ಮುಂಡಗೋಡ: ತಾಲೂಕಿನ ಜೋಗೇಶ್ವರ ಹಳ್ಳ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕರಾದ ರಾಮಚಂದ್ರ ಕಲಾಲ ಮಹಾರಾಷ್ಟ್ರ ಮತ್ತು ರಾಜಸ್ಥಾನಿ ಶೈಲಿಯ ವರ್ಲಿ ಚಿತ್ರಕಲೆಯನ್ನು ಕರಗತ ಮಾಡಿಕೊಂಡಿರುವ ಮೋಡಿಗಾರರು.
ಇವರು ತಾಲೂಕಿನಲ್ಲಿ ಅಲ್ಲದೇ ಜಿಲ್ಲೆಯ ವಿವಿಧೆಡೆ ವರ್ಲಿ ಕಲೆಯನ್ನು ಅರಳಿಸುತ್ತಿದ್ದು ನೋಡುಗರ ಗಮನ ಸೆಳೆಯುತ್ತಿದೆ. ಚಿತ್ರಕಲೆಯಲ್ಲಿ ಆಸಕ್ತಿ ಮೂಡಿಸಲು ಮಕ್ಕಳ ಜ್ಞಾಪಕ ಶಕ್ತಿ ವೃದ್ಧಿಸಲು ಗಣಿತ, ವಿಜ್ಞಾನ ಮತ್ತು ಇತರೆ ವಿಷಯಗಳನ್ನು ಆಸಕ್ತಿಯಿಂದ ಕಲಿಯಲು ಮತ್ತು ಮಕ್ಕಳು ನಿರಂತರವಾಗಿ ಶಾಲೆಗೆ ಬರಲು ವರ್ಲಿ ಚಿತ್ರಕಲೆ ಸಹಾಯಕಾರಿ.
ವರ್ಲಿ ಚಿತ್ರಕಲೆಗೆ ಹೆಚ್ಚಿನ ಖರ್ಚಿಲ್ಲ. ಇದು ಕೇವಲ ರೇಖೆಗಳ ವಿನ್ಯಾಸದಿಂದ ಕಲಿಯಲು ಸಾಧ್ಯವಾಗಿದೆ. ಮೂಲತಃ ಮಹರಾಷ್ಟ್ರದ ಮತ್ತು ರಾಜಸ್ಥಾನಿ ಸಾಂಪ್ರದಾಯಿಕ ಶೈಲಿಯ ಕಲೆಯಾದರೂ ಕರ್ನಾಟಕ ಶೈಲಿಯ ಕಲೆ ಇದರಲ್ಲಿದೆ. ನಮ್ಮ ಸಾಂಪ್ರದಾಯಿಕ ಹಬ್ಬಗಳಾದ ದೀಪಾವಳಿ, ಶೀಗೆಹುಣ್ಣಿಮೆಗಳಲ್ಲಿ ಹಿಂದೆ ಜನರು ಮಣ್ಣು ಹಾಗೂ ಸುಣ್ಣದಿಂದ ಆಕರ್ಷಣೆ ಮಾಡಿ ಖುಷಿ ಪಡುತ್ತಿದ್ದರು.
