ಎಚ್.ಡಿ.ಕೋಟೆ: ತಾಲೂಕಿನ ಗಡಿಭಾಗದಲ್ಲಿ ತಾತ್ಕಾಲಿಕವಾಗಿ ಮುಚ್ಚಿದ್ದ ಬಾರ್‌ಗಳನ್ನು ಮತ್ತೆ ತೆರೆಯಲು ಅನುಮತಿ ಕೋರಿ ಮಾಲಿಕರು ಅರ್ಜಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಅಬಕಾರಿ, ಪೊಲೀಸ್ ಹಾಗೂ ಅರಣ್ಯಾಧಿಕಾರಿಗಳ ತಂಡ ಬಾರ್ ತೆರೆಯುವ ಸ್ಥಳ ಪರಿಶೀಲಿಸಿದರು.
ಹಲ ವರ್ಷಗಳ ಹಿಂದೆ ಮದ್ಯದಂಗಡಿ ತೆರೆದಿತ್ತು. ಕೆಲ ಅಡೆತಡೆಗಳಿಂದಾಗಿ ಅವುಗಳನ್ನು ಮುಚ್ಚಿಸಲಾಗಿತ್ತು. ಆದರೆ ಸರ್ಕಾರದ ಇತ್ತೀಚಿನ ಆದೇಶದನ್ವಯ ಮತ್ತೆ ಬಾರ್ ತೆರೆಯಲು ಅನುಮತಿ ಕೋರಿ ಮಾಲಿಕರು ಅರ್ಜಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳ ತಂಡ ಪರಿಶೀಲಿಸಿದರು.
ಈಗಾಗಲೇ ಡಿ.ಬಿ.ಕುಪ್ಪೆ ವ್ಯಾಪ್ತಿಯ ಹೊಸ ತಿಮ್ಮನಹಳ್ಳಿ, ಡಿ.ಬಿ.ಕುಪ್ಪೆ, ಮಚ್ಚಾರು ಸೇರಿ 3 ಮದ್ಯದಂಗಡಿಗಳನ್ನು ತೆರೆಯಲಾಗಿದೆ. ಇನ್ನೂ ಈಗ ಪರಿಶೀಲನೆ ನಡೆಸುತ್ತಿರುವ ಮದ್ಯದಂಗಡಿಗಳು ಹಿಂದೆಯೇ ತೆರೆಯಲಾಗಿದ್ದು, ಕೆಲ ಕಾರಣಗಳಿಂದ ಬಾರ್‌ಗಳನ್ನು ತಾತ್ಕಾಲಿಕವಾಗಿ ಮುಚ್ಚಿಸಲಾಗಿತ್ತು.
ಹೊಸ ಆದೇಶ: ಕಳೆದ ಆ.31ರಲ್ಲಿ ರಾಜ್ಯ ಸರ್ಕಾರ 2011ರ ಜನಗಣತಿಯ ಅನ್ವಯ 5 ಸಾವಿರ ಜನಸಂಖ್ಯೆಗೂ ಹೆಚ್ಚಿರುವ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿನಾಯಿತಿ ನೀಡಿ ಮದ್ಯದಂಗಡಿ ತೆರೆಯಬಹುದು ಎಂದು ಆದೇಶ ನೀಡಿದೆ.
ಮಾಲಿಕರ ಆರೋಪ: ಡಿ.ಬಿ.ಕುಪ್ಪೆ ಗಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ 3 ಬಾರ್‌ಗಳ ಮಾಲಿಕರು ಮುಚ್ಚಿರುವ ಬಾರ್‌ಗಳನ್ನು ತೆರೆದರೆ ತಮ್ಮ ವ್ಯಾಪಾರಕ್ಕೆ ಹೊಡೆತ ಬೀಳುತ್ತದೆ ಎಂದು ಭಾವಿಸಿ ಕೆಲರನ್ನು ಎತ್ತಿಕಟ್ಟಿ ಪರಿಶೀಲನೆಗೆ ಬಂದಿದ್ದ ಅಧಿಕಾರಿಗಳಿಗೆ ಬಾರ್ ತೆರೆಯಲು ಅನುಮತಿ ನೀಡಬೇಡಿ ಎಂದು ಮನವಿ ಕೊಡಿಸುತ್ತಿದ್ದಾರೆ ಎಂದು ಬಾರ್ ಮತ್ತೆ ತೆರೆಯಲು ಉದ್ದೇಶಿಸಿರುವ ಬಾರ್ ಮಾಲಿಕರು ಆರೋಪಿಸಿದ್ದಾರೆ.
ಮನವಿ ಸ್ವೀಕರಿಸಿದ ಮಾತನಾಡಿದ ಅಧಿಕಾರಿಗಳು, ಹಿಂದೆ ಮುಚ್ಚಿಸಿದ್ದ ಬಾರ್‌ಗಳನ್ನು ಸರ್ಕಾರದ ಹೊಸ ಆದೇಶದಂತೆ ಮತ್ತೆ ತೆರೆಯಲು ಬಾರ್ ಮಾಲಿಕರು ಅರ್ಜಿ ಸಲ್ಲಿಸಿದ್ದರು. ಹಾಗಾಗಿ ಮೇಲಧಿಕಾರಿಗಳ ಆದೇಶದಂತೆ ಸ್ಥಳ ಪರಿಶೀಲನೆ ನಡೆಸಿದ್ದೇವೆ. ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ತಂಡದಲ್ಲಿ ಡಿವೈಎಸ್‌ಪಿ ಭಾಸ್ಕರ್ ರೈ, ಅಬಕಾರಿ ಡಿವೈಎಸ್‌ಪಿ ಶಿವಪ್ರಸಾದ್, ಡಿ.ಬಿ.ಕುಪ್ಪೆ ಅರಣ್ಯ ಇಲಾಖೆಯ ಆರ್‌ಎಫ್‌ಒ ಸುಬ್ರಹ್ಮಣ್ಯ, ಅಬಕಾರಿ ನಿರೀಕ್ಷಕ ಆರ್.ಬಿ.ಹೊಸಳ್ಳಿ ಇನ್ನಿತರಿದ್ದರು.