Advertisement

ಹಿರೇಅರಳಿಹಳ್ಳಿಗೆ ಪಶು ಚಿಕಿತ್ಸಾಲಯ

11:53 AM Jun 07, 2022 | Team Udayavani |

ಯಲಬುರ್ಗಾ: ತಾಲೂಕಿನ ಹಿರೇಅರಳಿಹಳ್ಳಿ ಗ್ರಾಮಕ್ಕೆ ರಾಜ್ಯ ಸರ್ಕಾರ ನೂತನ ಪಶು ಚಿಕಿತ್ಸಾಲಯವನ್ನು ಕೊನೆಗೂ ಮಂಜೂರು ಮಾಡಿದೆ. ರಾಜ್ಯ ಸರ್ಕಾರದ ಪಶು ಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ ಪೀಠಾಧಿಕಾರಿ ಕಾವ್ಯ ಎಚ್‌. ಎನ್‌ ಮಂಜೂರು ಮಾಡಿ ಆದೇಶ ಹೊರಡಿಸಿದ್ದಾರೆ.

Advertisement

ಕಳೆದ 20 ವರ್ಷಗಳಿಂದ ಆಡಳಿತ ನಡೆಸಿದ ಜನಪ್ರತಿನಿಧಿಗಳಿಗೆ ಗ್ರಾಮದ ರೈತರು ಮನವಿ ಸಲ್ಲಿಸುತ್ತ ಬಂದಿದ್ದರು. ಗ್ರಾಮಕ್ಕೆ ಪಶು ಚಿಕಿತ್ಸಾಲಯ ಬಹುದಿನದ ಬೇಡಿಕೆಯಾಗಿತ್ತು. ಆದರೆ ಇದುವರೆಗೂ ಬೇಡಿಕೆ ಈಡೇರಿರಲಿಲ್ಲ. ಇದೀಗ ರಾಜ್ಯ ಸರ್ಕಾರ ಮಂಜೂರು ಮಾಡಿದ 20 ನೂತನ ಪಶು ಚಿಕಿತ್ಸಾಲಯ ಪೈಕಿ ತಾಲೂಕಿನ ಹಿರೇಅರಳಿಹಳ್ಳಿಗೆ ಒಂದಾಗಿದೆ.

ಕ್ಷೇತ್ರದ ಶಾಸಕರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವ ಹಾಲಪ್ಪ ಆಚಾರ್‌ ರೈತರ ಸಂಕಷ್ಟ ಅರಿತು ಪಶು ಆಸ್ಪತ್ರೆ ಮಂಜೂರು ಮಾಡಿಸಿದ್ದಕ್ಕೆ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ರೈತರು ಸಂತಸ ವ್ಯಕ್ತಪಡಿಸಿದ್ದಾರೆ.

12 ಗ್ರಾಮಗಳಿಗೆ ಅನುಕೂಲ: ಗ್ರಾಮದಲ್ಲಿ ಪಶು ಆಸ್ಪತ್ರೆ ಆರಂಭವಾಗುತ್ತಿರುವುದರಿಂದ ಹಿರೇಅರಳಿಹಳ್ಳಿ, ಬುಡಕುಂಟಿ, ಬೀರಲದಿನ್ನಿ, ಹೊಸೂರು, ಮಂಡಲಮರಿ, ತರಲಕಟ್ಟಿ, ಕಲಕಬಂಡಿ, ಮಾಟರಂಗಿ, ಮಂಡಲಮರಿ, ವಜ್ರಬಂಡಿ, ಕೋನಸಾಗರ, ಸಾಲಭಾವಿ ಸೇರಿದಂತೆ 12ಕ್ಕೂ ಹೆಚ್ಚು ಗ್ರಾಮಗಳ ರೈತರಿಗೆ ಅನುಕೂಲವಾಗಲಿದೆ. ಹಿರೇಅರಳಿಹಳ್ಳಿ ನೂತನ ಪಶು ಚಿಕಿತ್ಸಾಲಯದಿಂದ 5 ಸಾವಿರ ಜಾನುವಾರುಗಳಿಗೆ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಲಭ್ಯವಾಗಲಿದೆ.

ಸೇವೆ ಆರಂಭ: ತಾತ್ಕಾಲಿಕ ಸೇವೆ ಆರಂಭಕ್ಕೆ ಕಟ್ಟಡ ಒದಗಿಸುವುದು ಹಾಗೂ ಮುಂದಿನ ದಿನಗಳಲ್ಲಿ ಹೊಸ ಕಟ್ಟಡ ನಿರ್ಮಾಣಕ್ಕೆ ಸ್ಥಳ ನಿವೇಶನ ಒದಗಿಸಲು ಈಗಾಗಲೇ ಪಶು ಇಲಾಖೆ ಗ್ರಾಪಂಗೆ ಪತ್ರ ಬರೆದಿದ್ದು ಶೀಘ್ರದಲ್ಲಿ ನೂತನ ಹೊಸ ಆಸ್ಪತ್ರೆ ಉದ್ಘಾಟನೆಯಾಗಲಿದೆ.

