Advertisement

ಎಸ್‌ಎಂಕೆ ಅಳಿಯ, ಕೆಫೆ ಕಾಫಿ ಡೇ ಸಂಸ್ಥಾಪಕ ಸಿದ್ಧಾರ್ಥಗಾಗಿ ಶೋಧ

09:56 AM Aug 01, 2019 | mahesh |

ಮಂಗಳೂರು: ಮಾಜಿ ಸಿಎಂ ಎಸ್‌.ಎಂ. ಕೃಷ್ಣ ಅಳಿಯ, ಕೆಫೆ ಕಾಫಿ ಡೇ ಸ್ಥಾಪಕ ವಿ.ಜಿ. ಸಿದ್ಧಾರ್ಥ ಹೆಗ್ಡೆ ಅವರು ಉಳ್ಳಾಲ ನೇತ್ರಾವತಿ ಸೇತುವೆ ಬಳಿಯಿಂದ ಸೋಮವಾರ ರಾತ್ರಿ ನಿಗೂಢವಾಗಿ ನಾಪತ್ತೆಯಾಗಿದ್ದಾರೆ.

Advertisement

ಸ್ಥಳೀಯ ಪೊಲೀಸರು ಸೋಮವಾರ ರಾತ್ರಿಯಿಂದಲೇ ಶೋಧ ಕಾರ್ಯಾಚರಣೆ ನಡೆಸಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ಮಂಗಳವಾರ ರಾತ್ರಿ ಕಾರ್ಯಾಚರಣೆ ಸ್ಥಗಿತ ಮಾಡಲಾಗಿದ್ದು, ಬುಧವಾರ ಬೆಳಗ್ಗೆ ಆರಂಭವಾಗಲಿದೆ. ಈ ಪ್ರಕರಣ ದೇಶದೆಲ್ಲೆಡೆ ಸಂಚಲನ ಉಂಟು ಮಾಡಿದ್ದು, ಕುಟುಂಬ ವರ್ಗದವರು ಮತ್ತು ಅವರ ಸಮೂಹ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಸಾವಿರಾರು ಉದ್ಯೋಗಿಗಳನ್ನು ದಿಗ್ಭ್ರಮೆಗೊಳಿಸಿದೆ.

ಸೇತುವೆಯಿಂದ ಕೆಳಗೆ ಬಿದ್ದರು: ಸೋಮವಾರ ರಾತ್ರಿ ಸುಮಾರು 8 ಗಂಟೆಯ ವೇಳೆಗೆ ವ್ಯಕ್ತಿಯೋರ್ವರು ಉಳ್ಳಾಲದ ನೇತ್ರಾವತಿ ಸೇತುವೆಯಿಂದ ಕೆಳಗೆ ಬಿದ್ದಿರುವ ಮಾಹಿತಿ ಹಬ್ಬಿತ್ತು. ಆದರೆ ಅದನ್ನು ಯಾವುದೇ ವಾಹನ ಸವಾರರು ನೋಡಿರಲಿಲ್ಲ. ಹೀಗಾಗಿ ಈ ಬಗ್ಗೆ ಪೊಲೀಸರಿಗೆ ಬಲವಾದ ಸುಳಿವು ಲಭಿಸಿರಲಿಲ್ಲ. ಸೇತುವೆ ಬಳಿ ಇದ್ದ ಸಿದ್ಧಾರ್ಥ್ ಪ್ರಯಾಣಿಸಿದ್ದ ಇನ್ನೋವಾ ಕಾರು ಮತ್ತು ಚಾಲಕ ಬಸವರಾಜ ಪಾಟೀಲ್ ನೀಡಿದ ಮಾಹಿತಿ ಆಧರಿಸಿ, ಪೊಲೀಸರು ಶೋಧ ಆರಂಭಿಸಿದರು. ಸೇತುವೆ ಬಳಿ ವ್ಯಕ್ತಿಯೊಬ್ಬರು ಕೆಳಕ್ಕೆ ಬಿದ್ದಿರುವುದನ್ನು ಸೋಮವಾರ ರಾತ್ರಿ ನೋಡಿರುವುದಾಗಿ ಸ್ಥಳೀಯ ಮೀನುಗಾರರೊಬ್ಬರು ಮಂಗಳವಾರ ಮಾಹಿತಿ ನೀಡಿದರು. ಈ ಹಿನ್ನೆಲೆಯಲ್ಲಿ ನದಿಯಲ್ಲಿ ಆರಂಭಿಸಲಾದ ವ್ಯಾಪಕ ಶೋಧ ಮಂಗಳವಾರ ತಡರಾತ್ರಿಯವರೆಗೂ ನಡೆಯಿತು.

