Advertisement
ಇದು ಮಂಗಳೂರಿನ ಪ್ರಾದೇಶಿಕ ಸಾರಿಗೆ ಆಯುಕ್ತರ ಕಚೇರಿಯಲ್ಲಿ ಬುಧ ವಾರ ನಡೆದ ಜನಸ್ಪಂದನ ಸಭೆಯಲ್ಲಿ ಜನರು – ಸಂಘಟನೆ ಪ್ರಮುಖರ ದೂರಿನ ಸಂಕ್ಷಿಪ್ತ ರೂಪ.
ಕಾರ್ಮಿಕ ಮುಖಂಡ ಬಿ.ಕೆ. ಇಮಿ¤ಯಾಜ್ ಮಾತನಾಡಿ, ನಗರದಲ್ಲಿ ನರ್ಮ್ ಬಸ್ 68ಕ್ಕೆ ಅನುಮತಿ ಇದೆ. ಆದರೆ ಎಲ್ಲ ನರ್ಮ್ ಬಸ್‌ಗಳನ್ನು ಓಡಿಸುತ್ತಿಲ್ಲ. ಇದರಿಂದಾಗಿ ಶಕ್ತಿ ಯೋಜನೆಯೂ ಮಹಿಳೆಯರಿಗೆ ಲಭ್ಯವಾಗುತ್ತಿಲ್ಲ. ಹೀಗಾಗಿ ಅನುಮೋದನೆ ಪಡೆದ ಎಲ್ಲ ನರ್ಮ್ ಬಸ್ ಓಡಾಟಕ್ಕೆ ಅವಕಾಶ ನೀಡಬೇಕು. ಸುರತ್ಕಲ್ ಟೋಲ್ ದರದ ಕಾರಣದಿಂದ ಎಕ್ಸ್‌ಪ್ರೆಸ್ ಬಸ್‌ಗಳು 5 ರೂ. ಹೆಚ್ಚುವರಿ ದರ ಹಾಕಿದ್ದರು. ಈಗ ಟೋಲ್ ತೆಗೆದರೂ ಟಿಕೆಟ್ ದರ ಕಡಿಮೆ ಆಗಿಲ್ಲ ಎಂದು ದೂರಿದರು. ಜೋನ್ ಬಿ. ಮಿಸ್ಕಿತ್ ಉತ್ತರಿಸಿ, ಕೆಎಸ್‌ಆರ್‌ಟಿಸಿಯಿಂದ ಅನುಮತಿ ಕೇಳಿದ ಎಲ್ಲ ರೂಟ್‌ಗಳಿಗೆ ಬಸ್ ಓಡಿಸಲು ಅನುಮತಿ ನೀಡಲಾಗಿದೆ. ಒಂದು ವೇಳೆ ನರ್ಮ್ ಓಡಾಟ ನಡೆಸುತ್ತಿಲ್ಲವಾದರೆ ಆ ಬಗ್ಗೆ ಕೆಎಸ್‌ಆರ್‌ಟಿಸಿಗೆ ಪತ್ರ ಬರೆಯ ಲಾಗುವುದು. ಟೋಲ್ ದರ ಕೈ ಬಿಡದ ಬಗ್ಗೆ ಪರಿಶೀಲಿಸಲಾಗುವುದು ಎಂದರು.
