ಬೆಂಗಳೂರು: ಪಶು ಸಂಗೋಪನೆ ಇಲಾಖೆಯಿಂದ ನಿರುದ್ಯೋಗಿಗಳು, ಬಡ ರೈತರಿಗೆ ನೀಡುವ ಹಸುಗಳಿಗೆ ಇನ್ಮುಂದೆ ಚಿಪ್ ಅಳವಡಿಸಲಾಗುವುದು. ಇದರಿಂದ ಯೋಜನೆಯ ದುರ್ಬಳಕೆ ತಡೆಯಲು ಅನುಕೂಲವಾಗಲಿದೆ ಎಂದು ಪಶು ಸಂಗೋಪನೆ ಸಚಿವ ವೆಂಕಟರಾವ್ ನಾಡಗೌಡ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫಲಾನುಭವಿಗಳು, ಅಧಿಕಾರಿಗಳು ಹಾಗೂ ಬ್ಯಾಂಕ್ ಸಿಬ್ಬಂದಿ ಶಾಮೀಲಾಗಿ ಯೋಜನೆಯ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆಂಬ ಆರೋಪ ಹೆಚ್ಚಾಗಿರುವುದರಿಂದ ಇನ್ಮುಂದೆ ಹಸುಗಳಿಗೆ ಚಿಪ್ ಅಳವಡಿಕೆ ಮಾಡಿ ಕೊಡಲಾಗುವುದು. ಈಗಾಗಲೇ 625 ಹಸುಗಳಿಗೆ ಚಿಪ್ ಅಳವಡಿಸಲಾಗಿದೆ.
ಅಲ್ಲದೆ, ಈ ಹಿಂದೆ ನೀಡಿರುವ ಹಸುಗಳಿಗೆ ಚಿಪ್ ಅಳವಡಿಸಲು ಸಾಧ್ಯವೇ ಎಂಬ ಬಗ್ಗೆಯೂ ಪರಿಶೀಲಿಸಲಾಗುತ್ತಿದೆ. ಚಿಪ್ ಅಳವಡಿಸುವುದರಿಂದ ನಾವು ನೀಡಿದ ಹಸು ಎಲ್ಲಿದೆ, ಯಾವ ಪ್ರದೇಶದಲ್ಲಿದೆ ಎಂಬುದರ ಮಾಹಿತಿ ಸಿಗಲಿದೆ. ಜತೆಗೆ, ಒಮ್ಮೆ ಹಸು ವಿತರಿಸಿದ ನಂತರ ಆರು ವರ್ಷ ಮಾರಾಟ ಮಾಡಬಾರದೆಂಬ ಷರತ್ತು ಸಹ ವಿಧಿಸಲಾಗಿದೆ ಎಂದು ತಿಳಿಸಿದರು.
ಇಲಾಖೆಯಿಂದ 1.25 ಲಕ್ಷ ರೂ.ಮೌಲ್ಯದ ಎರಡು ಹಸು ನೀಡಲಾಗುತ್ತಿತ್ತು. ಸಾಮಾನ್ಯ ವರ್ಗದವರಿಗೆ ಶೇ.40ರಷ್ಟು, ಎಸ್‌ಸಿ/ಎಸ್‌ಟಿ ವರ್ಗಕ್ಕೆ ಶೇ.90ರಷ್ಟು ಸಬ್ಸಿಡಿ ನೀಡಲಾಗುತ್ತಿದೆ. ಉಳಿದಂತೆ ಸಾಲ ನೀಡಲಾಗುತ್ತಿದೆ. ಇದೀಗ ಹೆಚ್ಚು ಅರ್ಜಿಗಳು ಬರುತ್ತಿರುವುದರಿಂದ ಒಂದು ಹಸು ನೀಡುವ ಬಗ್ಗೆಯೂ ಚಿಂತನೆ ನಡೆದಿದೆ ಎಂದು ಹೇಳಿದರು.
ಕಾಗದ ರಹಿತ ಇಲಾಖೆಗೆ ಚಿಂತನೆ: ಪಶು ಸಂಗೋಪನೆ ಇಲಾಖೆಯನ್ನು ಸಂಪೂರ್ಣ ಕಾಗದ ರಹಿತ ಮಾಡಲು ಸಾಫ್ಟ್ವೇರ್ ಸಿದ್ಧಪಡಿಸಲಾಗುತ್ತಿದೆ. ಇಲಾಖೆಯ ಸಿಬ್ಬಂದಿ, ನೌಕರರ ಮಾಹಿತಿ, ಇಲಾಖೆಯ ಯೋಜನೆಗಳ ಮಾಹಿತಿಗಳು ಒಂದೇ ಕಡೆ ಸಿಗುವಂತೆ ವೆಬ್‌ಸೈಟ್ ಸಿದ್ಧಪಡಿಸಲಾಗುವುದು. ಪಶು ಸಂಗೋಪನೆ ಇಲಾಖೆಯ ವೈದ್ಯರು, ಔಷಧ ದಾಸ್ತಾನು, ಬೇಡಿಕೆ ಕುರಿತು ಆನ್‌ಲೈನ್‌ನಲ್ಲೇ ಮಾಹಿತಿ ಲಭ್ಯವಾಗುವಂತೆ ನೋಡಿಕೊಳ್ಳಲಾಗುವುದು. ಅಗತ್ಯ ಇರುವ ಕಡೆ ಸೌಲಭ್ಯ ಒದಗಿಸಲು ಇದು ನೆರವಾಗಲಿದೆ ಎಂದು ತಿಳಿಸಿದರು.
ತಲಾ 11 ಲಕ್ಷ ಪರಿಹಾರ ವಿತರಣೆ: ಮಲ್ಪೆಯ ಸುವರ್ಣ ತ್ರಿಭುಜ ಬೋಟು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಪತ್ತೆಯಾದವರ ಕುಟುಂಬಗಳಿಗೆ ತಲಾ 11 ಲಕ್ಷ ರೂ.ವರೆಗೆ ಪರಿಹಾರ ನೀಡಲಾಗಿದೆ. ನೌಕಾಪಡೆಯ ಹಡಗಿನಿಂದಲೇ ಈ ದುರಂತ ನಡೆದಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರಕ್ಕೂ ಮಾಹಿತಿ ನೀಡಿ ನಾಪತ್ತೆಯಾದವರ ಕುಟುಂಬಗಳಿಗೆ ಕೇಂದ್ರ ಸರ್ಕಾರದಿಂದಲೂ ನೆರವು ಕೊಡಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸಮುದ್ರದಲ್ಲಿ ಇಂತಹ ಪ್ರಕರಣಗಳು ಮರುಕಳಿಸದಂತೆ ಎಚ್ಚರ ವಹಿಸಲು ಇಸ್ರೋ ಸೇರಿ ಇತರ ತಂತ್ರಜ್ಞಾನದ ನೆರವು ಪಡೆಯಲಾಗುವುದು ಎಂದು ಸಚಿವರು ತಿಳಿಸಿದರು.