ಸಿದ್ಧಾರ್ಥ್ ಬೆಂಗಳೂರಿನಿಂದ ಉಳ್ಳಾಲ ಕಡೆಗೆ ಸೋಮ ವಾರ ರಾತ್ರಿ ಸುಮಾರು 7.30 ಗಂಟೆಗೆ ಬಂದಿದ್ದು, ಉಳ್ಳಾಲ ಸೇತುವೆಯಲ್ಲಿ ಕಾರು ನಿಲ್ಲಿಸಿ ಇಳಿದಿದ್ದರು. ಸೇತುವೆಯಲ್ಲಿ ಸ್ವಲ್ಪ ದೂರ ನಡೆದು ಹೋಗಿದ್ದು, ಬಳಿಕ ನಾಪತ್ತೆಯಾಗಿದ್ದರು. ಅವರ ಮೊಬೈಲ್ ಸ್ವಿಚ್ ಆಫ್‌ ಆಗಿತ್ತು. ಅವರಿಗಾಗಿ ಕಾದು ಸುಳಿವು ಲಭ್ಯವಾಗದ ಹಿನ್ನೆಲೆಯಲ್ಲಿ ಚಾಲಕ ಬಸವರಾಜ ಕಂಕನಾಡಿ ನಗರ ಪೊಲೀಸ್‌ ಠಾಣೆಯಲ್ಲಿ ತಡರಾತ್ರಿ ನಾಪತ್ತೆ ದೂರು ದಾಖಲಿಸಿದರು.

ಕೋಸ್ಟ್‌ಗಾರ್ಡ್‌ ಕಾರ್ಯಾಚರಣೆ : ನೌಕಾ ಪಡೆಯ ರಾಜ್‌ದೂತ್‌ ಕಣ್ಗಾವಲು ಹಡಗು, ಎಸಿವಿ ಎಚ್-18 ಹೋವರ್‌ ಕ್ರಾಫ್ಟ್‌, ಮುಳುಗು ತಜ್ಞರ ಮೂರು ತಂಡಗಳೂ ಕಾರ್ಯಾ ಚರಣೆಯಲ್ಲಿ ಪಾಲ್ಗೊಂಡಿದ್ದವು ಎಂದು ಕೋಸ್ಟ್‌ಗಾರ್ಡ್‌ ಅಧಿಕಾರಿಗಳು ತಿಳಿಸಿದ್ದಾರೆ. ಸಾವಿತ್ರಿ ಬಾಯಿ ಫುಲೆ’ ಕಣ್ಗಾವಲು ಹಡಗನ್ನು ಎನ್‌ಎಂಪಿಟಿ ಬಂದರಿನಲ್ಲಿ ಸನ್ನದ್ಧ ಸ್ಥಿತಿಯಲ್ಲಿ ಇಡಲಾಗಿದೆ.