Related Articles
ದ.ಕ. ಟ್ರಕ್ ಮಾಲಕರ ಸಂಘದ ಅಧ್ಯಕ್ಷ ಸುನಿಲ್ ಡಿ’ಸೋಜಾ ಮಾತನಾಡಿ, ನಗರದಲ್ಲಿ ಟ್ರಕ್ ನಿಲ್ಲಲು ಜಾಗವಿಲ್ಲ. ಜಾಗ ವಿಲ್ಲದೆ ಬೇರೆ ಕಡೆ ನಿಲ್ಲಿಸಿದರೆ ವಾಹನಗಳಿಗೆ ಕೆಲವರು ಸಮಸ್ಯೆ ಮಾಡುತ್ತಿದ್ದಾರೆ. ಓವರ್‌ಲೋಡ್ ಆಗಿದ್ದರೆ ಕೇವಲ ಚಾಲಕನ ವಿರುದ್ಧ ಮಾತ್ರ ಕೇಸ್ ಮಾಡುವುದಲ್ಲ. ವಸ್ತು ಲೋಡ್ ಮಾಡುವ ಸಂಸ್ಥೆ, ಮಾಲಕ ಸಹಿತ ಎಲ್ಲರ ವಿರುದ್ಧವೂ ಕೇಸ್ ಹಾಕಬೇಕು ಎಂದು ಆಗ್ರಹಿಸಿದ ಅವರು, ಓವರ್‌ಲೋಡಿಂಗ್ ಬಗ್ಗೆ ಇಲಾಖೆಗಳು ಪರಿಶೀಲನೆಯನ್ನೂ ಮಾಡುತ್ತಿಲ್ಲ ಎಂದರು. ಟ್ರಕ್ ಟರ್ಮಿನಲ್ ನಿರ್ಮಾಣಕ್ಕೆ ಈಗಾಗಲೇ ಒಪ್ಪಿಗೆ ಸಿಕ್ಕಿದೆ. ಶೀಘ್ರ ಜಾರಿಗೆ ಬರಲಿದೆ ಎಂದು ಅಧಿಕಾರಿಗಳು ತಿಳಿಸಿದರು.
Advertisement
ಸಾಮಾಜಿಕ ಹೋರಾಟಗಾರ ಹನುಮಂತ ಕಾಮತ್ ಮಾತನಾಡಿ, ಪರವಾನಿಗೆ ಇದ್ದರೂ ಓಡದ, ನಿಗದಿತ ರೂಟ್‌ಗಳನ್ನು ತಪ್ಪಿಸುವ ಬಸ್‌ಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಸ್ಮಾರ್ಟ್‌ಕಾರ್ಡ್ ಸಮಯಕ್ಕೆ ಸರಿಯಾಗಿ ಸಿಗುತ್ತಿಲ್ಲ. ಬಸ್‌ಗಳ ಫೂಟ್‌ಬೋರ್ಡ್ ಎತ್ತರ ಸರಿ ಮಾಡಬೇಕು ಎಂದು ಆಗ್ರಹಿಸಿದರು. ಸಾಮಾಜಿಕ ಹೋರಾಟಗಾರ ಜಿ.ಕೆ. ಭಟ್ ಮಾತನಾಡಿ, ಶಾಲಾ ವಾಹನದಲ್ಲಿ ಅಧಿಕ ಮಕ್ಕಳ ಸಾಗಾಟ ಮಾಡಲಾಗುತ್ತಿದೆ ಎಂದರು.
ಅವಿಭಜಿತ ಜಿಲ್ಲಾ ಬಸ್ ನೌಕರರ ಸಂಘದ ಕಾರ್ಯಾಧ್ಯಕ್ಷ (ಎಚ್‌ಎಂಎಸ್) ಮೊಹಮ್ಮದ್ ರಫಿ ಮಾತನಾಡಿ, ಆರ್‌ಟಿಒ ಸಭೆಗೆ ಕಾರ್ಮಿಕ ಸಂಘದ ಪ್ರಮುಖರನ್ನು ಆಹ್ವಾನಿಸಬೇಕು ಎಂದರು. ಟ್ಯಾಕ್ಸಿ ಮಾಲಕರ ಪರವಾಗಿ ಮಾತನಾಡಿದ ಪದಾಧಿಕಾರಿಗಳು, ರಾಜಕೀಯ ನೇತಾರರು ಬಂದ ಕಾಲದಲ್ಲಿ ಕಾರುಗಳನ್ನು ಬಾಡಿಗೆಗೆ ನೀಡಿದ್ದು ಅದರ ಹಣ ಇನ್ನೂ ಲಭಿಸಿಲ್ಲ ಎಂದು ದೂರಿದರು.
