Advertisement

ಬಿಕೋ ಎನ್ನುತ್ತಿರುವ ಕೊಲ್ಲಮೊಗ್ರು ಪಶುಚಿಕಿತ್ಸಾ ಘಟಕ

02:30 AM May 19, 2018 | Karthik A |

ಸುಬ್ರಹ್ಮಣ್ಯ: ಸುಸಜ್ಜಿತ ಕಟ್ಟಡ ಹೊಂದಿದ್ದರೂ ಇಲ್ಲಿ ಯಾವುದೇ ಸೇವೆ ಲಭ್ಯವಾಗುತ್ತಿಲ್ಲ. ಪ್ರಯೋಜನವಿಲ್ಲದ ಈ ಪಶುಚಿಕಿತ್ಸ ಕಟ್ಟಡವೇನೋ ಸುಸಜ್ಜಿತ ಎನ್ನುವುದು ಸಮಾಧಾನ ತರಿಸಿದೆ. ಆದರ ಪ್ರಯೋಜನ ಇಲ್ಲದೆ ಇರುವುದು ಇಲ್ಲಿಯವರನ್ನು ಚಿಂತೆಗೆ ತಳ್ಳಿದೆ. ಕೊಲ್ಲಮೊಗ್ರುನಲ್ಲಿ ತಲೆ ಎತ್ತಿ ನಿಂತಿರುವ ಪಶುಚಿಕಿತ್ಸಾ ಘಟಕದಲ್ಲಿ ಯಾವುದೇ ಸಿಬಂದಿ ಇಲ್ಲ. ಹೀಗಾಗಿ ಕಚೇರಿ ಬಾಗಿಲು ಮುಚ್ಚಿದೆ. ಏಳು ತಿಂಗಳಿಂದ ಕಚೇರಿ ಬಾಗಿಲು ತೆರೆದಿಲ್ಲ. ಸಿಬಂದಿ ಇಲ್ಲದೆ ಪ್ರಯೋಜನಕ್ಕೆ ಸಿಗದ ಈ ಪಶುಘಟಕ ಈಗ ಬಿಕೋ ಎನ್ನುತ್ತಿದೆ. ಬೀದಿ ದನಗಳು ಮಲಗುವುದಕಷ್ಟೆ ಇದು ಸೀಮಿತವಾಗಿದೆ.

Advertisement

ಅಲೆದಾಟ
ಪಶುಸಂಗೋಪನ ಮತ್ತು ಪಶುವೈದ್ಯ ಸೇವಾ ಇಲಾಖೆಯ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರ ಕೊಲ್ಲಮೊಗ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದೆ. ಹೆಚ್ಚಿನ ಸೌಕರ್ಯಗಳು ಘಟಕದಲ್ಲಿ ಇಲ್ಲವಾಗಿತ್ತಾದರೂ ತುರ್ತು ಸೇವೆಗೆ ಅಡ್ಡಿಯಿರಲಿಲ್ಲ. ಹೀಗಾಗಿ ಕೊಲ್ಲಮೊಗ್ರು, ಕಲ್ಮಕಾರು, ಬಾಳುಗೋಡು, ಐನಕಿದು, ಹರಿಹರ ಕಟ್ಟಗೋವಿಂದನಗರ ಮೊದಲಾದ ಗ್ರಾಮದವರು ಈ ಪಶುಚಿಕಿತ್ಸಾ ಕೇಂದ್ರದ ಪ್ರಯೋಜನ ಪಡೆಯುತ್ತಿದ್ದರು. ಈ ಘಟಕ ಸಿಬಂದಿ ಇಲ್ಲದೆ ಬಾಗಿಲು ಮುಚ್ಚಿದ್ದರಿಂದ ಸಾಕು ಪ್ರಾಣಿಗಳ ಚಿಕಿತ್ಸೆಗೆ ಅಲೆದಾಡುವಂತಾಗಿದೆ.