Advertisement

ಟೋಲ್ಗೇಟ್ ಸಿಸಿಟಿವಿ ಚಿತ್ರ: ಬ್ರಹ್ಮರಕೂಟ್ಲು ಟೋಲ್ಗೇಟ್‌ನಲ್ಲಿ ಸಿದ್ಧಾರ್ಥ ಅವರ ಕಾರು ಹಾದು ಹೋದ ಸಮಯ ಸಂಜೆ 5.26 ಎಂದು ತೋರಿಸುತ್ತಿದ್ದು, ಮಂಗ ಳೂರಿಗೆ ಬಂದಿರುವ ಸಮಯ ಗೊಂದಲಕ್ಕೆ ಕಾರಣವಾಗಿದೆ. ಚಾಲಕ ನೀಡುವ ಮಾಹಿತಿಯಂತೆ ಕಾರು ರಾತ್ರಿ 7ರ ವೇಳೆಗೆ ಪಂಪ್‌ವೆಲ್ ಮುಟ್ಟಿತ್ತು. ಬ್ರಹ್ಮರಕೂಟ್ಲುನಿಂದ ಪಂಪ್‌ವೆಲ್ಗೆ ಬರಲು 15ರಿಂದ 20 ನಿಮಿಷ ಸಾಕು. ಒಂದೊಮ್ಮೆ 5.26ಕ್ಕೆ ಬ್ರಹ್ಮರಕೂಟ್ಲು ಟೋಲ್ಗೇಟ್ ಹಾದು ಹೋಗಿದ್ದರೆ ಮಂಗ ಳೂರಿಗೆ ಬರಲು ಅಷ್ಟು ವಿಳಂಬ ಯಾಕೆ ಎಂಬುದು ಅನುಮಾನಕ್ಕೆ ಕಾರಣವಾಗಿದೆ.

ವಿವಿಧ ಆಯಾಮಗಳಿಂದ ತನಿಖೆ : ಪ್ರಕರಣದ ತನಿಖೆಯನ್ನು ಪೊಲೀಸರು ವಿವಿಧ ಆಯಾಮಗಳಿಂದ ನಡೆಸುತ್ತಿದ್ದಾರೆ. ಸಿದ್ಧಾರ್ಥ್ ಅವರಿಗೆ ಯಾರ ಜತೆಗಾದರೂ ಮನಸ್ತಾಪವಿತ್ತೇ, ಜಗಳವಾಗಿತ್ತೇ, ಅವರು ಒತ್ತಡ-ಖನ್ನತೆಗೆ ಒಳಗಾಗಿದ್ದರೇ, ಬೆದರಿಕೆಗಳಿದ್ದವೇ ಎಂಬಿತ್ಯಾದಿ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಸೋಮವಾರ ಪ್ರಯಾಣದುದ್ದಕ್ಕೂ ಅವರು ಮೊಬೈಲ್ನಲ್ಲಿ ಯಾರಿಗೆ ಕರೆ ಮಾಡಿರಬಹುದು ಎಂಬಿತ್ಯಾದಿ ವಿವರವನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ.

ನಗರ ಪೊಲೀಸ್‌ ಆಯುಕ್ತ ಸಂದೀಪ್‌ ಪಾಟೀಲ್ ಸೋಮ ವಾರ ರಾತ್ರಿ ಬೆಂಗಳೂರಿನಲ್ಲಿ ಎಸ್‌.ಎಂ. ಕೃಷ್ಣ ಅವರ ಮನೆಗೆ ಭೇಟಿ ನೀಡಿ, ಸಿದ್ಧಾರ್ಥ್ ಅವರ ಪತ್ನಿ ಮತ್ತು ಸಂಬಂಧಿಕರಿಂದ ಮಾಹಿತಿ ಪಡೆದಿದ್ದಾರೆ. ಮಂಗಳೂರು ಸಿಸಿಬಿ ಪೊಲೀಸರ ಒಂದು ತಂಡವು ಹೆಚ್ಚಿನ ತನಿಖೆಗಾಗಿ ಬೆಂಗಳೂರಿಗೆ ತೆರಳಿದ್ದು, ಸಿದ್ಧಾರ್ಥ್ ಅವರ ಸಂಬಂಧಿಕರನ್ನು ಭೇಟಿಯಾಗಿ ವಿವರ ಪಡೆಯಲಿದೆ. ಅವರ ಕಚೇರಿಗೂ ಭೇಟಿ ನೀಡಿ ಮಾಹಿತಿ ಸಂಗ್ರಹಿಸುತ್ತಿದೆ. ಕಾರು ಚಾಲಕ ನೀಡಿರುವ ದೂರಿನಲ್ಲಿ ವಿವರಿಸಿರುವ ಅಂಶಗಳ ಬಗ್ಗೆ ವ್ಯಾಪಕ ತನಿಖೆ ನಡೆಯುತ್ತಿದೆ. ಚಾಲಕನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.

