ಈ ಚಿತ್ರದ ವಿಶೇಷವೆಂದರೆ, ಬಹುತೇಕ ಹಾಸ್ಯ ಕಲಾವಿದರು ಕಾಣಿಸಿಕೊಂಡಿದ್ದಾರೆ. ಕನ್ನಡದ ಸುಮಾರು 35 ಕ್ಕೂ ಹೆಚ್ಚು ಹಿರಿಯ ಹಾಗೂ ಕಿರಿಯ ಹಾಸ್ಯ ಕಲಾವಿದರನ್ನು ಒಟ್ಟಿಗೆ ನೋಡಬಹುದು.
ವೇದಿಕೆ ದೊಡ್ಡದಿತ್ತು. ವೇದಿಕೆ ಮೇಲೆ ಕುಳಿತವರ ಮತ್ತು ನಿಂತವರ ಸಂಖ್ಯೆ ಕೂಡ ಅಷ್ಟೇ ದೊಡ್ಡದಾಗಿತ್ತು. ಆ ವೇದಿಕೆ ಸಿನಿಮಾ ಮಾಹಿತಿಗಿಂತ, ಬರೀ ಥ್ಯಾಂಕ್ಸ್‌ಗೆ ಮತ್ತು ಸನ್ಮಾನಿಸಿ ಗೌರವಿಸುವುದಕ್ಕೆ ಸೀಮಿತವಾಗಿತ್ತು. ಸಮಯವೂ ಮೀರಿತ್ತು. ಆದರೂ, ಸಿನಿಮಾಗೆ ಕೆಲಸ ಮಾಡಿದವರನ್ನು ಕರೆದು, ಕೂರಿಸಿ, ಥ್ಯಾಂಕ್ಸ್ ಹೇಳಿ ಸನ್ಮಾನಿಸಿ, ಗೌರವಿಸುವ ಕಾರ್ಯ ಮುಂದುವರೆದಿತ್ತು. ಅದರ ನಡುವೆ, ಹಾಡು, ಟ್ರೇಲರ್ ಕೂಡ ತೋರಿಸಲಾಯಿತು.
ಇದು “ಕಾಪಿ ಕಟ್ಟೆ’ ಚಿತ್ರದ ಹಾಡು ಹಾಗು ಟ್ರೇಲರ್ ಬಿಡುಗಡೆಯಲ್ಲಿ ಕಂಡುಬಂದ ದೃಶ್ಯ. ನೃತ್ಯ ನಿರ್ದೇಶಕರಾಗಿದ್ದ ಕಪಿಲ್ ಈ ಚಿತ್ರದ ನಿರ್ದೇಶಕರು. ಇದು ಅವರ ನಿರ್ದೇಶನದ ಮೂರನೇ ಚಿತ್ರ. ಚಿತ್ರದ ವಿಶೇಷವೆಂದರೆ, ಬಹುತೇಕ ಹಾಸ್ಯ ಕಲಾವಿದರು ಕಾಣಿಸಿಕೊಂಡಿದ್ದಾರೆ. ಕನ್ನಡದ ಸುಮಾರು 35 ಕ್ಕೂ ಹೆಚ್ಚು ಹಿರಿಯ ಹಾಗೂ ಕಿರಿಯ ಹಾಸ್ಯ ಕಲಾವಿದರನ್ನು ಒಟ್ಟಿಗೆ ನೋಡುವ ಅವಕಾಶ ಕಲ್ಪಿಸಿದ್ದಾರೆ ನಿರ್ದೇಶಕ ಕಪಿಲ್. ಹಾಸ್ಯ ಕಲಾವಿದರನ್ನಿಟ್ಟುಕೊಂಡೇ ಒಂದು ಅಪರೂಪದ ಕಥೆಗೆ ಹಣ ಹಾಕಿರೋದು ಜಿ.ರಾಘವೇಂದ್ರ. ಅವರಿಗೆ ಇದು ಹೊಸ ಅನುಭವ.
ಕಥೆ ಬಗ್ಗೆ ಹೇಳುವುದಾದರೆ, ಹಿರಿಯ ನಾಗರೀಕರ ಮನಸ್ಥಿತಿ ಹೇಗಿರುತ್ತೆ. ತಮ್ಮ ಸಮಸ್ಯೆ ಹೇಳಿಕೊಳ್ಳಲು ಹೇಗೆಲ್ಲಾ ಒದ್ದಾಡುತ್ತಾರೆ. ಸಾಕಷ್ಟು ನೋವು ಇದ್ದರೂ, ತಮ್ಮ ಬದುಕಿನ ಪಯಣವನ್ನು ಹೇಗೆ ಸಾಗಿಸುತ್ತಾರೆ. ತಮ್ಮ ಸಮಕಾಲೀನ ಗೆಳೆಯರ ಜೊತೆ ಬೆರೆಯುವ ಹಿರಿಯ ಮನಸ್ಸುಗಳು, ಒಂದೆಡೆ ಸೇರಿ ಚರ್ಚಿಸುವ ವಿಷಯವೇ ಚಿತ್ರದ ಹೈಲೈಟ್. ಇನ್ನು, ಒಂದೇ ಹಂತದಲ್ಲಿ ಚಿತ್ರೀಕರಿಸಿರುವ ಚಿತ್ರದಲ್ಲಿ ಎಂ.ಎಸ್.ಉಮೇಶ್, ಬೆಂಗಳೂರು ನಾಗೇಶ್, ಹೊನ್ನವಳ್ಳಿ ಕೃಷ್ಣ, ಡಿಂಗ್ರಿ ನಾಗರಾಜ್, ರಮೇಶ್‌ಭಟ್, ಸುಂದರ್ ರಾಜ್, ಬ್ಯಾಂಕ್ ಜನಾರ್ದನ್, “ಶಂಖನಾದ’ಅರವಿಂದ್, ಮೈಸೂರು ರಮಾನಂದ್, ಮನದೀಪ್‌ರಾಯ್, ಶಂಕರ್‌ಭಟ್, ಬಿರಾದರ್, ದೊಡ್ಡಣ್ಣ, ದಯಾನಂದ್, ಟೆನ್ನಿಸ್‌ಕೃಷ್ಣ, ಮೈಕೆಲ್‌ವುಧು, ರೇಖಾದಾಸ್ ನಟಿಸಿದ್ದಾರೆ. ಆನಂದರೆಡ್ಡಿ ಹಾಗು ಶೃತಿ ನಾಯಕ, ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ನರಸಿಂಹಮೂರ್ತಿ ಚಿತ್ರಕಥೆ, ಸಂಭಾಷಣೆ ಬರೆದರೆ, ಗೋಪಿ ಕಲಕಾರ್ ಸಂಗೀತವಿದೆ. ಸಿ.ನಾರಾಯಣ್ ಛಾಯಾಗ್ರಹಣವಿದೆ. ಉದಯಲೇಖ ಸಾಹಿತ್ಯ ಬರೆದಿದ್ದಾರೆ. ಅಂದಿನ ಕಾರ್ಯಕ್ರಮಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್, ಕಾರ್ಯದರ್ಶಿ ಎನ್.ಎಂ.ಸುರೇಶ್, ನಾಗಣ್ಣ ಇತರರು ಸಾಕ್ಷಿಯಾಗಿದ್ದರು.