ಶಾಲಾ ವಾಹನ ಮಾಲಕರ ಸಂಘದ ಅಧ್ಯಕ್ಷ ಮೋಹನ್ ಕುಮಾರ್ ಅತ್ತಾವರ ಮಾತನಾಡಿ, ಖಾಸಗಿ ವಾಹನದಲ್ಲಿ ಶಾಲಾ ಮಕ್ಕಳ ಬಾಡಿಗೆ ನಡೆಸುತ್ತಿರುವುದರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದರು.
ಮಂಗಳೂರಿಗೆ ಹೊಸ “ಎಟಿಸಿ’ಮಂಗಳೂರಿಗೆ ಹೊಸದಾಗಿ ಸ್ವಯಂ ಚಾಲಿತ ಪರೀಕ್ಷಾ ಸೆಂಟರ್ (ಎಟಿಸಿ) ಅನುಮೋದನೆ ಗೊಂಡಿದೆ. ಕೆಪಿಟಿ ಸಮೀಪದಲ್ಲಿ ವಾಹನಗಳ ತಪಾಸಣೆಯನ್ನು ಈಗ ಅಧಿಕಾರಿಗಳು ಮಾಡುತ್ತಿದ್ದು, ಮುಂದೆ ಸೂಕ್ತ ಜಾಗವನ್ನು ಗೊತ್ತು ಪಡಿಸಿ ಕಂಪ್ಯೂಟರ್ ಆಧಾರಿತವಾಗಿ ಸ್ವಯಂ ಚಾಲಿತ ಪರೀಕ್ಷಾ ಸೆಂಟರ್ ಕಾರ್ಯನಿರ್ವಹಿಸಲಿದೆ ಎಂದು ಮಿಸ್ಕಿತ್ ತಿಳಿಸಿದರು. ಇತರ ದೂರುಗಳು
-ಪರವಾನಿಗೆ ಇದ್ದರೂ ನಗರದ ವಿವಿಧ ಕಡೆಗಳಲ್ಲಿ ಖಾಸಗಿ ಬಸ್‌ಗಳು ಸಂಚಾರ ನಡೆಸು ತ್ತಿಲ್ಲ. ಹೀಗಾಗಿ ಪ್ರಯಾಣಿಕರಿಗೆ ಸಮಸ್ಯೆ ಆಗುತ್ತಿದೆ. ಇಂತಹ ರೂಟ್‌ಗಳಿಗೆ ಸರಕಾರಿ ಅಥವಾ ಖಾಸಗಿ ಬಸ್ ಸಂಚಾರಕ್ಕೆ ಅನುಮತಿ ನೀಡಬೇಕು. ಪ್ರಯಾಣಿಕರಿಗೆ ಟಿಕೆಟ್ ನೀಡಲೇಬೇಕು.
-ಆರ್‌ಟಿಒ ಕಚೇರಿ ಸುತ್ತಮುತ್ತ ಸ್ವತ್ಛತೆಗೆ ವಿಶೇಷ ಆದ್ಯತೆ ನೀಡಬೇಕು. ಸಿಬಂದಿ ಕೊರತೆ ಕಾಡುತ್ತಿದೆ. ಕಚೇರಿ ಒಳಗೆಯೂ ಸೂಕ್ತ ಬೆಳಕಿನ ವ್ಯವಸ್ಥೆ ಕಲ್ಪಿಸಿಕೊಡಬೇಕು.
-ಕೊಟ್ಟಾರ ಸಹಿತ ನಗರ ದಾಟಿದ ಕೂಡಲೇ ಹಲವು ರಿಕ್ಷಾದವರು ಮೀಟರ್ ಇಲ್ಲದೆ ಸಂಚಾರ ನಡೆಸುತ್ತಿದ್ದಾರೆ. ಪ್ರಯಾಣಿಕರಿಂದ ಕನಿಷ್ಠ ದರಕ್ಕಿಂತ ಅಧಿಕ ದರ ವಸೂಲಿ ಮಾಡುತ್ತಿದ್ದಾರೆ. ಇಂತಹ ರಿಕ್ಷಾ ಚಾಲಕರ ಪರವಾನಿಗೆ ರದ್ದು ಮಾಡಬೇಕು.