ಈ ಭಾಗದ ಕೃಷಿಕರು ತಾವು ಸಾಕಿದ ಪ್ರಾಣಿ-ಪಕ್ಷಿಗಳ ತುರ್ತು ಚಿಕಿತ್ಸೆಗೆ ಈ ಕೇಂದ್ರಕ್ಕೆ ಕರೆತರುತ್ತಿದ್ದರು. ಜಾನುವಾರು, ನಾಯಿ, ಆಡು, ಕುರಿ ಕುಕ್ಕುಟ ಹೀಗೆ ಪ್ರಾಣಿ – ಪಕ್ಷಿಗಳಿಗೆ ರೋಗ ರುಜಿನಗಳು ಕಾಣಿಸಿಕೊಂಡಾಗ. ರೋಗ ನಿವಾರಣೆ ಔಷಧಿಗೆ, ಚುಚ್ಚುಮದ್ದಿಗೆ ಚಿಕಿತ್ಸೆ ಇಲ್ಲಿ ಕೊಡಿಸಿ ತೆರಳುತ್ತಿದ್ದರು.

ಶಾಶ್ವತವಾಗಿ ಬಂದ್‌
ಈ ಪಶುಚಕಿತ್ಸಾ ಕೇಂದ್ರದಲ್ಲಿ ವೈದ್ಯರಿಲ್ಲದೆ ಎಷ್ಟೋ ವರ್ಷಗಳಾಗಿತ್ತು. ವೈದ್ಯರ ಬದಲಿ ಇಲ್ಲಿ ಓರ್ವ ಪಶುವೀಕ್ಷಕರು ಮಾತ್ರ ಕರ್ತವ್ಯದಲ್ಲಿದ್ದರು. ಅವರನ್ನು ನವೆಂಬರ್‌ ತಿಂಗಳಲ್ಲಿ ಮೂಡುಬಿದಿರೆಗೆ ವರ್ಗಾವಣೆಗೊಳಿಸಲಾಗಿದೆ. ಬಳಿಕ ತೆರವಾದ ಸ್ಥಾನಕ್ಕೆ ಯಾವುದೇ ಸಿಬಂದಿ ಅಥವಾ ಅಧಿಕಾರಿಯ ನಿಯೋಜನೆ ಆಗಿಲ್ಲ. ಆ ಬಳಿಕ ಚಿಕಿತ್ಸಾ ಕೇಂದ್ರ ಶಾಶ್ವತ ಬಂದ್‌ ಆಗಿ ಉಳಿದಿದೆ.

ಕೃಷಿ ಅವಲಂಬಿತ ಈ ಭಾಗದಲ್ಲಿ ಅನೇಕ ಮಂದಿ ಕೃಷಿಕರು ಹೈನುಗಾರಿಕೆಯಲ್ಲಿ ತೊಡಗಿದ್ದಾರೆ. ಕೊಲ್ಲಮೊಗ್ರು. ಕಲ್ಮಕಾರು, ಹರಿಹರ, ಬಾಳುಗೋಡು, ಐನಕಿದು ಕಟ್ಟ ಗೋವಿಂದನಗರ ಮುಂತಾದೆಡೆ ದನ ಸಾಕುವವರು ಅಧಿಕ ಮಂದಿ ಇದ್ದು ಹಾಲಿನ ಡೈರಿಗೆ ನಿತ್ಯ ಹಾಲು ಒದಗಿಸುತ್ತಿದ್ದಾರೆ. ಇದೀಗ ಈ ಕೇಂದ್ರದಲ್ಲಿ ಸಿಬಂದಿ ಇಲ್ಲದೆ ಪ್ರಾಣಿ – ಪಕ್ಷಿಗಳ ಚಿಕಿತ್ಸೆಗೆ ದೂರದ ಗುತ್ತಿಗಾರು ಅಥವಾ ಸುಬ್ರಹ್ಮಣ್ಯಕ್ಕೆ ತೆರಳಬೇಕಿದೆ.

