ಉಡುಪಿ: ಸುಮಾರು 19 ತಿಂಗಳಿಗೊಮ್ಮೆ ಸಂಜೆಯ ಪಶ್ಚಿಮ ಆಕಾಶದಲ್ಲಿ ವಿಜೃಂಭಿಸುವ ಶುಕ್ರ ಗ್ರಹ ಮೇ 30ರಂದು ಅತೀ ಎತ್ತರದಲ್ಲಿ ಸುಮಾರು 43 ಡಿಗ್ರಿ ಎತ್ತರದಲ್ಲಿ ಹೊಳೆಯಲಿದೆ. ಮೇ 30ರಿಂದ ಜುಲೈ ಅಂತ್ಯದ ವರೆಗೂ ಹೊಳೆಯುತ್ತ ಆಗಸ್ಟ್ ಪ್ರಾರಂಭದಲ್ಲಿ ಕಣ್ಮರೆಯಾಗುತ್ತದೆ. ಆ. 8ರಿಂದ 19ರ ವರೆಗೆ ಸೂರ್ಯನಿಗೆ ನೇರ ಬಂದು ಕಾಣದಾದಾಗ “ಅಸ್ತ’ ಎನ್ನುವರು.
ಅನಂತರ ಪೂರ್ವ ಆಕಾಶದಲ್ಲಿ ಬೆಳಗಿನ ಜಾವ ಗೋಚರವಾಗಲಿದೆ.
ಮೇ 30ರಿಂದ ಭೂಮಿಗೆ ಸಮೀಪಿಸುತ್ತಿದ್ದಂತೆ ದಿನದಿಂದ ದಿನಕ್ಕೆ ದಿಗಂತದೆಡೆಗೆ ಕೆಳಗಿಳಿಯುತ್ತ, ಪ್ರಭೆ ಹೆಚ್ಚಿಸಿಕೊಳ್ಳುತ್ತ ಜು. 7ರಂದು ಅತೀ ಹೆಚ್ಚಿನ ಪ್ರಭೆಯಲ್ಲಿ ಕಂಗೊಳಿಸುತ್ತದೆ. ಶುಕ್ರ ಈಗ ಭೂಮಿಯಿಂದ ಸುಮಾರು 15 ಕೋಟಿ ಕಿ.ಮೀ. ದೂರದಿಂದ ಆ. 8ರ ಹೊತ್ತಿಗೆ 4 ಕೋಟಿ ಕಿ.ಮೀ.ಗೆ ಸಮೀಪಿಸುತ್ತದೆ.
ಹೀಗೆ ಶುಕ್ರ ಗ್ರಹ ಕಾಣಿಸಲು ಪ್ರಮುಖ ಕಾರಣ ಶುಕ್ರ, ಬುಧ ಗ್ರಹದಂತೆ ಸೂರ್ಯ, ಭೂಮಿ ದೂರಕ್ಕಿಂತ ಕಡಿಮೆ ದೂರದಲ್ಲಿ ಇರುವುದು. ಸೂರ್ಯನಿಂದ ಬುಧ ಸುಮಾರು 6 ಕೋಟಿ, ಶುಕ್ರ 11 ಕೋಟಿ ಕಿ.ಮೀ. ಆದರೆ ಭೂಮಿ 15 ಕೋಟಿ ಕಿ.ಮೀ. ದೂರದಲ್ಲಿದೆ.
Related Articles
ಹೀಗಾಗಿ ಸೌರವ್ಯೂಹದಲ್ಲಿ ಭೂಮಿಗಿಂತ ಒಳಗಿರುವ ಈ ಎರಡು ಗ್ರಹಗಳು ರಾತ್ರಿ ಇಡೀ ಕಾಣುವುದಿಲ್ಲ, ಕಾಣುವುದೇ ಪಶ್ಚಿಮ ಆಕಾಶದಲ್ಲಿ ಸಂಜೆ ಹಾಗೂ ಪೂರ್ವ ಆಕಾಶದಲ್ಲಿ ಬೆಳಗಿನ ಜಾವದಲ್ಲಿ. ಸಂಜೆ ಆಕಾಶದಲ್ಲಿ ಸೂರ್ಯಾಸ್ತದ ಅನಂತರ ಕೆಲ ಗಂಟೆಗಳು ಮಾತ್ರ, ಹೆಚ್ಚೆಂದರೆ ದಿಗಂತದಿಂದ 47 ಡಿಗ್ರಿ ಎತ್ತರದಲ್ಲಿ ಹಾಗೂ ಬುಧ 27 ಡಿಗ್ರಿ ಎತ್ತರದಲ್ಲಿ. ಮತ್ತೆ ಕೆಲ ಸಮಯ ಪೂರ್ವ ಆಕಾಶದಲ್ಲಿ ಸೂರ್ಯೋದಯಕ್ಕಿಂತ ಮೊದಲು ಕಾಣಲಿದೆ.
ಸೂರ್ಯನಿಂದ ಶುಕ್ರ ಸುಮಾರು 11 ಕೋಟಿ ಕಿ.ಮೀ. ಒಂದೇ ದೂರದಲ್ಲಿದೆಯಾದರೂ ಭೂಮಿಯಿಂದ ಯಾವಾಗಲೂ ಒಂದೇ ದೂರ ಇರುವುದಿಲ್ಲ. 19 ತಿಂಗಳಿಗೊಮ್ಮೆ ಅತೀ ಸಮೀಪ ದೂರ 4 ಕೋಟಿ ಕಿ.ಮೀ. (ಆ. 13 ಇನ್ಫಿರಿಯರ್ ಕಂಜಂಕ್ಷನ್) ಅನಂತರ 2025ರ ಜನವರಿಯಲ್ಲಿ ಅತ್ಯಂತ ದೂರ 26 ಕೋಟಿ ಕಿ.ಮೀ. (ಸುಪೀರಿಯರ್ ಕಂಜಂಕ್ಷನ್) ಇರಲಿದೆ.
ಗ್ರಹಗಳಲ್ಲಿ ಬರಿಗಣ್ಣಿಗೆ ಶುಕ್ರನೇ ಚೆಂದ. ಸುಮಾರು ಶೇ.95ರಷ್ಟು ಇಂಗಾಲದ ಆಕ್ಸೆ ಡ್ಗಳ ವಾತಾವರಣ ಸ್ವಲ್ಪ ರಂಜಕದ ಡೈಆಕ್ಸೆ ಡ್ಗಳಿಂದ ಅತೀ ಹೆಚ್ಚು ಸೂರ್ಯನ ಬೆಳಕನ್ನು ಪ್ರತಿಫಲಿಸುವುದರಿಂದ ಶುಕ್ರ ಗ್ರಹ ಫಳ ಫಳವಾಗಿ ಹೊಳೆಯುತ್ತದೆ. ದೂರದರ್ಶಕದಲ್ಲೀಗ ಶುಕ್ರಗ್ರಹ ಚೌತಿಯ ಚಂದ್ರನಂತೆ ಕಾಣುತ್ತದೆ. ಜುಲೈ ಕೊನೆಯ ವಾರ ಬಿದಿಗೆ ಚಂದ್ರನಿಗಿಂತ ಕ್ಷೀಣವಾಗುವನು ಎಂದು ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘದ ಸ್ಥಾಪಕ ಸಂಯೋಜಕ ಡಾ| ಎ.ಪಿ. ಭಟ್ ಉಡುಪಿ ತಿಳಿಸಿದ್ದಾರೆ.