಚ್ಚಿನ ಜನ ಹಾಗೂ ವಾಹನಗಳು ಬರುವ ಮುನ್ಸೂಚನೆ ಇದ್ದ ಹಿನ್ನೆಲೆಯಲ್ಲಿ ಚೇತನಹಳ್ಳಿ ಎಸ್ಟೇಟ್ನಿಂದ 3 ಕಿಮೀ ದೂರದ ಗೌತವಳ್ಳಿಯಿಂದ ಸಾರ್ವಜನಿಕ ವಾಹನಗಳ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next