Advertisement

ರೈತ ಸಮೂಹ ಸಂತಸ: ಹಿರೇಅರಳಿಹಳ್ಳಿ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘ ಇದ್ದು ಹಸುಗಳ ಸಂಖ್ಯೆಯೂ ಹೆಚ್ಚಿನ ಪ್ರಮಾಣದಲ್ಲಿದೆ. ಈ ಹಿಂದೆ ರೈತರು ದೂರದ ಯಲಬುರ್ಗಾ, ಹಿರೇವಂಕಲಕುಂಟಾ ಗ್ರಾಮಕ್ಕೆ ಜಾನುವಾರುಗಳ ತಪಾಸಣೆಗೆ ಆಗಮಿಸಬೇಕಿತ್ತು. ಸಾಕಷ್ಟು ಹಣ, ಸಮಯ ವ್ಯರ್ಥವಾಗುತಿತ್ತು. ಈಗ ರೈತರಿಗೆ ಅನುಕೂಲವಾಗಿದೆ.

ಹಿರೇಅರಳಿಹಳ್ಳಿ ಗ್ರಾಮಕ್ಕೆ ಹೊಸದಾಗಿ ಪಶು ಚಿಕಿತ್ಸಾಲಯ ಮಂಜೂರು ಮಾಡಿಸಿದ್ದೇನೆ. ಜಾನುವಾರುಗಳಿಗೆ ರೈತ ಸಮೂಹ ಆಗಾಗ ಆರೋಗ್ಯ ತಪಾಸಣೆ ಮಾಡಿಸಬೇಕು. ಮಳೆಗಾಲವಿದ್ದು, ರೈತರು ತಮ್ಮ ರಕ್ಷಣೆ ಹಾಗೂ ಜಾನುವಾರುಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ರೈತರ ಶ್ರೇಯೋಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ಕ್ಷೇತ್ರದ ಅಭಿವೃದ್ದಿಯೇ ನನ್ನ ಮೊದಲ ಆದ್ಯತೆ.  –ಹಾಲಪ್ಪ ಆಚಾರ್‌, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವ

ಸಚಿವ ಹಾಲಪ್ಪ ಆಚಾರ್‌ ರೈತರ ಹಿತ ಗಮನದಲ್ಲಿಟ್ಟುಕೊಂಡು ನಮ್ಮ ಗ್ರಾಮಕ್ಕೆ ಪಶು ಚಿಕಿತ್ಸಾಲಯ ಮಂಜೂರು ಮಾಡಿಸಿದ್ದು ಸಂತಸ ತಂದಿದೆ. ಕಳೆದ 20 ವರ್ಷಗಳಿಂದ ನಮ್ಮ ಬೇಡಿಕೆ ಈಡೇರಿರಲಿಲ್ಲ ಇದೀಗ ಈಡೇರಿದೆ. ಕ್ಷೇತ್ರದ ರೈತರ ಬಗ್ಗೆ ಸಚಿವರು ವಿಶೇಷ ಆಸಕ್ತಿ ಹೊಂದಿದ್ದಾರೆ. ಗ್ರಾಮಸ್ಥರು-ರೈತರೆಲ್ಲ ಸೇರಿ ಸಚಿವರನ್ನು ಸನ್ಮಾನಿಸುತ್ತೇವೆ.  -ಶಿವಪ್ಪ ವಾದಿ, ಕೆಎಂಎಫ್‌ ನಿರ್ದೇಶಕ

ಜಾನುವಾರುಗಳ ಆರೋಗ್ಯ ರಕ್ಷಣೆ ಮಾಡುವುದರಿಂದ ರೈತರ ಅಭಿವೃದ್ಧಿ ಸಾಧ್ಯ. ರೈತರು ಜಾನುವಾರುಗಳ ಆರೋಗ್ಯ ತಪಾಸಣೆ ಮಾಡಿಸುವ ಮೂಲಕ ಜಾನುವಾರುಗಳ ರಕ್ಷಣೆಗೆ ಮುಂದಾಗಬೇಕು. ಹಿರೇಅರಳಿಹಳ್ಳಿಯಲ್ಲಿ ಶೀಘ್ರ ಸೇವೆ ಆರಂಭಿಸಲಾಗುತ್ತದೆ.  -ಡಾ| ಪ್ರಕಾಶ ಚೂರಿ, ಮುಖ್ಯ ವೈದ್ಯಾಧಿಕಾರಿ, ಪಶು ಸಂಗೋಪನೆ ಇಲಾಖೆ, ಯಲಬುರ್ಗಾ  

-ಮಲ್ಲಪ್ಪ ಮಾಟರಂಗಿ

Advertisement

Udayavani is now on Telegram. Click here to join our channel and stay updated with the latest news.

Next