ಶಿಕ್ಷಕ ರಾಮಚಂದ್ರ ನಮ್ಮ ಸಾಂಪ್ರದಾಯಿಕ ಕಲೆ ಮರೆಯಾಗಬಾರದೆಂದು ಈ ಕಲೆಯನ್ನು ಪ್ರಾಥಮಿಕ ಶಾಲಾ ಮಕ್ಕಳಿಗೆ ಸರಳೀಕರಣ ಕಲೆಯಾಗಿ ನಿರಂತರ ಕಲಿಕೆಗೆ ಆಸಕ್ತಿ ಮೂಡಿಸಲು ಬಿಡಿಸುತ್ತಿದ್ದಾರೆ. ಸದ್ಯ ತಹಶೀಲ್ದಾರ್ ಕಾರ್ಯಲಯ, ತಾಲೂಕಾಸ್ಪತ್ರೆ, ಎಪಿಎಂಸಿ, ಅಂಗನವಾಡಿ ಕೇಂದ್ರಗಳಲ್ಲಿ ಮತ್ತು ಕೆಲ ತಿಂಗಳ ಹಿಂದೆ ಶಿರಸಿ ಉಪನಿರ್ದೇಶಕರ ಕಾರ್ಯಲಯ, ತಾಲೂಕಿನ ಬಿಇಒ, ಬಿಆರ್‌ಸಿ, ಲೊಯೋಲಾ ಶಾಲಾ ಆವರಣ, ಜೋಗೇಶ್ವರ ಹಳ್ಳ ಕಿರಿಯ ಪ್ರಾಥಮಿಕ ಶಾಲೆ ಅಲ್ಲದೇ ಕೋವಿಡ್ ವೇಳೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಕೋವಿಡ್‌ನ ಮುಂಜಾಗೃತೆ ಬಗ್ಗೆ ಚಿತ್ರಗಳನ್ನು ಬಿಡಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದರು.
ಇವರು ತಮ್ಮ ಬಿಡುವಿನ ವೇಳೆ ಈ ಕಲೆಯನ್ನು ರಚಿಸುತ್ತಿದ್ದಾರೆ. ಈ ಕಲೆಯನ್ನು ಶಾಲಾ ಮಕ್ಕಳು ಹೆಚ್ಚಿನ ಆಸಕ್ತಿ ವಹಿಸುವುದು ಹಾಗೂ ಪಾಲಕರಿಗೂ ಸುಲಭವಾಗಿ ತಮ್ಮ ಮಕ್ಕಳಿಗೆ ಕಲಿಸಬಹುದಾಗಿದೆ. ವರ್ಲಿ ಚಿತ್ರಕಲೆಯ ಕಲಾವಿದ ಮತ್ತು ಶಿಕ್ಷಕ ರಾಮಚಂದ್ರ ಕಲಾಲ: ವರ್ಲಿ ಚಿತ್ರಕಲೆ ಸಾಂಪ್ರದಾಯಿಕ ಕಲೆಯಾಗಿದೆ. ಇದನ್ನು ಉಳಿಸುವ ಜತೆಗೆ ಕಲೆಯ ಆಸಕ್ತಿ ಮತ್ತು ನಮ್ಮ ಮೂಲ ವೃತಿ ಉಳಿಯುವ ಸಲುವಾಗಿ ಹಾಗೂ ಕಡಿಮೆ ವೆಚ್ಚದಲ್ಲಿ ಹೆಚ್ಚು ಆರ್ಕಷಣೆ ಗೊಳಿಸುತ್ತದೆ. ಈ ಚಿತ್ರಣವು ಅತ್ಯಂತ ಸರಳ ಹಾಗೂ ಸುಂದರವಾಗಿದೆ. ಆಸಕ್ತ ಮಕ್ಕಳಿಗೆ ವರ್ಲಿ ಚಿತ್ರಕಲೆಯನ್ನು ಕಲಿಸುತ್ತಿದ್ದೇನೆ. ನನ್ನ ನೆಚ್ಚಿನ ವಿದ್ಯಾರ್ಥಿಗಳಾದ ಅಬ್ರಹಾಂ ರೋಣ, ದರ್ಶನ ಕಲಾಲ ಮತ್ತು ಶಶಾಂಕ ನಾಯ್ಕ ನನಗೆ ಸಹಾಯ ಮಾಡುತ್ತಿದ್ದಾರೆ. ಉಪನಿರ್ದೇಶಕರು, ಬಿಇಒ ಮತ್ತು ತಹಶೀಲ್ದಾರ್ ಅವರು ಉತ್ತಮ ಸಹಕಾರ ನೀಡುತ್ತಿದ್ದಾರೆ ಎಂದರು.
ಮುನೇಶ ಬಿ. ತಳವಾರ