ರಾಷ್ಟ್ರಮಟ್ಟದಲ್ಲಿ ಸಂಚಲನ: ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಪಡೆದಿದ್ದ ಕೆಫೆ ಕಾಫಿ ಡೇ ಸಂಸ್ಥಾಪಕನ ನಾಪತ್ತೆ ಪ್ರಕರಣ ರಾಜ್ಯ ಮತ್ತು ರಾಷ್ಟ್ರಮಟ್ಟದ ಉದ್ಯಮ ವಲಯದಲ್ಲಿ ಸಂಚಲನ ತಂದಿದೆ. ನಳಿನ್‌ ಕುಮಾರ್‌ ಕಟೀಲು, ಶೋಭಾ ಕರಂದ್ಲಾಜೆ ಅವರನ್ನು ಒಳಗೊಂಡ ಸಂಸದರ ನಿಯೋಗ ಮಂಗಳವಾರ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿಯಾಗಿ ಪತ್ತೆಗೆ ವ್ಯಾಪಕ ಕ್ರಮಗಳನ್ನು ಕೈಗೊಳ್ಳುವಂತೆ ಮನವಿ ಮಾಡಿತು.

ರಾತ್ರಿ ನದಿಗೆ ಹಾರಿದ್ದು ನೋಡಿದೆ

ಸೇತುವೆ ಬಳಿ ರಾತ್ರಿ ಮೀನು ಹಿಡಿಯುತ್ತಿದ್ದ ಮೀನುಗಾರರೊಬ್ಬರು ರಾತ್ರಿ ಸುಮಾರು 8ರ ವೇಳೆಗೆ ವ್ಯಕ್ತಿಯೋರ್ವರು ನದಿಗೆ ಹಾರಿರುವುದನ್ನು ನೋಡಿರುವುದಾಗಿ ತಿಳಿಸಿದ್ದಾರೆ. ಬಲೆ ಹಾಕಿ ಮೀನು ಹಿಡಿಯು ತ್ತಿದ್ದಾಗ ಸೇತುವೆಯ 8ನೇ ಕಂಬದ ಬಳಿ ವ್ಯಕ್ತಿಯೊಬ್ಬರು ನೀರಿಗೆ ಬಿದ್ದರು. ಮುಳುಗೇಳುತ್ತಾ ಸುಮಾರು 50 ಮೀ. ಸಾಗಿ ಬಳಿಕ ಕಣ್ಮರೆಯಾದರು. ನಾನು ದೋಣಿಯಲ್ಲಿ ಒಬ್ಬನೇ ಇದ್ದೆ. ಹಾಗಾಗಿ ಅವರನ್ನು ರಕ್ಷಿಸಲು ಸಾಧ್ಯವಾಗಲಿಲ್ಲ ಎನ್ನುತ್ತಾರೆ ಆ ಮೀನುಗಾರ.