-ಸ್ಮಾರ್ಟ್‌ಕಾರ್ಡ್ 15 ದಿನಕ್ಕೊಮ್ಮೆ ಬಂದು ಖಾಲಿಯಾಗುತ್ತಿದೆ. ಇದನ್ನು ಸರಿಪಡಿಸಿ.
– ಪೋಸ್ಟಲ್ ಫೀಸ್ ಪಡೆದರೂ ಕೂಡ ಪೋಸ್ಟ್‌ನಲ್ಲಿ ಆರ್‌ಸಿ ಬರುತ್ತಿಲ್ಲ. ರಿನಿವಲ್ ಸಂದರ್ಭ ಜನರು ಕಡತವನ್ನು ಹಿಡಿದುಕೊಂಡು ಕಚೇರಿ ಅಲೆದಾಡುವುದಕ್ಕೆ ಮುಕ್ತಿ ನೀಡಬೇಕು.
-ಯಾವುದೇ ವಾಹನದ ವಿರುದ್ಧ ಇಲಾಖೆಗೆ ದೂರು ನೀಡಿದಾಗ ಸಂಬಂಧಿತನಿಗೆ ನೋಟಿಸ್ ನೀಡಲಾಗುತ್ತದೆ. ಈ ವೇಳೆ ದೂರುದಾರರ ಹೆಸರು, ವಿವರ ಬಹಿರಂಗ ಮಾಡಬಾರದು. ಈ ಕುರಿತ ವಿಚಾರಣೆ ನಡೆಯುವ ಸಂದರ್ಭ ನೋಟಿಸ್ ಪಡೆದವನು ಬಂದಾಗ ಮಾತ್ರ ದೂರುದಾರನಿಗೂ ಮಾಹಿತಿ ನೀಡಿ ಉಪಸ್ಥಿತಿ ಇರುವಂತೆ ನೋಡಿಕೊಳ್ಳಬೇಕು.
-ಬಸ್, ರಿಕ್ಷಾದಲ್ಲಿ ಕರ್ಕಶ ಹಾರ್ನ್ ತೆರವು ನಿರಂತರವಾಗಿ ನಡೆಯಬೇಕು. ಬಸ್ ನಿರ್ವಾಹಕರು ಕಿರಿಕಿರಿ ಸ್ವರೂಪದಲ್ಲಿ ಸೀಟಿ ಊದುವುದಕ್ಕೆ ಮುಕ್ತಿ ನೀಡಬೇಕು.
-ಟ್ರಾಫಿಕ್ ಸಮಸ್ಯೆಯಿಂದಾಗಿ ಬಸ್ ಚಾಲಕರು ಸಮಯ ಹೊಂದಿಸಲು ವೇಗವಾಗಿ ಚಾಲನೆ ಮಾಡುವ ಸ್ಥಿತಿ ಇದೆ. ಇದಕ್ಕಾಗಿ ರೂಟ್‌ನಲ್ಲಿ ಸಮಯ ಬದಲಾವಣೆಗೆ ಆದ್ಯತೆ ನೀಡಬೇಕು.
-ಸಾರಿಗೆ ಪ್ರಾಧಿಕಾರದ ಸಭೆ ನಡೆಯದೆ ಕೆಲವು ಸಮಯ ಆಗಿದೆ. ಇದನ್ನು ತತ್‌ಕ್ಷಣವೇ ನಡೆಸಲು ವ್ಯವಸ್ಥೆ ಮಾಡಬೇಕು. ಆರ್‌ಟಿಒ ಜನಸ್ಪಂದನ ಸಭೆ ನಿರಂತರವಾಗಿ ನಡೆಯಬೇಕು.