Advertisement

ಶುಚಿತ್ವ ಕೊರತೆ
ಇಲ್ಲಿನ ಪಶುಚಿಕಿತ್ಸಾ ಕೇಂದ್ರ ಸಂಪೂರ್ಣ ಶಿಥಿಲಗೊಂಡಿತ್ತು. ಮೇಲ್ಛಾವಣಿ ಸೇರಿ ದಂತೆ ಕಟ್ಟಡ ಪೂರ್ಣ ಪ್ರಮಾಣದಲ್ಲಿ ಕೆಟ್ಟು ಹಾಳುಕೊಂಪೆಯಾಗಿತ್ತು. ಮಳೆಗೆ ಸೋರುತ್ತಿತ್ತು. ಬಳಿಕ ಇಲಾಖೆ ಅನುದಾನ ದಿಂದ ಎರಡು ವರ್ಷಗಳ ಹಿಂದೆ ದುರಸ್ತಿಗೊಳಿಸಲಾಗಿತ್ತು. ಸುಣ್ಣ- ಬಣ್ಣ ಬಳಿದು ಕಟ್ಟಡ ಸುಂದರವಾಗಿ ಕಾಣಿಸುತ್ತಿದೆ. ಆದರೆ ಕಚೇರಿಯ ಶೌಚಾಲಯ ಸೇರಿದಂತೆ ಶುಚಿತ್ವ ಕೊರತೆಯೂ ಕಟ್ಟಡ ಬಳಿ ಹೋಗಿ ನೋಡಿದರೆ ಎದ್ದು ಕಾಣುತ್ತಿದೆ.

ಅಕ್ರಮ ಸಾಧ್ಯತೆ
ಸುದೀರ್ಘ‌ ಅವಧಿಯಿಂದ ಮುಚ್ಚಿರುವ ಈ ಕಟ್ಟಡದಲ್ಲಿ ಕಾನೂನು ಬಾಹಿರ ಚಟುವಟಿಕೆಗೆ ಬಳಕೆಯಾಗುವ ಸಾಧ್ಯತೆ ಇದೆ. ಕಟ್ಟಡದ ಬಳಿ ತೆರಳಿದರೆ ಅಲ್ಲಿಯ ಪರಿಸರದಲ್ಲಿ ಮದ್ಯ, ಧೂಮಪಾನ ಸೇವನೆಯಂತಹ ಚಟುವಟಿಕೆಗಳು ನಡೆಯುತ್ತಿರುವುದು ಗಮನಕ್ಕೆ ಬರುತ್ತದೆ. ಘಟಕದ ಕಟ್ಟಡ ಅಕ್ರಮ ಚಟುವಟಿಕೆಯ ಕೇಂದ್ರವಾಗಿ ಪರಿವರ್ತನೆ ಆಗುವ ಮುಂಚಿತ ಸಂಬಂದಿಸಿದ ಇಲಾಖೆಗೆ ಸಿಬಂದಿ ನಿಯೋಜಿಸುವ ಆವಶ್ಯಕತೆ ಇದೆ.

ಒಂದೆರಡು ದಿನದಲ್ಲಿ ಸೇವೆ
ಕೊಲ್ಲಮೊಗ್ರು ಪಶು ಚಿಕಿತ್ಸಾ ಘಟಕಕ್ಕೆ ಡೆಪ್ಯುಟೇಶನ್‌ ಆಧಾರದಲ್ಲಿ ತತ್‌ಕ್ಷಣಕ್ಕೆ ಸಿಬಂದಿ ನೇಮಕ ಮಾಡಲಾಗುವುದು. ಒಂದೆರಡು ದಿನಗಳಲ್ಲಿ ಅಲ್ಲಿ ಸೇವೆ ದೊರಕಲಿದೆ.
– ಪ್ರಕಾಶ್‌, ಪಶು ಸಂಗೋಪನೆ ಮತ್ತು ಪಶು ಸೇವಾ ಇಲಾಖೆ ಕಚೇರಿ ಅಧಿಕಾರಿ

ಪ್ರಯೋಜನ ಇಲ್ಲ
ಸಾರ್ವಜನಿಕ ಸೇವೆಗೆ ಇರಬೇಕಿದ್ದ ಈ ಪಶುಚಿಕಿತ್ಸಾ ಘಟಕ ಈಗ ಯಾವುದಕ್ಕೂ ಪ್ರಯೋಜನಕ್ಕೆ ಬರದಂತಾಗಿದೆ. ಇಲ್ಲಿಗೆ ಸಿಬಂದಿ ಹಾಗೂ ಇತರೆ ವ್ಯವಸ್ಥೆ ಒದಗಿಸಿದಲ್ಲಿ ಉತ್ತಮ.
– ಮಾಧವ ಕೊಲ್ಲಮೊಗ್ರು, ಸ್ಥಳೀಯರು

— ಬಾಲಕೃಷ್ಣ  ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next