200ಕ್ಕೂ ಅಧಿಕ ಮಂದಿಯಿಂದ ಶೋಧ

ಸಿದ್ಧಾರ್ಥ ನಾಪತ್ತೆಯಾದ ಹಿನ್ನೆಲೆಯಲ್ಲಿ ಉಳ್ಳಾಲ ಸೇತುವೆಯ ಬಳಿಯಿಂದ ನೇತ್ರಾವತಿ ನದಿಯಲ್ಲಿ ಅಳಿವೆ ಬಾಗಿಲಿನವರೆಗೆ ಮಂಗಳವಾರ ಶೋಧ ನಡೆಸಲಾಯಿತು. ಅಗ್ನಿಶಾಮಕದಳ, ಪೊಲೀಸ್‌ ಸೇರಿದಂತೆ ಸುಮಾರು 200ಕ್ಕೂ ಅಧಿಕ ಸಿಬ್ಬಂದಿ, ಸ್ಥಳೀಯ ಮೀನುಗಾರರು, ಮುಳುಗು ತಜ್ಞರು ಶೋಧ ಕಾರ್ಯಾಚರಣೆಯಲ್ಲಿ ಪಾಲ್ಗೊಂಡರು. ಸುಮಾರು 30ಕ್ಕೂ ಅಧಿಕ ದೋಣಿಗಳನ್ನು ಬಳಸಿದ್ದು, ಕರಾವಳಿ ಕಾವಲು ಪೊಲೀಸ್‌ ಪಡೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ಸಿಬ್ಬಂದಿ ಮತ್ತು ಗೃಹರಕ್ಷಕ ದಳದ ಸಿಬ್ಬಂದಿಯ ನೆರವು ಪಡೆಯಲಾಯಿತು.
ಉದ್ಯೋಗಿಗಳಿಗೆ ಪತ್ರ ಲಭ್ಯ

ಸಿದ್ದಾರ್ಥ ತಮ್ಮ ಕಾಫಿ ಡೇ ಕಂಪೆನಿಯ ನಿರ್ದೇಶಕರು ಮತ್ತು ಉದ್ಯೋಗಿಗಳಿಗೆ ಬರೆದಿದ್ದಾರೆ ಎನ್ನಲಾಗಿರುವ ಇಮೇಲ್ ಪತ್ರ ಲಭ್ಯವಾಗಿದ್ದು, ಅದರಲ್ಲಿ ಅವರ ವಹಿವಾಟಿಗೆ ಸಂಬಂಧಿಸಿದ ಹಲವು ಆಘಾತಕಾರಿ ಅಂಶಗಳು ಉಲ್ಲೇಖವಾಗಿವೆ. ಆದರೆ ಈ ಪತ್ರದ ಅಸಲಿತನದ ಕುರಿತು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಊರಿಗೆಂದು ಹೊರಟಿದ್ದರು…

ಸಿದ್ದಾರ್ಥ ನಾಪತ್ತೆ ಪ್ರಕರಣ ನಿಗೂಢವಾಗಿದೆ. ಸೋಮವಾರ ಬೆಂಗಳೂರಿನ ಸದಾಶಿವನಗರದಲ್ಲಿರುವ ಮನೆಯಿಂದ ಬೆಳಗ್ಗೆ ಕಚೇರಿಗೆ ತೆರಳಿ ಅಲ್ಲಿಂದ ವಾಪಸ್‌ ಮನೆಗೆ ಬಂದಿದ್ದರು. ಬಳಿಕ ತನ್ನ ಊರು ಮೂಡಿಗೆರೆಯ ಚೇತನಹಳ್ಳಿಗೆ ಹೋಗುತ್ತಿರುವುದಾಗಿ ಹೇಳಿ ಚಾಲಕನೊಂದಿಗೆ ಹೊರಟರು. ಸಕಲೇಶಪುರದಲ್ಲಿ ಕಾರನ್ನು ಮಂಗಳೂರು ಕಡೆಗೆ ತಿರುಗಿಸುವಂತೆ ಚಾಲಕನಿಗೆ ಸೂಚಿಸಿದ್ದು, ರಾತ್ರಿ ಮಂಗಳೂರಿಗೆ ಬಂದವರು ನಿಗೂಢವಾಗಿ ಕಣ್ಮರೆಯಾಗಿದ್ದಾರೆ.
Advertisement

Udayavani is now on Telegram. Click here to join our channel and stay updated with the latest news.

Next